ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಆಟಗಾರನಿಂದ ಯುಎಸ್‌ಎ ಪರ ಐತಿಹಾಸಿಕ ಶತಕ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಆಟಗಾರನಿಂದ ಯುಎಸ್‌ಎ ಪರ ಐತಿಹಾಸಿಕ ಶತಕ

ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಆಟಗಾರನಿಂದ ಯುಎಸ್‌ಎ ಪರ ಐತಿಹಾಸಿಕ ಶತಕ

ಆಸ್ಟ್ರೇಲಿಯಾ ವಿರುದ್ಧದ ಅಂಡರ್‌ 19 ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದಾಗ, ಅಮೋಘ ಪ್ರದರ್ಶನ ನೀಡಿದ್ದ ಸ್ಮಿತ್ ಪಟೇಲ್‌ ಈಗ ಯುಎಸ್‌ಎ ಪರ ಆಡುತ್ತಿದ್ದಾರೆ. ಆಕರ್ಷಕ ಶತಕ ಬಾರಿಸಿ ಅಬ್ಬರಿಸುತ್ತಿದ್ದಾರೆ.

ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಆಟಗಾರನಿಂದ ಯುಎಸ್‌ಎ ಪರ ಐತಿಹಾಸಿಕ ಶತಕ
ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಆಟಗಾರನಿಂದ ಯುಎಸ್‌ಎ ಪರ ಐತಿಹಾಸಿಕ ಶತಕ (instagram)

ಯುಎಸ್‌ಎ ಕ್ರಿಕೆಟ್‌ ತಂಡ ಬಲಿಷ್ಠವಾಗಿದೆ ಎಂಬುದು ಈಗಾಗಲೇ ಹಲವು ಪಂದ್ಯಗಳಲ್ಲಿ ಸಾಬೀತಾಗಿದೆ. ಪಾಕಿಸ್ತಾನದಂತಹ ತಂಡಗಳನ್ನು ಸೋಲಿಸುವ ಸಾಮರ್ಥ್ಯ ಅಮೆರಿಕದ ತಂಡಕ್ಕಿದೆ. ಯುಎಸ್‌ಎ ತಂಡದಲ್ಲಿರುವ ಕ್ರಿಕೆಟಿಗರ ಪೈಕಿ ಹೆಚ್ಚಿನವರು ಭಾರತ ಮೂಲದವರೇ ಎಂಬುದು ಮತ್ತೊಂದು ಪ್ರಮುಖ ಅಂಶ. 2023-27ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ 2ರಲ್ಲಿ ಉತ್ತಮ ಪ್ರದರ್ಶನ ನೀಡಿರುವ ಯುಎಸ್‌ ತಂಡ, ಕೆನಡಾ ವಿರುದ್ಧ 169 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನಲ್ಲಿ ಸ್ಟಾರ್‌ ಜೋಡಿ ಸ್ಮಿತ್ ಪಟೇಲ್ ಮತ್ತು ಮಿಲಿಂದ್ ಕುಮಾರ್ ಪ್ರಮುಖ ಪಾತ್ರ ವಹಿಸಿದರು. ಇವರಿಬ್ಬರೂ ತಲಾ ಶತಕಗಳನ್ನು ಸಿಡಿಸುವ ಮೂಕ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.

ಪಂದ್ಯದಲ್ಲಿ ಯುಎಸ್ಎ ತಂಡವು ಕೇವಲ 3 ವಿಕೆಟ್‌ ಕಳೆದುಕೊಂಡು 361 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಲು ಈ ಇಬ್ಬರು ಸ್ಟಾರ್‌ಗಳು ಸಹಾಯ ಮಾಡಿದರು. ಇವರಲ್ಲಿ ಸ್ಮಿತ್ ಪಟೇಲ್ 137 ಎಸೆತಗಳಲ್ಲಿ 152 ರನ್ ಗಳಿಸಿದರೆ, ಮಿಲಿಂದ್ ಕುಮಾರ್ 67 ಎಸೆತಗಳಲ್ಲಿ ಭರ್ಜರಿ 115 ರನ್ ಗಳಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟವಾಡಿದರು. ಅಂದರೆ, 208 ರನ್‌ಗಳು ಒಟ್ಟಾದವು. ಇದಕ್ಕೆ ಪ್ರತಿಯಾಗಿ ಕೆನಡಾ ತಂಡವನ್ನು 192 ರನ್‌ಗಳಿಗೆ ಆಲೌಟ್ ಮಾಡಿ ಬೃಹತ್‌ ಜಯ ಒಲಿಸಿಕೊಂಡಿತು. ಪಂದ್ಯದಲ್ಲಿ ಅಬ್ಬರಿಸಿದ ಸ್ಮಿತ್‌ ಪಟೇಲ್‌ ಈಗ ಸುದ್ದಿಯಲ್ಲಿದ್ದಾರೆ.

ಸ್ಮಿತ್ ಪಟೇಲ್ ಎಂಬ ಹೆಸರು ಕೇಳಿದಾಗಲೇ ಅವರು ಭಾರತ ಮೂಲದವರು ಎಂಬುದು ಸ್ಪಷ್ಟವಾಗುತ್ತದೆ. ಸ್ಮಿತ್ ಪಟೇಲ್ ಸುದ್ದಿಯಲ್ಲಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇವರು ಅಬ್ಬರಿಸಿದ್ದರು. ಇವರು ಈ ಹಿಂದೆ ಭಾರತ ತಂಡದಲ್ಲಿ ಆಡಿದ್ದರು ಎಂಬುದು ಗಮನಾರ್ಹ ಸಂಗತಿ. 2012ರಲ್ಲಿ ವಿಶ್ವಕಪ್ ಗೆದ್ದ ಭಾರತ ಅಂಡರ್‌-19 ವಿಶ್ವಕಪ್ ತಂಡದಲ್ಲಿ ಇವರು ಆಡಿದ್ದರು. ಆಗ ಉನ್ಮುಕ್ತ್ ಚಂದ್ ತಂಡದ ನಾಯಕರಾಗಿದ್ದರು.

ಅಂಡರ್‌ 19 ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ಆಟ

ಅಂಡರ್‌ ನೈಂಟೀನ್‌ ವಿಶ್ವಕಪ್‌ ಸಮಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಟೇಲ್‌ ನಿರ್ಣಾಯಕ ಪ್ರದರ್ಶನ ನೀಡಿದರು. 226 ರನ್ ಗಳ ಗುರಿ ಬೆನ್ನಟ್ಟುತ್ತಿದ್ದ ಭಾರತ ಒಂದು ಹಂತದಲ್ಲಿ 97 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿತ್ತು. ಆಗ ಸ್ಮಿತ್ ಪಟೇಲ್ ಅಜೇಯ 62 ರನ್ ಗಳಿಸಿದ್ದರು. ನಾಯಕ ಉನ್ಮುಕ್ತ್ ಚಂದ್ (ಅಜೇಯ 111) ಜೊತೆಗೂಡಿ 130 ರನ್ ಒಟ್ಟುಗೂಡಿಸಿದರು. ಭಾರತ ಗೆದ್ದು ಬೀಗಿತ್ತು.

ಭಾರತದಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದ ಸ್ಮಿತ್‌, ಬರೋಡಾ, ಗೋವಾ, ಗುಜರಾತ್ ಮತ್ತು ತ್ರಿಪುರ ಪರ ಆಡಿದ್ದರು. ಇದರಲ್ಲಿ 11 ಶತಕಗಳು ಸೇರಿದಂತೆ 3278 ರನ್ ಗಳಿಸಿದ್ದರು. ಭಾರತದಲ್ಲಿ ನಿರೀಕ್ಷಿತ ಅವಕಾಶ ಸ್ಮಿತ್‌ಗೆ ಸಿಗಲಿಲ್ಲ. ಕ್ರಮೇಣ ಅವರು ಯುಎಸ್‌ಗೆ ಶಿಫ್ಟ್‌ ಆದರು. 2021ರಲ್ಲಿ ಬಿಸಿಸಿಐ ವ್ಯಾಪ್ತಿಯಲ್ಲಿರುವ ಎಲ್ಲಾ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ಮೂಲಕ, ಯುಎಸ್ಎ ಪರ ಆಡಲು ಅವಕಾಶ ಪಡೆದರು. ಈಗ ಅಲ್ಲಿಯೂ ಮಿಂಚುತ್ತಿದ್ದಾರೆ.

ಭಾರತ ಮೂಲದ ಹಲವು ಆಟಗಾರರು

ಯುಎಸ್ಎ ಕ್ರಿಕೆಟ್‌ ತಂಡದ ಪರ ಆಡುತ್ತಿರುವ ಹಲವು ಆಟಗಾರರು ಈ ಹಿಂದೆ ಭಾರತೀಯ ಕ್ರಿಕೆಟಿಗರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದವರೇ. ಹರ್ಮೀತ್ ಸಿಂಗ್, ಸೌರಭ್ ನೇತ್ರವಲ್ಕರ್, ಮಿಲಿಂದ್ ಕುಮಾರ್, ಮೋನಾಂಕ್ ಪಟೇಲ್ ಹೀಗೆ ಹಲವು ಆಟಗಾರರು ಈಗ ಅಮೆರಿಕದಲ್ಲಿ ಮಿಂಚುತ್ತಿದ್ದಾರೆ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.