ಬ್ಯಾಟಿಂಗ್ ವೈಫಲ್ಯ, ತವರಿನಲ್ಲಿ ಆರ್ಸಿಬಿಗೆ ಹ್ಯಾಟ್ರಿಕ್ ಸೋಲು; ಸೇಡು ತೀರಿಸಿಕೊಂಡ ಗುಜರಾತ್ ಜೈಂಟ್ಸ್
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.

ಗುಜರಾತ್ ಜೈಂಟ್ಸ್ ಬೌಲರ್ಗಳ ಅಬ್ಬರದಿಂದ ಹಾಗೂ ತಮ್ಮ ಕಳಪೆ ಬ್ಯಾಟಿಂಗ್ ನಿರ್ವಹಣೆ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಸೋಲಿಗೆ ಶರಣಾಗಿದೆ. ವಡೋದರಾ ಹಂತದಲ್ಲಿ ಸತತ ಎರಡು ಗೆಲುವು ದಾಖಲಿಸಿದ್ದ ಆರ್ಸಿಬಿ, ಇದೀಗ ತವರು ಮೈದಾನದಲ್ಲಿ ಸತತ 3 ಪಂದ್ಯಗಳಲ್ಲಿ ಸೋತು ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಇದೇ ತಂಡದ ವಿರುದ್ಧ ಸೋಲುಂಡಿದ್ದ ಗುಜರಾತ್ ಜೈಂಟ್ಸ್, ಇದೀಗ 6 ವಿಕೆಟ್ಗಳಿಂದ ಗೆದ್ದು ಸೇಡು ತೀರಿಸಿಕೊಂಡಿದೆ. ಇದು ಜಿಜಿ ತಂಡದ 2ನೇ ಗೆಲುವಾಗಿದ್ದು, ಸತತ ಸೋಲುಗಳ ಬಳಿಕ ಲಯಕ್ಕೆ ಮರಳಿದೆ. ಇದೇ ಕಳಪೆ ಪ್ರದರ್ಶನ ಮುಂದುವರೆದರೆ ಹಾಲಿ ಚಾಂಪಿಯನ್ ಪ್ಲೇಆಫ್ ಹಾದಿ ಕಠಿಣವಾಗಲಿದೆ. ಉಳಿದ 3 ಪಂದ್ಯ ಗೆದ್ದರಷ್ಟೇ ನಾಕೌಟ್ ಹಂತ ಸುಗಮವಾಗಲಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ತನ್ನ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಡಿಯಾಂಡ್ರಾ ಡಾಟಿನ್ ಮತ್ತು ತನುಜಾ ಕನ್ವರ್ ತಲಾ 2 ವಿಕೆಟ್ ಪಡೆಯುವುದರ ಜೊತೆಗೆ ರನ್ ಬಿಟ್ಟುಕೊಡುವುದರಲ್ಲೂ ಆರ್ಸಿಬಿ ಮೇಲೆ ನಿಯಂತ್ರಣ ಹೇರಿದರು. ಕನ್ನಿಕಾ ಅಹುಜಾ 33 ರನ್ ಗಳಿಸಿದ್ದೇ ಸ್ಮೃತಿ ಪಡೆಯ ಪರ ಗರಿಷ್ಠ ಸ್ಕೋರ್. ಈ ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್, 16.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಗೆಲುವಿನ ದಡ ಸೇರಿತು. ನಾಯಕಿ ಆ್ಯಶ್ಲೇ ಗಾರ್ಡ್ನರ್ 58 ರನ್ ಸಿಡಿಸಿ ಮಿಂಚಿದರು. ಅಂಕಪಟ್ಟಿಯಲ್ಲಿ ಆರ್ಸಿಬಿ 3, ಜಿಜಿ ಅಂತಿಮ ಸ್ಥಾನದಲ್ಲೇ ಮುಂದುವರೆದಿವೆ.
ಗಾರ್ಡ್ನರ್ ಆಲ್ರೌಂಡ್ ಆಟ
126 ರನ್ ಗುರಿ ಬೆನ್ನಟ್ಟುವಾಗ ಗುಜರಾತ್ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತು. ಬೆತ್ ಮೂನಿ (17) ಮತ್ತು ದಯಾಲನ್ ಹೇಮಲತಾ (11) ಆರಂಭದಲ್ಲೇ ರೇಣುಕಾ ಸಿಂಗ್ ಠಾಕೂರ್ ಬೌಲಿಂಗ್ನಲ್ಲಿ ನಿರ್ಗಮಿಸಿದರು. ಆ ಬಳಿಕ ನಾಯಕಿ ಆಶ್ಲೇ ಗಾರ್ಡ್ನರ್ ಬಿರುಸಿನ ಬ್ಯಾಟಿಂಗ್ ನಡೆಸಿ ಆರ್ಸಿಬಿ ಕನಸಿಗೆ ಕೊಳ್ಳಿ ಇಟ್ಟರು. ರನ್ ರೇಟ್ ಹೆಚ್ಚಿಸುವ ಇರಾದೆಯಲ್ಲಿದ್ದ ಜಿಜಿ ಗೆಲುವಿಗೆ ಓವರ್ಗಳ ಅಂತರವನ್ನೂ ಕಡಿಮೆ ಮಾಡುವಲ್ಲಿ ಯಶಸ್ವಿಯಾದರು. 31 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ ಭರ್ಜರಿ 58 ರನ್ ಬಾರಿಸಿ ಆರೆಂಜ್ ಕ್ಯಾಪ್ ರೇಸ್ಗೆ ಧುಮಿಕಿದರು. ಅಲ್ಲದೆ, ಪ್ರಸಕ್ತ ಟೂರ್ನಿಯಲ್ಲಿ ಅವರ ಮೂರನೇ ಅರ್ಧಶತಕವೂ ಹೌದು. ಆದರೆ ಈ ಮಧ್ಯೆ ಹರ್ಲೀನ್ ಡಿಯೋಲ್ 5 ರನ್ ಗಳಿಸಿ ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ಡಕೌಟ್ ಆಗಿದ್ದ ಫೀಬಿ ಲಿಚ್ಫೀಲ್ಡ್ ಈ ಅಜೇಯ 30 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮಂಧಾನ ಲಯಕ್ಕೆ ಬರುವುದು ಅನಿವಾರ್ಯ
ಆರ್ಸಿಬಿ ತವರಿನ ಅಭಿಮಾನಿಗಳ ಮುಂದೆ ಗೆಲುವು ಸಾಧಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಆದರೆ ಮತ್ತದೆ ಬ್ಯಾಟಿಂಗ್ ವೈಫಲ್ಯ ಎದುರಿಸಿ ನಿರಾಸೆ ಮೂಡಿಸಿತು. ಸ್ಮೃತಿ ಮಂಧಾನ ಒಂದು ಪಂದ್ಯದಲ್ಲಿ 81 ರನ್ ಗಳಿಸಿದ್ದು ಬಿಟ್ಟರೆ ಉಳಿದ ನಾಲ್ಕು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ನಾಯಕನಾಗಿ ತಂಡವನ್ನು ಉತ್ತಮ ಯೋಜನೆಗಳನ್ನು ರೂಪಿಸುವುದರ ಜೊತೆಗೆ ಅತ್ಯುತ್ತಮ ಪ್ರದರ್ಶನ ನೀಡುವುದು ಅನಿವಾರ್ಯ. ಪ್ರತಿ ಪಂದ್ಯದಲ್ಲೂ ಎಲ್ಲಿಸ್ ಪೆರಿ ಅವರನ್ನೇ ನೆಚ್ಚಿಕೊಳ್ಳುವುದು ತಪ್ಪು. ಕಳೆದ ನಾಲ್ಕು ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಪೆರಿ, ಇಂದು ಡಕೌಟ್ ಆದರು. ಡೇನಿಯಲ್ ವ್ಯಾಟ್ (4), ರಿಚಾ ಘೋಷ್ (9) ಬೌಲರ್ಗಳ ಮೇಲೆ ದಾಳಿ ನಡೆಸಲಿಲ್ಲ. ರಾಘವಿ ಬಿಸ್ಟ್ (22) ಮತ್ತು ಕನಿಕಾ ಅಹುಜಾ (33) ಮಾತ್ರ ತಂಡವನ್ನು ಕೆಲ ಹೊತ್ತು ದಿಟ್ಟ ಹೋರಾಟ ನಡೆಸಿದರು. ಜಾರ್ಜಿಯಾ ವೇರ್ಹ್ಯಾಮ್ 20, ಕಿಮ್ ಗಾರ್ತ್ 14 ರನ್ಗಳ ಕಾಣಿಕೆ ನೀಡಿದರು.
