ಡಬ್ಲ್ಯುಪಿಎಲ್ನಲ್ಲಿ ಘರ್ಜಿಸಲು ರೆಡಿಯಾದ ಭಾರತದ ಲೇಡಿ ಸೂಪರ್ಸ್ಟಾರ್ಸ್; ಈ 10 ಆಟಗಾರ್ತಿಯರ ಮೇಲೆಯೇ ಎಲ್ಲರ ಕಣ್ಣು!
Womens Premier League 2024 : ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ಭಾರತದ ಟಾಪ್ -10 ಆಟಗಾರ್ತಿಯರು ಯಾರು? ಬನ್ನಿ ನೋಡೋಣ.
ಇಂದಿನಿಂದ (ಫೆಬ್ರವರಿ 23) ವುಮೆನ್ಸ್ ಪ್ರೀಮಿಯರ್ ಲೀಗ್ಗೆ (WPL 2024) ವಿದ್ಯುಕ್ತ ಚಾಲನೆ ಸಿಗಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಮೊದಲ ಹಂತದ 11 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ಕಳೆದ ಬಾರಿ ವಿದೇಶಿ ಆಟಗಾರ್ತಿಯರು ಮಿಂಚಿನ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ ಈ ಬಾರಿ ಭಾರತೀಯರು ಅದ್ಭುತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ರನ್, ವಿಕೆಟ್ ಎಲ್ಲದರಲ್ಲೂ ಅವರನ್ನು ಮೀರಿಸುವ ಲೆಕ್ಕಾಚಾರದಲ್ಲಿದ್ದಾರೆ. ಹಾಗಾದರೆ 2ನೇ ಆವೃತ್ತಿಯಲ್ಲಿ ನಿರೀಕ್ಷೆ ಹುಟ್ಟಿಸಿರುವ ಭಾರತದ ಆಟಗಾರ್ತಿಯರು ಯಾರು?
ಹರ್ಮನ್‌ಪ್ರೀತ್ ಕೌರ್: ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್, ಮತ್ತೊಂದು ಪ್ರಶಸ್ತಿಯ ಕನಸಿನಲ್ಲಿದ್ದಾರೆ. ಕಳೆದ ವರ್ಷ ಮುಂಬೈಗೆ ಟ್ರೋಫಿ ಗೆದ್ದುಕೊಟ್ಟಿದ್ದ ಹರ್ಮನ್, ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿಯಾಗಿದ್ದರು. ಈ ಬಾರಿಯೂ ಅವರ ಮೇಲೆ ನಿರೀಕ್ಷೆ ದುಪಟ್ಟಾಗಿದೆ.
ಸ್ಮೃತಿ ಮಂಧಾನ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ, ಡಬ್ಲ್ಯುಪಿಎಲ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ್ತಿ. ಕಳೆದ ವರ್ಷ ನಾಯಕಿ ಮತ್ತು ಬ್ಯಾಟರ್ ಆಗಿ ನಿರಾಸೆ ಮೂಡಿಸಿದ್ದರೂ ಅವರ ಮೇಲಿರುವ ನಿರೀಕ್ಷೆ ಮಾತ್ರ ಕುಸಿದಿಲ್ಲ. ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ.
ದೀಪ್ತಿ ಶರ್ಮಾ: ಯುಪಿ ವಾರಿಯರ್ಸ್ ತಂಡದ ಆಲ್ರೌಂಡರ್ ದೀಪ್ತಿ ಶರ್ಮಾ ಎರಡನೇ ಅತ್ಯಂತ ದುಬಾರಿ ಭಾರತೀಯ ಆಟಗಾರ್ತಿ. ಆದರೆ 2023ರಲ್ಲಿ ಆಲ್ರೌಂಡರ್ ಆಗಿ ಗಮನ ಸೆಳೆದಿರಲಿಲ್ಲ. ಈ ಡಬ್ಲ್ಯುಪಿಎಲ್ ಪರಿಣಾಮಕಾರಿ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.
ರೇಣುಕಾ ಠಾಕೂರ್: ಆರ್ಸಿಬಿಯ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಆದರೆ, ಕಳೆದ ಬಾರಿಯ ಟೂರ್ನಿಯಲ್ಲಿ ರೇಣುಕಾ ಒಂದೇ ಒಂದು ವಿಕೆಟ್ ಮಾತ್ರ ಪಡೆದಿದ್ದರು. 2024 ರಲ್ಲಿ ಅವರು ಅತ್ಯುತ್ತಮ ಪ್ರದರ್ಶಿಸಲು ಸಜ್ಜಾಗಿದ್ದಾರೆ. ತಾನೆಂತ ಪ್ರತಿಭಾವಂತ ಬೌಲರ್ ಎಂಬುದನ್ನು ಸಾಬೀತುಪಡಿಸಲು ಸಿದ್ಧರಾಗಿದ್ದಾರೆ.
ಟಿಟಾಸ್ ಸಾಧು: 2022ರಲ್ಲಿ ಅಂಡರ್-19 ಟಿ20 ವಿಶ್ವಕಪ್ನಲ್ಲಿ ಭಾರತ ಪರ ಪ್ರಭಾವ ಬೀರಿದ ನಂತರ ಟಿಟಾಸ್ ಸಾಧು, ಬಳಿಕ ಹಿರಿಯರ ತಂಡಕ್ಕೂ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದಾರೆ. ಕಳೆದ ಬಾರಿ ಬೆಂಚ್ ಕಾದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟಿಟಾಸ್, ಈ ಸಲ ಪಂದ್ಯಾವಳಿಯಲ್ಲಿ ಬಲವಾದ ಪ್ರಭಾವ ಬೀರಲು ಮುಂದಾಗಿದ್ದಾರೆ.
ಶಫಾಲಿ ವರ್ಮಾ: ಸ್ಫೋಟಕ ಆರಂಭಿಕ ಆಟಗಾರ್ತಿ ಡೆಲ್ಲಿ ತಂಡಕ್ಕೆ ಟ್ರೋಫಿ ಗೆದ್ದುಕೊಡುವ ಇರಾದೆಯಲ್ಲಿದ್ದಾರೆ. ದಂಡಂ ದಶಗುಣಂ ಮಂತ್ರದೊಂದಿಗೆ ವಿಧ್ವಂಸ ಸೃಷ್ಟಿಸುವ ಶಫಾಲಿ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳು ರಂಜಿಸಲು ಸಿದ್ಧರಾಗಿದ್ದಾರೆ.
ಶ್ರೇಯಾಂಕಾ ಪಾಟೀಲ್: ಚೊಚ್ಚಲ ಐಪಿಎಲ್ನಲ್ಲೇ ಗಮನಾರ್ಹ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಕನ್ನಡತಿ ಶ್ರೇಯಾಂಕಾ ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆ ಇದೆ. ಈಗಾಗಲೇ ಭಾರತ ತಂಡಕ್ಕೂ ಪದಾರ್ಪಣೆ ಮಾಡಿ ಮಿಂಚಿರುವ ಆರ್ಸಿಬಿ ಆಟಗಾರ್ತಿ, ರೆಡ್ ಆರ್ಮಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಡುವ ಭರವಸೆಯಲ್ಲಿದ್ದಾರೆ.
ಸಾಯಿಕಾ ಇಶಾಕ್: ಮುಂಬೈ ಇಂಡಿಯನ್ಸ್ ತಂಡದ ಅದ್ಭುತ ತಾರೆ ಸಾಯಿಕಾ ಕಳೆದ ಬಾರಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಆಗಿದ್ದರು. ಮುಂಬೈ ಟ್ರೋಫಿ ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಭಾರತದ ಪರವೂ ಪದಾರ್ಪಣೆ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಅಬ್ಬರಿಸಿದ್ದಾರೆ. ಈ ಬಾರಿಯೂ ಅದೇ ನಿರೀಕ್ಷೆ ಅವರ ಮೇಲಿದೆ.
ರಿಚಾ ಘೋಷ್: ತನ್ನ ಆಕ್ರಮಣಕಾರಿ ಶೈಲಿಯೊಂದಿಗೆ ಭಾರತದ ಎಕ್ಸ್-ಫ್ಯಾಕ್ಟರ್ ಪ್ಲೇಯರ್ ಆಗಿರುವ ರಿಚಾ, 2023ರಲ್ಲಿ ಆರ್ಸಿಬಿ ಪರ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿರುವ ಈ ವಿಕೆಟ್ ಕೀಪರ್, ಉತ್ತಮ ಫಿನಿಷರ್. ಈ ಸಲ ಅಬ್ಬರಿಸುವ ವಿಶ್ವಾಸ ಇದೆ.
ಜೆಮಿಮಾ ರೊಡ್ರಿಗಸ್: ಮಧ್ಯಮ ಕ್ರಮಾಂಕದಲ್ಲಿ ತನ್ನ ಕ್ಲಾಸಿಕಲ್ ಬ್ಯಾಟಿಂಗ್ ಮೂಲಕವೇ ಮಿನುಗುತ್ತಿರುವ ರೋಡ್ರಿಗಸ್, ಡೆಲ್ಲಿ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಕಳೆದ ಬಾರಿ ನಿರಾಸೆ ಮೂಡಿಸಿದರೂ ಈ ಬಾರಿ ಅಬ್ಬರಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಇತ್ತೀಚಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಫಾರ್ಮ್ನಲ್ಲಿದ್ದಾರೆ.