ಕನ್ನಡ ಸುದ್ದಿ  /  ಕ್ರಿಕೆಟ್  /  ಸೌತ್ ಆಫ್ರಿಕಾ ವಿರುದ್ಧ 3ನೇ ಏಕದಿನದಲ್ಲೂ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು; 3-0 ಅಂತರದಲ್ಲಿ ಸರಣಿ ಕ್ಲೀನ್​ಸ್ವೀಪ್

ಸೌತ್ ಆಫ್ರಿಕಾ ವಿರುದ್ಧ 3ನೇ ಏಕದಿನದಲ್ಲೂ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು; 3-0 ಅಂತರದಲ್ಲಿ ಸರಣಿ ಕ್ಲೀನ್​ಸ್ವೀಪ್

India vs South Africa 3rd ODI: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧ ಭಾರತ ಮಹಿಳಾ ತಂಡ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಸೌತ್ ಆಫ್ರಿಕಾ ವಿರುದ್ಧ 3ನೇ ಏಕದಿನದಲ್ಲೂ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು; 3-0 ಅಂತರದಲ್ಲಿ ಸರಣಿ ಕ್ಲೀನ್​ಸ್ವೀಪ್
ಸೌತ್ ಆಫ್ರಿಕಾ ವಿರುದ್ಧ 3ನೇ ಏಕದಿನದಲ್ಲೂ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು; 3-0 ಅಂತರದಲ್ಲಿ ಸರಣಿ ಕ್ಲೀನ್​ಸ್ವೀಪ್ (PTI)

ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಭಾರತ ಮಹಿಳಾ ತಂಡ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೈಟ್​ವಾಶ್ ಮಾಡಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲೇ ನಡೆದ ಮೂರು ಪಂದ್ಯಗಳಲ್ಲೂ ಭಾರತ ಭರ್ಜರಿ ಗೆಲುವು ಸಾಧಿಸಿತು. ಸ್ಮೃತಿ ಮಂಧಾನ ಮತ್ತೊಮ್ಮೆ ಭರ್ಜರಿ ಇನ್ನಿಂಗ್ಸ್ ಕಟ್ಟುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಔಪಚಾರಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೌತ್ ಆಫ್ರಿಕಾ, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಮೊದಲ ವಿಕೆಟ್​ಗೆ ಶತಕದ ಜೊತೆಯಾಟ ಬಂದರೂ ಉಳಿದ ಬ್ಯಾಟರ್​​ಗಳು ನೀರಸ ಪ್ರದರ್ಶನ ತೋರಿದರು. ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಪರಿಣಾಮ 50 ಓವರ್​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಪರ ಸ್ಮೃತಿ ಮಂಧಾನ ಮತ್ತೊಮ್ಮೆ ಮಿಂಚಿದರು. ಆದರೆ, ಶತಕ ವಂಚಿತರಾದರು.

ಸ್ಮೃತಿ ಮಂಧಾನ ಮತ್ತೆ ಮಿಂಚು

219 ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 61 ರನ್​ಗಳು ಹರಿದು ಬಂದವು. ಆದರೆ ಶಫಾಲಿ ವರ್ಮಾ (25) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಆ ಬಳಿಕ ಪ್ರಿಯಾ ಪೂನಿಯಾ ಅವರು ಸ್ಮೃತಿ ಮಂಧಾನ ಜೊತೆಗೂಡಿ ಉತ್ತಮ ಪ್ರದರ್ಶನ ನೀಡಿದರು. ಈ ಜೋಡಿಯೂ 2ನೇ ವಿಕೆಟ್​​ಗೆ ಅರ್ಧಶತಕ ಜೊತೆಯಾಟ ಪೇರಿಸಿತು. ಇದರ ನಡುವೆಯೂ ಮಂಧಾನ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದರು.

ಟ್ರೆಂಡಿಂಗ್​ ಸುದ್ದಿ

ಇದರೊಂದಿಗೆ ಕಳೆದ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಸ್ಮೃತಿ, ಈ ಪಂದ್ಯದಲ್ಲೂ ಶತಕ ಸಿಡಿಸುವ ಭರವಸೆ ಮೂಡಿಸಿದರು. ಆದರೆ 90 ರನ್ ಗಳಿಸಿದ್ದ ಅವಧಿಯಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. 83 ಎಸೆತಗಳಲ್ಲಿ 11 ಬೌಂಡರಿ ಸಹಿತ 90 ರನ್ ಗಳಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 117 ಮತ್ತು 135 ರನ್ ಗಳಿಸಿದ್ದರು. ಆದರೆ ಹ್ಯಾಟ್ರಿಕ್ ಶತಕವನ್ನು ಮಿಸ್ ಮಾಡಿಕೊಂಡರು. ಹರ್ಮನ್​ಪ್ರೀತ್​ ಕೌರ್​ ಕೂಡ 42 ರನ್ ಗಳಿಸಿ ಔಟಾದರು. ಜೆಮಿಮಾ ರೊಡ್ರಿಗಸ್ (19) ಮತ್ತು ರಿಚಾ ಘೋಷ್​ (6) ಕೊನೆವರೆಗೂ ಕ್ರೀಸ್​ನಲ್ಲಿ ಉಳಿದು ಗೆದ್ದುಕೊಟ್ಟರು.

ಮತ್ತೆ ಬ್ಯಾಟಿಂಗ್ ಕುಸಿತ

ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ, ಮೊದಲ ವಿಕೆಟ್​ಗೆ ಶತಕದ ಜೊತೆಯಾಟವಾಡಿತು. ನಾಯಕಿ ಲಾರಾ ವೊಲ್ವಾರ್ಡ್ಟ್ ಅರ್ಧಶತಕ ಸಿಡಿಸಿ ಮಿಂಚಿದರು. ತಜ್ಮಿನ್ ಬ್ರಿಟ್ಸ್ ಕೂಡ 38 ರನ್​ಗಳ ಉಪಯುಕ್ತ ಕಾಣಿಕೆ ನೀಡಿದರು. ಇವರಿಬ್ಬರು ಔಟಾದ ನಂತರ ಮರಿಜಾನ್ನೆ ಕಪ್ 7, ಆನ್ನೆಕೆ ಬೋಷ್ 5, ಸುನೆ ಲೂಸ್ 13 ರನ್ ಗಳಿಸಿ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಶಂಗಾಸೆ (16) ನಾಡಿನ್ ಡಿ ಕ್ಲರ್ಕ್ (26) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಮೈಕೆ ಡಿ ರಿಡ್ಡರ್ ಕೊನೆಯಲ್ಲಿ ಅಜೇಯ 26 ರನ್ ಪೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಸೌತ್ ಆಫ್ರಿಕಾ ತನ್ನ ಪಾಲಿನ 50 ಓವರ್​​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ತಲಾ 2 ವಿಕೆಟ್ ಪಡೆದರೆ, ಶ್ರೇಯಾಂಕಾ ಪಾಟೀಲ್, ಪೂಜಾ ವಸ್ತ್ರಾಕರ್ ತಲಾ 1 ವಿಕೆಟ್ ಉರುಳಿಸಿದರು. ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 143 ರನ್​ಗಳಿಂದ ಗೆದ್ದಿತ್ತು. ಎರಡನೇ ಏಕದಿನದಲ್ಲಿ 4 ವಿಕೆಟ್​ಗಳಿಂದ ಗೆದ್ದಿದ್ದರು.