ಆರ್‌ಸಿಬಿ ಸೋಲಿಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೂ ಎಲ್ಲಿಂದ ಎಲ್ಲಿಯ ಸಂಬಂಧ! ಮನಸ್ಸು ಒಡೆಯಿತು ಅತಿರೇಕದ ಪೋಸ್ಟ್
Ashwini Puneeth Rajkumar : ಅಶ್ವಿನಿ ಪುನೀತ್ ರಾಜ್ಕುಮಾರ್ ವಿರುದ್ಧ ಕಿಡಿಗೇಡಿಗಳು ಅತಿರೇಕದ ಪೋಸ್ಟ್ವೊಂದನ್ನು ಹಾಕಿದ್ದಾರೆ. ಆರ್‌ಸಿಬಿ ಸೋಲಿಗೆ ಅಶ್ವಿನಿ ಕಾರಣ ಎಂಬ ಕೀಳುಮಟ್ಟದ ಪೋಸ್ಟ್ ಹಂಚಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡಕ್ಕೆ ದೇಶ-ವಿದೇಶಗಳಲ್ಲಿ ಕೋಟ್ಯಂತರ ಅಭಿಮಾನಿಗಳ ದಂಡೇ ಇದೆ. 16 ವರ್ಷಗಳಿಂದ ಟ್ರೋಫಿ ಗೆಲ್ಲದಿದ್ದರೂ ಅಭಿಮಾನಿಗಳ ಸಂಖ್ಯೆ ಮಾತ್ರ ಕುಸಿದಲ್ಲ. ಸೋತರೂ ಗೆದ್ದರೂ ನಿಷ್ಠಾವಂತ ಅಭಿಮಾನಿಗಳು ಆರ್ಸಿಬಿಯನ್ನು ಎಂದಿಗೂ ಕೈ ಬಿಟ್ಟವರಲ್ಲ. ಈ ಪೈಕಿ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ (Puneeth Rajukumar) ಕೂಡ ಒಬ್ಬರು. ಸಾಮಾನ್ಯರಂತೆ 'ಈ ಸಲ ಕಪ್ ನಮ್ದೆ' ಎಂದು ಅಪಾರ ಬೆಂಬಲ ತೋರುತ್ತಿದ್ದರು ಅಪ್ಪು.
ಐಪಿಎಲ್ ಶುರುವಾದಾಗ ಪ್ರತಿ ವರ್ಷವೂ ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸಲು ಮೈದಾನಕ್ಕೆ ಹೋಗಿ ಚಿಯರ್ ಮಾಡಲು ಹೋಗುತ್ತಿದ್ದ ಪುನೀತ್ ರಾಜ್ಕುಮಾರ್, ತಂಡಕ್ಕೆ ರಾಯಭಾರಿಯೂ ಆಗಿದ್ದರು. ಎಷ್ಟೇ ಸಿನಿಮಾ ಬ್ಯುಸಿ ಶೆಡ್ಯೂಲ್ ಇದ್ರೂ ಆರ್‌ಸಿಬಿ ಪರವಾಗಿ ಪ್ರಚಾರ ಮಾಡುತ್ತಿದ್ದರು. ನಗುವಿನ ಒಡೆಯ ಅಪ್ಪು ಮಾತ್ರವಲ್ಲ, ಅವರ ಪತ್ನಿ ಅಶ್ವಿನಿ (Ashwini Punneth Rajkumar) ಕೂಡ ಅಪ್ಪಟ್ಟ ಆರ್‌ಸಿಬಿ ಅಭಿಮಾನಿ. ಸದಾ ಬೆಂಬಲ ನೀಡುವ ಅಶ್ವಿನಿ, ಇತ್ತೀಚಿಗೆ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ಗೆ ಭಾಗಿಯಾಗಿದ್ದರು.
ಆರ್‌ಸಿಬಿ ಅಭಿಮಾನಿಯಾದ ಅಶ್ವಿನಿ ಪುನೀತ್ ರಾಜ್ಕುಮಾರ್ ವಿರುದ್ಧ ಕಿಡಿಗೇಡಿಗಳು ಅತಿರೇಕದ ಪೋಸ್ಟ್ವೊಂದನ್ನು ಹಾಕಿದ್ದಾರೆ. ಆರ್‌ಸಿಬಿ ಸೋಲಿಗೆ ಅಶ್ವಿನಿ ಅವರೇ ಕಾರಣ ಎಂಬ ಕೀಳುಮಟ್ಟದ ಪೋಸ್ಟ್ ಹಂಚಿಕೊಂಡಿದ್ದಾರೆ. ಗಜಪಡೆ ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ತಿಳುವಳಿಕೆ ಇಲ್ಲದ ಅಜ್ಞಾನಿಗಳು ಬಾಯಿಗೆ ಬಂದಂತೆ ಪೋಸ್ಟ್ ಹಾಕುವ ಮೂಲಕ ಹೆಣ್ಣಿಗೆ ಅಗೌರವ ಸೂಚಿಸಿದ್ದಾರೆ. ಇದರ ದೂರುಗಳು ದಾಖಲಾಗಿದ್ದು, ಪುನೀತ್ ಅಭಿಮಾನಿಗಳು ಈ ಕೆಲಸ ದರ್ಶನ್ ಅಭಿಮಾನಿಗಳದ್ದೇ ಎಂದು ಹೇಳುತ್ತಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?
@GAJAPADE6 ಹೆಸರಿನ ಟ್ವಿಟರ್ ಖಾತೆಯಿಂದ, 'ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಗಂಡ ಸತ್ತ ಮುಂ.. ಯರನ್ನು ಕರೀಬಾರದು. ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ಗೆ ಈ ಮುಂ...ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್ ಸೋಲ್ತಾ ಇದ್ದಾರೆ' ಎಂದು #Yuvarajkumar #PuneethRajkumar #Yuva #Dboss #DevilTheHero ಎಂಬ ಹ್ಯಾಷ್‌ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ. ಅಪ್ಪು ಅಭಿಮಾನಿಗಳು ಕ್ಷಮೆಗೆ ಒತ್ತಾಯಿಸಿದ್ದಾರೆ. ಕಮಿಷನರ್ಗೂ ದೂರು ಕೊಟ್ಟಿದ್ದಾರೆ.
ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು
ಆರ್‌ಸಿಬಿ ಸೋಲಿಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೂ ಏನು ಸಂಬಂಧ? ಇದನ್ನು ಅನೇಕರು ಖಂಡಿಸಿದ್ದು, ಆರ್‌ಸಿಬಿ ಸೋಲುತ್ತಿದೆ ಎಂದು ಇಷ್ಟುಕೀಳು ಮಟ್ಟಕ್ಕೆ ಇಳಿಯಬಾರದು. ಇದು ಅವಿವೇಕಿತನದ ಪರಮಾವಧಿ. ಈ ಪೋಸ್ಟ್ ಹಾಕಿದವರ ವಿರುದ್ಧ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ಯಾವ ನಟನ ಅಭಿಮಾನಿಯಾಗಲಿ, ಅವರು ಆತನಿಗೆ ಬುದ್ಧಿ ಹೇಳಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಇದು ದರ್ಶನ್ ಅಭಿಮಾನಿಯೇ ಅಥವಾ ನಕಲಿ ಖಾತೆಯೇ ಎನ್ನುವುದರ ಕುರಿತು ಸ್ಪಷ್ಟವಾಗಿಲ್ಲ.
ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ಗೆ ಆಗಮಿಸಿದ್ದ ಅಶ್ವಿನಿ
ಐಪಿಎಲ್ ಆರಂಭಕ್ಕೂ ಮುನ್ನ ಮಾರ್ಚ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ಗೆ ಅಶ್ವಿನಿ ಅವರು ಕೂಡ ಅತಿಥಿಯಾಗಿ ಪಾಲ್ಗೊಂಡಿದ್ದರು. ನೂತನ ಜೆರ್ಸಿ ಬಿಡುಗಡೆ ಸೇರಿ ಹಲವು ಕಾರ್ಯಕ್ರಮಗಳು ನಡೆದವು. ಇದೇ ಕಾರ್ಯಕರ್ಮದಲ್ಲಿ ವಿರಾಟ್ ಕೊಹ್ಲಿ ಅವರು ಅಶ್ವಿನಿ ಅವರಿಗೆ ಆರ್‌ಸಿಬಿ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು. ಇದಕ್ಕೂ ಮುನ್ನ ಆರ್‌ಸಿಬಿ ಹೆಸರು ಬದಲಾವಣೆ ಪ್ರೋಮೋದಲ್ಲೂ ಅಶ್ವಿನಿ ಕಾಣಿಸಿಕೊಂಡಿದ್ದರು.
ಪ್ರಸಕ್ತ ಐಪಿಎಲ್ನಲ್ಲಿ ಆರ್‌ಸಿಬಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿದೆ. ಆದರೆ ಈ ಸೋಲುಗಳಿಗೆ ತಂಡದ ಮ್ಯಾನೇಜ್ಮೆಂಟ್ ಸರಿಯಾದ ತಂತ್ರಗಳನ್ನು ರೂಪಿಸದಿರುವುದು, ಕಳಪೆ ಬ್ಯಾಟಿಂಗ್, ಕಳಪೆ ಬೌಲಿಂಗ್, ಕಳಪೆ ಫೀಲ್ಡಿಂಗ್ ಮತ್ತು ಆಟಗಾರರ ಪಾತ್ರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದಿರುವುದು ಕೂಡ ಒಂದು ಕಾರಣ. ಆದರೆ, ಅವಿವೇಕಿತನ ಮತ್ತು ಕೀಳುಮಟ್ಟದಲ್ಲಿ ಪೋಸ್ಟ್ ಮೂಲಕ ಹೆಣ್ಣಿಗೆ ಅಗೌರವ ತೋರುವುದು ಸರಿಯಲ್ಲ.