ರಚಿನ್ ರವೀಂದ್ರ ಗಾಯಕ್ಕೆ ಪಿಸಿಬಿ ಹೊಣೆ ಮಾಡಿದ ನೆಟ್ಟಿಗರು; ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರಕ್ಕೆ ಒತ್ತಾಯ
ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸುವ ಪಾಕಿಸ್ತಾನದ ಹಕ್ಕನ್ನು ಮರುಪರಿಶೀಲಿಸುವಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಒತ್ತಾಯಿಸುತ್ತಿದ್ದಾರೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ವೇಳೆ ರಚಿನ್ ರವೀಂದ್ರ ಅವರಿಗೆ ಆದ ಗಾಯ ಭಾರಿ ಚರ್ಚೆಗೆ ಕಾರಣವಾಗಿದೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ನವೀಕರಿಸಲಾದ ಪಾಕಿಸ್ತಾನದ ಗಡಾಫಿ ಸ್ಟೇಡಿಯಂ ಇದೀಗ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಪಾಕಿಸ್ತಾನ ವಿರುದ್ಧದ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ನಡೆದ ಘಟನೆಯೇ ಇದಕ್ಕೆ ಕಾರಣ. ಪಾಕ್ ವಿರುದ್ಧದ ಪಂದ್ಯದ ಸಮಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ರಚಿನ್ ರವೀಂದ್ರ ಅವರ ಹಣೆಗೆ ಗಂಭೀರ ಗಾಯವಾಗಿದೆ. ಕ್ಯಾಚ್ ಹಿಡಿಯಲು ಹೋದಾಗ ಚೆಂಡು ಕಣ್ಣಿನ ಭಾಗಕ್ಕೆ ಬಿದ್ದು ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಇದೀಗ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನದ ಗಡಾಫಿ ಸ್ಟೇಡಿಯಂ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಗಡಾಫಿ ಸ್ಟೇಡಿಯಂನಲ್ಲಿ ನಡೆಯಲಿವೆ. ಇದಕ್ಕಾಗಿ ಮೈದಾನವನ್ನು ನವೀಕರಿಸಿ ಹೊಸ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಇದು ಪ್ರಖರ ಬೆಳಕನ್ನು ಹೊಂದಿವೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗಡಾಫಿ ಸ್ಟೇಡಿಯಂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಮಾನದಂಡವನ್ನು ಪೂರ್ಣಗೊಳಿಸಿದಂತೆ ಕಾಣುತ್ತಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಆ ಮೂಲಕ ಐಸಿಸಿಯ ಗಮನ ಸೆಳೆದಿದ್ದಾರೆ.
ಕ್ಯಾಚ್ ಹಿಡಿಯಲು ಆಗದೆ ಹಣೆಗೆ ಏಟು
ಪಾಕಿಸ್ತಾನದ ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಮೈಕೆಲ್ ಬ್ರೇಸ್‌ವೆಲ್ ಅವರ ಎಸೆತವನ್ನು ಖುಷ್ದಿಲ್ ಶಾ ಅವರು ದೀಪ್ ಸ್ಕ್ವೇರ್ ಲೆಗ್ ಕಡೆಗೆ ಬಾರಿಸುತ್ತಾರೆ. ಆಗ ರವೀಂದ್ರ ಕ್ಯಾಚ್ ತೆಗೆದುಕೊಳ್ಳಲು ನಿಂತಿದ್ದರು. ಆದರೆ, ಪ್ರಖರ ಫ್ಲಡ್‌ಲೈಟ್‌ನಿಂದಾಗಿ ಚೆಂಡು ಬರುತ್ತಿರುವುದನ್ನು ಅಂದಾಜಿಸಲು ರಚಿನ್‌ಗೆ ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಅವರ ಕಣ್ಣಿನ ಬಳಿ ಬಿದ್ದು, ರಕ್ತ ಸುರಿಯಲಾರಂಭಿಸಿದೆ.
ಕೆಲವು ಸೆಕೆಂಡುಗಳ ಏನಾಗುತ್ತಿದೆ ಎಂದು ರವೀಂದ್ರ ಅವರಿಗೆ ತಿಳಿಯಲಿಲ್ಲ. ಹೀಗಾಗಿ ನಿಂತಲ್ಲೇ ಕುಸಿದರು. ಆಗ ಮುಖದಿಂದ ರಕ್ತ ಸುರಿಯಲು ಆರಂಭವಾಯ್ತು. ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ದಿಗ್ಭ್ರಮೆಗೊಂಡರು. ಆಗ ವೈದ್ಯಕೀಯ ತಂಡ ತ್ವರಿತವಾಗಿ ಮೈದಾನಕ್ಕೆ ಧಾವಿಸಿತು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಮುಖವನ್ನು ಟವೆಲ್‌ನಿಂದ ಮುಚ್ಚಿಕೊಂಡು ರಚಿನ್ ಮೈದಾನದಿಂದ ಹೊರಬಂದರು.
ನೆಟ್ಟಿಗರ ಪ್ರಶ್ನೆ
ಈ ಘಟನೆಯ ನಂತರ, ಇದು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸುವ ಪಾಕಿಸ್ತಾನದ ಆತಿಥ್ಯ ಹಕ್ಕುಗಳನ್ನು ಪ್ರಶ್ನಿಸಲಾಗುತ್ತಿದೆ.
ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಈ ಬಗ್ಗೆ ಮಾತನಾಡಿದ್ದಾರೆ. ಮೈದಾನದಲ್ಲಿ ಎಲ್ಇಡಿ ದೀಪಗಳ ಬಳಕೆಯೇ ಮುಖ್ಯ ಸಮಸ್ಯೆಯಾಗಿದೆ ಎಂದು ಬಹಿರಂಗಪಡಿಸಿದ್ದಾರೆ. "ಅಂತಹ ದೀಪಗಳಲ್ಲಿ ಹೊಳಪು ಹೆಚ್ಚು. ಹೀಗಾಗಿ ಚೆಂಡು ಸಮತಟ್ಟಾಗಿ ಚಲಿಸಿದಾಗ, ಅದನ್ನು ನೋಡಲು ಸಾಧ್ಯವಾಗುವುದಿಲ್ಲ," ಎಂದು ಅವರು ಹೇಳಿದ್ದಾರೆ.
ಸದ್ಯ ರಚಿನ್ ಆರೋಗ್ಯವಾಗಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಹೇಳಿಕೊಂಡಿದೆ. ಆದರೆ ಸೋಮವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದವರೆಗೂ ಅವರ ಮೇಲೆ ನಿಗಾ ಇಡಲಾಗುತ್ತದೆ ಎಂದು ಹೇಳಿದೆ.
