ಸೋಫಿ ಡಿವೈನ್ ಸೇರಿ ಪ್ರಮುಖರು ಔಟ್, ಮೂವರು ಹೊಸಬರು ಆಗಮನ; ಹೀಗಿದೆ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11
RCB Possible Playing 11: ಡಬ್ಲ್ಯುಪಿಎಲ್ ಆರಂಭಿಕ ಪಂದ್ಯಕ್ಕೆ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿರುವ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ, ಟೀಮ್ ಮ್ಯಾನೇಜ್ಮೆಂಟ್ಗೆ ಆಡುವ 11ರ ಬಳಗ ಕಟ್ಟುವುದೇ ದೊಡ್ಡ ಸವಾಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 17 ವರ್ಷಗಳಿಂದಲೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ ಆರ್ಸಿಬಿ ಪುರುಷರ ತಂಡ. ಆದರೆ ಮಹಿಳಾ ಪ್ರೀಮಿಯರ್ ಲೀಗ್ ಆರಂಭಗೊಂಡ ಎರಡನೇ ಆವೃತ್ತಿಯಲ್ಲೇ ಕಪ್ ಗೆದ್ದು ಚರಿತ್ರೆ ಸೃಷ್ಟಿಸಿದೆ ಆರ್ಸಿಬಿ ಮಹಿಳೆಯರ ತಂಡ. ಟ್ರೋಫಿ ಗೆಲುವಿನ ಸಂಭ್ರಮದ ಗುಂಗಿನಲ್ಲೇ ಒಂದು ವರ್ಷ ಕಳೆದ ಆರ್ಸಿಬಿ, ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಮೂರನೇ ಆವೃತ್ತಿಗೆ ಸಜ್ಜಾಗಿದೆ. ಫೆಬ್ರವರಿ 14ರಿಂದಲೇ ಡಬ್ಲ್ಯುಪಿಎಲ್ ಶುರವಾಗಲಿದೆ. ಉದ್ಘಾಟನಾ ಪಂದ್ಯದಲ್ಲೇ ಆರ್ಸಿಬಿ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ. ಆದರೆ, ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿರುವ ನಾಯಕಿ ಸ್ಮೃತಿ ಮಂಧಾನ, ಟೀಮ್ ಮ್ಯಾನೇಜ್ಮೆಂಟ್ಗೆ ಆಡುವ 11ರ ಬಗಳ ಕಟ್ಟುವುದೇ ದೊಡ್ಡ ಸವಾಲಾಗಿದೆ.
2024ರ ಆವೃತ್ತಿಯಲ್ಲಿ ಆರ್ಸಿಬಿ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ನೆರವಾದ ಪ್ರಮುಖರೇ ಈ ಬಾರಿ ಅಲಭ್ಯರಾಗಿದ್ದಾರೆ. ಫೈನಲ್ನಲ್ಲಿ 3 ವಿಕೆಟ್ ಸೇರಿ ಒಟ್ಟು 12 ವಿಕೆಟ್ ಉರುಳಿಸಿ ಕಪ್ಗೆ ಮುತ್ತಿಕ್ಕಲು ಪ್ರಮುಖ ಪಾತ್ರವಹಿಸಿದ್ದ ಆಸ್ಟ್ರೇಲಿಯಾದ ಆಟಗಾರ್ತಿ ಸೋಫಿ ಮೊಲಿನೆಕ್ಸ್, ಗಾಯಗೊಂಡು ಅಲಭ್ಯರಾಗಿದ್ದಾರೆ. ಇವರ ಜೊತೆಗೆ ಹೊಡಿಬಡಿ ಆಟಕ್ಕೆ ಖ್ಯಾತಿ ಪಡೆದಿರುವ ನ್ಯೂಜಿಲೆಂಡ್ನ ಸೋಫಿ ಡಿವೈನ್ ಅವರು ಕ್ರಿಕೆಟ್ನಿಂದ ವಿಶ್ರಾಂತಿ ಪಡೆಯುವ ಸಲುವಾಗಿ ಟೂರ್ನಿಯಿಂದ ಸರಿದಿದ್ದಾರೆ. ಅಲ್ಲದೆ, ಇಂಗ್ಲೆಂಡ್ ಆಲ್ರೌಂಡರ್ ಕೇಟ್ ಕ್ರಾಸ್ ಸಹ ಗಾಯಗೊಂಡು ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.
ಇವರ ಸ್ಥಾನಕ್ಕೆ ಮೂವರು ಬದಲಿಯಾಗಿ ನೇಮಕವೂ ಆಗಿದ್ದಾರೆ. ಚಾರ್ಲೀ ಡೀನ್, ಕಿಮ್ ಗಾರ್ತ್, ಹೀದರ್ ಗ್ರಹಾಂ ಆರ್ಸಿಬಿಗೆ ಸೇರ್ಪಡೆಯಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂವರು ತಮ್ಮದೇಯಾದ ಸಾಧನೆ ಹೊಂದಿದ್ದಾರೆ. ಆದರೆ, ಪ್ಲೇಯಿಂಗ್ 11ಗೆ ಯಾರನ್ನು ತೆಗೆದುಕೊಳ್ಳಬೇಕೆಂಬ ಗೊಂದಲ ಕಾಡುವಂತೆ ಮಾಡಿದೆ. ವಿದೇಶಿ ಆಟಗಾರ್ತಿಯರ ಕೋಟಾದಲ್ಲಿ ಎಲ್ಲಿಸ್ ಪೆರಿ, ಜಾರ್ಜಿಯಾ ವೇರ್ಹ್ಯಾಮ್ ಜೊತೆಗೆ ಡಿವೈನ್ ಮತ್ತು ಮೊಲಿನೆಕ್ಸ್ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಇದೀಗ ಪೆರಿ, ಜಾರ್ಜಿಯಾ ಜೊತೆಗೆ ಸ್ಥಾನ ಚಾರ್ಲೀ ಡೀನ್ ಮತ್ತು ಡೇನಿಯಲ್ ವ್ಯಾಟ್ಗೆ ಮಣೆ ಹಾಕುವ ನಿರೀಕ್ಷೆ ಹೆಚ್ಚಿದೆ. ಏಕೆಂದರೆ ಒಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್ ಆದರೆ, ಮತ್ತೊಬ್ಬರು ಸ್ಪೆಷಲಿಸ್ಟ್ ಬ್ಯಾಟರ್ ಆಗಿದ್ದಾರೆ.
ಸ್ಮೃತಿ ಮಂಧಾನ ಜೊತೆ ಇನ್ನಿಂಗ್ಸ್ ಆರಂಭಿಸೋದು ಯಾರು?
ಮೊದಲ ಆವೃತ್ತಿಯಲ್ಲಿ ನಿರಾಸೆ ಮೂಡಿಸಿದ್ದ ನಾಯಕಿ ಸ್ಮತಿ ಮಂಧಾನ ಎರಡನೇ ಋತುವಿನಲ್ಲಿ ಪುಟಿದೆದ್ದಿದ್ದರು. ಆರಂಭಿಕರಾಗಿ ಆಡಿದ 10 ಪಂದ್ಯಗಳಲ್ಲಿ 300 ರನ್ ಸಿಡಿಸಿ ನಾಯಕಿಯಾಗಿ, ಬ್ಯಾಟರ್ ಆಗಿ ಆರ್ಸಿಬಿಗೆ ಎಲ್ಲೂ ಆಪತ್ತು ಬಾರದಂತೆ ಪ್ರಮುಖ ಪಿಲ್ಲರ್ ಆಗಿದ್ದರು. ಆದರೆ ಈ ಬಾರಿ ಸೋಫಿ ಡಿವೈನ್ ಇಲ್ಲದ ಕಾರಣ ಡೇನಿಯಲ್ ವ್ಯಾಟ್ ಆರಂಭಿಕರಾಗಿ ಕಣಕ್ಕಿಳಿಯಬಹುದು. ಸಬ್ಬಿನೇನಿ ಮೇಘನಾ ಮೂರನೇ, ಎಲಿಸ್ ಪೆರಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದ ಖಚಿತ. ಮಧ್ಯಮ ಕ್ರಮಾಂದಲ್ಲಿ ರಿಚಾ ಘೋಷ್, ಜಾರ್ಜಿಯಾ ವೇರ್ಹ್ಯಾಮ್, ರಾಘವಿ ಬಿಸ್ಟ್ ಕಣಕ್ಕಿಳಿಯಬಹುದು. ಕಳೆದ ಎಲ್ಲರೂ ಅತ್ಯದ್ಭುತ ಪ್ರದರ್ಶನ ನೀಡುವ ಗಮನ ಸೆಳೆದಿದ್ದರು.
ಉಳಿದಂತೆ ಕೆಳ ಕ್ರಮಾಂಕ ಮತ್ತು ಬೌಲಿಂಗ್ ವಿಭಾಗದಲ್ಲಿ ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ರೇಣುಕಾ ಸಿಂಗ್ ಠಾಕೂರ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಹುದು. ಇನ್ನೊಂದು ಸ್ಥಾನಕ್ಕೆ ಕಿಮ್ ಗಾರ್ತ್, ಹೀದರ್ ಗ್ರಹಾಂ ಬದಲಿಗೆ ಚಾರ್ಲೀ ಡೀನ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಮತ್ತೊಂದೆಡೆ ರಾಘವಿ ಬಿಸ್ಟ್, ಏಕ್ತಾ ಬಿಶ್ತ್ ಸೇರಿದಂತೆ ಪ್ರಮುಖರು ತಂಡದಲ್ಲಿದ್ದರೂ ಸ್ಥಾನ ಪಡೆಯುವುದು ಕಷ್ಟ ಎನ್ನಲಾಗಿದೆ. ಆಡುವ 11ರ ಬಳಗದಲ್ಲಿ ಸ್ಥಾನ ಅವಕಾಶ ಗಿಟ್ಟಿಸಿಕೊಂಡವರು ಗಾಯಗೊಂಡರೆ ಅಥವಾ ತುರ್ತು ಕಾರಣದಿಂದ ಹೊರಬಿದ್ದರೆ ಬೆಂಚ್ ಕಾಯುವ ಆಟಗಾರ್ತಿಯರಿಗೆ ಆಡುವ ಅವಕಾಶ ದೊರೆಯಲಿದೆ.
ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11
ಸ್ಮೃತಿ ಮಂಧಾನ (ನಾಯಕಿ), ಡೇನಿಯಲ್ ವ್ಯಾಟ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರಿ, ರಿಚಾ ಘೋಷ್ (ವಿಕೆಟ್ ಕೀಪರ್), ಜಾರ್ಜಿಯಾ ವೇರ್ಹ್ಯಾಮ್, ರಾಘವಿ ಬಿಸ್ಟ್, ಶ್ರೇಯಾಂಕಾ ಪಾಟೀಲ್, ಚಾರ್ಲೀ ಡೀನ್, ಆಶಾ ಶೋಭನಾ, ರೇಣುಕಾ ಸಿಂಗ್ ಠಾಕೂರ್.
