WPL Final: ಇದು ನಿಜಕ್ಕೂ WOWW; ಡೆಲ್ಲಿ ಇನ್ನಿಂಗ್ಸ್ ಹಣ್ಣುಗಾಯಿ ನೀರುಗಾಯಿ ಮಾಡಿದ ಆರ್‌ಸಿಬಿಯ ಸೋಫಿ ಮೊಲಿನ್ಯೂ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿಯ ಸೋಫಿ ಮೊಲಿನ್ಯೂ ಅಬ್ಬರಿಸಿದ್ದಾರೆ. ಒಂದೇ ಓವರ್‌ನಲ್ಲಿ ಮೆಗ್ ಲ್ಯಾನಿಂಗ್ ಬಳಗದ 3 ವಿಕೆಟ್ ಉರುಳಿಸಿ ಪಂದ್ಯವನ್ನು ತಮ್ಮತ್ತ ತಿರುಗಿಸಿದ್ದಾರೆ. ಒಂದು ಹಂತದಲ್ಲಿ 60 ರನ್‌ವರೆಗೂ ಒಂದೇ ಒಂದು ವಿಕೆಟ್ ಕಳೆದುಕೊಳ್ಳದ ಡೆಲ್ಲಿ, ಆ ನಂತರ ಕೇವಲ 113 ರನ್‌ಗೆ ಆಲೌಟ್ ಆಯ್ತು.
ಮಹಿಳಾ ಪ್ರೀಮಿಯರ್ ಲೀಗ್ (WPL) 2024ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಮತ್ತೊಮ್ಮೆ ಅಬ್ಬರಿಸಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals Women) ವನಿತೆಯರ ತಂಡವು ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore Women) ವಿರುದ್ಧದ ನಿರ್ಣಾಯಕ ಫೈನಲ್ ಪಂದ್ಯದಲ್ಲಿ, ಮೆಗ್ ಲ್ಯಾನಿಂಗ್ ಪಡೆ ಸ್ಫೋಟಕ ಆರಂಭ ಪಡೆಯಿತು. ಆರಂಭಿಕರಾದ ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್, ಪವರ್‌ಪ್ಲೇನಲ್ಲಿ ಆರ್‌ಸಿಬಿ ಬೌಲರ್‌ಗಳ ಬೆಂಡೆತ್ತಿದರು. ಅದರಲ್ಲೂ ಶಫಾಲಿ ವರ್ಮಾ ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸಿದರು. ಆದರೆ, ಡೆಲ್ಲಿ ಆರ್ಭಟ ಹೆಚ್ಚು ಹೊತ್ತು ಉಳಿಯಲಿಲ್ಲ. ಸೋಫಿ ಮೊಲಿನ್ಯೂ ಎಸೆದ ಆ ಒಂದು ಓವರ್ ಡೆಲ್ಲಿ ಇನ್ನಿಂಗ್ಸ್‌ನ ದಿಕ್ಕನ್ನೇ ಬದಲಿಸಿತು.
8ನೇ ಓವರ್ ಎಸೆಯಲು ಬಂದ ಮೊಲಿನ್ಯೂ, ಕೇವಲ ಒಂದು ರನ್ ಮಾತ್ರ ಬಿಟ್ಟುಕೊಟ್ಟು ಮೂರು ಪ್ರಮುಖ ವಿಕೆಟ್ ಪಡೆದು ಆರ್‌ಸಿಬಿಗೆ ಅಗತ್ಯ ಮುನ್ನಡೆ ತಂದುಕೊಟ್ಟರು. ಮೊದಲ ಎಸೆತದಲ್ಲೇ ಪವರ್ ಹಿಟ್ಟರ್ ಶಫಾಲಿಗೆ ಪೆವಿಲಿಯನ್ ಹಾದಿ ತೋರಿದ ಅವರು, ನಂತರದ ಎಸೆತ ಡಾಟ್ ಮಾಡಿದರು. ಮೂರು ಹಾಗೂ ನಾಲ್ಕನೇ ಎಸೆತದಲ್ಲಿ ಕ್ರಮವಾಗಿ ಜೆಮಿಮಾ ರೋಡ್ರಿಗಸ್ ಹಾಗೂ ಅಲಿಸ್ ಕ್ಯಾಪ್ಸೆ ವಿಕೆಟ್ ಪಡೆದು ಮಿಂಚಿದರು. ಈ ಕ್ಷಣ ನಿಜಕ್ಕೂ ಜಸ್ಟ್ ಲುಕಿಂಗ್ ಲೈಕ್ WOWW ಎಂಬಂತಿತ್ತು.
ಪವರ್ ಪ್ಲೇ ಅಂತ್ಯಕ್ಕೆ ಡೆಲ್ಲಿ ತಂಡದ ಮೊತ್ತ 61 ರನ್ ಆಗಿತ್ತು. ಸತತ ಮೂರು ವಿಕೆಟ್‌ಗಳು ಉರುಳುತ್ತಿದ್ದಂತೆಯೇ ಡೆಲ್ಲಿ ಅಬ್ಬರಕ್ಕೆ ಬ್ರೇಕ್ ಬಿದ್ದಿತು. 44 ರನ್ ಗಳಿಸಿದ್ದ ಶಫಾಲಿ ವರ್ಮಾ, ಸಿಕ್ಸರ್ ಸಿಡಿಸಿ ಅರ್ಧಶತಕ ಗಳಿಸುವ ಪ್ರಯತ್ನಕ್ಕೆ ಕೈಹಾಕಿದರು. ಆದರೆ, ಡೀಪ್ ಮಿಡ್ ವಿಕೆಟ್‌ನಲ್ಲಿ ಕಾಯುತ್ತಾ ನಿಂತಿದ್ದ ವೇರ್‌ಹ್ಯಾಮ್ ಕೈಗೆ ಚೆಂಡು ಬಂದು ಬಿದ್ದಿತು. ಅದಾದ ಒಂದು ಎಸೆತದ ನಂತರ, ರೊಡ್ರಿಗಸ್ ಮತ್ತು ಕ್ಯಾಪ್ಸಿ ಕೂಡಾ ಔಟಾದರು. ಆ ಬಳಿಕ ಬಂದ ಮಾರಿಜಾನೆ ಕಾಪ್, ಆರ್‌ಸಿಬಿಯ ಮೊಲಿನ್ಯೂ ಹ್ಯಾಟ್ರಿಕ್ ಅವಕಾಶವನ್ನು ತಪ್ಪಿಸಿದರು. ಆದರೆ, ಸೋಫಿ ನೀಡಿದ ಈ ಆಘಾತವು ಡೆಲ್ಲಿಯು ಕೊನೆಯವರೆಗೂ ಚೇತರಿಸದಂತೆ ಮಾಡಿತು. ಕೇವಲ 113 ರನ್‌ಗಳಿಗೆ ಡೆಲ್ಲಿ ತಂಡ ಆಲೌಟ್ ಆಯ್ತು.
ಕಳೆದ ವರ್ಷವೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ಪ್ರವೇಶಿಸಿತ್ತು. ಆದರೆ, ಅಂತಿಮ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತ್ತು. ಈ ಬಾರಿ ಮತ್ತೆ ಲ್ಯಾನಿಂಗ್ ಪಡೆ ಫೈನಲ್ ಲಗ್ಗೆ ಹಾಕಿದೆ. ಆದರೆ, ನೀರಸೆ ಇನ್ನಿಂಗ್ಸ್ ಬೀಕ ಗೆಲುವಿನ ಆಸೆ ಬಹುತೇಕ ಕಳೆದುಕೊಂಡಿದೆ.
ಆರ್‌ಸಿಬಿ ತಂಡ
ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನ್ಯೂ, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಆಶಾ ಸೋಭಾನ, ರೇಣುಕಾ ಠಾಕೂರ್ ಸಿಂಗ್.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಾಪ್, ಜೆಸ್ ಜೊನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಿಖಾ ಪಾಂಡೆ, ಮಿನ್ನು ಮಣಿ.