ಕೇವಲ 55 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್; ಹರಿಣಗಳ ಬ್ಯಾಟಿಂಗ್‌ ಲೈನಪ್‌ ಹಣ್ಣುಗಾಯಿ ನೀರುಗಾಯಿ ಮಾಡಿದ ಸಿರಾಜ್
ಕನ್ನಡ ಸುದ್ದಿ  /  ಕ್ರಿಕೆಟ್  /  ಕೇವಲ 55 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್; ಹರಿಣಗಳ ಬ್ಯಾಟಿಂಗ್‌ ಲೈನಪ್‌ ಹಣ್ಣುಗಾಯಿ ನೀರುಗಾಯಿ ಮಾಡಿದ ಸಿರಾಜ್

ಕೇವಲ 55 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್; ಹರಿಣಗಳ ಬ್ಯಾಟಿಂಗ್‌ ಲೈನಪ್‌ ಹಣ್ಣುಗಾಯಿ ನೀರುಗಾಯಿ ಮಾಡಿದ ಸಿರಾಜ್

India vs South Africa 2nd Test: ದಕ್ಷಿಣ ಆಫ್ರಿಕಾ ತಂಡ ಅಲ್ಪಮೊತ್ತಕ್ಕೆ ಆಲೌಟ್‌ ಆಗಿದೆ. ಕೇಪ್​​​ಟೌನ್​ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಮೊಹಮ್ಮದ್‌ ಸಿರಾಜ್‌ ವೇಗದ ದಾಳಿಗೆ ಹರಿಣಗಳ ಬಳಗದ ಬ್ಯಾಟಿಂಗ್ ಲೈನಪ್‌ ಮಂಕಾಗಿದೆ.

ಮೊಹಮ್ಮದ್‌ ಸಿರಾಜ್‌ ಸಂಭ್ರಮಾಚರಣೆ
ಮೊಹಮ್ಮದ್‌ ಸಿರಾಜ್‌ ಸಂಭ್ರಮಾಚರಣೆ (PTI)

ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ (South Africa vs India) ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಆತಿಥೇಯ ದಕ್ಷಿಣ ಆಫ್ರಿಕಾ, ಕೇಪ್‌​ಟೌನ್‌​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಮಂಕಾಗಿದೆ. ದೊಡ್ಡ ಮೊತ್ತ ಕಲೆ ಹಾಕುವ ಉದ್ದೇಶದಿಂದ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಡೀನ್‌ ಎಲ್ಗರ್ ಪಡೆಯು 23.2 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಆಲೌಟ್‌ ಆಗಿ ಮೊದಲ ಇನ್ನಿಂಗ್ಸ್‌ ಮುಗಿದಿದೆ.

ಮೊಹಮ್ಮದ್‌ ಸಿರಾಜ್‌ ಚಾಣಾಕ್ಷ ವೇಗದ ದಾಳಿಗೆ ಮಂಕಾದ ಹರಿಣಗಳು ಮೊದಲ ದಿನದಾಟದ ಮೊದಲ ಸೆಷನ್‌ನಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಭರ್ಜರಿ 6 ವಿಕೆಟ್‌ಗಳನ್ನು ಕಬಳಿಸಿದ ವೇಗಿ ಸಿರಾಜ್‌, ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ ಡೇವಿಡ್‌ ಬೆಡಿಂಗ್‌ಹ್ಯಾಮ್‌ (12) ಮತ್ತು ಕೈಲ್‌ ವೆರೆನ್ನೆ (15) ಹೊರತುಪಡಿಸಿದರೆ, ಬೇರೆ ಯಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ಗಳಿಸಿಲ್ಲ.

ಸಿರಾಜ್‌ ವೇಗಕ್ಕೆ ಜೊತೆಯಾದ ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್‌ ಕುಮಾರ್‌ ಕೂಡಾ ತಲಾ ಎರಡು ವಿಕೆಟ್‌ ಕಬಳಿಸಿ ಅಬ್ಬರಿಸಿದರು. ಕೇವಲ 9 ಓವರ್‌ ಬೌಲಿಂಗ್‌ ಮಾಡಿದ ಸಿರಾಜ್‌ 15 ರನ್‌ ಮಾತ್ರ ಬಿಟ್ಟುಕೊಟ್ಟು 6 ವಿಕೆಟ್‌ ಕಬಳಿಸಿದರು.

ಇದನ್ನೂ ಓದಿ | ಐಪಿಎಲ್ ಫಾರ್ಮ್ ಮತ್ತು ಫಿಟ್‌ನೆಸ್ ಆಧಾರದಲ್ಲಿ ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆಗೆ ಬಿಸಿಸಿಐ ಚಿಂತನೆ

1932ರ ನಂತರ ಟೆಸ್ಟ್‌ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಅತ್ಯಂತ ಕಡಿಮೆ ಮೊತ್ತ ಇದಾಗಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ತಂಡ ಕಲೆ ಹಾಕಿದ ಕಡಿಮೆ ರನ್‌ ಇದಾಗಿದೆ.

ಐಡೆನ್‌ ಮರ್ಕ್ರಾಮ್‌ ಮೊದಲನೆಯವರಾಗಿ ಕೇವಲ 2 ರನ್‌ಗೆ ಔಟಾದರೆ, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಎಲ್ಗರ್‌ ಆಟ ಈ ಬಾರಿ ಕೇವಲ 4 ರನ್‌ಗೆ ಅಂತ್ಯವಾಯ್ತು. ಸಿರಾಜ್‌ ಸತತ ಎರಡು ವಿಕೆಟ್‌ ಪಡೆದರೆ, ಸ್ಟಬ್ಸ್‌ ವಿಕೆಟ್‌ ಪಡೆದು ಬುಮ್ರಾ ಮಿಂಚಿದರು. ಈ ವೇಳೆ ಮತ್ತೆ ದಾಳಿ ಮುಂದುವರೆಸಿದ ಸಿರಾಜ್‌, ಜೊರ್ಜಿ ಮತ್ತು ಬೆಡಿಂಗ್‌ಹ್ಯಾಮ್‌ ವಿಕೆಟ್‌ ಪಡೆದರು. ಕಳೆದ ಪಂದ್ಯದಲ್ಲಿ ಭಾರತವನ್ನು ಕಾಡಿದ್ದ ಜಾನ್ಸೆನ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಶಾರ್ದುಲ್‌ ಠಾಕೂರ್‌ ಬದಲಿಸಗೆ ಸ್ಥಾನ ಪಡೆದ ಮುಖೇಶ್‌, ಕೇಶವ್‌ ಮಹಾರಾಜ್‌ ಮತ್ತು ರಬಾಡ ವಿಕೆಟ್‌ ಪಡೆದು ಮಿಂಚಿದರು.

ಇದನ್ನೂ ಓದಿ | ಇಂಗ್ಲೆಂಡ್, ಭಾರತ ಎರಡೂ ಅಲ್ಲ; ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಆರಿಸಿದ ಆಂಗ್ಲರ ಮಾಜಿ ಕ್ರಿಕೆಟಿಗ

ಭಾರತ ತಂಡದಲ್ಲಿ ಎರಡು ಬದಲಾವಣೆ

2ನೇ ಟೆಸ್ಟ್​​ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಮೊದಲ ಟೆಸ್ಟ್​​​ನಲ್ಲಿ ನೀರಸ ಪ್ರದರ್ಶನ ನೀಡಿದ ರವಿಚಂದ್ರನ್ ಅಶ್ವಿನ್ ಮತ್ತು ಶಾರ್ದೂಲ್ ಠಾಕೂರ್​​ ತಂಡದಿಂದ ಹೊರಬಿದ್ದಿದ್ದಾರೆ. ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾಗೆ ಸ್ಥಾನ ಕಲ್ಪಿಸಲಾಗಿದೆ. ಮತ್ತೊಂದೆಡೆ ಶಾರ್ದೂಲ್ ಠಾಕೂರ್ ಬದಲಿಗೆ ಮುಕೇಶ್ ಕುಮಾರ್​​ಗೆ ಅವಕಾಶ ನೀಡಲಾಗಿದೆ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಮೂರು ಬದಲಾವಣೆ

ದಕ್ಷಿಣ ಆಫ್ರಿಕಾ ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ. ಟೆಂಬಾ ಬವುಮಾ ಬದಲಿಗೆ ಟ್ರಿಸ್ಟಾನ್ ಸ್ಟಬ್ಸ್ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಎನ್‌ಗಿಡಿ ಗಾಯಗೊಂಡಿದ್ದು, ಕೊಯೆಟ್ಜಿ ತಂಡ ಸೇರಿಕೊಂಡಿದ್ದಾರೆ. ಸ್ಪಿನ್ನರ್ ಕೇಶವ್ ಮಹಾರಾಜ್ ಕೂಡ ತಂಡ ಕೂಡಿಕೊಂಡಿದ್ದಾರೆ.

Whats_app_banner