ವಿಶ್ವಕಪ್‌ 2023: ರನ್‌ ಮಳೆ ಹರಿಸಿ 149 ರನ್‌ಗಳಿಂದ ಬಾಂಗ್ಲಾದೇಶ ಮಣಿಸಿದ ದಕ್ಷಿಣ ಆಫ್ರಿಕಾ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್‌ 2023: ರನ್‌ ಮಳೆ ಹರಿಸಿ 149 ರನ್‌ಗಳಿಂದ ಬಾಂಗ್ಲಾದೇಶ ಮಣಿಸಿದ ದಕ್ಷಿಣ ಆಫ್ರಿಕಾ

ವಿಶ್ವಕಪ್‌ 2023: ರನ್‌ ಮಳೆ ಹರಿಸಿ 149 ರನ್‌ಗಳಿಂದ ಬಾಂಗ್ಲಾದೇಶ ಮಣಿಸಿದ ದಕ್ಷಿಣ ಆಫ್ರಿಕಾ

South Africa vs Bangladesh: ಇಂಗ್ಲೆಂಡ್‌ ತಂಡವನ್ನು ಬೃಹತ್‌ ಅಂತರದಿಂದ ಮಣಿಸಿದ ಬೆನ್ನಲ್ಲೇ, ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲದೇಶವನ್ನು ಕೂಡಾ ಸೋಲಿಸಿದೆ. ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಹರಿಣಗಳು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾಗೆ ಗೆಲುವು
ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾಗೆ ಗೆಲುವು (AFP)

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವಿಶ್ವಕಪ್‌ 2023ರ (ICC ODI World Cup 2023) 23ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ (South Africa vs Bangladesh) ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ, ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕ ಹಾಗೂ ಹೆನ್ರಿಚ್ ಕ್ಲಾಸೆನ್ ಅವರ ಸ್ಫೋಟಕ ಅರ್ಧ ಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 382 ರನ್‌ ಕಲೆ ಹಾಕಿತು. ಬೃಹತ್ ಗುರಿ ಪಡೆದ ಬಾಂಗ್ಲಾದೇಶ, ಮಹಮ್ಮದುಲ್ಲಾ ಶತಕದ ಹೊರತಾಗಿಯೂ 46.4 ಓವರ್‌ಗಳಲ್ಲಿ 233 ರನ್‌ ಗಳಿಸಿ ಆಲೌಟ್‌ ಆಯ್ತು. ಆ ಮೂಲಕ 149 ರನ್‌ಗಳಿಂದ ಗೆದ್ದು ಬೀಗಿತು.

ಬೃಹತ್‌ ಗುರಿ ನೋಡಿ ಕಂಗಾಲಾಗಿದ್ದ ಬಾಂಗ್ಲಾದೇಶ, ಆರಂಭದಲ್ಲೇ ಏದುಸಿರು ಬಿಡುತ್ತಾ ಬ್ಯಾಟಿಂಗ್‌ ನಡೆಸಿತು. ಆರಂಭಿಕ ಆಟಗಾರ ತಂಜಿದ್‌ ಹಸನ್‌ ಕೇವಲ 12(17) ರನ್‌ ಗಳಿಸಿ ಜಾನ್ಸೆನ್‌ಗೆ ವಿಕೆಟ್‌ ಒಪ್ಪಿಸಿದರು. ಅವರ ಬೆನ್ನಿಗೆ ಬಂದ ಶಾಂಟೊ, ಮೊದಲ ಎಸೆತದಲ್ಲೇ ಔಟಾಗಿ ಗೋಲ್ಡನ್‌ ಡಕ್‌ ಆದರು. ಸತತ ಎರಡು ವಿಕೆಟ್‌ ಕಳೆದುಕೊಂಡ ತಂಡಕ್ಕೆ ಆಸರೆಯಾಗಲು ಬಂದ ನಾಯಕ ಶಕೀಬ್‌ ಅಲ್‌ ಹಸನ್‌ ಕೂಡಾ ಕೇವಲ 1 ರನ್‌ ಗಳಿಸಿ ಔಟಾದರು. ಮೇಲಿಂದ ಮೇಲೆ ಮೂರು ವಿಕೆಟ್‌ ಕಳೆದುಕೊಂಡು ತಂಡ ಸಂಕಷ್ಟ ಅನುಭವಿಸಿತು.

ಕ್ರೀಸ್‌ಕಚ್ಟಿ ಆಡಬೇಕಾದ ಅನಿವಾರ್ಯತೆಯ ನಡುವೆ ಬ್ಯಾಟ್‌ ಬೀಸಲು ಬಂದ ಅನುಭವಿ ಆಟಗಾರ ಮುಶ್ಫಿಕರ್‌ ರಹೀಮ್‌, 8 ರನ್‌ ಗಳಿಸಿ ಡಗೌಟ್‌ಗೆ ನಡೆದರು. ಆರಂಭಿಕನಾಗಿ ಬಂದು ಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸುತ್ತಿದ್ದ ಲಿಟ್ಟನ್‌ ದಾಸ್‌ 44 ಎಸೆತಗಳಿಂದ 22 ರನ್‌ ಗಳಿಸಿ ಆಡುತ್ತಿದ್ದಾಗ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಆ ಬಳಿಕ ಮಹಮದುಲ್ಲಾ ಜೊತೆ ಸೇರಿ 23 ರನ್‌ ಜೊತೆಯಾಟದ ಬಳಿಕ ಮೆಹಿದಿ ಹಸನ್‌ ಮಿರಾಜ್ 11(19) ರನ್‌ ಗಳಿಸಿ ಕೇಶವ್‌ ಮಹಾರಾಜ್‌ ಎಸೆತದಲ್ಲಿ ಔಟಾದರು. ಈ ವೇಳೆ ಒಂದಾದ ನಸುಮ್‌ ಮತ್ತು ಮಹಮದುಲ್ಲಾ 41 ರನ್‌ಗಳ ಜೊತೆಯಾಟವಾಡಿದರು. ಅಷ್ಟರಲ್ಲಿ ಅಹಮದ್‌ 19 ರನ್‌ ಗಳಿಸಿ ಔಟಾದರು. ಹಸನ್‌ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಮಹಮ್ಮದುಲ್ಲಾ ಭರ್ಜರಿ ಶತಕ

ಕೊನೆಯವರೆಗೂ ಪಟ್ಟುಬಿಡದೆ ಅಬ್ಬರಿಸಿದ ಮಹಮ್ಮದುಲ್ಲಾ, ಆಕರ್ಷಕ ಶತಕ ಸಿಡಿಸಿದರು. ಒಂದು ಹಂತದಲ್ಲಿ ಬೇಗನೆ ಆಲೌಟ್‌ ಆಗುವ ಸುಳಿವು ನೀಡಿದ್ದ ತಂಡಕ್ಕೆ ಅನುಭವಿ ಆಟಗಾರ ಆಸರೆಯಾದರು. 104 ಎಸೆತಗಳಿಂದ ಶತಕ ಸಿಡಿಸಿದ ಅವರು, ಅಂತಿಮವಾಗಿ 111 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಹರಿಣಗಳ ಆರ್ಭಟ

ಪ್ರಸಕ್ತ ಆವೃತ್ತಿಯಲ್ಲಿ ಬೃಹತ್‌ ಮೊತ್ತಗಳನ್ನೇ ಕಲೆಹಾಕುತ್ತಿರುವ ದಕ್ಷಿಣ ಆಫ್ರಿಕಾ, ಮುಂಬೈನಲ್ಲಿ ಮತ್ತೊಮ್ಮೆ ರನ್‌ ಮಳೆ ಹರಿಸಿತು. ತಂಡದ ಯಶಸ್ವಿ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮತ್ತೊಮ್ಮೆ ಅಬ್ಬರಿಸಿದರು. 101 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಅಂತಿಮವಾಗಿ 140 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸ್ಫೋಟಕ ಸಿಕ್ಸರ್‌ಗಳ ಸಹಿತ 174 ರನ್ ಗಳಿಸಿದರು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಮೂರನೇ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು.

ಡಿಕಾಕ್‌ಗೆ ಉತ್ತಮ ಸಾಥ್ ನೀಡಿದ ಐಡೆನ್ ಮಾರ್ಕ್ರಾಮ್ 69 ಎಸೆತಗಳಿಂದ 7 ಬೌಂಡರಿ ಸೇರಿ 60 ರನ್ ಗಳಿಸಿ ಬಾಂಗ್ಲಾ ನಾಯಕ ಶಕಬ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಹೆನ್ರಿಚ್ ಕ್ಲಾಸೆನ್ ಕೇವಲ 49 ಎಸೆತಗಳಲ್ಲಿ 2 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ ಸೇರಿ 90 ರನ್ ಸಿಡಿಸಿದರು. ಡೇವಿಡ್ ಮಿಲ್ಲರ್ ಅಜೇಯ 34 ರನ್ ರನ್ ಗಳಿಸಿದರು.

ಬಾಂಗ್ಲಾದೇಶದ ಪರ ಹಸನ್ ಮೆಹದಿ 2 ವಿಕೆಟ್ ಪಡೆದರೆ, ಮೆಹದಿ ಹಸನ್‌ ಮಿರಾಜ್, ಶೋರಿಫುಲ್ ಇಸ್ಲಾಂ, ಶಕೀಬ್ ಅಲ್ ಹಸನ್ ತಲಾ 1 ವಿಕೆಟ್ ಕಿತ್ತರು.

Whats_app_banner