ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ನಾಗಾಲೋಟ; ಇಂಗ್ಲೆಂಡ್ ವಿರುದ್ಧ 7 ರನ್‌ಗಳಿಂದ ಗೆದ್ದ ಹರಿಣಗಳು
England vs South Africa: ಟಿ20 ವಿಶ್ವಕಪ್ 2024ರಲ್ಲಿ ದಕ್ಷಿಣ ಆಫ್ರಿಕಾ ಅಜೇಯ ಓಟ ಮುಂದುವರೆಸಿದೆ. ಟೂರ್ನಿಯಲ್ಲಿ ಈವರೆಗೆ ಆಡಿದ ಎಲ್ಲಾ 6 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಇದರೊಂದಿಗೆ ಸೆಮಿಫೈನಲ್ ಹಂತಕ್ಕೇರುವುದು ಬಹುತೇಕ ಖಚಿತವಾಗಿದೆ.

ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ರೋಚಕ ಜಯ ಸಾಧಿಸಿದೆ. ಸೇಂಟ್ ಲೂಸಿಯಾಯಾದ ಡೇರೆನ್ ಸಮ್ಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹರಿಣಗಳು 7 ರನ್‌ಗಳಿಂದ ಗೆದ್ದು ಬೀಗಿದ್ದಾರೆ. ಕೊನೆಯ ಎಸೆತದವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಗೆಲುವಿನೊಂದಿಗೆ ಸೂಪರ್ 8 ಹಂತದಲ್ಲಿ ಸತತ ಎರಡನೇ ಜಯ ಸಾಧಿಸಿದ ಸೌತ್ ಆಫ್ರಿಕಾ ಸೆಮಿಫೈನಲ್ ಹಂತಕ್ಕೆ ಬಹುತೇಕ ಹತ್ತಿರವಾಗಿದೆ. ಕೊನೆಯ ಎರಡು ಓವರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ಹಾಗೂ ನಾರ್ತಜೆ ಸಂಪೂರ್ಣ ನಿಯಂತ್ರಣ ಸಾಧಿಸಿ ಪಂದ್ಯವನ್ನು ಕೈವಶ ಮಾಡಿಕೊಂಡಿದ್ದಾರೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವು ಪ್ರಸಕ್ತ ಆವೃತ್ತಿಯಲ್ಲಿ ಅಜೇಯ ಓಟ ಮುಂದುವರೆಸಿದೆ. ಆಡಿದ ಎಲ್ಲಾ 6 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಕ್ವಿಂಟನ್ ಡಿ ಕಾಕ್ ಅರ್ಧಶತಕ ಹಾಗೂ ಡೇವಿಡ್ ಮಿಲ್ಲರ್ ಅವರ ಆಕರ್ಷಕ ಆಟದ ನೆರವಿನಿಂದ 163/6 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಹ್ಯಾರಿ ಬ್ರೂಕ್ ಅರ್ಧಶತಕ ಹಾಗೂ ಲಿವಿಂಗ್‌ಸ್ಟನ್ ಸ್ಪೋಟಕ ಆಟದ ಹೊರತಾಗಿಯೂ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಲಷ್ಟೇ ಶಕ್ತವಾಯ್ತು.
ಡಿಕಾಕ್ ಸ್ಫೋಟಕ ಅರ್ಧಶತಕ
ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾಗೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ರೀಜಾ ಹೆಂಡ್ರಿಕ್ಸ್ ಮತ್ತು ಕ್ವಿಂಟನ್ ಡಿ ಕಾಕ್ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದರೂ ನಂತರ ವೇಗವಾಗಿ ಬ್ಯಾಟ್ ಬೀಸಿದರು. ಕೇವಲ ಐದು ಓವರ್‌ಗಳಲ್ಲಿ ತಂಡ ಅರ್ಧಶತಕದ ಗಡಿ ದಾಟಿತು. ಪವರ್‌ಪ್ಲೇ ಅಂತ್ಯಕ್ಕೆ ತಂಡವು ವಿಕೆಟ್ ನಷ್ಟವಿಲ್ಲದೆ 63 ರನ್ ಗಳಿಸಿತು. ಏಳನೇ ಓವರ್‌ನಲ್ಲಿ ಡಿ ಕಾಕ್ ಮೂರು ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಪೂರೈಸಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ 86 ರನ್ ಪೇರಿಸಿದರು. 25 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿದ ಹೆಂಡ್ರಿಕ್ಸ್ 10ನೇ ಓವರ್‌ನಲ್ಲಿ ಔಟಾದರು.
12ನೇ ಓವರ್‌ನಲ್ಲಿ ಬಲಗೈ ವೇಗಿ ಜೋಫ್ರಾ ಆರ್ಚರ್, ಅರ್ಧಶತಕ ಸಿಡಿಸಿದ್ದ ಡಿ ಕಾಕ್ ಅವರನ್ನು ಪೆವಿಲಿಯನ್‌ಗೆ ವಾಪಸ್ ಕಳುಹಿಸಿದರು. ವಿಕೆಟ್‌ಕೀಪರ್ ಹಾಗೂ ಬ್ಯಾಟರ್ 38 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಹಿತ 65 ರನ್ ಗಳಿಸಿ ಔಟಾದರು. 14ನೇ ಓವರ್ ವೇಳೆಗೆ 8 ರನ್ ಗಳಿಸಿದ್ದ ಕ್ಲಾಸೆನ್ ರನೌಟ್ ಆದರು. ಜೋಸ್ ಬಟ್ಲರ್ ಆಕರ್ಷಕ ಥ್ರೋಗೆ ಕ್ಲಾಸೆನ್ ಬಲಿಯಾದರು. ಅವರ ಬೆನ್ನಲ್ಲೇ ಐಡೆನ್ ಮರ್ಕ್ರಾಮ್ ಕೂಡಾ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು. ಈ ನಡುವೆ ಮಿಲ್ಲರ್ 28 ಎಸೆತಗಳಲ್ಲಿ 43 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು.
ಇಂಗ್ಲೆಂಡ್ ಪರ ಆರ್ಚರ್ 40 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಕಬಳಿಸಿದರು. ಮೊಯಿನ್ ಅಲಿ ಮತ್ತು ರಶೀದ್ ತಲಾ ಒಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಕಠಿಣ ಪೈಪೋಟಿ
ಬೃಹತ್ ಮೊತ್ತ ಚೇಸಿಂಗ್‌ಗಿಳಿದ ಇಂಗ್ಲೆಂಡ್ ಆರಂಭದಲ್ಲೇ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡಿತು. 8 ಎಸೆತಗಳಲ್ಲಿ 11 ರನ್ ಗಳಿಸಿದ್ದ ಸಾಲ್ಟ್, ರಬಾಡಾ ಎಸೆತದಲ್ಲಿ ಔಟಾದರು. 16 ರನ್ ಗಳಿಸಿದ ಬೇರ್‌ಸ್ಟೋ, ಕೇಶವ್ ಮಹಾರಾಜ್ ಎಸೆತಕ್ಕೆ ಬಲಿಯಾದರು. ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದ ನಾಯಕ ಬಟ್ಲರ್ 17 ರನ್ ಗಳಿಸಿ ಕ್ಲಾಸೆನ್‌ಗೆ ಕ್ಯಾಚ್ ನೀಡಿ ಔಟಾದರು. ಮೊಯೀನ್ ಅಲಿ ಕೂಡಾ 9 ರನ್ ವೇಳೆಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಒಂದಾದ ಹ್ಯಾರಿ ಬ್ರೂಕ್ ಹಾಗೂ ಲಿವಿಂಗ್‌ಸ್ಟನ್ ಆಕರ್ಷಕ ಜೊತೆಯಾಟವಾಡಿದರು. ತಂಡಕ್ಕೆ ಅಗತ್ಯವಿದ್ದ ದೊಡ್ಡ ಹೊಡೆತಗಳನ್ನಾಡಿ ಅರ್ಧಶತಕದ ಜೊತೆಯಾಟವಾಡಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಲಿವಿಂಗ್‌ಸ್ಟನ್ 17 ಎಸೆತಗಳಲ್ಲಿ 33 ರನ್ ಸಿಡಿಸಿದರು. ಅಮೋಘ ಆಟವಾಡಿದ ಹ್ಯಾರಿ ಬ್ರೂಕ್ 37 ಎಸೆತಗಳಲ್ಲಿ 53 ರನ್ ಸಿಡಿಸಿ ಔಟಾದರು. ಕೊನೆಯಲ್ಲಿ ಸ್ಯಾಮ್ ಕರನ್ ತಂಡವನ್ನು ಗೆಲ್ಲಿಸುವ ಪ್ರಯತ್ನಕ್ಕೆ ಕೈಹಾಕಿದರೂ, ಗೆಲುವು ಒಲಿಯಲಿಲ್ಲ.
ಆಫ್ರಿಕಾ ಪರ ರಬಾಡಾ ಹಾಗೂ ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರು.
ಟಿ20 ವಿಶ್ವಕಪ್ 2024ರ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಜೈಸ್ವಾಲ್-ಸಿರಾಜ್ ಇನ್, ದುಬೆ ಔಟ್; ಬಾಂಗ್ಲಾದೇಶ ವಿರುದ್ದದ ಸೂಪರ್ 8 ಪಂದ್ಯಕ್ಕೆ ಭಾರತ ಆಡುವ ಬಳಗ