ಫಾಲೋ ಆನ್ಗೆ ಸಿಲುಕಿದ ಪಾಕಿಸ್ತಾನಕ್ಕೆ 10 ವಿಕೆಟ್ಗಳ ಹೀನಾಯ ಸೋಲು; ಗೆದ್ದ ದಕ್ಷಿಣ ಆಫ್ರಿಕಾಗೆ ಟೆಸ್ಟ್ ಸರಣಿ
South Africa vs Pakistan: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲಿಸ್ಟ್ ಸೌತ್ ಆಫ್ರಿಕಾ ತಂಡವು ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿದೆ. ಕೇಪ್ಟೌನ್ನಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್ಗಳಿಂದ ಗೆದ್ದು ತವರಿನಲ್ಲಿ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಟಿ20ಐ ಸರಣಿ ಸೋತು, ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಪಾಕಿಸ್ತಾನ ಆರಂಭಿಕ ಟೆಸ್ಟ್ನಲ್ಲಿ ಪರಾಭವದ ಬಳಿಕ 2ನೇ ಟೆಸ್ಟ್ ಜಯಿಸಿ ಸರಣಿ ಡ್ರಾ ಮಾಡುವ ಲೆಕ್ಕಾಚಾರದಲ್ಲಿತ್ತು. ಆದರೀಗ ಫಾಲೋಆನ್ಗೆ ಸಿಲುಕಿ ಹರಿಣಗಳ ಎದುರು ಮಂಡಿಯೂರಿದೆ.
ಪಾಕ್ ನೀಡಿದ್ದ 58 ರನ್ಗಳ ಗುರಿ ಬೆನ್ನಟ್ಟಿದ ಆಫ್ರಿಕಾ 4ನೇ ದಿನದ ಅಂತ್ಯದಲ್ಲಿ 7.1 ಓವರ್ಗಳಲ್ಲೇ ಗೆದ್ದು ಬೀಗಿತು. ಟೆಂಬಾ ಬವುಮಾ ನಾಯಕನಾಗಿ ತಮ್ಮ ಅಜೇಯ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಏಕೆಂದರೆ ಇದುವರೆಗೂ ನಾಯಕನಾಗಿ ಅವರು ಸೋಲೇ ಕಂಡಿಲ್ಲ. 34 ವರ್ಷದ ಬುಮ್ರಾ, 9 ಟೆಸ್ಟ್‌ಗಳಲ್ಲಿ ಸೌತ್ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದು, 8 ಗೆಲುವು, ಡ್ರಾ ಹೊಂದಿದ್ದಾರೆ. ಸೌತ್ ಆಫ್ರಿಕಾ ಜೂನ್ 11ರಂದು ಡಬ್ಲ್ಯುಟಿಸಿ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.
ಸೌತ್ ಆಫ್ರಿಕಾ ಭರ್ಜರಿ ಬ್ಯಾಟಿಂಗ್, ಬೃಹತ್ ಮೊತ್ತ
ಮೊದಲು ಬ್ಯಾಟಿಂಗ್ ನಡೆಸಿದ್ದ ಸೌತ್ ಆಫ್ರಿಕಾ ತಂಡವು, ರಿಯಾನ್ ರಿಕೆಲ್ಟನ್ರ ದ್ವಿಶತಕ (259), ಟೆಂಬಾ ಬವುಮಾ (106) ಮತ್ತು ಕೈಲ್ ವೆರ್ರೆನ್ನೆ (100) ಅವರ ಶತಕಗಳ ನೆರವಿನಿಂದ ಆಫ್ರಿಕಾ 615 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಆರಂಭಿಕ ವಿಕೆಟ್ಗೆ 61 ರನ್ಗಳ ಜೊತೆಯಾಟ ಬಂದರೂ ತಂಡದ ಮೊತ್ತ 72 ರನ್ ಆಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಆ ಬಳಿಕ ರಿಯಾನ್ ಮತ್ತು ಬವುಮಾ ಒಂದಾಗಿ ನಾಲ್ಕನೇ ವಿಕೆಟ್ಗೆ 235 ರನ್ ಸೇರಿಸಿದರು. ಇದೇ ವೇಳೆ ಇಬ್ಬರು ಭರ್ಜರಿ ಶತಕ ಸಿಡಿಸಿ ಮಿಂಚಿದರು.
ಆದರೆ ಬವುಮಾ 179 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 106 ರನ್ ಸಿಡಿಸಿ ಸಲ್ಮಾನ್ ಆಘಾ ಬೌಲಿಂಗ್ನಲ್ಲಿ ನಿರ್ಗಮಿಸಿದರು. ಇವರ ಬೆನ್ನಲ್ಲೇ ಡೇವಿಡ್ ಬೆಡಿಂಗ್ಹ್ಯಾಮ್ (5) ಕೂಡ ಬೇಗನೇ ಪೆವಿಲಿಯನ್ ಸೇರಿದರು. ನಂತರ 6ನೇ ವಿಕೆಟ್ಗೆ ರಿಯಾನ್ ಮತ್ತು ವೆರ್ರೆನ್ನೆ 148 ರನ್ಗಳ ಪಾಲುದಾರಿಕೆ ಒದಗಿಸಿದರು. ಇದೇ ವೇಳೆ ರಿಯಾನ್ ತಮ್ಮ ಚೊಚ್ಚಲ ದ್ವಿಶತಕ ಬಾರಿಸಿ ದಾಖಲೆ ನಿರ್ಮಿಸಿದರು. ಮತ್ತೊಂದೆಡೆ ವೆರ್ರೆನ್ನೆ ಅಮೋಘ ಸೆಂಚುರಿ ಬಾರಿಸಿ ತಂಡದ ಮೊತ್ತ ಏರಿಸಿದರು. 147 ಎಸೆತಗಳಿಗೆ 9 ಬೌಂಡರಿ, 5 ಸಿಕ್ಸರ್ ಸಹಿತ 100 ರನ್ ಸಿಡಿಸಿ ಔಟಾದರು.
ಒಂದೆಡೆ ವಿಕೆಟ್ ಉದುರಲು ಆರಂಭಿಸಿದರೂ ತನ್ನ ಬ್ಯಾಟಿಂಗ್ ಆರ್ಭಟ ನಿಲ್ಲಿಸಿದ ರಿಯಾನ್, ತಾನು 250ರ ಗಡಿ ದಾಟಿದ್ದಲ್ಲದೆ ತಂಡದ ಮೊತ್ತವನ್ನೂ 600ರ ಗಡಿ ದಾಟಿಸಿದರು. 343 ಎಸೆತಗಳಲ್ಲಿ 29 ಬೌಂಡರಿ, 3 ಬೌಂಡರಿ ಸಹಿತ 259 ರನ್ ಸಿಡಿಸಿ ಔಟಾದರು. ಇವರಿಗೆ ಮಾರ್ಕೋ ಜಾನ್ಸನ್ 60 ರನ್, ಕೇಶವ್ ಮಹಾರಾಜ್ 40 ರನ್ ಸಿಡಿಸಿ ಅದ್ಭುತ ಸಾಥ್ ಕೊಟ್ಟರು. ದಕ್ಷಿಣ ಆಫ್ರಿಕಾ ವಿರುದ್ಧ ಬೆಂಡೆತ್ತಿಸಿಕೊಂಡ ಪಾಕಿಸ್ತಾನದ ಬೌಲರ್ಗಳ ಪೈಕಿ ಮೊಹಮ್ಮದ್ ಅಬ್ಬಾಸ್, ಸಲ್ಮಾನ್ ಆಘಾ ತಲಾ 3 ವಿಕೆಟ್ ಪಡೆದರು. ಮಿರ್ ಹಮ್ಜಾ, ಖುರಾನ್ ಶಹಬಾಜ್ ತಲಾ 2 ವಿಕೆಟ್ ಉರುಳಿಸಿದರು.
58 ರನ್ಗಳ ಗುರಿ ನೀಡಿದ ಪಾಕಿಸ್ತಾನ
ಈ ಮೊತ್ತಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿತು. ಪರಿಣಾಮ 194 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 421 ರನ್ಗಳ ಹಿನ್ನಡೆ ಅನುಭವಿಸಿತು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡವು ಪಾಕ್ಗೆ ಫಾಲೋ ಆನ್ ಹೇರಿತು. ಹೀಗಾಗಿ 2ನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಪುಟಿದೇಳಿತು. ಶಾನ್ ಮಸೂದ್ ಅದ್ಭುತ ಶತಕ (145) ಮತ್ತು ಬಾಬರ್ ಅಜಮ್ (81) ಮತ್ತೊಂದು ಅರ್ಧಶತಕ ಸಿಡಿಸಿದರೆ, ಉಳಿದ ಬ್ಯಾಟರ್ಸ್ ಮತ್ತೆ ವೈಫಲ್ಯ ಅನುಭವಿಸಿದರು. ಪರಿಣಾಮ 478 ರನ್ಗಳಿಗೆ ಆಲೌಟ್ ಪಾಕಿಸ್ತಾನ, ಆಫ್ರಿಕಾಗೆ 58 ರನ್ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ವಿಕೆಟ್ ನಷ್ಟವಿಲ್ಲದೆ 7.1 ಓವರ್ಗಳಲ್ಲೇ ಗುರಿ ಮುಟ್ಟಿತು.