WTC ಅಂಕಪಟ್ಟಿ: ಸದ್ದಿಲ್ಲದೆ ಅಗ್ರಸ್ಥಾನಕ್ಕೆ ನೆಗೆದ ದಕ್ಷಿಣ ಆಫ್ರಿಕಾ; ಮೂರನೇ ಸ್ಥಾನಕ್ಕೆ ಕುಸಿದ ಭಾರತದ ಫೈನಲ್ ಹಾದಿ ದುರ್ಗಮ
ಭಾರತ ತಂಡವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಏಕಾಏಕಿ ಮೂರನೇ ಸ್ಥಾಕ್ಕೆ ಕುಸಿದಿದೆ. ಅಡಿಲೇಡ್ ಟೆಸ್ಟ್ ಸೋತ ನಂತರ 57.29 ಶೇಕಡಾ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ, ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವಿನೊಂದಿಗೆ ಟಾಪ್ 2 ಸ್ಥಾನವನ್ನೂ ಕಳೆದುಕೊಂಡಿದೆ. ತಂಡದ ಡಬ್ಲ್ಯುಟಿಸಿ ಫೈನಲ್ ಕನಸು ಮತ್ತಷ್ಟು ಕಮರಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಟ್ಟಿಯಲ್ಲಿ ಭಾನುವಾರದವರೆಗೂ (ನವೆಂಬರ್ 8) ಅಗ್ರಸ್ಥಾನದಲ್ಲಿದ್ದ ಭಾರತ ತಂಡ, ಒಂದು ದಿನದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತವನ್ನು ಮಣಿಸಿ ಅಗ್ರಸ್ಥಾನಕ್ಕೇರಿದ್ದ ಆಸ್ಟ್ರೇಲಿಯಾ, ಒಂದೇ ದಿನದೊಳಗೆ ಮತ್ತೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 109 ರನ್‌ಗಳಿಂದ ಗೆದ್ದ ದಕ್ಷಿಣ ಆಫ್ರಿಕಾ ತಂಡ, ಈ ಬಾರಿಯ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ತವರಿನಲ್ಲಿ ಶ್ರೀಲಂಕಾವನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ತಂಡವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರಿ ಬಡ್ತಿ ಪಡೆದಿದೆ. ಸದ್ಯ ಅಗ್ರಸ್ಥಾನದಲ್ಲಿ ಮೆರೆಯುತ್ತಿದೆ.
ಸದ್ಯ ಎರಡನೇ ಟೆಸ್ಟ್ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನಕ್ಕೆ ನೆಗೆದಿದೆ. ಆಡಿದ 10 ಪ್ರಂದ್ಯಗಳಲ್ಲಿ ಆರನೇ ಗೆಲುವು ದಾಖಲಿಸಿದ ತಂಡವು ಶೇಕಡಾ 63.33 ಅಂಕಗಳನ್ನು ಹೊಂದಿದೆ. ಹೀಗಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ 60.71 ಶೇಕಡಾ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ.
ಇದೀಗ, ಎರಡು ಬಾರಿಯ ಡಬ್ಲ್ಯುಟಿಸಿ ರನ್ನರ್ ಅಪ್ ಆಗಿರುವ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಟೆಸ್ಟ್ ಸೋತ ನಂತರ 57.29 ಶೇಕಡಾ ಅಂಕಗಳೊಂದಿಗೆ ಮೂರನೇ ಸ್ಥಾಕ್ಕೆ ಕುಸಿದಿದೆ. ಇದರೊಂದಿಗೆ ತಂಡದ ಡಬ್ಲ್ಯುಟಿಸಿ ಫೈನಲ್ ಕನಸು ಮತ್ತಷ್ಟು ಕಮರಿದೆ.
ಡಬ್ಲ್ಯುಟಿಸಿ ಅಂಕಪಟ್ಟಿ
ಅತ್ತ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲು ಶ್ರೀಲಂಕಾದ ಅಗ್ರ-ಎರಡು ಸ್ಥಾನದ ಭರವಸೆಯನ್ನು ಕೆಡಿಸಿದೆ. ಮುಂದಿನ ವರ್ಷ ಜೂನ್ 11ರಿಂದ 15ರವರೆಗೆ ಲಾರ್ಡ್ಸ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಹಣಾಹಣಿಗೆ ಲಗ್ಗೆ ಹಾಕಲು, ಲಂಕಾಗೆ ಇನ್ನೂ ಅವಕಾಶಗಳಿವೆ. ಸದ್ಯ ತಂಡದ ಅಂಕಗಳ ಶೇಕಡಾವಾರು ಪ್ರಮಾಣ 45.45ಕ್ಕೆ ಇಳಿದಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ತಂಡ ನಾಲ್ಕನೇ ಸ್ಥಾನದಲ್ಲಿದೆ.
ಭಾರತದ ನಿದ್ದೆಗೆಡಿಸಿದ ದಕ್ಷಿಣ ಆಫ್ರಿಕಾ
ಸದ್ಯ ಸರಣಿ ಗೆಲುವಿನೊಂದಿಗೆ, ಡಬ್ಲ್ಯುಟಿಸಿಯ ಫೈನಲ್ ತಲುಪಲು ದಕ್ಷಿಣ ಆಫ್ರಿಕಾ ತಂಡಕ್ಕೆ ಕೇವಲ ಒಂದು ಗೆಲುವಿನ ಅಗತ್ಯವಿದೆ. ಮುಂದೆ ತಂಡವು ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಡಬ್ಲ್ಯುಟಿಸಿ ಫೈನಲ್ ರೇಸ್‌ನಲ್ಲಿ ಈವರೆಗೆ ಭಾರತ ಮತ್ತು ಆಸೀಸ್ ಮಾತ್ರ ಇದೆ ಎಂಬ ಲೆಕ್ಕಾಚಾರವಿತ್ತು. ಆದರೆ ಅಗ್ರಸ್ಥಾನಕ್ಕೆ ದಕ್ಷಿಣ ಆಫ್ರಿಕಾ ತಂಡದ ಲೇಟ್ ಎಂಟ್ರಿಯು ಭಾರತ ಮತ್ತು ಆಸ್ಟ್ರೇಲಿಯಾ ನಿದ್ದೆಗೆಡಿಸಿದೆ.
ಗೆಲ್ಲಲೇ ಬೇಕಾದ ಅನಿವಾರ್ಯ
ಟೂರ್ನಿಯ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲು ಭಾರತದ ಮುಂದೆ ಕಠಿಣ ಸವಾಲಿದೆ. ಇದು ಸಾಧ್ಯವಾಗಲು, ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ 3 ಪಂದ್ಯಗಳಲ್ಲಿಯೂ ಗೆಲ್ಲಬೇಕಾಗಿದೆ. ಸದ್ಯ ಸರಣಿಯು 1-1 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಭಾರತದ ಭವಿಷ್ಯ ಸದ್ಯ ಅತಂತ್ರವಾಗಿದೆ. ಒಂದು ವೇಳೆ ಭಾರತವು ಒಂದು ಪಂದ್ಯದಲ್ಲಿ ಸೋತು 3-2 ಅಂತರದಿಂದ ಸರಣಿ ಗೆದ್ದರೆ, ಶ್ರೀಲಂಕಾವನ್ನು ಅವಲಂಬಿಸಬೇಕಾಗುತ್ತದೆ.