ಡಬ್ಲ್ಯುಟಿಸಿ ಫೈನಲ್ಗೇರಿದ ದಕ್ಷಿಣ ಆಫ್ರಿಕಾ, ಉಳಿದ ಸ್ಥಾನಕ್ಕೆ 3 ತಂಡಗಳ ನಡುವೆ ಫೈಟ್, ಎರಡೂ ಪಂದ್ಯ ಗೆದ್ದರಷ್ಟೇ ಭಾರತಕ್ಕೆ ಉಳಿಗಾಲ
WTC 2025 Final: ಪಾಕಿಸ್ತಾನ ತಂಡವನ್ನು ಸೋಲಿಸಿದ ನಂತರ ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ. ಇದೀಗ ಉಳಿದ ಒಂದು ಸ್ಥಾನಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ಏನು ಮಾಡಬೇಕು ಎನ್ನುವುದರ ವಿವರ ಇಲ್ಲಿದೆ.
ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ 2025ರ ಜೂನ್ನಲ್ಲಿ ಲಂಡನ್ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC 2025) ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. 2 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ನಲ್ಲಿ ಪಾಕಿಸ್ತಾನ ತಂಡವನ್ನು 2 ವಿಕೆಟ್ಗಳಿಂದ ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಡಬ್ಲ್ಯುಟಿಸಿ ಫೈನಲ್ಗೇರಲು ಪಾಕ್ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾಗೆ ಒಂದು ಜಯ ಸಾಕಾಗಿತ್ತು. ಅದರಂತೆ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಗ ಉಳಿದಿರುವ ಪಂದ್ಯ ಔಪಚಾರಿಕವಷ್ಟೆ.
ಒಂದು ಗೆಲುವು, ಮೂರು ತಂಡಗಳಿಗೆ ಟೆನ್ಶನ್
ಸೆಂಚುರಿಯನ್ ಟೆಸ್ಟ್ನಲ್ಲಿ ಪಾಕಿಸ್ತಾನ ನೀಡಿದ್ದ 148 ರನ್ಗಳ ಗುರಿ ಬೆನ್ನತ್ತಿದ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕಗಿಸೊ ರಬಾಡ (31*) ಮತ್ತು ಮಾರ್ಕೊ ಜಾನ್ಸೆನ್ (16*) ಅವರ ಅದ್ಭುತ ಆಟದ ನೆರವಿನಿಂದ ಆತಿಥೇಯ ತಂಡ ಗೆಲುವಿನ ಗೆರೆ ದಾಟುವಲ್ಲಿ ಯಶಸ್ವಿಯಾಯಿತು. ಮುಂದಿನ ವರ್ಷ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ಗೆ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೇನೋ ದಕ್ಷಿಣ ಆಫ್ರಿಕಾ ಪಾತ್ರವಾಯ್ತು. ಆದರೆ ಈ ಫಲಿತಾಂಶವು ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳ ಮೇಲೆ ಒತ್ತಡ ಹೆಚ್ಚಿಸಿರುವುದಂತೂ ಸುಳ್ಳಲ್ಲ.
ಪ್ರಸ್ತುತ ಒಂದು ಸ್ಥಾನ ಖಚಿತವಾಗಿದ್ದು, ಮತ್ತೊಂದು ಸ್ಥಾನಕ್ಕೆ ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಪೈಪೋಟಿ ನಡೆಸುತ್ತಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಇಂಡೋ-ಆಸೀಸ್ ತಂಡಗಳು ಡಬ್ಲ್ಯುಟಿಸಿ ಫೈನಲ್‌ಗೆ ಸ್ಥಾನ ಭದ್ರಪಡಿಸಿಕೊಳ್ಳಲು ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುವಂತಾಗಿದೆ. ಸದ್ಯ ನಾಲ್ಕನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದ್ದು, ಯಾರು ಗೆಲ್ಲುತ್ತಾರೋ ಎಂಬ ಕುತೂಹಲ ಸೃಷ್ಟಿಯಾಗಿದೆ. ಹಾಗಾದರೆ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಮತ್ತು ಆಸ್ಟ್ರೇಲಿಯಾ ಏನು ಮಾಡಬೇಕು? ಅವಕಾಶ ಎಷ್ಟಿದೆ? ಇಲ್ಲಿದೆ ವಿವರ.
ಪ್ರಸ್ತುತ ಅಂಕಪಟ್ಟಿಯಲ್ಲಿ 55.88 ಗೆಲುವಿನ ಶೇಕಡವಾರಿನೊಂದಿಗೆ 3ನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ, ಅಗ್ರಸ್ಥಾನಕ್ಕೇರುವುದು ಕಷ್ಟ. ಮೆಲ್ಬೋರ್ನ್ ಟೆಸ್ಟ್ ನಂತರ ಭಾರತ ತಂಡಕ್ಕೆ ಉಳಿದಿರುವ ಪಂದ್ಯ ಒಂದು ಮಾತ್ರ. ಆದರೆ ಆಸ್ಟ್ರೇಲಿಯಾಗೆ ಭಾರತ ವಿರುದ್ಧದ ಒಂದು, ಶ್ರೀಲಂಕಾ ವಿರುದ್ಧ 2 ಪಂದ್ಯಗಳು ಬಾಕಿ ಉಳಿದಿವೆ. ಆದರೆ ಭಾರತಕ್ಕಿಂತ ಆಸೀಸ್ ತಂಡಕ್ಕೇ ಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಭಾರತ ಉಳಿದ ಎರಡು ಪಂದ್ಯ ಗೆಲ್ಲುವುದು ಅನಿವಾರ್ಯ.
ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭಾರತಕ್ಕಿರುವ ದಾರಿ
- ಆಸ್ಟ್ರೇಲಿಯಾ ವಿರುದ್ಧ ಭಾರತ 3-1 ಅಂತರದಲ್ಲಿ ಗೆಲ್ಲಬೇಕು (ಮೆಲ್ಬೋರ್ನ್, ಸಿಡ್ನಿ ಟೆಸ್ಟ್ ಗೆಲ್ಲಬೇಕು). ಆಗ ಫೈನಲ್‌ಗೆ ಟಿಕೆಟ್ ಖಚಿತಗೊಳ್ಳುತ್ತದೆ.
- ಒಂದು ವೇಳೆ ಇಂಡೋ-ಆಸೀಸ್ ಸರಣಿ 2-2 ರಿಂಡ ಡ್ರಾಗೊಂಡರೆ, ಭಾರತ ಗೆಲುವಿನ ಶೇಕಡಾ 55.26. ಅಥವಾ ಭಾರತ 2-1ರಲ್ಲಿ ಗೆದ್ದರೆ ಭಾರತ 57.01 ಗೆಲುವಿನ ಶೇಕಡವಾರು ಹೊಂದುತ್ತದೆ. ರೋಹಿತ್ ಪಡೆಗೆ ಶ್ರೀಲಂಕಾ ತಂಡದ ಸಹಾಯ ಬೇಕಾಗುತ್ತದೆ.
- ಮುಂದಿನ ವರ್ಷ ಆಸ್ಟ್ರೇಲಿಯಾ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ 2-0 ಅಂತರದ ಗೆಲುವು ಸಾಧಿಸಬೇಕು. ಅಥವಾ ಶ್ರೀಲಂಕಾ 1-0 ಅಂತರದ ಗೆಲುವಾದರೂ ದಾಖಲಿಸಬೇಕು. ಆಗ ಭಾರತಕ್ಕೆ ಫೈನಲ್ ಪ್ರವೇಶಿಸಲಿದೆ.
- ಭಾರತ ತಂಡ ಉಳಿದ ಎರಡೂ ಟೆಸ್ಟ್ಗಳಲ್ಲಿ ಡ್ರಾ ಸಾಧಿಸಿದರೆ, 53.50 ಗೆಲುವಿನ ಶೇಕಡವಾರು ಹೊಂದುತ್ತದೆ. ಆಗ ಶ್ರೀಲಂಕಾ ವಿರುದ್ಧ ಆಸೀಸ್ ಒಂದು ಪಂದ್ಯ ಗೆದ್ದರೂ ಡಬ್ಲ್ಯುಟಿಸಿ ಫೈನಲ್ ಹೋಗುತ್ತದೆ.
- ಭಾರತ ಉಳಿದ ಎರಡು ಪಂದ್ಯಗಳಲ್ಲಿ ಸೋತರೆ, ಫೈನಲ್ ರೇಸ್ನಿಂದ ಹೊರಬೀಳಲಿದೆ.
ಕ್ರ.ಸಂ | ತಂಡಗಳು | ಪಂದ್ಯ | ಗೆಲುವು | ಸೋಲು | ಡ್ರಾ | ಅಂಕ | ಗೆ. ಶೇ |
---|---|---|---|---|---|---|---|
1. | ದಕ್ಷಿಣ ಆಫ್ರಿಕಾ | 11 | 7 | 3 | 1 | 88 | 66.66 |
2. | ಆಸ್ಟ್ರೇಲಿಯಾ | 15 | 9 | 4 | 2 | 106 | 58.88 |
3. | ಭಾರತ | 17 | 9 | 6 | 2 | 114 | 55.88 |
4. | ನ್ಯೂಜಿಲೆಂಡ್ | 14 | 7 | 7 | 0 | 81 | 48.21 |
5. | ಶ್ರೀಲಂಕಾ | 11 | 5 | 6 | 0 | 60 | 45.45 |
6. | ಇಂಗ್ಲೆಂಡ್ | 22 | 6 | 7 | 0 | 69 | 44.23 |
7. | ಬಾಂಗ್ಲಾದೇಶ | 12 | 4 | 8 | 0 | 45 | 31.25 |
8. | ಪಾಕಿಸ್ತಾನ | 11 | 4 | 7 | 0 | 40 | 30.30 |
9. | ವೆಸ್ಟ್ ಇಂಡೀಸ್ | 11 | 2 | 7 | 2 | 32 | 24.24 |
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope