ತಂಡ ಸೋಲುತ್ತೆ ಎಂದು ಶೌಚಾಲಯದಲ್ಲಿ ಅಡಗಿದ್ದರಂತೆ ಟೆಂಬಾ ಬವುಮಾ; ದಕ್ಷಿಣ ಆಫ್ರಿಕಾ ನಾಯಕನ ಪ್ರಾಮಾಣಿಕ ಮಾತು
ಕನ್ನಡ ಸುದ್ದಿ  /  ಕ್ರಿಕೆಟ್  /  ತಂಡ ಸೋಲುತ್ತೆ ಎಂದು ಶೌಚಾಲಯದಲ್ಲಿ ಅಡಗಿದ್ದರಂತೆ ಟೆಂಬಾ ಬವುಮಾ; ದಕ್ಷಿಣ ಆಫ್ರಿಕಾ ನಾಯಕನ ಪ್ರಾಮಾಣಿಕ ಮಾತು

ತಂಡ ಸೋಲುತ್ತೆ ಎಂದು ಶೌಚಾಲಯದಲ್ಲಿ ಅಡಗಿದ್ದರಂತೆ ಟೆಂಬಾ ಬವುಮಾ; ದಕ್ಷಿಣ ಆಫ್ರಿಕಾ ನಾಯಕನ ಪ್ರಾಮಾಣಿಕ ಮಾತು

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ನಾಯಕ ಟೆಂಬಾ ಬವುಮಾ, ತಮ್ಮ ತಂಡ ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯ ಸೋಲುತ್ತೆ ಎಂದುಕೊಂಡು ಶೌಚಾಲಯದಲ್ಲಿಯೇ ಅಡಗಿಕೊಂಡಿದ್ದಾಗಿ ಹೇಳಿದ್ದಾರೆ. ಹರಿಣಗಳ ಚೇಸಿಂಗ್‌ನ ಅಂತಿಮ ಕ್ಷಣದ ಅನುಭವದ ಬಗ್ಗೆ ಪಂದ್ಯದ ಬಳಿಕ ಅವರು ಮಾತನಾಡಿದ್ದಾರೆ.

ತಂಡ ಸೋಲುತ್ತೆ ಎಂದು ಶೌಚಾಲಯದಲ್ಲಿ ಅಡಗಿದ್ದರಂತೆ ಟೆಂಬಾ ಬವುಮಾ
ತಂಡ ಸೋಲುತ್ತೆ ಎಂದು ಶೌಚಾಲಯದಲ್ಲಿ ಅಡಗಿದ್ದರಂತೆ ಟೆಂಬಾ ಬವುಮಾ (AFP)

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡವು ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಿದೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ, ಒಂದು ಹಂತದಲ್ಲಿ ಸೋಲುವ ಹಂತದಲ್ಲಿದ್ದ ಹರಿಣಗಳು, ಕೊನೆಗೂ 2 ವಿಕೆಟ್‌ಗಳ ರೋಚಕ ಗೆಲುವಿನೊಂದಿಗೆ ಮತ್ತೊಂದು ಐಸಿಸಿ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಉಗುರು ಕಚ್ಚುವಂತಹ ಸನ್ನಿವೇಶವು ಪಾಕ್‌ ಹಾಗೂ ದಕ್ಷಿಣ ಆಫ್ರಿಕಾ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿತ್ತು. ಈ ಭಾವ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಅವರಿಗೂ ಆಗಿರುವ ವಿಚಾರ ಬಹಿರಂಗವಾಗಿದೆ. ಪಂದ್ಯದ ಬಳಿಕ ಅವರು ಈ ವಿಷಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಚೇಸಿಂಗ್ ಸಮಯದಲ್ಲಿ ತಮ್ಮ ತಂಡದ ಬ್ಯಾಟಿಂಗ್ ಅಂದುಕೊಂಡಂತೆ ಫಲ ನೀಡದಿದ್ದಾಗ ಬೇಸರವಾಯಿತು ಎಂದು ಹೇಳಿದ್ದಾರೆ.

ಡಿಸೆಂಬರ್‌ 29ರ ಭಾನುವಾರ ನಡೆದ ಮೊದಲ ಸೆಷನ್‌ನಲ್ಲಿ ಒತ್ತಡವನ್ನು ನಿಭಾಯಿಸಲು ದಕ್ಷಿಣ ಆಫ್ರಿಕಾ ವಿಫಲವಾಯಿತು. ಹೀಗಾಗಿ 99 ರನ್‌ ಆಗುವಷ್ಟರಲ್ಲಿ 8 ವಿಕೆಟ್‌ ಕಳೆದುಕೊಂಡು ಕುಸಿಯಿತು. ಆದರೆ ಕಗಿಸೊ ರಬಾಡ 26 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ರಬಾಡ ಮತ್ತು ಮಾರ್ಕೊ ಜಾನ್ಸೆನ್ ಜೊತೆಗೂಡಿ ಅಜೇಯ 51 ರನ್‌ಗಳ ಜೊತೆಯಾಟವಾಡಿದರು. ಕೊನೆಗೆ ದಕ್ಷಿಣ ಆಫ್ರಿಕಾ ಎರಡು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪ್ರವೇಶಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ 40 ರನ್‌ಗಳಿಗೆ ಔಟಾದ ಬವುಮಾ, ಒಂದು ಹಂತದಲ್ಲಿ ತಮ್ಮ ತಂಡ ಸೋಲುತ್ತೆ ಎಂದೇ ಭಾವಿಸಿದರು. ಹೀಗಾಗಿ ಪಂದ್ಯವನ್ನು ನೋಡಲಾಗದೆ ಶೌಚಾಲಯದಲ್ಲಿ ಅಡಗಿಕೊಂಡಿದ್ದರಂತೆ. ತಂಡದ ಗೆಲುವಿಗೆ ಕೇವಲ 15 ರನ್‌ಗಳ ಅಗತ್ಯವಿದೆ ಎಂದಾಗ ಅವರು ಬಾತ್‌ರೂಮ್‌ನಿಂದ ಹೊರಬಂದರು.

ಪಂದ್ಯ ವೀಕ್ಷಿಸಲೇ ಇಲ್ಲ

“ಇದು ನನ್ನ ಪಾಲಿಗೆ ಭಾವನಾತ್ಮಕ ಕ್ಷಣ. ಗೆಲುವಿನಿಂದ ನಮಗೆ ಸಂತೋಷವಾಗಿದೆ. ನಾವು ಕಠಿಣ ಪ್ರಯತ್ನ ಮಾಡಿದ್ದೆವು. ಅದರಂತೆ ಈಗ ಗೆದ್ದಿರುವುದಕ್ಕೆ ಸಂತೋಷವಾಗಿದೆ. ನಾನು ಬೇಸರದಿಂದ ಶೌಚಾಲಯದಲ್ಲಿ ಕುಳಿತ್ತಿದ್ದೆ. ನಮಗೆ ಗೆಲ್ಲುವ ವಿಶ್ವಾಸವಿತ್ತು. ಆದರೆ, ನಾನು ಪಂದ್ಯ ವೀಕ್ಷಿಸಲು ಬರಲಿಲ್ಲ. ಶೌಚಾಲಯದಲ್ಲಿಯೇ ಉಳಿದಿದ್ದೆ. ಗೆಲುವಿಗೆ 15 ರನ್‌ಗಳ ಅಗತ್ಯವಿದ್ದಾಗ ನಾನು ಬಂದೆ. ಇದು ದೊಡ್ಡ ಗೆಲುವು. ನನಗೆ ಮಾತ್ರ ಅಲ್ಲ. ತರಬೇತುದಾರರಿಗೂ ದೊಡ್ಡ ಯಶಸ್ಸು,” ಎಂದು ಬವುಮಾ ಪಂದ್ಯದ ನಂತರ ಹೇಳಿದ್ದಾರೆ.

“ನಾವು ಭಾರತದ ವಿರುದ್ಧ ನಮ್ಮ ಅಭಿಯಾನವನ್ನು ಪ್ರಾರಂಭಿಸಿದ ರೀತಿ ನೋಡಿದರೆ, ಡಬ್ಲ್ಯುಟಿಸಿ ಪ್ರವೇಶಿಸುವ ಹೆಚ್ಚು ಅವಕಾಶ ನಮಗೆ ಇರಲಿಲ್ಲ. ಆದರೆ ನಾವು ಮಾರ್ಗಗಳನ್ನು ಹುಡುಕುತ್ತಲೇ ಇದ್ದೆವು. ಈ ರೀತಿಯ ಪ್ರದರ್ಶನಗಳಿಂದ ಆಟಗಾರರು ಹೆಚ್ಚು ಆತ್ಮವಿಶ್ವಾಸವನ್ನು ಪಡೆಯಬಹುದು ಎಂದು ನಾವು ಭಾವಿಸುತ್ತೇವೆ. ನಾವು ಈ ಕ್ಷಣವನ್ನು ಆನಂದಿಸಲು ಬಯಸುತ್ತೇವೆ,” ಎಂದು ಹೇಳಿದರು.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner