ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮ; ಕೈ ಮುಗಿದು ಶುಭ ಹಾರೈಸಿದ ದಕ್ಷಿಣ ಆಫ್ರಿಕಾ​ ಕ್ರಿಕೆಟಿಗ, ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮ; ಕೈ ಮುಗಿದು ಶುಭ ಹಾರೈಸಿದ ದಕ್ಷಿಣ ಆಫ್ರಿಕಾ​ ಕ್ರಿಕೆಟಿಗ, ವಿಡಿಯೋ

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮ; ಕೈ ಮುಗಿದು ಶುಭ ಹಾರೈಸಿದ ದಕ್ಷಿಣ ಆಫ್ರಿಕಾ​ ಕ್ರಿಕೆಟಿಗ, ವಿಡಿಯೋ

Keshav Maharaj on Ayodhya Ram Mandir: ಭಾರತ ಮೂಲದ ದಕ್ಷಿಣ ಆಫ್ರಿಕಾ ಸ್ಟಾರ್ ಸ್ಪಿನ್ನರ್ ಕೇಶವ್​ ಮಹರಾಜ್ ರಾಮಮಂದಿರ ಉದ್ಘಾಟನೆಗೆ ಶುಭ ಕೋರಿದ್ದಾರೆ.

ದಕ್ಷಿಣ ಆಫ್ರಿಕಾ​ ಕ್ರಿಕೆಟಿಗ ಕೇಶವ್ ಮಹಾರಾಜ್.
ದಕ್ಷಿಣ ಆಫ್ರಿಕಾ​ ಕ್ರಿಕೆಟಿಗ ಕೇಶವ್ ಮಹಾರಾಜ್.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ (Ayodhya Ram Mandir) ಬಾಲ ರಾಮನ ಪ್ರತಿಷ್ಠಾಪನೆ ಭಕ್ತಿ ಭಾವದಿಂದ ಅದ್ಧೂರಿಯಾಗಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮನನ್ನು ಪ್ರತಿಷ್ಠಾಪಿಸಿ ಸಂಪನ್ನಗೊಂಡರು. ದೇಶ-ವಿದೇಶಗಳಿಂದ ಬಂದಿರುವ ಸಾವಿರಾರು ಭಕ್ತರು ಈ ಪವಿತ್ರ ಕಾರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇದೀಗ ಭಾರತ ಮೂಲದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್​ ಮಹರಾಜ್ ರಾಮಮಂದಿರ ಉದ್ಘಾಟನೆಗೆ ಶುಭ ಕೋರಿದ್ದಾರೆ.

ಶ್ರೀ ರಾಮ ಮತ್ತು ಆಂಜನೇಯನ ಪರಮ ಭಕ್ತನಾಗಿರುವ ಸ್ಪಿನ್ನರ್ ಕೇಶವ್​ ಮಹಾರಾಜ್ ರಾಮ ಮಂದಿರ ಲೋಕಾರ್ಪಣೆಗೆ ಸೌತ್​ ಆಫ್ರಿಕಾದಿಂದಲೇ ಶುಭ ಹಾರೈಸಿದ್ದಾರೆ. ಸಮಸ್ತ ಹಿಂದೂಗಳಿಗೆ ಒಳಿತನ್ನು ಬಯಸಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ದಕ್ಷಿಣ ಆಫ್ರಿಕಾದಲ್ಲಿರುವ ಭಾರತ ಸಮುದಾಯಕ್ಕೆ ಶುಭ ಹಾರೈಸುತ್ತೇನೆ. ಎಲ್ಲರಿಗೂ ಶಾಂತಿ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸುವಂತೆ ಮಾಡಲಿ. ಜೈ ಶ್ರೀ ರಾಮ್ ಎಂದು ಹೇಳಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ರಾಮಮಂದಿರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದ ಕ್ರಿಕೆಟಿಗ

ಇದಕ್ಕೂ ಮುನ್ನ ಕೆಲವು ದಿನಗಳ ಹಿಂದೆ ಅಯೋಧ್ಯೆ ರಾಮಮಂದಿರಕ್ಕೆ ಖಂಡಿತ ಭೇಟಿ ನೀಡುತ್ತೇನೆ. ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವುದೇ ನನ್ನ ಪ್ರಮುಖ ಗುರಿ ಎಂದು ಹೇಳಿದ್ದರು. ಕ್ರಿಕೆಟ್​ ಲೀಗ್​ ಇರುವ ಕಾರಣ ನಾನು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಕೇಶವ್ ಮಹಾರಾಜ್‌ ಮೈದಾನದಲ್ಲಿ ಬ್ಯಾಟಿಂಗ್​ ನಡೆಸಲು ಬಂದಾಗಲೆಲ್ಲ ‘ರಾಮ್ ಸಿಯಾ ರಾಮ್’ ಹಾಡನ್ನು ಹಾಕಲಾಗುತ್ತದೆ. ಈ ಹಾಡನ್ನು ಕೇಳಿದರೆ ಆತ್ಮವಿಶ್ವಾಸ ಹೆಚ್ಚುವುದಾಗಿ ಈ ಹಿಂದೆ ಹೇಳಿದ್ದರು.

ರಾಮನ ಅಪ್ಪಟ ಭಕ್ತನಾದ ಕಾರಣ ಕೇಶವ್ ಮಹಾರಾಜ್​ ಭಾರತದಲ್ಲಿ ವಿಶೇಷ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದರೂ ಭಾರತಕ್ಕೆ ಬಂದಾಗಲೆಲ್ಲಾ ಕುಟುಂಬ ಸಮೇತ ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಅವರ ಪೂರ್ವಜರು ಉತ್ತರ ಪ್ರದೇಶದವರೇ ಎಂಬುದೇ ವಿಶೇಷ. ಕೇಶವ್ ಉತ್ತರ ಪ್ರದೇಶದ ಸುಲ್ತಾನಪುರಕ್ಕೆ ಸೇರಿದವರು. ಅವರ ಪೂರ್ವಜರು ಸುಲ್ತಾನಪುರದಲ್ಲಿ ವಾಸಿಸುತ್ತಿದ್ದರು. 1874ರಲ್ಲಿ, ಅವರ ಪೂರ್ವಜರು ದಕ್ಷಿಣ ಆಫ್ರಿಕಾದ ಡರ್ಬನ್ ನಗರಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ.

ಅಯೋಧ್ಯೆಯಿಂದ ಪ್ರಧಾನಿ ಮೋದಿ ಮಾತು

ಸಿಯಾವರ್‌ ರಾಮಚಂದ್ರ ಕೀ ಜೈಕಾರದೊಂದಿಗೆ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಇಂದು ನಮ್ಮ ರಾಮ ಬಂದ. ಎಲ್ಲ ತ್ಯಾಗ ಬಲಿದಾನದ ನಂತರ ರಾಮ ಬಂದ. ಗರ್ಭಗುಡಿಯೊಳಗೆ ದೈವೀ ಸಾನ್ನಿಧ್ಯದಲ್ಲಿ ಪೂಜೆ ನೆರವೇರಿಸಿಕೊಂಡು ನಿಮ್ಮೆದುರು ನಿಂತಿದ್ದೇನೆ. ಶ್ರೀರಾಮನಿಲ್ಲದೇ ಅನೇಕ ವರ್ಷಗಳಿಂದ ಎದುರಿಸುತ್ತಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಲಿದೆ. ರಾಮ ಬಂದಿದ್ದಾನೆ ಎಂದು ಹೇಳಿದರು.

ಪ್ರಭು ಶ್ರೀರಾಮ ಚಂದ್ರ ಬಳಿ ಕ್ಷಮೆ ಕೂಡ ಕೇಳ್ತೇನೆ. ಮಂದಿರ ನಿರ್ಮಾಣಕ್ಕೆ ಬಹಳ ವರ್ಷ ಬೇಕಾಯಿತು. ನಮ್ಮ ಕೆಲಸ ಕಾರ್ಯಗಳಲ್ಲಿ, ನಡವಳಿಕೆಗಳಲ್ಲಿ ಏನಾದರೂ ಲೋಪದೋಷಗಳಿದ್ದರೆ ಅದನ್ನು ಕ್ಷಮಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ನನಗೆ ಇಂದು ಬಹಳ ಖಚಿತವಾದ ವಿಶ್ವಾಸವಿದೆ. ಪ್ರಭು ಶ್ರೀರಾಮಚಂದ್ರ ನಮ್ಮನ್ನು ಕ್ಷಮಿಸುತ್ತಾನೆ ಎಂಬ ನಂಬಿಕೆ ಇಂದು ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತದ ಸಂವಿದಾನದಲ್ಲಿ ಶ್ರೀರಾಮ ವಿರಾಜಮಾನನಾಗಿದ್ದಾನೆ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಕಾನೂನು ಹೋರಾಟ ನಡೆಸಿ ಗೆಲುವು ಸಿಕ್ಕಿದೆ. ಪ್ರಭು ರಾಮಚಂದ್ರನ ಮಂದಿರವನ್ನೂ ಕಾನೂನು ಬದ್ಧವಾಗಿಯೇ ನಿರ್ಮಾಣ ಮಾಡಲಾಗಿದೆ. ಇಡೀ ದೇಶ ಇಂದು ದೀಪಾವಳಿ ಆಚರಿಸಲಾಗುತ್ತಿದೆ. ಇಂದು ಸಂಜೆ ಮನೆ ಮನೆಗಳಲ್ಲಿ ದೀಪ ಹೊತ್ತಿಸಿ ರಾಮನ ಆಗಮನವನ್ನು ತೋರಿಸುವ ಕೆಲಸ ಮಾಡಲಾಗುತ್ತದೆ ಎಂದಿದ್ದಾರೆ.

Whats_app_banner