ಸೆಂಚುರಿಯನ್ ಟೆಸ್ಟ್: ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಿದ ಸೌತ್ ಆಫ್ರಿಕಾ
South Africa vs Pakistan: ಪಾಕಿಸ್ತಾನ ತಂಡದ ವಿರುದ್ಧದ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್ಗಳ ರೋಚಕ ಗೆಲುವು ಸಾಧಿಸಿದ ಸೌತ್ ಆಫ್ರಿಕಾ ತಂಡ, ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಿದೆ.
ಸೆಂಚುರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ರೋಚಕ ಗೆಲುವು ದಾಖಲಿಸಿದೆ. ಸಾಧಾರಣ 148 ರನ್ಗಳ ಗುರಿ ಬೆನ್ನಟ್ಟುವ ವೇಳೆ 6 ವಿಕೆಟ್ ಉರುಳಿಸಿದ ಮೊಹಮ್ಮದ್ ಅಬ್ಬಾಸ್ ಅಬ್ಬರದ ನಡುವೆಯೂ ಸೌತ್ ಆಫ್ರಿಕಾ 2 ವಿಕೆಟ್ಗಳ ಭರ್ಜರಿ ಗೆಲುವಿನೊಂದಿಗೆ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅಧಿಕೃತವಾಗಿ ಲಗ್ಗೆ ಇಟ್ಟಿತು. ಇದೇ ಮೊದಲ ಬಾರಿಗೆ ಡಬ್ಲ್ಯುಟಿಸಿ ಫೈನಲ್ಗೆ ಅರ್ಹತೆ ಪಡೆದ ದಕ್ಷಿಣ ಆಫ್ರಿಕಾ, ಈ ಬಾರಿ ಮೊದಲ ತಂಡವಾಗಿ ಅಂತಿಮ ಸುತ್ತಿಗೆ ಪ್ರವೇಶಿಸಿದೆ. ಇನ್ನೊಂದು ಸ್ಥಾನಕ್ಕೆ ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ಪೈಪೋಟಿ ಏರ್ಪಡಲಿದೆ.
ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ನಿರೀಕ್ಷಿತ ಮಟ್ಟದಲ್ಲಿ ಸ್ಕೋರ್ ಕಲೆ ಹಾಕಲಿಲ್ಲ. ಡೇನ್ ಪೀಟರ್ಸನ್ (5 ವಿಕೆಟ್) ಮತ್ತು ಕಾರ್ಬಿನ್ ಬಾಷ್ (4 ವಿಕೆಟ್) ದಾಳಿಗೆ ನಲುಗಿದ ಪಾಕ್ ಕಡಿಮೆ ಮೊತ್ತ ಪೇರಿಸಿತ್ತು. ಕಮ್ರಾನ್ ಗುಲಾಮ್ ಸಿಡಿಸಿದ 54 ರನ್ಗಳ ನೆರವಿನಿಂದ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಬೀಸಿದ ಆಫ್ರಿಕಾ, ಏಡನ್ ಮಾರ್ಕ್ರಮ್ (89 ರನ್) ಮತ್ತು ಬೌಲಿಂಗ್ನಲ್ಲೂ ಮಿಂಚಿದ್ದ ಕಾರ್ಬಿನ್ ಬಾಷ್ (ಅಜೇಯ 81) ಬ್ಯಾಟಿಂಗ್ನಲ್ಲೂ ಅಬ್ಬರಿಸಿದರು.
ಬಾಷ್ ಕೊನೆಯ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಸೌತ್ ಆಫ್ರಿಕಾಗೆ 90 ರನ್ಗಳ ಮುನ್ನಡೆಗೆ ತಂದುಕೊಡಲು ನೆರವಾದರು. ಈ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕ್ ಮತ್ತೆ ಬೃಹತ್ ಮೊತ್ತ ಪೇರಿಸಲು ವಿಫಲವಾಯಿತು. ಈ ಬಾರಿ ಮಾರ್ಕೋ ಜಾನ್ಸನ್ 6 ವಿಕೆಟ್ ಉರುಳಿಸಿ ಪಾಕ್ ತಂಡಕ್ಕೆ ಕಾಟ ಕೊಟ್ಟರು. ಬಾಬರ್ ಅಜಮ್ (50) ಮತ್ತು ಸೌದ್ ಶಕೀಲ್ (84) ಅವರ ಆಟದ ನೆರವಿನಿಂದ 237 ರನ್ ಗಳಿಸಿದ ಪಾಕ್, ಹರಿಣಗಳಿಗೆ ಕೊಟ್ಟ ಟಾರ್ಗೆಟ್ 148 ರನ್. ಆದರೆ ನಾಲ್ಕನೇ ದಿನವಾದ ಇಂದು (ಡಿಸೆಂಬರ್ 29) ಸೌತ್ ಆಫ್ರಿಕಾ ಈ ಸ್ಕೋರ್ ಬೆನ್ನಟ್ಟಲು ಹರಸಾಹಸಪಟ್ಟಿತು. ಪಾಕ್ ಬೌಲರ್ ಮೊಹಮ್ಮದ್ ಅಬ್ಬಾಸ್ 6 ವಿಕೆಟ್ ಉರುಳಿಸಿದರು.
ಕೊನೆಯಲ್ಲಿ ಕಗಿಸೋ ರಬಾಡ ಮಿಂಚು
ಸೌತ್ ಆಫ್ರಿಕಾ 99ಕ್ಕೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸೋಲುವುದು ಖಚಿತ ಎಂದೆಲ್ಲಾ ಕೆಲವರು ನಿರ್ಧರಿಸಿಬಿಟ್ಟಿದ್ದರು. ಆದರೆ ಕಗಿಸೋ ರಬಾಡ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದರು. ಅಜೇಯ 31 ರನ್ಗಳ (26 ಎಸೆತ, 5 ಬೌಂಡರಿ) ಭರ್ಜರಿ ಆಟದ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರಬಾಡಗೆ ಮಾರ್ಕೋ ಜಾನ್ಸನ್ (ಅಜೇಯ 16) ಅದ್ಭುತ ಸಾಥ್ ಕೊಟ್ಟರು. ಅತ್ತ ಕೊನೆಯ ಎರಡು ಪಡೆಯಲು ಪರದಾಡಿದ ಪಾಕ್ ಗೆಲುವಿನ ಕನಸು ಭಗ್ನಗೊಂಡಿತು. ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಿತು.
ಸಂಕ್ಷಿಪ್ತ ಸ್ಕೋರ್
ಮೊದಲ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ - 211/10
ಮೊದಲ ಇನ್ನಿಂಗ್ಸ್ನಲ್ಲಿ ಸೌತ್ ಆಫ್ರಿಕಾ -301/10
ಎರಡನೇ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ - 237/10
ಎರಡನೇ ಇನ್ನಿಂಗ್ಸ್ನಲ್ಲಿ ಸೌತ್ ಆಫ್ರಿಕಾ - 150/8
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope