The Hundred: ಸ್ಮೃತಿ ಮಂಧಾನ ತಂಡ ಸದರ್ನ್ ಬ್ರೇವ್ ಚಾಂಪಿಯನ್; ರೋಡ್ರಿಗಸ್ ಟೀಮ್ ರನ್ನರ್ಅಪ್
Southern Brave-Northern Supercharger: ಮಹಿಳಾ ಹಂಡ್ರೆಡ್ ಲೀಗ್ ಫೈನಲ್ ಪಂದ್ಯದಲ್ಲಿ ಸದರ್ನ್ ಬ್ರೇವ್ ಮಹಿಳಾ ತಂಡವು, ನಾರ್ದರ್ನ್ ಸೂಪರ್ ಚಾರ್ಜರ್ ತಂಡವನ್ನು ಸೋಲಿಸಿ, ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಪ್ರಸಕ್ತ ಸಾಲಿನ ಆವೃತ್ತಿಯ ಮಹಿಳಾ ಹಂಡ್ರೆಡ್ ಲೀಗ್ನಲ್ಲಿ (The Hundred) ಕಳೆದ ಎರಡು ಸೀಸನ್ಗಳಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಸದರ್ನ್ ಬ್ರೇವ್, 3ನೇ ಆವೃತ್ತಿಯಲ್ಲಿ ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದೆ. 2021, 2022ರಲ್ಲೂ ಸದರ್ನ್ ಬ್ರೇವ್ಸ್ ಫೈನಲ್ಗೇರಿತ್ತು. ಇಂಗ್ಲೆಂಡ್ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನಾರ್ದರ್ನ್ ಸೂಪರ್ ಚಾರ್ಜರ್ ತಂಡವನ್ನು (Southern Brave Women vs Northern Superchargers Women) 34 ರನ್ಗಳಿಂದ ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿದೆ.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸದರ್ನ್ ಬ್ರೇವ್, 100 ಎಸೆತಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು. ಡೇನಿಯನ್ ವ್ಯಾಟ್ ಅರ್ಧಶತಕ ಸಿಡಿಸಿದರು. 38 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 59 ರನ್ ಗಳಿಸಿತು. ಫ್ರೇಯಾ ಕೆಂಪ್ 31 ರನ್, ಅಡಮ್ಸ್ 27 ರನ್ ಗಳಿಸಿ ವ್ಯಾಟ್ಗೆ ಸಾಥ್ ನೀಡಿದರು. ನಾರ್ದರ್ನ್ ಸೂಪರ್ ಚಾರ್ಜರ್ ತಂಡದ ಪರ ಕೇಟ್ ಕ್ರಾಸ್ 3 ವಿಕೆಟ್ ಪಡೆದು ಮಿಂಚಿದರು. ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ.
ಈ ಸ್ಮರ್ಧಾತ್ಮಕ ಗುರಿ ಹಿಂಬಾಲಿಸಿದ ನಾರ್ದರ್ನ್ ಸೂಪರ್ ಚಾರ್ಜರ್ಸ್, ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. 94 ಎಸೆತಗಳಲ್ಲಿ 105 ರನ್ಗಳಿಗೆ ಸರ್ವಪತನ ಕಂಡಿತು. ಇದರಿಂದ 34 ರನ್ಗಳಿಂದ ಶರಣಾಯಿತು. ಜೆಮಿಮಾ ರೋಡ್ರಿಗಸ್ 24 ರನ್ ಗಳಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರ್. ಸದರ್ನ್ ಬ್ರೇವ್ ಲಾರೆನ್ ಬೆಲ್, ಕ್ಯಾಲಿಯಾ ಮೂರ್ ತಲಾ 3 ವಿಕೆಟ್, ಕ್ಲೋಯ್ ಟ್ರಯಾನ್ 2 ವಿಕೆಟ್, ನಾಯಕಿ ಅನ್ಯಾ ಶ್ರಬ್ಸೋಲ್ 1 ವಿಕೆಟ್ ಪಡೆದು ಮಿಂಚಿದರು.
ಮಂಧಾನ ತಂಡಕ್ಕೆ ಗೆಲುವು, ರೋಡ್ರಿಗಸ್ ತಂಡಕ್ಕೆ ಸೋಲು
ಚಾಂಪಿಯನ್ ಪಟ್ಟ ಅಲಂಕರಿಸಿದ ಸದರ್ನ್ ಬ್ರೇವ್ ತಂಡದಲ್ಲಿ ಭಾರತದ ತಂಡದ ಉಪನಾಯಕಿ ಸ್ಮೃತಿ ಮಂಧಾನ ಕೂಡ ಇದ್ದರು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಂಧಾನ, ಫೈನಲ್ನಲ್ಲಿ 4 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಈ ಆವೃತ್ತಿಯಲ್ಲಿ 238 ರನ್ ಗಳಿಸಿದ್ದಾರೆ. ಮತ್ತೊಂದೆಡೆ ರನ್ನರ್ಅಪ್ ತಂಡದಲ್ಲಿ ಭಾರತದ ಸ್ಟಾರ್ ಬ್ಯಾಟರ್ ಜೆಮಿಮಾ ರಾಡ್ರಿಗಸ್ ಇದ್ದರು. ಅವರು ಫೈನಲ್ನಲ್ಲಿ 14 ಎಸೆತಗಳಲ್ಲಿ 24 ರನ್ ಗಳಿಸಿ ಮಿಂಚಿದರು. ಆದರೆ ತಂಡವನ್ನು ಚಾಂಪಿಯನ್ ಮಾಡಲು ವಿಫಲರಾದರು.