ಸಿಎಸ್ಕೆ ತಂಡದಲ್ಲಿ ಬದಲಾವಣೆ ಖಚಿತ; ಚೆನ್ನೈ ಸೂಪರ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI, ಮುಖಾಮುಖಿ ದಾಖಲೆ ವಿವರ
SRH vs CSK Playing XI : ಐಪಿಎಲ್ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದ್ದು, ಉಭಯ ತಂಡಗಳ ಪ್ಲೇಯಿಂಗ್ XI ಹೇಗಿದೆ ಎಂಬುದನ್ನು ನೋಡೋಣ.
ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) 18ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು (Sunrisers Hyderabad) ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲಿಗೆ ಸಿದ್ಧವಾಗಿದೆ. ತಮ್ಮ ಕೊನೆಯ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಸಿಎಸ್ಕೆ ಮತ್ತು ಎಸ್ಆರ್ಹೆಚ್ ಉಭಯ ತಂಡಗಳು ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿವೆ.
ತನ್ನ ಮೊದಲ ಎರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಿಸಿದ್ದ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಹೈದರಾಬಾದ್, ಮೂರನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 162ಕ್ಕೆ ಕುಸಿದಿತ್ತು. ಹೈದರಾಬಾದ್ ಈ ಆವೃತ್ತಿಯಲ್ಲಿ ತಮ್ಮ ಏಕೈಕ ತವರಿನ ಪಂದ್ಯದಲ್ಲಿ ದಾಖಲೆಯ 277 ಮೊತ್ತ ದಾಖಲಿಸುವ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ ದೊಡ್ಡ ಗೆಲುವು ದಾಖಲಿಸಿದೆ. ಇದೀಗ ತವರಿನಲ್ಲಿ 2ನೇ ಪಂದ್ಯಕ್ಕೆ ಸಜ್ಜಾಗಿದ್ದು, ಅಂತಹದ್ದೇ ಹೈಸ್ಕೋರಿಂದ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.
ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ತನ್ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಆವೃತ್ತಿಯಲ್ಲಿ ಚೊಚ್ಚಲ ಸೋಲನ್ನು ಅನುಭವಿಸಿತು. ಎಂಎಸ್ ಧೋನಿ 16 ಎಸೆತಗಳಲ್ಲಿ 37* ರನ್ ಗಳಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಆದರೆ 192 ರನ್ ಬೆನ್ನಟ್ಟುವ ಸಂದರ್ಭದಲ್ಲಿ ಚೆನ್ನೈ 171 ರನ್‌ಗಳಿಗೆ ಸೀಮಿತವಾಯಿತು. ಇದೀಗ ಗೆಲುವಿನ ಹಳಿಗೆ ಮರಳಲು ಸಿದ್ಧವಾಗಿದ್ದು, ಎಸ್ಆರ್ಹೆಚ್ನ ಘಟಾನುಘಟಿ ಆಟಗಾರರ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕಲು ಸಾಕಷ್ಟು ರಣತಂತ್ರ ರೂಪಿಸುತ್ತಿದೆ.
ಪಂದ್ಯದ ವಿವರ
ಪಂದ್ಯ: ಐಪಿಎಲ್ 2024, 18ನೇ ಟಿ20 ಪಂದ್ಯ
ಸ್ಥಳ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್
ದಿನಾಂಕ ಮತ್ತು ಸಮಯ: ಶುಕ್ರವಾರ, ಏಪ್ರಿಲ್ 5, ರಾತ್ರಿ 7:30ಕ್ಕೆ, ಟಾಸ್ ಸಮಯ - ರಾತ್ರಿ 7.ಕ್ಕೆ
ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ ವೆಬ್‌ಸೈಟ್ ಮತ್ತು ಅಪ್ಲಿಕೇಶನ್.
SRH vs CSK ಹೆಡ್-ಟು-ಹೆಡ್ ರೆಕಾರ್ಡ್
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಒಟ್ಟು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಸಿಎಸ್ಕೆ 14ರಲ್ಲಿ ಜಯಿಸಿದೆ. ಹೈದರಾಬಾದ್ 2ರಲ್ಲಿ ಮಾತ್ರ ಗೆದ್ದಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಆಗುವ ನಿರೀಕ್ಷೆ ಇದೆ. ಮುಸ್ತಫಿಜುರ್ ಅವರು ಟಿ20 ವಿಶ್ವಕಪ್ಗೆ ವೀಸಾ ಪರಿಶೀಲನೆ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಹಾಗಾಗಿ ಅವರು ಈ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಮಹೀಶಾ ತೀಕ್ಷಾಣ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ XI
ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್ .
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ XI
ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮತೀಶ ಪತಿರಾಣ, ಮುಸ್ತಾಫಿಜುರ್ ರೆಹಮಾನ್/ಮಹೀಶಾ ತೀಕ್ಷಾಣ.