ಆಸ್ಟ್ರೇಲಿಯಾ 107ಕ್ಕೆ ಆಲೌಟ್, 174 ರನ್ನಿಂದ ಗೆದ್ದ ಶ್ರೀಲಂಕಾ; ಚಾಂಪಿಯನ್ಸ್ ಟ್ರೋಫಿಗೂ ಮುನ್ನ​ ಹೀನಾಯವಾಗಿ ಸರಣಿ ಸೋತ ಆಸೀಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ 107ಕ್ಕೆ ಆಲೌಟ್, 174 ರನ್ನಿಂದ ಗೆದ್ದ ಶ್ರೀಲಂಕಾ; ಚಾಂಪಿಯನ್ಸ್ ಟ್ರೋಫಿಗೂ ಮುನ್ನ​ ಹೀನಾಯವಾಗಿ ಸರಣಿ ಸೋತ ಆಸೀಸ್

ಆಸ್ಟ್ರೇಲಿಯಾ 107ಕ್ಕೆ ಆಲೌಟ್, 174 ರನ್ನಿಂದ ಗೆದ್ದ ಶ್ರೀಲಂಕಾ; ಚಾಂಪಿಯನ್ಸ್ ಟ್ರೋಫಿಗೂ ಮುನ್ನ​ ಹೀನಾಯವಾಗಿ ಸರಣಿ ಸೋತ ಆಸೀಸ್

Sri Lanka vs Australia 2nd ODI: ಕೊಲಂಬೊದ ಆರ್​ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಅಂತಿಮ ಹಾಗೂ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 174 ರನ್​ಗಳ ಭರ್ಜರಿ ಗೆಲುವು ಸಾಧಿಸಿ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.

107ಕ್ಕೆ ಆಲೌಟ್, 174 ರನ್ನಿಂದ ಶರಣು; ಶ್ರೀಲಂಕಾ ಅಬ್ಬರಕ್ಕೆ ನೆಲಕಚ್ಚಿದ ಆಸ್ಟ್ರೇಲಿಯಾ, ಹೀನಾಯವಾಗಿ ಸರಣಿ ಸೋತ ಸ್ಮಿತ್ ಪಡೆ
107ಕ್ಕೆ ಆಲೌಟ್, 174 ರನ್ನಿಂದ ಶರಣು; ಶ್ರೀಲಂಕಾ ಅಬ್ಬರಕ್ಕೆ ನೆಲಕಚ್ಚಿದ ಆಸ್ಟ್ರೇಲಿಯಾ, ಹೀನಾಯವಾಗಿ ಸರಣಿ ಸೋತ ಸ್ಮಿತ್ ಪಡೆ (AFP)

ಕೊಲಂಬೊ (ಶ್ರೀಲಂಕಾ) ಫೆ 14: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್​ ತಂಡ ಭಾರೀ ಆಘಾತಕ್ಕೆ ಒಳಗಾಗಿದೆ. ಸಿಂಹಳೀಯರ ನಾಡಿನಲ್ಲಿ 14 ವರ್ಷಗಳ ನಂತರ ಟೆಸ್ಟ್ ಸರಣಿಯನ್ನು ಗೆದ್ದು ಬೀಗುತ್ತಿದ್ದ ಸ್ಮಿತ್ ಪಡೆಗೆ ಏಕದಿನ ಸರಣಿಯಲ್ಲಿ ಲಂಕನ್ನರು ಶಾಕ್ ನೀಡಿದ್ದಾರೆ. 2 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 174 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧಿಸಿದೆ. ಕುಸಾಲ್ ಮೆಂಡೀಸ್ ಶತಕದ (101) ಬಲ ಮತ್ತು ಅಸಿತಾ ಫರ್ನಾಂಡೋ, ವನಿಂದು ಹಸರಂಗ, ದುನಿತ್ ವೆಲ್ಲಾಲಗೆ ಬೌಲಿಂಗ್​ ಆರ್ಭಟಕ್ಕೆ ಬೆದರಿದ ಪ್ರವಾಸಿ ತಂಡ ಹೀನಾಯ ಸೋಲಿನೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ಮುಗಿಸಿದೆ.

ಕೊಲಂಬೊದ ಆರ್​ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡವು ಕುಸಾಲ್ ಮೆಂಡೀಸ್ ಶತಕ ವೈಭವ, ಪಾಥುಮ್ ನಿಸ್ಸಾಂಕ (51), ಚರಿತ್ ಅಸಲಂಕಾ (78*) ಆಕರ್ಷಕ ಅರ್ಧಶತಕಗಳ ಸಹಾಯದಿಂದ 50 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 24.2 ಓವರ್​​ಗಳಲ್ಲಿ 107 ರನ್ ಗಳಿಸಿ ಆಲೌಟ್ ಆಯಿತು. ದುನಿಲ್ ವೆಲ್ಲಾಲಗೆ 4 ವಿಕೆಟ್ ಪಡೆದರೆ, ಅಸಿತಾ ಫರ್ನಾಂಡೀಸ್ ಮತ್ತು ವನಿಂದು ಹಸರಂಗ ತಲಾ 3 ವಿಕೆಟ್ ಕಿತ್ತು ಮಿಂಚಿದರು. ಈ ಸರಣಿ ಆಸ್ಟ್ರೇಲಿಯಾಗೆ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆಯ ಭಾಗವಾಗಿತ್ತು. ಆದರೆ ಕಳಪೆ ಪ್ರದರ್ಶನದ ಹಿನ್ನೆಲೆ ಚಿಂತನೆಗೆ ಒಳಗಾಗಿದೆ.

ದಾಖಲೆ ಬರೆದ ಶ್ರೀಲಂಕಾ

174 ರನ್​ಗಳ ಅಂತರದಿಂದ ಮಣಿಸಿದ ಶ್ರೀಲಂಕಾ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಅತಿ ದೊಡ್ಡ ಗೆಲುವು ಇದಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ 49 ರನ್​ಗಳಿಂದ ಮಣಿಸಿದ್ದ ಶ್ರೀಲಂಕಾ ಟೆಸ್ಟ್ ಸರಣಿ ಸೋಲಿನ ಸೇಡು ತೀರಿಸಿಕೊಂಡಿದೆ. ಸಿಂಹಳೀಯರು ಉತ್ತಮ ಲಯದಲ್ಲಿದ್ದರೂ ದುರಾದೃಷ್ಟವಶಾತ್ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿಲ್ಲ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ-8 ರೊಳಗೆ ಸ್ಥಾನ ಪಡೆಯದ ಕಾರಣ ಶ್ರೀಲಂಕಾ ಮಹತ್ವದ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಯ ಭಾಗವಾದ ಆಸ್ಟ್ರೇಲಿಯಾ ಸರಣಿ ಸೋಲಿನೊಂದಿಗೆ ದೊಡ್ಡ ಹೊಡೆತ ಅನುಭವಿಸಿದೆ. ಅದೂ ಅಲ್ಲದೆ, ತಂಡದಲ್ಲಿರುವುದೆಲ್ಲಾ ಅನಾನುಭವಿಗಳು.

ಆಸ್ಟ್ರೇಲಿಯಾ ತಂಡದಲ್ಲಿದ್ದಾರೆ ಅನಾನುಭವಿಗಳು

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಸರಣಿ ಸೋಲುವುದಕ್ಕೂ ಮುನ್ನ ಆಸ್ಟ್ರೇಲಿಯಾ ದೊಡ್ಡ ಹೊಡೆತ ಅನುಭವಿಸಿತ್ತು. ಪ್ರಮುಖ ಆಟಗಾರರೇ ಗಾಯ ಮತ್ತು ವೈಯಕ್ತಿಕ ಕಾರಣಗಳಿಂದ ಐಸಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಮಾರ್ಷ್, ಜೋಶ್ ಹೇಜಲ್​ವುಡ್ (ಗಾಯ), ಮಾರ್ಕಸ್ ಸ್ಟೋಯ್ನಿಸ್ (ನಿವೃತ್ತಿ), ಮಿಚೆಲ್ ಸ್ಟಾರ್ಕ್ (ವೈಯಕ್ತಿಕ ಕಾರಣ) ಅವರು ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ತಂಡದಲ್ಲಿ ಅನುಭವಿಗಳ ಜೊತೆಗೆ ಅನನುಭವಿಗಳ ದಂಡೂ ಹೆಚ್ಚಿದೆ. ಮತ್ತೊಂದೆಡೆ ಅನುಭವಿಗಳು ಲಯದಲ್ಲಿ ಇಲ್ಲದೇ ಇರುವುದು ಕೂಡ ಚಿಂತೆಗೊಳಗಾಗುವಂತೆ ಮಾಡಿದೆ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner