ಟಿ20 ವಿಶ್ವಕಪ್: ಶ್ರೀಲಂಕಾ vs ಬಾಂಗ್ಲಾದೇಶ ಪಂದ್ಯದ ಪಿಚ್ ಹಾಗೂ ಹವಾಮಾನ ವರದಿ, ಸಂಭಾವ್ಯ ತಂಡ
Sri Lanka vs Bangladesh: ಟಿ20 ವಿಶ್ವಕಪ್ 2024ರಲ್ಲಿ ನಡೆಯುತ್ತಿರುವ ಶ್ರೀಲಂಕಾ vs ಬಾಂಗ್ಲಾದೇಶ ಪಂದ್ಯದ ಪಿಚ್ ಹಾಗೂ ಹವಾಮಾನ ವರದಿ ಹಾಗೂ ಸಂಭಾವ್ಯ ತಂಡದ ವಿವರ ಇಲ್ಲಿದೆ.
ಟಿ20 ವಿಶ್ವಕಪ್ 2024ರ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶದ ತಂಡವು ಶ್ರೀಲಂಕಾ (Sri Lanka vs Bangladesh) ವಿರುದ್ಧ ತನ್ನ ಅಭಿಯಾನ ಆರಂಭಿಸುತ್ತಿದೆ. ಜೂನ್ 8ರ ಶನಿವಾರ ನಡೆಯುತ್ತಿರುವ ಪಂದ್ಯಾವಳಿಯ 15ನೇ ಪಂದ್ಯದಲ್ಲಿ ಉಭಯ ತಂಡಗಳು ಕಣಕ್ಕಿಳಿಯುತ್ತಿವೆ. ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 6 ಗಂಟೆಗೆ ಪಂದ್ಯ ಆರಂಭವಾಗಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಶ್ರೀಲಂಕಾ, ಇದೀಗ ಏಷ್ಯಾದ ಪ್ರಬಲ ಎದುರಾಳಿ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.
ಪಂದ್ಯಕ್ಕಾಗಿ ಶ್ರೀಲಂಕಾ ತಂಡದಲ್ಲಿ ಹೆಚ್ಚು ಬದಲಾವಣೆಯ ಸಾಧ್ಯತೆ ಇಲ್ಲ. ಆದರೆ, ಕಾಮಿಂದು ಮೆಂಡಿಸ್ ಬದಲಿಗೆ ಧನಂಜಯ ಡಿ ಸಿಲ್ವಾ ತಂಡ ಸೇರಿಕೊಂಡರೂ ಅಚ್ಚರಿಯಿಲ್ಲ. ಅತ್ತ ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೊನೆಯ ಬಾರಿಗೆ ಆಡಿದ್ದ ಬಾಂಗ್ಲಾದೇಶ ಆಡುವ ಬಳಗವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಲಿಟ್ಟನ್ ದಾಸ್ ಅವರ ಫಾರ್ಮ್ ತಂಡಕ್ಕೆ ಚಿಂತೆಯಾಗಿದೆ. ಆದರೂ ಇವರಿಗೆ ಮತ್ತಷ್ಟು ಅವಕಾಶ ನೀಡುವ ಸಾಧ್ಯತೆ ಇದೆ. ಇದೇ ವೇಳೆ ಶೊರಿಫುಲ್ ಇಸ್ಲಾಂ ಅವರ ಫಿಟ್‌ನೆಸ್ ತಂಡಕ್ಕೆ ದೊಡ್ಡ ಕಾಳಜಿಯಾಗಿದೆ.
ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಪಿಚ್ ವರದಿ
ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿನ ಪಿಚ್ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗುತ್ತದೆ. ತೇವಾಂಶವು ಒಣಗಿದಂತೆ, ಇದು ನಿಖರ ವೇಗ ಮತ್ತು ಬೌನ್ಸ್‌ನೊಂದಿಗೆ ಬ್ಯಾಟರ್‌ಗಳಿಗೆ ನೆರವಾಗುತ್ತದೆ. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಸ್ವಲ್ಪ ಹಿಡಿತ ಸಾಧಿಸಬಹುದು. ಮೈದಾನದಲ್ಲಿ ಈವರೆಗೆ ನಡೆದ 3 ಪಂದ್ಯಗಳಲ್ಲಿ ಭಿನ್ನ ರೀತಿಯ ಫಲಿತಾಂಶಗಳು ಬಂದಿವೆ. ಹೆಚ್ಚು ರನ್ ಮಾತ್ರವಲ್ಲದೆ ಕಡಿಮೆ ರನ್ ದಾಖಲಾದ ಪಂದ್ಯಗಳು ಕೂಡಾ ಇಲ್ಲೇ ನಡೆದಿವೆ.
ಡಲ್ಲಾಸ್ ಹವಾಮಾನ ವರದಿ
ಪಂದ್ಯದ ಸಮಯದಲಿ ಡಲ್ಲಾಸ್‌ನಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ ಎಂಬುದಾಗಿ ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. ತಾಪಮಾನವು 31 ಡಿಗ್ರಿ ಸೆಲ್ಸಿಯಸ್ ಆಸುಪಾಸು ಇರಲಿದೆ.
ನೇರಪ್ರಸಾರ ವೀಕ್ಷಿಸುವುದು ಹೇಗೆ?
ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ವಿಶ್ವಕಪ್ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯವನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಮೊಬೈಲ್ ಮೂಲಕ ಪಂದ್ಯವನ್ನು ಉಚಿತವಾಗಿ ನೋಡಬಹುದಾಗಿದೆ.
ಶ್ರೀಲಂಕಾ ಸಂಭಾವ್ಯ ತಂಡ
ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ವನಿಂದು ಹಸರಂಗ (ನಾಯಕ), ಮಹೀಶ್ ತೀಕ್ಷಣ, ಮತೀಶ ಪತಿರಣ, ನುವಾನ್ ತುಷಾರ
ಬಾಂಗ್ಲಾದೇಶ ಸಂಭಾವ್ಯ ಆಡುವ ಬಳಗ
ತಂಜಿದ್ ಹಸನ್, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ನಜ್ಮುಲ್ ಹೊಸೈನ್, ಶಾಕಿಬ್ ಅಲ್ ಹಸನ್, ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ರಿಶಾದ್ ಹೊಸೈನ್, ತಂಝಿಮ್ ಹಸನ್ ಶಕೀಬ್, ಹಸನ್ ಮಹ್ಮದ್, ಮುಸ್ತಫಿಜುರ್ ರಹಮಾನ್.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಟಿ20 ವಿಶ್ವಕಪ್ 2024: ನ್ಯೂಜಿಲ್ಯಾಂಡ್ vs ಅಫ್ಘಾನಿಸ್ತಾನ ಪಂದ್ಯದ ಪಿಚ್, ಹವಾಮಾನ ಹಾಗೂ ಸಂಭಾವ್ಯ ತಂಡ