ಶ್ರೀಲಂಕಾ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ ಭಾರತ; ಮೊದಲ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ-sri lanka vs india 1st odi tied in colombo ind vs sl shivam dube arshdeep singh charith asalanka jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಶ್ರೀಲಂಕಾ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ ಭಾರತ; ಮೊದಲ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ

ಶ್ರೀಲಂಕಾ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ ಭಾರತ; ಮೊದಲ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ

ಶ್ರೀಲಂಕಾ ಮತ್ತು ಭಾರತ ತಂಡಗಳ ನಡುವಿನ ಸರಣಿಯ ಮೊದಲ ಏಕದಿನ ಪಂದ್ಯವು ಸಮಬಲದಲ್ಲಿ ಅಂತ್ಯವಾಗಿದೆ. ಗೆಲ್ಲುವ ಅವಕಾಶ ಹೊಂದಿದ್ದ ಭಾರತ, ಕೊನೆಯ ಹಂತದಲ್ಲಿ ಸತತ ಎರಡು ವಿಕೆಟ್‌ ಕಳೆದುಕೊಂಡು ಆಲೌಟ್‌ ಆಗಿದೆ.

ಶ್ರೀಲಂಕಾ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ ಭಾರತ
ಶ್ರೀಲಂಕಾ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ ಭಾರತ (AP)

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವು ರೋಚಕ ಟೈನಲ್ಲಿ ಅಂತ್ಯವಾಗಿದೆ. ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಕೊನೆಯ ಹಂತದಲ್ಲಿ ರೋಚಕ ತಿರುವು ಪಡೆಯಿತು. ಒಂದು ಹಂತದಲ್ಲಿ ಗೆಲುವಿನ ಸಮೀಪ ಬಂದಿದ್ದ ಭಾರತ, ಸತತ ಎರಡು ವಿಕೆಟ್‌ ಕಳೆದುಕೊಂಡು, ನಿರಾಶೆ ಅನುಭವಿಸಿತು. ಕೊನೆಯ ಟಿ20 ಪಂದ್ಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್‌ ಯಾದವ್‌ ಕೊನೆಯ ಓವರ್‌ನಲ್ಲಿ ಎರಡು ವಿಕೆಟ್‌ ಪಡೆದು ಪಂದ್ಯ ಟೈ ಮಾಡಿದ್ದರು. ಇದೀಗ ಏಕದಿನ ಪಂದ್ಯದಲ್ಲಿ ಲಂಕಾ ನಾಯಕ ಚರಿತ್‌ ಅಸಲಂಕಾ ಸತತ 2 ವಿಕೆಟ್‌ ಪಡೆದು ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಶ್ರೀಲಂಕಾ ವಿರುದ್ಧ ಏಕದಿನ ಸ್ವರೂಪದಲ್ಲಿ 100ನೇ ಗೆಲುವು ದಾಖಲಿಸಲು ಭಾರತ ಮತ್ತೆ ಕಾಯಬೇಕಾಗಿ ಬಂದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಲಂಕಾ, ದುನಿತ್ ವೆಲ್ಲಾಲಗೆ ಮತ್ತು ಪಥುಮ್ ನಿಸ್ಸಾಂಕಾ ಅವರ ಆಟದ ನೆರವಿಂದ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಭಾರತ, ಕೊನೆಯ ಕ್ಷಣದವರೆಗೂ ಹೋರಾಡಿ 47.5 ಓವರ್‌ಗಳಲ್ಲಿ 230 ರನ್‌ ಗಳಿಸಿ ಆಲೌಟ್‌ ಆಯ್ತು. ಸೂಪರ್‌ ಓವರ್‌ ಇಲ್ಲದ ಕಾರಣ ಪಂದ್ಯ ಟೈ ಆಯಿತು.

ಟಾಸ್ ಗೆದ್ದ ಲಂಕಾ ನಾಯಕ ಅಸಲಂಕಾ, ಕೊಲಂಬೊದ ಪಿಚ್ ಸ್ಥಿತಿಯನ್ನು ಪರಿಗಣಿಸಿ ಮೊದಲಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ಆರಂಭದಲ್ಲಿ ಲಂಕಾ ಲೆಕ್ಕಾಚಾರ ಕೈಹಿಡಿಯಲಿಲ್ಲ. ಅವಿಷ್ಕಾ ಫರ್ನಾಂಡೊ 7 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಮೊದಲನೆಯವರಾಗಿ ಔಟಾದರು. ಮೂರನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಮೊದಲ ವಿಕೆಟ್‌ ಕಬಳಿಸಿದರು. ಲಂಕಾ ಪರ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪಾಥುಮ್ ನಿಸ್ಸಾಂಕಾ, ಏಕದಿನದಲ್ಲಿಯೂ ಭರ್ಜರಿ ಆರಂಭ ಪಡೆದರು. 75 ಎಸೆತಗಳಲ್ಲಿ 9 ಬೌಂಡರಿ ನೆರವಿಂದ 56 ರನ್ ಕಲೆ ಹಾಕಿದರು.

ಕುಸಾಲ್ ಮೆಂಡಿಸ್ 31 ಎಸೆತಗಳಲ್ಲಿ 14 ರನ್ ಗಳಿಸಿದರು. ಆದರೆ 14ನೇ ಓವರ್‌ನಲ್ಲಿ ಶಿವಂ ದುಬೆ ಎಸೆತದಲ್ಲಿ ಔಟಾದರು. ಸದೀರಾ ಸಮರವಿಕ್ರಮ 18 ಎಸೆತಗಳಲ್ಲಿ 8 ರನ್ ಗಳಿಸಿದರೆ, ನಾಯಕ ಚರಿತ್ ಅಸಲಂಕಾ 21 ಎಸೆತಗಳಲ್ಲಿ 14 ರನ್ ಮಾತ್ರ ಪೇರಿಸಿದರು. ಜನಿತ್ ಲಿಯಾನಗೆ 26 ಎಸೆತಗಳಲ್ಲಿ 20 ರನ್ ಗಳಿಸಿದರು. ಪಂದ್ಯದ 27ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಓವರ್‌ನಲ್ಲಿ ನಿಸ್ಸಾಂಕಾ ಔಟಾದರು.

ಒಂದು ಹಂತದಲ್ಲಿ 200 ರನ್‌ಗಳ ಒಳಗೆ ಕುಸಿಯುವ ಭೀತಿಯಲ್ಲಿದ್ದ ಲಂಕಾಗೆ ಡೆತ್ ಓವರ್‌ಗಳಲ್ಲಿ ದುನಿತ್ ವೆಲ್ಲಾಲಗೆ ಆಸರೆಯಾದರು. ಅಜೇಯ ಆಟವಾಡಿದ ಅವರು, 65 ಎಸೆತಗಳಲ್ಲಿ 66 ರನ್ ಗಳಿಸಿದರು. ಅಕಿಲಾ ಧನಂಜಯ 17 ರನ್ ಕೊಡುಗೆ ನೀಡಿದರು. ಭಾರತದ ಪರ ಅರ್ಷದೀಪ್‌ ಸಿಂಗ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಕಬಳಿಸಿದರು.

ಭಾರತದ ಭರ್ಜರಿ ಆರಂಭ

ಲಂಕಾ ನೀಡಿದ ಬೃಹತ್‌ ಗುರಿ ಬೆನ್ನಟ್ಟಿದ ಭಾರತ, ಭರ್ಜರಿ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್‌ ಗಿಲ್‌ ಮೊದಲ ವಿಕೆಟ್‌ಗೆ 75 ರನ್‌ಗಳ ಸ್ಫೋಟಕ ಜೊತೆಯಾಟವಾಡಿದರು. ಈ ನಡುವೆ ರೋಹಿತ್‌ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿದರು. ನಿಧಾನಗತಿಯಲ್ಲಿ ಬ್ಯಾಟ್‌ ಬೀಸುತ್ತಿದ್ದ ಗಿಲ್‌, 13ನೇ ಓವರ್‌ನಲ್ಲಿ 16 ರನ್‌ ಗಳಿಸಿ ಮೊದಲನೆಯವರಾಗಿ ಔಟಾದರು. ಅದಾದ ಬಳಿಕ ಮೇಲಿಂದ ಮೇಲೆ ತಂಡ ವಿಕೆಟ್‌ ಕಳೆದುಕೊಂಡಿತು. ರೋಹಿತ್‌ ಶರ್ಮಾ 58 ರನ್‌ ಗಳಿಸಿ ವೆಲ್ಲಾಲಗೆ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.‌ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದಿದ್ದ ವಾಷಿಂಗ್ಟನ್ ಸುಂದರ್‌ 5 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಕೊನೆಯ ಕ್ಷಣದಲ್ಲಿ ನಾಟಕೀಯ ತಿರುವು

ವಿರಾಟ್‌ ಕೊಹ್ಲಿ 24 ರನ್‌ ಗಳಿಸಿದರೆ, ಶ್ರೇಯಸ್‌ ಅಯ್ಯರ್‌ 23 ರನ್‌ ಗಳಿಸಿ ಔಟಾದರು. ತಂಡ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜವಾಬ್ದಾರಿಯುತ ಆಟವಾಡಿದ ಕನ್ನಡಿಗ ಕೆಎಲ್‌ ರಾಹುಲ್ 31‌ ರನ್‌ ಗಳಿಸಿದರು. ದೊಡ್ಡ ಹೊಡೆತಕ್ಕೆ ಕೈಹಾಕಿದಾಗ ಕ್ಯಾಚ್‌ ನೀಡಿ ಔಟಾದರು. ಮತ್ತೊಂದೆಡೆ ಅಕ್ಷರ್‌ ಪಟೇಲ್‌ 33 ರನ್‌ ಗಳಿಸಿದರು. ಶಿವಂ ದುಬೆ ಎರಡು ಸಿಕ್ಸರ್‌ ಸಹಿತ 25 ರನ್‌ ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಆದರೆ, ಲಂಕಾ ನಾಯಕ ಚರಿತ್‌ ಅಸಲಂಕಾ ಚಾಣಾಕ್ಷ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆದರು. ಈ ವೇಳೆ ಮೈದಾನಕ್ಕೆ ಬಂದ ಅರ್ಷದೀಪ್‌ ಸಿಂಗ್‌ ಕೂಡಾ ಅದೇ ರೀತಿ ಔಟಾಗುವ ಮೂಲಕ ಪಂದ್ಯ ಟೈ ಆಯ್ತು.