ನೂತನ ಕೋಚ್-ನಾಯಕನಿಗೆ ಹೊಸ ಸವಾಲು; ಭಾರತ vs ಶ್ರೀಲಂಕಾ ಮೊದಲ ಟಿ20 ಪಂದ್ಯದ ಪಿಚ್-ಹವಾಮಾನ ವರದಿ, ನೇರಪ್ರಸಾರ ವಿವರ
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯು ಜುಲೈ 27ರಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯವು ಪಲ್ಲೆಕೆಲೆಯಲ್ಲಿ ನಡೆಯುತ್ತಿದ್ದು, ಗೌತಮ್ ಗಂಭಿರ್ ಕೋಚಿಂಗ್‌ಗೆ ಮೊದಲ ಸವಾಲಾಗಿದೆ.

ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನೂತನ ಟಿ20 ನಾಯಕ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡದ ಹೊಸ ಶಕೆ ಆರಂಭವಾಗುತ್ತಿದೆ. ಮೂರು ಪಂದ್ಯಗಳ ಟಿ20 ಸರಣಿಗಾಗಿ ದ್ವೀಪರಾಷ್ಟ್ರ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡವು, ಜುಲೈ 27ರ ಶನಿವಾರ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಈಗಾಗಲೇ ಹೊಸ ತಂಡವಾಗಿ ಜಿಂಬಾಬ್ವೆ ವಿರುದ್ಧ ಸರಣಿ ಜಯ ಸಾಧಿಸಿರುವ ಭಾರತ ತಂಡವು, ಹೊಸ ಕೋಚ್ ಅಡಿಯಲ್ಲಿ ಗೆಲುವಿನ ಅಭಿಯಾನ ಆರಂಭಿಸುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಹಳೆಯ ಅಬ್ಬರ ಕಳೆದುಕೊಂಡಿರುವ ಲಂಕಾ ಪುಟಿದೇಳುವ ಕಾತರದಲ್ಲಿದೆ.
ಚುಟುಕು ಸರಣಿ ಆರಂಭಕ್ಕೂ ಮುನ್ನವೇ ಲಂಕಾ ತಂಡ ಎರಡೆರಡು ಆಘಾತ ಅನುಭವಿಸಿದೆ. ಈಗಾಗಲೇ ದುಷ್ಮಂತ ಚಮೀರಾ ಮತ್ತು ನುವಾನ್ ತುಷಾರ ಗಾಯದ ಕಾರಣದಿಂದ ಸರಣಿಯಿಂದ ಹೊರಬಿದ್ದಿದ್ದಾರೆ. ಆದರೂ, ತಮ್ಮದೇ ತವರಿನಲ್ಲಿ ಸೂರ್ಯಕುಮಾರ್ ಬಳಗಕ್ಕೆ ಲಂಕನ್ನರು ಸವಾಲೊಡ್ಡಿದರೂ ಅಚರಿಯಿಲ್ಲ.
ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯವು ಪಲ್ಲೆಕೆಲೆ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯವು ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಲೈವ್ ಸ್ಟ್ರೀಮಿಂಗ್ ವಿವರ
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎಲ್ಲಾ ಪಂದ್ಯಗಳು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಸೋನಿಲೈವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಮೊಬೈಲ್ ಮೂಲಕ ಅಭಿಮಾನಿಗಳು ಇದರಲ್ಲಿ ಪಂದ್ಯ ವೀಕ್ಷಿಸಬಹುದು.
ಮುಖಾಮುಖಿ ದಾಖಲೆ
ಭಾರತ ಮತ್ತು ಶ್ರೀಲಂಕಾ ತಂಡಗಳು ಈವರೆಗೆ 29 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಶ್ರೀಲಂಕಾ 9 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ.
ಪಲ್ಲೆಕೆಲೆ ಪಿಚ್ ವರದಿ
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬ್ಯಾಟರ್ ಹಾಗೂ ಬೌಲರ್‌ಗಳಿಗೆ ಸಮನಾಗಿ ನೆರವಾಗಲಿದೆ. ಮೈದಾನವು ಬ್ಯಾಟರ್‌ಗಳಿಗೆ ಆಕ್ರಮಣಕಾರಿ ಆಟಕ್ಕೆ ಅವಕಾಶ ನೀಡುತ್ತದೆ. ಮತ್ತೊಂದೆಡೆ ವೇಗದ ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಪವರ್‌ಪ್ಲೇ ಸಮಯದಲ್ಲಿ ವಿಕೆಟ್ ಟೇಕಿಂಗ್ ಪ್ರದರ್ಶನ ನೀಡಬಹುದು.
ಹವಾಮಾನ ವರದಿ
ಆಕ್ಯುವೆದರ್ ಪ್ರಕಾರ, ಜುಲೈ 27ರ ಶನಿವಾರದಂದು ಪಲ್ಲೆಕೆಲೆಯಲ್ಲಿ 88 ಪ್ರತಿಶತ ಮಳೆಯಾಗುವ ಸಾಧ್ಯತೆಯಿದೆ. ಪಂದ್ಯದ ಸಮಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಂಭಾವ್ಯತೆ ಇದೆ.
ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ನಿವೃತ್ತಿ ಬಳಿಕ ಭಾರತ ತಂಡವು ಪ್ರಮುಖ ಸರಣಿಯಲ್ಲಿ ಆಡುತ್ತಿದೆ. ಅಂತಾರಾಷ್ಟ್ರೀಯ ಕೋಚ್ ಆಗಿ ಗಂಭೀರ್‌ಗೆ ಇದು ಮೊದಲ ಸರಣಿ. ಅಲ್ಲದೆ ಪೂರ್ಣಪ್ರಮಾಣದಲ್ಲಿ ಟಿ20 ನಾಯಕತ್ವ ಪಡೆದ ಸೂರ್ಯಕುಮಾರ್‌ಗೂ ಇದು ಮೊದಲ ಸವಾಲು. ಯುವ ಪಡೆಯೇ ಇರುವ ತಂಡಕ್ಕೆ ಸಿಡಿಗುಂಡು ಕೋಚಿಂಗ್ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್/ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಭಾರತ ಕ್ರಿಕೆಟ್ ತಂಡ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸಂಜು ಸ್ಯಾಮ್ಸನ್ಗೆ ಮತ್ತೆ ಅನ್ಯಾಯ; ಶ್ರೀಲಂಕಾ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕಿಲ್ಲಿದೆ ಭಾರತದ ಪ್ಲೇಯಿಂಗ್ 11
