ಭಾರತ vs ಶ್ರೀಲಂಕಾ 3ನೇ ಟಿ20; ರಿಯಾನ್‌ ಪರಾಗ್-ಸಿರಾಜ್‌ ಔಟ್;‌ ಹೊಸಬರಿಗೆ ಅವಕಾಶ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಶ್ರೀಲಂಕಾ 3ನೇ ಟಿ20; ರಿಯಾನ್‌ ಪರಾಗ್-ಸಿರಾಜ್‌ ಔಟ್;‌ ಹೊಸಬರಿಗೆ ಅವಕಾಶ

ಭಾರತ vs ಶ್ರೀಲಂಕಾ 3ನೇ ಟಿ20; ರಿಯಾನ್‌ ಪರಾಗ್-ಸಿರಾಜ್‌ ಔಟ್;‌ ಹೊಸಬರಿಗೆ ಅವಕಾಶ

ಶ್ರೀಲಂಕಾ ವಿರುದ್ಧ ಈಗಾಗಲೇ ಟಿ20 ಸರಣಿ ವಶಪಡಿಸಿಕೊಂಡಿರುವ ಭಾರತ ತಂಡವು, ಸರಣಿಯ ಅಂತಿಮ ಪಂದ್ಯದಲ್ಲಿ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಮುಂದಾಗಿದೆ. ಈವರೆಗೆ ಬೆಂಚ್‌ನಲ್ಲೇ ಕುಳಿತಿದ್ದ ಆಟಗಾರರು ಆಡುವ ಬಳಗಕ್ಕೆ ಪ್ರವೇಶ ಪಡೆಯುವ ಸಾಧ್ಯತೆ ಇದೆ.

ಭಾರತ vs ಶ್ರೀಲಂಕಾ 3ನೇ ಟಿ20; ರಿಯಾನ್‌ ಪರಾಗ್-ಸಿರಾಜ್‌ ಔಟ್;‌ ಹೊಸಬರಿಗೆ ಅವಕಾಶ
ಭಾರತ vs ಶ್ರೀಲಂಕಾ 3ನೇ ಟಿ20; ರಿಯಾನ್‌ ಪರಾಗ್-ಸಿರಾಜ್‌ ಔಟ್;‌ ಹೊಸಬರಿಗೆ ಅವಕಾಶ (PTI)

ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಗೌತಮ್‌ ಗಂಭೀರ್‌ ಶುಭಾರಂಭ ಮಾಡಿದ್ದಾರೆ. ಅತ್ತ ಟಿ20 ಸ್ವರೂಪದಲ್ಲಿ ನಾಯಕನ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್‌ ಕೂಡಾ ಮೊದಲ ಸರಣಿ ಗೆಲುವು ಸಾಧಿಸಿದ್ದಾರೆ. ಗೌತಿ-ಸೂರ್ಯ ಜೋಡಿಯ ಹೊಸ ಶಕೆ ಆರಂಭವಾಗಿದೆ. ಈ ಜೋಡಿಯ ಮುಂದಾಳತ್ವದಲ್ಲಿ ಕೈಗೊಂಡ ಮೊದಲ ಪ್ರವಾಸದಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಭಾರತ ತಂಡ ಈಗಾಗಲೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ಇದೀಗ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವು ಇಂದು (ಜುಲೈ 30, ಮಂಗಳವಾರ) ನಡೆಯುತ್ತಿದ್ದು, ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ತವಕ ಭಾರತದ್ದು. ಅತ್ತ, ತವರಿನಲ್ಲೇ ವೈಟ್‌ವಾಶ್‌ ಮುಖಭಂಗದಿಂದ ಪಾರಾಗುವ ಲೆಕ್ಕಾಚಾರ ಚರಿತ್‌ ಅಸಲಂಕಾ ಪಡೆಯದ್ದು.

ಈಗಾಗಲೇ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಉಳಿಸಿ ಗೆದ್ದಿರುವ ಭಾರತ, ಮಂಗಳವಾರ ಕ್ಯಾಂಡಿಯ ಪಲ್ಲೆಕೆಲೆಯಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಇದೇ ಮೈದಾನದಲ್ಲಿ ಸರಣಿಯ ಆರಂಭಿಕ ಎರಡು ಪಂದ್ಯಗಳು ನಡೆದಿವೆ. ಮೊದಲ ಮುಖಾಮುಖಿಯಲ್ಲಿ ಆತಿಥೇಯರನ್ನು ಭಾರತವು 43 ರನ್‌ಗಳಿಂದ ಸೋಲಿಸಿತ್ತು.‌ ಎರಡನೇ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣದಿಂದ ಡಿಎಲ್‌ಎಸ್‌ ವಿಧಾನದ ಪ್ರಕಾರ 7 ವಿಕೆಟ್‌ಗಳ ಜಯ ಸಾಧಿಸಿತು.

ಭಾರತ ತಂಡವು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಬಲಿಷ್ಠ ಪಡೆಯನ್ನು ಹೊಂದಿದೆ. ಎರಡೂ ಪಂದ್ಯಗಳಲ್ಲಿ ಭಾರತವು ಬೌಲಿಂಗ್‌ನಲ್ಲಿ ಮೊದಲ ಹತ್ತು ಓವರ್‌ಗಳಲ್ಲಿ ಯಶಸ್ಸು ಕಂಡಿರಲಿಲ್ಲ. ಆದರೆ, ಇನ್ನಿಂಗ್ಸ್‌ನ ದ್ವಿತಿಯಾರ್ಧದಲ್ಲಿ ಲಂಕಾ ಲೆಕ್ಕಾಚಾರವನ್ನು ಭಾರತೀಯರು ತಲೆಕೆಳಗಾಗಿಸಿದ್ದರು. ಶ್ರೀಲಂಕಾ ತಂಡವು ಬ್ಯಾಟಿಂಗ್‌ ಲೈನಪ್‌ ಕುರಿತು ವಿಮರ್ಶೆ ಮಾಡಬೇಕಾಗಿದೆ. ತಂಡದ ಅಗ್ರ ಕ್ರಮಾಂಕವು ಎರಡೂ ಪಂದ್ಯಗಳಲ್ಲಿ ಅಮೋಘ ಆರಂಭ ಪಡೆದತ್ತು. ಆದರೆ ಮಧ್ಯಮ ಹಾಗೂ ಕೆಳ ಕ್ರಮಾಂಕವು ವೇಗವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯ್ತು.

ತಂಡದಲ್ಲಿ ಹಲವು ಬದಲಾವಣೆಯ ನಿರೀಕ್ಷೆ

ಭಾರತ ತಂಡದ ಪಾಲಿಗೆ ಇದು ಔಪಚಾರಿಕ ಪಂದ್ಯ. ಹೀಗಾಗಿ ತಂಡದಲ್ಲಿ ಅವಕಾಶ ಸಿಗದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಎರಡನೇ ಪಂದ್ಯದಲ್ಲಿ ಡಕೌಟ್‌ ಆದ ಹೊರತಾಗಿಯೂ, ಸಂಜು ಸ್ಯಾಮ್ಸನ್‌ ಮತ್ತೊಮ್ಮೆ ಅಗ್ರ ಕ್ರಮಾಂಕದಲ್ಲಿ ಅವಕಾಶ ಪಡೆಬಹುದು. ಅತ್ತ ರಿಯಾನ್ ಪರಾಗ್ ಬದಲಿಗೆ ಶಿವಂ ದುಬೆ ಮತ್ತು ಮೊಹಮ್ಮದ್ ಸಿರಾಜ್ ಬದಲಿಗೆ ಖಲೀಲ್ ಅಹ್ಮದ್ ಆಡುವ ಸಾಧ್ಯತೆಯಿದೆ. ಮತ್ತೊಂದೆಡೆ ಪಂತ್ ಹೊರಗುಳಿದು ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆದರೂ ಅಚ್ಚರಿಯಿಲ್ಲ. ಅತ್ತ ಶ್ರೀಲಂಕಾ ತಂಡದಲ್ಲಿ ಸತತ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ ದಸುನ್ ಶನಕಾ ಅವರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ದುನಿತ್ ವೆಲ್ಲಾಲಗೆ ಅವರನ್ನು ಆಡಿಸಬಹುದು.

ಮುಖಾಮುಖಿ ದಾಖಲೆ

ಭಾರತ ತಂಡವು ಟಿ20 ಸ್ವರೂಪದಲ್ಲೇ ವಿಶ್ವದ ಬಲಿಷ್ಠ ತಂಡ. ಚುಟುಕು ಸ್ವರೂಪದಲ್ಲಿ ಶ್ರೀಲಂಕಾ ವಿರುದ್ಧ ಟೀಮ್‌ ಇಂಡಿಯಾ ಪ್ರಾಬಲ್ಯ ಸಾಧಿಸಿದೆ. ಈವರೆಗೆ ನಡೆದ 31 ಪಂದ್ಯಗಳಲ್ಲಿ ಭಾರತ 21 ಪಂದ್ಯಗಳಲ್ಲಿ ಗೆದ್ದಿದೆ.

ಪಲ್ಲೆಕೆಲೆ ಪಿಚ್‌ ವರದಿ

ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ 2016ರಿಂದೀಚೆಗೆ 9 ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಈ ಪೈಕಿ 4ರಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡಗಳು ಗೆಲುವು ಸಾಧಿಸಿವೆ. ಚೇಸಿಂಗ್ ತಂಡವು 5 ಪಂದ್ಯಗಳಲ್ಲಿ ಗೆದ್ದಿದೆ. ಟಾಸ್ ಗೆದ್ದ ತಂಡಗಳ ನಾಯಕ 5 ಸಂದರ್ಭಗಳಲ್ಲಿ ಮೊದಲು ಬ್ಯಾಟಿಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ. 2016ರಿಂದ ಪಲ್ಲೆಕೆಲೆ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಸರಾಸರಿ ಸ್ಕೋರ್ 180 ರನ್. ಹೀಗಾಗಿ ಇದು ಹೆಚ್ಚು ರನ್‌ ಒಟ್ಟಾಗುವ ಪಿಚ್. ಮೈದಾನವು ಬ್ಯಾಟರ್‌ ಸ್ನೇಹಿಯಾಗಿದ್ದು, ಬೌಲರ್‌ಗಳ ಪೈಕಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುತ್ತದೆ.

ಭಾರತ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಷಭ್ ಪಂತ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಖಲೀಲ್ ಅಹ್ಮದ್.

ಶ್ರೀಲಂಕಾ ಸಂಭಾವ್ಯ ತಂಡ

ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್‌ ಕೀಪರ್), ಕುಸಲ್ ಪೆರೇರಾ, ಕಮಿಂದು ಮೆಂಡಿಸ್, ಚರಿತ್ ಅಸಲಂಕ (ನಾಯಕ), ದುನಿತ್ ವೆಲ್ಲಾಲಗೆ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಮತೀಶ ಪತಿರಣ, ಅಸಿತ ಫೆರ್ನಾಂಡೊ.