ಸೌತ್ ಆಫ್ರಿಕಾ ಸವಾಲಿಗೆ ಶ್ರೀಲಂಕಾ ಸಜ್ಜು; ಪ್ಲೇಯಿಂಗ್ 11, ನ್ಯೂಯಾರ್ಕ್ ಪಿಚ್ ಹಾಗೂ ಹವಾಮಾನ ವರದಿ
Sri Lanka vs South Africa: ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ಪ್ಲೇಯಿಂಗ್ 11, ನ್ಯೂಯಾರ್ಕ್ ಪಿಚ್ ಹಾಗೂ ಹವಾಮಾನ ವರದಿ ಇಲ್ಲಿದೆ.

ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಜೂನ್ 3ರಂದು ನಾಲ್ಕನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಡಿ ಗುಂಪಿನಲ್ಲಿರುವ ಉಭಯ ತಂಡಗಳ ಕಾದಾಟಕ್ಕೆ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ವೇದಿಕೆ ಕಲ್ಪಿಸುತ್ತಿದೆ. ಕಳೆದ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಎರಡೂ ತಂಡಗಳು, ಈ ಬಾರಿ ಟ್ರೋಫಿಯೊಂದಿಗೆ ತಮ್ಮ ದೇಶಗಳಿಗೆ ಮರಳಲು ಸಜ್ಜಾಗಿವೆ.
ಐಸಿಸಿ ಟೂರ್ನಿಯಲ್ಲಿ ಶ್ರೀಲಂಕಾ ಪರ ವನಿಂದು ಹಸರಂಗ ಮತ್ತು ಆಫ್ರಿಕಾ ಪರ ಏಡನ್ ಮಾರ್ಕ್ರಮ್ ಇದೇ ಮೊದಲ ಬಾರಿಗೆ ತಂಡ ಮುನ್ನಡೆಸುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದರೆ, ಮತ್ತೊಂದೆಡೆ ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಸರಣಿಯಲ್ಲಿ ಮೂರಕ್ಕೆ ಮೂರು ಸೋತಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉಭಯ ತಂಡಗಳು ಬಲಿಷ್ಠವಾಗಿದ್ದು, ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.
ಎರಡೂ ತಂಡಗಳು ತಮ್ಮ ವಿಶ್ವಕಪ್ ಅಭಿಯಾನ ಗೆಲುವಿನೊಂದಿಗೆ ಪ್ರಾರಂಭಿಸಲು ಬಯಸುತ್ತಿವೆ. ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ಎರಡೂ ಸ್ಟಾರ್ ಆಟಗಾರರನ್ನು ಹೊಂದಿದ್ದು, ಸ್ಪರ್ಧಾತ್ಮಕ ಪಂದ್ಯವನ್ನು ನಿರೀಕ್ಷಿಸಬಹುದಾಗಿದೆ. ಹೀಗಿರುವಾಗ ನಸ್ಸೌ ಕ್ರಿಕೆಟ್ ಸ್ಟೇಡಿಯಂನ ಪಿಚ್ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ಪಿಚ್ ರಿಪೋರ್ಟ್
ಆಸ್ಟ್ರೇಲಿಯಾದ ಅಡಿಲೇಡ್ ನಗರದಿಂದ ನಸ್ಸೌ ಕೌಂಟಿ ಸ್ಟೇಡಿಯಂನ ಪಿಚ್‌ನಲ್ಲಿ ಡ್ರಾಪ್ ಇನ್ ಮಾಡಲಾಗಿದೆ. ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರುತ್ತದೆ. ಚೆಂಡು ಹೆಚ್ಚು ಪುಟಿಯುತ್ತದೆ. ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಸುಲಭವಾಗುತ್ತದೆ. ಸ್ಪಿನ್ ಬೌಲರ್‌ಗಳು ಕೊಂಚ ನೆರವಾಗುವ ಸಾಧ್ಯತೆ ಇದೆ. ಆದರೆ ಭಾರತ ಮತ್ತು ಬಾಂಗ್ಲಾದೇಶ ಅಭ್ಯಾಸ ಪಂದ್ಯದಲ್ಲಿ ಪಿಚ್ ನಿರೀಕ್ಷೆಗಿಂತ ನಿಧಾನವಾಗಿ ವರ್ತಿಸಿತು.
ಉಭಯ ತಂಡಗಳ ಮುಖಾಮುಖಿ
ಒಟ್ಟು ಪಂದ್ಯಗಳು - 17
ಸೌತ್ ಆಫ್ರಿಕಾ ಗೆಲುವು - 12
ಶ್ರೀಲಂಕಾ ಗೆಲುವು - 05
2021ರ ಟಿ20 ವಿಶ್ವಕಪ್‌ನ ಘರ್ಷಣೆ ಸೇರಿದಂತೆ ದಕ್ಷಿಣ ಆಫ್ರಿಕಾ ತನ್ನ ಕೊನೆಯ 7 ಮುಖಾಮುಖಿಗಳಲ್ಲಿ ಶ್ರೀಲಂಕಾ ವಿರುದ್ಧ ಅಜೇಯವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾದ 3 ಪಂದ್ಯಗಳಲ್ಲೂ ದಕ್ಷಿಣ ಆಫ್ರಿಕಾ ಗೆದ್ದಿದೆ.
ಹವಾಮಾನ ವರದಿ
ಶ್ರೀಲಂಕಾ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ನ್ಯೂಯಾರ್ಕ್ ನಗರದ ಹವಾಮಾನ ಮುನ್ಸೂಚನೆಯ ಪ್ರಕಾರ ಜೂನ್ 3ರ ಸೋಮವಾರ ಬೆಳಿಗ್ಗೆ ಮಧ್ಯಂತರ ಮಳೆಯ ಮುನ್ಸೂಚನೆಯನ್ನು ಹೊಂದಿರಬಹುದು. ಮಳೆ ಸುರಿಯುವ ಸಾಧ್ಯತೆಗಳು ಶೇ 40ರಷ್ಟಿದೆ. ಆದರೆ ಪಂದ್ಯ ವಾಶ್‌ಔಟ್ ಆಗುವುದಿಲ್ಲ.
ಉಭಯ ತಂಡಗಳ ಪ್ಲೇಯಿಂಗ್ 11
ಶ್ರೀಲಂಕಾ ಸಂಭವನೀಯ XI: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕಾ, ವನಿಂದು ಹಸರಂಗ (ನಾಯಕ), ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ಮಹೇಶ್ ತೀಕ್ಷಣ, ಮಥೀಶ ಪತಿರಣ, ದಿಲ್ಶನ್ ಮಧುಶಂಕ.
ದಕ್ಷಿಣ ಆಫ್ರಿಕಾ ಸಂಭವನೀಯ XI: ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ರಿಯಾನ್ ರಿಕೆಲ್ಟನ್, ಏಡೆನ್ ಮಾರ್ಕ್ರಮ್ (ನಾಯಕ), ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನೋಕಿಯಾ, ತಬ್ರೈಜ್ ಶಮ್ಸಿ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
