ಸಹೋದರಿ ಮದುವೆ ವೇಳೆ ಭಾವುಕತೆಯ ಅಪ್ಪುಗೆ ನೀಡಿ ಕಣ್ಣೀರಿಟ್ಟ ಆರ್‌ಸಿಬಿ ಆಟಗಾರ; ಹೃದಯ ತುಂಬಿ ಬಂತು ಎಂದ ನೆಟ್ಟಿಗರು, VIDEO
ಇತ್ತೀಚೆಗಷ್ಟೇ ಆರ್‌ಸಿಬಿ ಆಟಗಾರ ವನಿಂದು ಹಸರಂಗ ಅವರ ಸಹೋದರಿ ಚತು ಡಿ ಸಿಲ್ವಾ ವಿವಾಹ ಅದ್ಧೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಸಹೋದರಿಯನ್ನು ಅತ್ತೆ ಮನೆಗೆ ಕಳುಹಿಸಿಕೊಡುವಾಗ ತೀವ್ರ ಭಾವುಕರಾಗಿದ್ದ ಕ್ರಿಕೆಟಿಗ ಕಣ್ಣೀರು ಸುರಿಸುತ್ತಿರುವ ಕ್ಷಣವನ್ನು ಸೆರೆ ಹಿಡಿಯಲಾಗಿದೆ.
ಇತ್ತೀಚೆಗೆ ತನ್ನ ತಂಗಿಯ ಮದುವೆ ಮನೆಯಲ್ಲಿ ತೀವ್ರ ಭಾವುಕರಾಗಿದ್ದ ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ (Wanindu Hasaranga), ಅವರ ಅತ್ತೆ ಮನೆಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದಾರೆ. ಅಣ್ಣನ ಕಾಲಿಗೆ ಸಹೋದರಿ ಪ್ರೀತಿಯಿಂದ ನಮಸ್ಕಾರ ಮಾಡುವಾಗ ಹಸರಂಗ ಗಳಗಳನೆ ಅತ್ತು ಬಿಟ್ಟರು. ಭಾವುಕರಾಗಿದ್ದ ಕ್ರಿಕೆಟಿಗ, ತಮ್ಮ ಸಹೋದರಿಗೆ ಪ್ರೀತಿಯ ಅಪ್ಪುಗೆ ನೀಡಿದರು. ಈ ಸುಂದರ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮೆಚ್ಚುಗೆಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಹಸರಂಗ ಅವರ ಸಹೋದರಿ ಚತು ಡಿ ಸಿಲ್ವಾ ವಿವಾಹ ಅದ್ಧೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಸಹೋದರಿಯನ್ನು ಅತ್ತೆ ಮನೆಗೆ ಕಳುಹಿಸಿಕೊಡುವಾಗ ತೀವ್ರ ಭಾವುಕರಾಗಿದ್ದ ಕ್ರಿಕೆಟಿಗ ಕಣ್ಣೀರು ಸುರಿಸುತ್ತಿರುವ ಸುಂದರ ಕ್ಷಣವನ್ನು ಸೆರೆ ಹಿಡಿಯಲಾಗಿದೆ. ಇದು ಅಭಿಮಾನಿಗಳ ಹೃದಯ ಕರಗುವಂತೆ ಮಾಡಿದ್ದು, ವಿಡಿಯೋ ಎಕ್ಸ್‌ನಲ್ಲಿ (ಟ್ವಿಟರ್) ಭಾರಿ ವೈರಲ್ ಆಗುತ್ತಿದೆ. ಹಸರಂಗ ತನ್ನ ಸೋದರ ಮಾವನಿಗೂ ಅಪ್ಪುಗೆ ನೀಡಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದರು. ಆದರೆ ಕಣ್ಣೀರು ನಿಯಂತ್ರಿಸಲು ತುಂಬಾ ಕಷ್ಟಪಟ್ಟಿದ್ದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಹೃದಯ ತುಂಬಿ ಬಂತು ಎಂದ ನೆಟ್ಟಿಗರು
ಮದುವೆ ಅಂದರೆ ಸಡಗರ ಸಂಭ್ರಮಕ್ಕೆ ಕೊರತೆಯೇ ಇರುವುದಿಲ್ಲ. ಅದ್ಧೂರಿಯಾಗಿ ನೂರಾರು ಜನರ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಎಷ್ಟು ಸಡಗರ ಇರುತ್ತದೋ ಅಷ್ಟೇ ಭಾವನಾತ್ಮಕತೆಯೂ ಇರುತ್ತದೆ. ಇಷ್ಟು ದಿನ ಸಾಕಿ ಸಲಹಿದ್ದ ತಮ್ಮ ಮಗಳನ್ನು ಅತ್ತೆ ಮನೆಗೆ ಕಳುಹಿಸಿ ಕೊಡುವಾಗ ಪೋಷಕರು ಆನಂದ ಭಾಷ್ಪ ಸುರಿಸುತ್ತಾರೆ. ಇದು ಪ್ರಸಿದ್ಧ ವ್ಯಕ್ತಿಗಳಿಗೂ ಹೊರತಾಗಿಲ್ಲ. ಅವರೂ ಸಹ ಭಾವನೆಗಳಿದ್ದು, ಕಣ್ಣೀರು ಹಾಕುತ್ತಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು.
ಎಕ್ಸ್‌ನಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಭಿಮಾನಿಗಳು ಪೋಸ್ಟ್ ಅನ್ನು ಹಂಚಿಕೊಂಡು ಅಣ್ಣ-ತಂಗಿಯ ಬಾಂಧವ್ಯದ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಹಸರಂಗ ಮತ್ತು ಅವರ ಸಹೋದರಿಯ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸಿದ ವಿಡಿಯೋಗೆ ಫ್ಯಾನ್ಸ್ ಕೂಡ ಭಾವುಕಕ್ಕೆ ಒಳಗಾಗಿದ್ದಾರೆ. ಬಗೆಬಗೆಯ ಕಾಮೆಂಟ್ಗಳ ಮೂಲಕ ಭಾವುಕರಾಗಿ ಅಣ್ಣ-ತಂಗಿಯ ಬಾಂಧವ್ಯವನ್ನು ಹೊಗಳುತ್ತಿದ್ದಾರೆ. ಸಂಪೂರ್ಣ ಹಾರ್ಟ್ ಎಮೋಜಿಗಳಿಂದಲೇ ತುಂಬಿ ಹೋಗಿವೆ.
ಎಲ್ಪಿಎಲ್ನಲ್ಲಿ ಆಲ್‌ರೌಂಡ್ ಪರ್ಫಾಮೆನ್ಸ್
ಇತ್ತೀಷೆಗಷ್ಟೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಹಸರಂಗ ಅದ್ಭುತ, ಅಮೋಘ ಪ್ರದರ್ಶನ ನೀಡಿದ್ದರು. ಅಲ್ಲದೆ, ನಾಯಕನಾಗಿ ಅವರು ತಂಡಕ್ಕೆ ಚಾಂಪಿಯನ್ ಪಟ್ಟವನ್ನೂ ತಂದುಕೊಟ್ಟರು. ಬ್ಯಾಟಿಂಗ್-ಬೌಲಿಂಗ್ನಲ್ಲಿ ಗಮನಾರ್ಹ ಪರ್ಫಾಮೆನ್ಸ್ ನೀಡಿ ಎಲ್ಲರ ಗಮನ ಸೆಳೆದಿದ್ದರು. ಬ್ಯಾಟಿಂಗ್ನಲ್ಲಿ 279 ರನ್, ಬೌಲಿಂಗ್ನಲ್ಲಿ 19 ವಿಕೆಟ್ ಪಡೆದು ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಬಿ ಲವ್ ಕ್ಯಾಂಡಿ ತಂಡವು 5 ವಿಕೆಟ್ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆದರೆ ಗಾಯಗೊಂಡಿದ್ದ ಹಸರಂಗ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.
ಏಷ್ಯಾಕಪ್ನಿಂದ ಔಟ್?
ಸದ್ಯ ಗಾಯದ ಸಮಸ್ಯೆಗೆ ಒಳಗಾಗಿರುವ ಹಸರಂಗ ಆಗಸ್ಟ್ 30ರಿಂದ ಶುರುವಾಗುವ ಏಷ್ಯಾಕಪ್ ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಇನ್ನು ನಾಲ್ಕು ದಿನಗಳಲ್ಲಿ ಟೂರ್ನಿ ಆರಂಭವಾಗಲಿದೆ. ಅವರ ಫಿಟ್ನೆಸ್ ಕುರಿತು ಶ್ರೀಲಂಕಾ ಚಿಂತೆಗೊಳಗಾಗಿದೆ. ಗಾಯದಿಂದ ರಿಕವರ್ ಆಗಲು ತುಂಬಾ ಸಮಯ ಬೇಕಾಗಿದ್ದು, ಏಷ್ಯಾಕಪ್ಗೆ ಅಲಭ್ಯರಾಗಿ ಏಕದಿನ ವಿಶ್ವಕಪ್ ಟೂರ್ನಿಗೆ ಫಿಟ್ ಆಗಲಿದ್ದಾರೆ ಎನ್ನುತ್ತಿವೆ ಮೂಲಗಳು.