ವಿಶ್ವಕಪ್‌ ಗೆಲ್ಲಲು ಬಾಂಗ್ಲಾದೇಶ ರಣತಂತ್ರ; ಭಾರತದ ಶ್ರೀಧರನ್ ಶ್ರೀರಾಮ್ ತಾಂತ್ರಿಕ ಸಲಹೆಗಾರನಾಗಿ ನೇಮಕ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್‌ ಗೆಲ್ಲಲು ಬಾಂಗ್ಲಾದೇಶ ರಣತಂತ್ರ; ಭಾರತದ ಶ್ರೀಧರನ್ ಶ್ರೀರಾಮ್ ತಾಂತ್ರಿಕ ಸಲಹೆಗಾರನಾಗಿ ನೇಮಕ

ವಿಶ್ವಕಪ್‌ ಗೆಲ್ಲಲು ಬಾಂಗ್ಲಾದೇಶ ರಣತಂತ್ರ; ಭಾರತದ ಶ್ರೀಧರನ್ ಶ್ರೀರಾಮ್ ತಾಂತ್ರಿಕ ಸಲಹೆಗಾರನಾಗಿ ನೇಮಕ

ODI World Cup 2023: ಏಕದಿನ ವಿಶ್ವಕಪ್‌ ಆರಂಭಕ್ಕೂ ಮುನ್ನವೇ ಭಾರತದ ಮಾಜಿ ಸ್ಪಿನ್ನರ್‌ ಶ್ರೀಧರನ್ ಶ್ರೀರಾಮ್ ಅವರು ಬಾಂಗ್ಲಾದೇಶ ತಂಡ ಸೇರಿಕೊಳ್ಳಲಿದ್ದಾರೆ.

ಶ್ರೀಧರನ್ ಶ್ರೀರಾಮ್
ಶ್ರೀಧರನ್ ಶ್ರೀರಾಮ್

ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗೆ (ODI World Cup 2023) ನೆರೆಯ ಬಾಂಗ್ಲಾದೇಶ ಭರ್ಜರಿ ಸಿದ್ಧತೆ ನಡೆಸಿದೆ. ಭಾರತದ ಮಾಜಿ ಎಡಗೈ ಸ್ಪಿನ್ನರ್ ಶ್ರೀಧರನ್ ಶ್ರೀರಾಮ್ (Sridharan Sriram) ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ತಂಡದ ನೂತನ ತಾಂತ್ರಿಕ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.

ಏಕದಿನ ವಿಶ್ವಕಪ್‌ನ ಆರಂಭಕ್ಕೂ ಮುನ್ನವೇ ಶ್ರೀರಾಮ್ ಅವರು ಬಾಂಗ್ಲಾದೇಶ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೋ (ESPNcricinfo) ವರದಿ ಮಾಡಿದೆ.

ಬಾಂಗ್ಲಾದೇಶವು ಅಕ್ಟೋಬರ್ 7ರಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಅದಕ್ಕೂ ಮುನ್ನ ನಡೆಯಲಿರುವ ಎರಡು ಅಭ್ಯಾಸ ಪಂದ್ಯಗಳಿಗೆ ತಂಡವು ತಯಾರಿ ನಡೆಸಲಿದೆ. ಹೀಗಾಗಿ ಶ್ರೀರಾಮ್ ಅವರು ಸೆಪ್ಟೆಂಬರ್ 27ರಂದು ಗುವಾಹಟಿಯಲ್ಲಿ ಬಾಂಗ್ಲಾದೇಶ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತದ ಪಿಚ್‌ ಕುರಿತಾಗಿ ಬಾಂಗ್ಲಾದೇಶಕ್ಕೆ ಮಾಹಿತಿ

ಈಗಾಗಲೇ ಬಾಂಗ್ಲಾದೇಶ ತಂಡದ ನಿರ್ದೇಶಕರಾಗಿ ಸೇರಿಕೊಂಡ ಖಲೀದ್ ಮಹಮೂದ್ ಅವರಿಗೆ ಭಾರತದ ಮಾಜಿ ಸ್ಪಿನ್ನರ್ ಇಲ್ಲಿನ ಪಿಚ್‌ ಪರಿಸ್ಥಿತಿಗಳ ಬಗ್ಗೆ ವಿಮರ್ಶಾತ್ಮಕ ಮಾಹಿತಿ ನೀಡಲಿದ್ದಾರೆ. ಈ ಕುರಿತಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ(BCB)ಯ ಕ್ರಿಕೆಟ್ ಕಾರ್ಯಾಚರಣೆಗಳ ಅಧ್ಯಕ್ಷ ಜಲಾಲ್ ಯೂನಸ್ ಮಾಹಿತಿ ನೀಡಿದ್ದಾರೆ.

ಶ್ರೀರಾಮ್ ಸಲಹೆ ಬಾಂಗ್ಲಾದೇಶಕ್ಕೆ ತುಂಬಾ ಮುಖ್ಯ

ಹೆಚ್ಚಾಗಿ ಯುವ ಪಡೆಯನ್ನೇ ಹೊಂದಿರುವ ಬಾಂಗ್ಲಾದೇಶದ ಆಟಗಾರರು, ಭಾರತದಲ್ಲಿ ಹೆಚ್ಚು ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿಲ್ಲ. ಹೀಗಾಗಿ, ಭಾರತದವರೇ ಆದ ನೂತನ ತಾಂತ್ರಿಕ ಸಲಹೆಗಾರರು ಭಾರತದ ಹವಾಮಾನ ಮತ್ತು ಪಿಚ್ ಪರಿಸ್ಥಿತಿಗಳ ಬಗ್ಗೆ ಆಟಗಾರರಿಗೆ ಮಾಹಿತಿಯನ್ನು ನೀಡುತ್ತಾರೆ ಎಂದು ಯೂನಸ್ ಹೇಳಿದ್ದಾರೆ. ತಂಡಕ್ಕೆ ಶ್ರೀರಾಮ್ ಅವರ ಕೊಡುಗೆ ಬಹಳ ಮುಖ್ಯ. ಶ್ರೀರಾಮ್ ತಾಂತ್ರಿಕ ಸಲಹೆಗಾರರಾಗಿ ಸೇರಿಕೊಂಡಿದ್ದಾರೆ. ಅವರಿಂದ ನಮಗೆ ಹೆಚ್ಚಿನ ತಾಂತ್ರಿಕ ಬೆಂಬಲ ಸಿಗಲಿದೆ ಎಂದು ಯೂನಸ್ ಹೇಳಿದ್ದಾರೆ.

“ಅವರು ಭಾರತದ ಎಲ್ಲಾ ಪಿಚ್‌ಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅಲ್ಲಿನ ಹವಾಮಾನ ಪರಿಸ್ಥಿತಿಗಳ ಬಗ್ಗೆಯೂ ನಮ್ಮ ತಂಡಕ್ಕೆ ಹೇಳಬಲ್ಲರು. ನಮ್ಮ ತಂಡದ ಕೆಲವೇ ಕೆಲವು ಆಟಗಾರರು ಮಾತ್ರ ಭಾರತದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅವರ ಸಲಹೆ ನಮಗೆ ತುಂಬಾ ಮುಖ್ಯ” ಎಂದು ಯೂನಸ್ ಹೇಳಿಕೆಯನ್ನು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಉಲ್ಲೇಖಿಸಿದೆ.

ಈ ಹಿಂದೆ 2022ರಲ್ಲಿ ಶ್ರೀರಾಮ್ ಅವರು ಬಾಂಗ್ಲಾದೇಶ ಕ್ರಿಕೆಟ್‌ ತಂಡದ ತಾಂತ್ರಿಕ ಸಲಹೆಗಾರನಾಗಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೆ ಟಿ20 ತಂಡದ ಮುಖ್ಯ ಕೋಚ್ ಕೂಡ ಆಗಿದ್ದರು. ಅದಕ್ಕೂ ಹಿಂದೆ ಅವರು ಆರು ವರ್ಷಗಳ ಕಾಲ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಸ್ಪಿನ್-ಬೌಲಿಂಗ್ ಕೋಚ್ ಆಗಿದ್ದರು.

ಅಕ್ಟೋಬರ್ 5ರಂದು ವಿಶ್ವಕಪ್‌ಗೆ ಚಾಲನೆ

ಅಕ್ಟೋಬರ್ 5ರಂದು ಏಕದಿನ ವಿಶ್ವಕಪ್‌ಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಈ ಪಂದ್ಯಕ್ಕೆ ವೇದಿಕೆ ಕಲ್ಪಿಸಿದೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಗುಂಪು ಹಂತದಲ್ಲಿ ಟೀಮ್ ಇಂಡಿಯಾ ಒಟ್ಟು 9 ಪಂದ್ಯಗಳನ್ನು ಆಡಲಿದೆ.

Whats_app_banner