ಟೆಸ್ಟ್ ಕ್ರಿಕೆಟ್ಗೆ ರವೀಂದ್ರ ಜಡೇಜಾ ನಿವೃತ್ತಿ? ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ ಇನ್ಸ್ಟಾಗ್ರಾಮ್ ಸ್ಟೋರಿ
Ravindra Jadeja: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತೀಯ ತಂಡವನ್ನು ಘೋಷಿಸುವ ಕೆಲವೇ ದಿನಗಳಿಗಿಂತ ಮೊದಲು ರವೀಂದ್ರ ಜಡೇಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರಹಸ್ಯ ಪೋಸ್ಟ್ ಹಾಕಿದ್ದಾರೆ.
ನವದೆಹಲಿ: ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ತಮ್ಮ ಏಕದಿನ ಭವಿಷ್ಯದ ಬಗ್ಗೆ ಅನಿಶ್ಚಿತತೆಯ ನಡುವೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅಚ್ಚರಿಯ ಪೋಸ್ಟ್ವೊಂದನ್ನು ಹಾಕಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿಯ ಮುನ್ಸೂಚನೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಇತ್ತೀಚೆಗೆ ಮುಕ್ತಾಯವಾದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಧರಿಸಿದ್ದ ಪಿಂಕ್ ಜೆರ್ಸಿಯನ್ನು ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಫೋಟೋಗೆ ಯಾವುದೇ ಕ್ಯಾಪ್ಶನ್ ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
ಜಡೇಜಾ ತಮ್ಮ ಟೆಸ್ಟ್ ಜೆರ್ಸಿಯ ಸಂಖ್ಯೆ '8' ಇರುವ ಫೋಟೋವನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್ನಲ್ಲಿ ಅವರು ಧರಿಸಿದ್ದ ಪಿಂಕ್ (ಗುಲಾಬಿ) ಜೆರ್ಸಿ ಇದಾಗಿದೆ. ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ನಡೆದ ಪಂದ್ಯದಲ್ಲಿ ಪಿಂಕ್ ಜೆರ್ಸಿ ನೀಡಲಾಗಿತ್ತು. ಈ ಸರಣಿಯಲ್ಲಿ ಭಾರತ ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ ಜಡೇಜಾ 3ರಲ್ಲಿ ಕಣಕ್ಕಿಳಿದಿದ್ದರು. 27ರ ಸರಾಸರಿಯಲ್ಲಿ 135 ರನ್ ಗಳಿಸಿದ ಜಡ್ಡು, 4 ವಿಕೆಟ್ ಪಡೆದಿದ್ದರು.
2024ರ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಜಡೇಜಾ ಕೂಡ ಟಿ20ಐ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆ ಮೂಲಕ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ಭರವಸೆ ನೀಡಿದ್ದರು. ಆದರೀಗ ಟೆಸ್ಟ್ ಕ್ರಿಕೆಟ್ನಿಂದಲೂ ಹಿಂದೆ ಸರಿಯಲು ನಿರ್ಧರಿಸಿದ್ದಾರೆಯೇ ಎಂಬ ಸುಳಿವು ಈ ಫೋಟೋ ನೀಡುತ್ತಿದೆ. ಮತ್ತೊಂದೆಡೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅವರನ್ನು ಆಯ್ಕೆ ಮಾಡದಿರಲು ಬಿಸಿಸಿಐ ಚಿಂತಿಸಿದೆ ಎಂದೂ ವರದಿಯಾಗಿದೆ.
ಜಡೇಜಾ ಸ್ಥಾನಕ್ಕೆ ಹುಡುಕಾಟ?
ಪ್ರಸ್ತುತ ಜಡೇಜಾ ಅವರ ಭವಿಷ್ಯ ಅಪಾಯಕ್ಕೆ ಸಿಲುಕಿದೆ. ಮುಂದಿನ ಸರಣಿಗಳಿಗೆ ಜಡ್ಡು ಅವರ ಪಾತ್ರ ನಿರ್ಣಯಿಸಲು ಬಿಸಿಸಿಐ ಸಜ್ಜಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವರದಿಯಲ್ಲಿ ಉಲ್ಲೇಖಿಸಲಾದ ಮೂಲಗಳ ಪ್ರಕಾರ, ಬಿಸಿಸಿಐ ಆಯ್ಕೆ ಸಮಿತಿಯು ಆಲ್ರೌಂಡರ್ ಸ್ಥಾನಕ್ಕೆ ಮತ್ತೊಬ್ಬರನ್ನು ಹುಡುಕಾಟ ನಡೆಸುತ್ತಿದೆ. ಚಾಂಪಿಯನ್ಸ್ ಟ್ರೋಫಿಗೂ ಕಡೆಗಣನೆ ಮಾಡುತ್ತಿರುವ ಹಿನ್ನೆಲೆ ಶೀಘ್ರದಲ್ಲೇ ಆರ್ ಅಶ್ವಿನ್ರಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರೂ ಅಚ್ಚರಿ ಇಲ್ಲ.
ಜಡೇಜಾ ತಮ್ಮ ಕಂಬ್ಯಾಕ್ ಸೂಚನೆ ನೀಡುವ ಅವಧಿಯಲ್ಲಿ ಜೆರ್ಸಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಈ ಹಿಂದೆ ಗಾಯಗೊಂಡು ಚೇತರಿಸಿಕೊಂಡ ನಂತರ ಅವರು ಕಂಬ್ಯಾಕ್ ಮಾಡುತ್ತಿರುವುದಾಗಿ ತಮ್ಮ ಜೆರ್ಸಿ ಫೋಟೋ ಹಂಚಿಕೊಂಡು ತಿಳಿಸುತ್ತಿದ್ದರು. ಆದರೆ ಈ ಸಲ ಬಿಜಿಟಿ ಸರಣಿ ಮುಗಿದ ಒಂದು ವಾರದ ನಂತರ ಹಠಾತ್ತಾಗಿ ಕ್ಯಾಪ್ಶನ್ ಇಲ್ಲದೆ ಟೆಸ್ಟ್ ಜೆರ್ಸಿ ಹಂಚಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ, ಟೆಸ್ಟ್ಗೆ ನಿವೃತ್ತಿ ಹೇಳುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ರವೀಂದ್ರ ಜಡೇಜಾ ವೃತ್ತಿಜೀವನ
ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾದ ಜಡೇಜಾ, 80 ಟೆಸ್ಟ್ಗಳಲ್ಲಿ 323 ವಿಕೆಟ್ ಪಡೆದಿದ್ದಾರೆ. 4 ಶತಕ, 22 ಅರ್ಧಶತಕಗಳೊಂದಿಗೆ 34.74ರ ಬ್ಯಾಟಿಂಗ್ ಸರಾಸರಿಯಲ್ಲಿ 3370 ರನ್ ಗಳಿಸಿದ್ದಾರೆ. 197 ಏಕದಿನ ಪಂದ್ಯಗಳಲ್ಲಿ 220 ವಿಕೆಟ್ ಪಡೆದಿರುವ ಜಡೇಜಾ, 13 ಅರ್ಧಶತಕಗಳೊಂದಿಗೆ 32.43ರ ಬ್ಯಾಟಿಂಗ್ ಸರಾಸರಿಯಲ್ಲಿ 2756 ರನ್ ಕಲೆ ಹಾಕಿದ್ದಾರೆ. 74 ಟಿ20ಐಗಳಲ್ಲಿ 515 ರನ್, 54 ವಿಕೆಟ್ ಕಿತ್ತಿದ್ದಾರೆ.