ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಒತ್ತಡದಲ್ಲಿದ್ದಾರೆ; ಆರ್‌ಸಿಬಿಯ ಇತರ ಬ್ಯಾಟರ್‌ಗಳು ನೆರವಾಗಬೇಕು ಎಂದ ಸ್ಟೀವ್ ಸ್ಮಿತ್

ವಿರಾಟ್ ಕೊಹ್ಲಿ ಒತ್ತಡದಲ್ಲಿದ್ದಾರೆ; ಆರ್‌ಸಿಬಿಯ ಇತರ ಬ್ಯಾಟರ್‌ಗಳು ನೆರವಾಗಬೇಕು ಎಂದ ಸ್ಟೀವ್ ಸ್ಮಿತ್

Virat Kohli: ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಒತ್ತಡದಲ್ಲಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡದ ಇತರ ಬ್ಯಾಟರ್‌ಗಳು ಅವರೊಂದಿಗೆ ಕ್ರೀಸ್‌ಕಚ್ಚಿ ಆಡಬೇಕು ಎಂದು ಆಸೀಸ್‌ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ವಿರಾಟ್ ಕೊಹ್ಲಿಗೆ ಆರ್‌ಸಿಬಿಯ ಇತರ ಬ್ಯಾಟರ್‌ಗಳು ನೆರವಾಗಬೇಕು ಎಂದ ಸ್ಮಿತ್
ವಿರಾಟ್ ಕೊಹ್ಲಿಗೆ ಆರ್‌ಸಿಬಿಯ ಇತರ ಬ್ಯಾಟರ್‌ಗಳು ನೆರವಾಗಬೇಕು ಎಂದ ಸ್ಮಿತ್ (AP)

ಪ್ರಸಕ್ತ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳಪೆ ಪ್ರದರ್ಶನ ನೀಡುತ್ತಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು, ಗೆಲುವಿನ ಹುಡುಕಾಟ ನಡೆಸುತ್ತಿದೆ. ಬೌಲರ್‌ಗಳ ವೈಫಲ್ಯ ಒಂದೆಡೆಯಾದರೆ, ಬಲಿಷ್ಠ ಬ್ಯಾಟಿಂಗ್‌ ಲೈನಪ್‌ ಹೊಂದಿದ್ದರೂ, ಯಾರೂ ಅಬ್ಬರಿಸುತ್ತಿಲ್ಲ. ಎರಡು ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಒಬ್ಬರೇ ಕ್ರೀಸ್‌ಕಚ್ಚಿ ಆಡಿದ್ದರು. ಹೀಗಾಗಿ ಬ್ಯಾಟರ್‌ಗಳ ಸಾಮೂಹಿಕ ವೈಫಲ್ಯದಿಂದಾಗಿ ವಿರಾಟ್ ಕೊಹ್ಲಿ ಸಾಕಷ್ಟು ಒತ್ತಡದಲ್ಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್‌ 2024ರಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆರ್‌ಸಿಬಿ ಪರ ಈವರೆಗೆ ನಾಲ್ಕು ಪಂದ್ಯಗಳಲ್ಲಿ ಆಡಿರುವ ಅವರು 67.66ರ ಸರಾಸರಿಯಲ್ಲಿ 203 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಟೂರ್ನಿಯಲ್ಲಿ ಅಧಿಕ ರನ್‌ ಕಲೆ ಹಾಕಿದ ಆಟಗಾರನಾಗಿ ಆರೆಂಜ್‌ ಕ್ಯಾಪ್‌ ಧರಿಸಿಕೊಂಡಿದ್ದಾರೆ. ತಂಡದ ಎರಡನೇ ಅತ್ಯುತ್ತಮ ಬ್ಯಾಟರ್ ದಿನೇಶ್ ಕಾರ್ತಿಕ್.‌ ಫಿನಿಶರ್‌ ಪಾತ್ರದಲ್ಲಿ ಬರುವ ಡಿಕೆ, 90 ರನ್ ಗಳಿಸಿದ್ದಾರೆ. ಉಳಿದ ಯಾವುದೇ ಬ್ಯಾಟರ್‌ಗಳು ಕೂಡಾ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡಿಲ್ಲ. ಸಿಕ್ಕ ಅವಕಾಶಗಳಲ್ಲಿ ಮಹಿಪಾಲ್‌ ಲೋಮ್ರರ್‌ ಒಬ್ಬ ರು ಅಬ್ಬರಿಸಿದ್ದಾರೆ.

ಕೊಹ್ಲಿ ಸ್ಥಿರ ಪ್ರದರ್ಶನದ ಹೊರತಾಗಿಯೂ, ಬೆಂಗಳೂರು ತಂಡವು ನಾಲ್ಕು ಪಂದ್ಯಗಳಲ್ಲಿ ಮೂರು ಸೋಲು ಕಂಡಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ. ತಂಡದ ಬಲಿಷ್ಠ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್, ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಕ್ಯಾಮರೂನ್ ಗ್ರೀನ್ ಅವರಂಥ ಆಟಗಾರರು ಇನ್ನೂ ಕ್ರೀಸ್‌ಕಚ್ಚಿ ಆಡಿಲ್ಲ.

ಇದನ್ನೂ ಓದಿ | ಹಾರ್ದಿಕ್ ಪಾಂಡ್ಯ ಜೊತೆಗಿನ ನಿರಂತರ ವಾಗ್ವಾದಗಳಿಂದ ಬೇಸತ್ತ ರೋಹಿತ್​ ಶರ್ಮಾ; ಮುಂಬೈ ಇಂಡಿಯನ್ಸ್​ಗೆ ಮಾಜಿ ನಾಯಕ ಗುಡ್​ಬೈ?

“ವಿರಾಟ್‌ ಅವರೊಂದಿಗೆ ನಿಂತು ಆಡಬೇಕಾದ ಇತರ ಪ್ರಮುಖ ಬ್ಯಾಟರ್‌ಗಳ ಅಗತ್ಯ ಅವರಿಗಿದೆ. ಬ್ಯಾಟರ್‌ಗಳು ಕೊಹ್ಲಿಗೆ ಸಾಥ್‌ ನೀಡಿದರೆ, ಆರ್‌ಸಿಬಿ ಈ ಋತುವಿನಲ್ಲಿ ಮತ್ತೆ ಲಯ ಕಂಡುಕೊಳ್ಳಬಹುದು. ಆದರೆ, ಯಾರೂ ನೆರವಾಗುತ್ತಿಲ್ಲ. ಹೀಗಾಗಿ ವಿರಾಟ್ ಮೇಲೆ ಹೆಚ್ಚಿನ ಒತ್ತಡವಿದೆ. ಅವರು ತಮ್ಮ ಮೇಲೆ ಹೆಚ್ಚುವರಿ ಒತ್ತಡ ಹೇರಿಕೊಳ್ಳುತ್ತಿದ್ದಾರೆ ಎಂದು ನನಗನಿಸುತ್ತಿದೆ. ಇತರ ಕೆಲವು ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವಿರಾಟ್‌ಗೆ ಸಹಾಯ ಮಾಡಬೇಕಾಗಿದೆ,” ಎಂದು ಸ್ಮಿತ್‌ ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ.

ಕೊಹ್ಲಿ ಒಬ್ಬರೇ ಎಲ್ಲಾ ಪಂದ್ಯಗಳಲ್ಲೂ ರನ್ ಗಳಿಸಲ್ಲ. ಹೀಗಾಗಿ ತಂಡದ ಇತರ ಬ್ಯಾಟರ್‌ಗಳು ಸಾಮೂಹಿಕ ಪ್ರಯತ್ನ ಹಾಕಬೇಕು ಎಂದು ಸ್ಮಿತ್ ಎಚ್ಚರಿಸಿದ್ದಾರೆ. “ವಿರಾಟ್‌ ಐಪಿಎಲ್‌ನಲ್ಲಿ ತಮ್ಮ ಅಭಿಯಾನವನ್ನು ಉತ್ತಮವಾಗಿ ಪ್ರಾರಂಭಿಸಿದ್ದಾರೆ. ಅವರಿಗೆ ಸ್ವಲ್ಪ ಬೆಂಬಲದ ಅಗತ್ಯವಿದೆ. ಅವರು ಪ್ರತಿ ಸಂದರ್ಭದಲ್ಲೂ ರನ್ ಗಳಿಸಲು ಆಗುವುದಿಲ್ಲ,” ಎಂದು ಸ್ಮಿತ್ ಹೇಳಿದ್ದಾರೆ.

ಕೊಹ್ಲಿ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಕುರಿತ ಟೀಕೆಗಳಿಗೆ ಉತ್ತರ ನೀಡಿದ ಸ್ಮಿತ್, ವಿರಾಟ್‌ ಅವರಂತೆ ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಆಡುವ ಆಟಗಾರ ವಿಶ್ವದಲ್ಲಿ ಬೇರೊಬ್ಬರಿಲ್ಲ ಎಂದು ಹೇಳಿದರು. “ವಿರಾಟ್ ಒಬ್ಬ ಅದ್ಭುತ ಆಟಗಾರ. ಅವರು ನಿಜವಾಗಿಯೂ ಉತ್ತಮವಾಗಿ ಆಡುತ್ತಿದ್ದಾರೆ. ಬಹುಶಃ, ವಿಶ್ವದ ಇತರ ಆಟಗಾರರಿಗಿಂತ ಉತ್ತಮವಾಗಿ ವಿರಾಟ್‌ ಆಡುತ್ತಿದ್ದಾರೆ. ಆಟದ ಪರಿಸ್ಥಿತಿಗಳನ್ನು ಸರಿಯಾಗಿ ಗಮನಿಸಿ, ಅದಕ್ಕೆ ಅನುಗುಣವಾಗಿ ಆಡುವ ಮತ್ತೊಬ್ಬ ಆಟಗಾರ ಇರಲಿಕ್ಕಿಲ್ಲ,” ಎಂದು ಸ್ಮಿತ್ ಹೇಳಿದ್ದಾರೆ.

IPL_Entry_Point