ಆರ್‌ಸಿಬಿ ಕ್ಯಾಮರೂನ್ ಗ್ರೀನ್ ಕೈಬಿಟ್ಟು ಇಬ್ಬರು ವಿದೇಶಿ ಬೌಲರ್‌ಗಳನ್ನು ಆಡಿಸಬೇಕು; ಸ್ಟುವರ್ಟ್ ಬ್ರಾಡ್ ಪ್ರಾಮಾಣಿಕ ಸಲಹೆ-stuart broad advises rcb to drop cameron green bring reece topley and lockie ferguson into playing eleven ipl 2024 jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ಕ್ಯಾಮರೂನ್ ಗ್ರೀನ್ ಕೈಬಿಟ್ಟು ಇಬ್ಬರು ವಿದೇಶಿ ಬೌಲರ್‌ಗಳನ್ನು ಆಡಿಸಬೇಕು; ಸ್ಟುವರ್ಟ್ ಬ್ರಾಡ್ ಪ್ರಾಮಾಣಿಕ ಸಲಹೆ

ಆರ್‌ಸಿಬಿ ಕ್ಯಾಮರೂನ್ ಗ್ರೀನ್ ಕೈಬಿಟ್ಟು ಇಬ್ಬರು ವಿದೇಶಿ ಬೌಲರ್‌ಗಳನ್ನು ಆಡಿಸಬೇಕು; ಸ್ಟುವರ್ಟ್ ಬ್ರಾಡ್ ಪ್ರಾಮಾಣಿಕ ಸಲಹೆ

Stuart Broad‌: ಮುಂಬೈ ಇಂಡಿಯನ್ಸ್ ತಂಡದಿಂದ ಟ್ರೇಡ್‌ ಆಗಿ ಪ್ರಸಕ್ತ ಋತುವಿನಲ್ಲಿ ಆರ್‌ಸಿಬಿ ಸೇರಿಕೊಂಡ ಕ್ಯಾಮರೂನ್ ಗ್ರೀನ್ ಅವರನ್ನು ಆಡುವ ಬಳಗದಿಂದ ಕೈಬಿಡುವಂತೆ ಆರ್‌ಸಿಬಿಗೆ ಇಂಗ್ಲೆಂಡ್‌ ಮಾಜಿ ವೇಗಿ ಸ್ಟುವರ್ಟ್‌ ಬ್ರಾಡ್ ಸಲಹೆ ನೀಡಿದ್ದಾರೆ.

ಆರ್‌ಸಿಬಿ ಕ್ಯಾಮರೂನ್ ಗ್ರೀನ್ ಕೈಬಿಟ್ಟು ಇಬ್ಬರು ವಿದೇಶಿ ಬೌಲರ್‌ಗಳನ್ನು ಆಡಿಸಬೇಕು
ಆರ್‌ಸಿಬಿ ಕ್ಯಾಮರೂನ್ ಗ್ರೀನ್ ಕೈಬಿಟ್ಟು ಇಬ್ಬರು ವಿದೇಶಿ ಬೌಲರ್‌ಗಳನ್ನು ಆಡಿಸಬೇಕು (PTI)

ಐಪಿಎಲ್‌ 2024ರ ಹೊಸ ಋತು ಬಂದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅದೃಷ್ಟ ಮಾತ್ರ ಬದಲಾಗಿಲ್ಲ. ಅದೇ ರಾಗ ಅದೇ ತಾಳ ಎಂಬಂತೆ, ಕಳೆದ ಹಲವು ವರ್ಷಗಳಿಂದ ಕಳಪೆ ಬೌಲಿಂಗ್ ಹೊಂದಿರುವ ತಂಡವು ಈ ಬಾರಿಯೂ ಅದೇ ಸಮಸ್ಯೆ ಎದುರಿಸುತ್ತಿದೆ. ಹೊಸ ಬೌಲರ್‌ಗಳು ಬಂದರೂ, ತಂಡದ ಹೆಸರು ಬದಲಾದರೂ, ಹಣೆಬರಹ ಬದಲಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ಎರಡರಲ್ಲಿ ತಂಡ ಸೋಲೊಪ್ಪಿರುವುದು ಇದಕ್ಕೆ ಸಾಕ್ಷಿ.

ತಂಡದ ಗೆಲುವಿಗೆ ಸಂಘಟಿತ ಪ್ರಯತ್ನ ಆಗುತ್ತಿಲ್ಲ. ಬ್ಯಾಟಿಂಗ್‌ ವಿಭಾಗದಲ್ಲಿ ವಿರಾಟ್ ಕೊಹ್ಲಿ ಮೇಲೆ ತಂಡವು ಅತಿಯಾಗಿ ನೆಚ್ಚಿಕೊಂಡಿದ್ದರೆ, ಬೌಲಿಂಗ್‌ ವಿಭಾಗ ತೀರಾ ಸಪ್ಪೆಯಾಗಿದೆ. ಪ್ರಬಲ ಸ್ಪಿನ್ನರ್‌ ಅನುಪಸ್ಥಿತಿ ಒಂದೆಡೆಯಾದರೆ, ವೇಗಿಗಳು ಕ್ಲಿಕ್‌ ಆಗುತ್ತಿಲ್ಲ. ಬದಲಿ ಆಯ್ಕೆಗಳನ್ನು ಪ್ರಯತ್ನಿಸಲು ತಂಡ ಮುಂದಾಗುತ್ತಿಲ್ಲ. ಇದೀಗ ಲಕ್ನೋ ವಿರುದ್ಧದ ಪಂದ್ಯಕ್ಕೆ ತಂಡವು ಬೌಲಿಂಗ್‌ ವಿಭಾಗದಲ್ಲಿ‌ ಅಗತ್ಯ ಬದಲಾವಣೆ ಮಾಡಲೇಬೇಕಿದೆ.

ಹರಾಜಿನಲ್ಲಿ 11.50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ ಅಲ್ಜಾರಿ ಜೋಸೆಫ್, ಈವರೆಗೆ ದುಬಾರಿಯಾಗಿದ್ದಾರೆ. ಕೇವಲ 1 ವಿಕೆಟ್ ಪಡೆದು 11.9ರ ಎಕಾನಮಿ ರೇಟ್‌ನಲ್ಲಿ ರನ್‌ ಸೋರಿಕೆ ಮಾಡಿದ್ದಾರೆ. ಅತ್ತ ಬಲಿಷ್ಠ ಬ್ಯಾಟರ್‌ಗಳಾದ ಫಾಫ್ ಡು ಪ್ಲೆಸಿಸ್, ಕ್ಯಾಮರೂನ್ ಗ್ರೀನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಇನ್ನೂ ಪ್ರಭಾವ ಬೀರಿಲ್ಲ. ಬೌಲಿಂಗ್‌ ಅಂತೂ ನೀರಸವಾಗಿದೆ. ಹೀಗಾಗಿ ತಂಡದಲ್ಲಿ ಅಗತ್ಯ ಬದಲಾವಣೆ ಮಾಡಲು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದಾರೆ.

ಇಬ್ಬರು ವಿದೇಶಿ ಬೌಲರ್‌ಗಳನ್ನು ಕಣಕ್ಕಿಳಿಸಲು ಸ್ಟುವರ್ಟ್‌ ಬ್ರಾಡ್‌ ಸಲಹೆ

ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್, ಸಂವಾದವೊಂದರದಲ್ಲಿ ಹಿಂದೂಸ್ತಾನ್ ಟೈಮ್ಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಆರ್‌ಸಿಬಿ ತಂಡದ ಕಳಪೆ ಪ್ರದರ್ಶನ ಕುರಿತು ಮಾತನಾಡಿದ ಅವರು, ಆಡುವ ಬಳಗದಲ್ಲಿ ಬದಲಾವಣೆ ಕುರಿತು ಸಲಹೆ ನೀಡಿದ್ದಾರೆ.

ಪ್ರಸಕ್ತ ಋತುವಿನಲ್ಲಿ ಆರ್‌ಸಿಬಿ ತಂಡವು ಗೆಲುವಿಗಾಗಿ ನಡೆಸುತ್ತಿರುವ ಹೋರಾಟದ ಕುರಿತು ಮಾತನಾಡಿದ ಬ್ರಾಡ್, ತಂಡದ ಬ್ಯಾಟಿಂಗ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರತಿಪಾದಿಸಿದರು. ನಾಯಕ ಫಾಫ್ ಮತ್ತು ಮ್ಯಾಕ್ಸ್‌ವೆಲ್ ನಿಧಾನಗತಿಯ ಆರಂಭ ಪಡೆದಿದ್ದರೂ, ಕೊಹ್ಲಿ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ರನ್ ಗಳಿಸುವತ್ತ ಗಮನ ಹರಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Video: ವಾಂಖೆಡೆ ಮೈದಾನಕ್ಕೆ ನುಗ್ಗಿದ ಹಿಟ್‌ಮ್ಯಾನ್ ಅಭಿಮಾನಿ; ಬೆಚ್ಚಿಬಿದ್ದ ರೋಹಿತ್ ಶರ್ಮಾ ಮಾಡಿದ್ದೇನು ನೋಡಿ

“ತಂಡದಲ್ಲಿ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಎಂದು ನನಗನಿಸುತ್ತಿದೆ. ಅವರು ಟಿ20 ವಿಶ್ವಕಪ್ ತಂಡದಲ್ಲಿರಲು ಬಯಸುತ್ತಾರೆ. ಹೀಗಾಗಿ ರನ್ ಗಳಿಸಲಿದ್ದಾರೆ. ತಂಡದ ಬ್ಯಾಟಿಂಗ್ ಉತ್ತಮವಾಗಿದೆ. ವಿರಾಟ್‌ ಬಳಿಕ ಅಲ್ಲಿ ಮ್ಯಾಕ್ಸ್‌ವೆಲ್ ಅಥವಾ ಫಾಫ್ ಇದ್ದಾರೆ,” ಎಂದು ಅವರು ಹೇಳಿದರು.

ಆರ್‌ಸಿಬಿಯ ವೇಗದ ಬೌಲಿಂಗ್‌ನಲ್ಲಿ ಸಮಸ್ಯೆ ಇರುವ ಕುರಿತು ಪ್ರಾಮಾಣಿಕ ಅಭಿಪ್ರಾಯ ನೀಡಿದ ವೇಗಿ, ಆಡುವ ಬಳಗಕ್ಕೆ ಇನ್ನಿಬ್ಬರು ವಿದೇಶಿ ವೇಗಿಗಳನ್ನು ಕರೆತರಲು ಸಲಹೆ ನೀಡಿದ್ದಾರೆ.

"ತಂಡವು ಇಬ್ಬರು ವಿದೇಶಿ ಬೌಲರ್‌ಗಳನ್ನು ಆಡಿಸಬೇಕು. ತಂಡದ ಬೌಲಿಂಗ್ ಬಲಿಷ್ಟವಾಗಿಲ್ಲ ಎಂದು ನನಗನಿಸುತ್ತದೆ. ಸದ್ಯ ಅವರಲ್ಲಿರುವ ಬೌಲರ್‌ಗಳೊಂದಿಗೆ ಹೆಚ್ಚು ಪಂದ್ಯಗಳನ್ನು ಗೆಲ್ಲುಬಹುದು ಎಂದು ಅನಿಸುತ್ತಿಲ್ಲ. ಹೀಗಾಗಿ ರೀಸ್ ಟಾಪ್ಲೆ ಮತ್ತು ಲಾಕಿ ಫರ್ಗುಸನ್ ಅವರನ್ನು ಎಡಗೈ ಸ್ವಿಂಗ್ ಬೌಲರ್ ಆಗಿ ಕರೆತರಬೇಕಾಗಿದೆ," ಎಂದು ಅವರು ಪ್ರತಿಪಾದಿಸಿದರು.

ಗ್ರೀನ್‌ ಬೇಡ

ಇದೇ ವೇಳೆ ಮುಂಬೈ ಇಂಡಿಯನ್ಸ್‌ ತಂಡದಿಂದ 17.5 ಕೋಟಿ ರೂಪಾಯಿ ಕೊಟ್ಟು ಕರೆತಂದ ಕ್ಯಾಮರೂನ್ ಗ್ರೀನ್ ಅವರನ್ನು ಕೈಬಿಡುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಬ್ರಾಡ್ ಸಲಹೆ ನೀಡಿದರು. "ಕ್ಯಾಮರೂನ್ ಗ್ರೀನ್ ಅವರನ್ನು ಅಷ್ಟು ದೊಡ್ಡ ಮೊತ್ತಕ್ಕೆ ಖರೀದಿಸುವ ನಿರ್ಧಾರವನ್ನು ಯಾರು ತೆಗೆದುಕೊಂಡರೂ, ಅವರನ್ನು ಆಡುವ ಬಳಗದಿಂದ ಕೈಬಿಡುವುದು ಸರಿಯಾದ ನಿರ್ಧಾರವಾಗಿದೆ. ಈಗ ತಂಡವು ಸಮತೋಲಿತವಾಗಿದೆ ಎಂದು ನಾನು ಭಾವಿಸುವುದಿಲ್ಲ. ಹೀಗಾಗಿ ಇಬ್ಬರು ವಿದೇಶಿ ಬೌಲರ್‌ಗಳನ್ನು ಕರೆತಂದು ನೋಡಿ," ಎಂದು ಬ್ರಾಡ್ ಆರ್‌ಸಿಬಿಗೆ ಸಲಹೆ ನೀಡಿದ್ದಾರೆ.