ಕೂಚ್ ಬೆಹಾರ್ ಟ್ರೋಫಿ: ಹ್ಯಾಟ್ರಿಕ್ ಜೊತೆಗೆ ಇನ್ನಿಂಗ್ಸ್ನ 10 ವಿಕೆಟ್ ಉರುಳಿಸಿ ಇತಿಹಾಸ ನಿರ್ಮಿಸಿದ ಬಿಹಾರದ ಸುಮನ್ ಕುಮಾರ್
Suman Kumar: ಕೂಚ್ ಬೆಹರ್ ಟ್ರೋಫಿಯಲ್ಲಿ ವೇಗದ ಬೌಲರ್ ಸುಮನ್ ಕುಮಾರ್ ಅವರು ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಜೊತೆಗೆ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ್ದಾರೆ.
![ಕೂಚ್ ಬೆಹಾರ್ ಟ್ರೋಫಿ: ಹ್ಯಾಟ್ರಿಕ್ ಜೊತೆಗೆ ಇನ್ನಿಂಗ್ಸ್ನ 10 ವಿಕೆಟ್ ಉರುಳಿಸಿ ದಾಖಲೆ ಬರೆದ ಬಿಹಾರದ ಸುಮನ್ ಕುಮಾರ್! ಕೂಚ್ ಬೆಹಾರ್ ಟ್ರೋಫಿ: ಹ್ಯಾಟ್ರಿಕ್ ಜೊತೆಗೆ ಇನ್ನಿಂಗ್ಸ್ನ 10 ವಿಕೆಟ್ ಉರುಳಿಸಿ ದಾಖಲೆ ಬರೆದ ಬಿಹಾರದ ಸುಮನ್ ಕುಮಾರ್!](https://images.hindustantimes.com/kannada/img/2024/12/01/550x309/Suman_Kumar_1733030546790_1733038044524.jpg)
ಬಿಹಾರದ ವೇಗದ ಬೌಲರ್ ಸುಮನ್ ಕುಮಾರ್ (Suman Kumar) ಅಂಡರ್-19 ಕೂಚ್ ಬೆಹಾರ್ ಟ್ರೋಫಿಯಲ್ಲಿ (U19 Cooch Behar Trophy) ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ನೂತನ ಇತಿಹಾಸ ನಿರ್ಮಿಸಿದ್ದಾರೆ. ಇದೇ ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಮತ್ತೊಂದು ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಪಾಟ್ನಾದ ಮೊಯಿನ್-ಉಲ್-ಹಕ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಕಿಲ್ಲರ್ ಬೌಲಿಂಗ್ ಮಾಡಿದ ಸುಮನ್ ರಾಜಸ್ಥಾನ ತಂಡಕ್ಕೆ ಫಾಲೋ-ಆನ್ ಹೇರಲು ನೆರವಾಗಿದ್ದಾರೆ. ಬಿಹಾರ ಮೊದಲ ಇನ್ನಿಂಗ್ಸ್‌ನಲ್ಲಿ 467 ರನ್ ಗಳಿಸಿತ್ತು. ಇದೀಗ ರಾಜಸ್ಥಾನ ರಾಯಲ್ಸ್ ಕೇವಲ 182 ರನ್ಗಳಿಗೆ ಕುಸಿಯಿತು.
22ನೇ ಓವರ್ನಲ್ಲಿ ಮೊದಲ ವಿಕೆಟ್ ಪಡೆದ ಸುಮನ್, ತನ್ನ 2ನೇ ವಿಕೆಟ್ಗೆ 10 ಓವರ್ಗಳು ಕಾಯಬೇಕಾಯಿತು. ರಾಜಸ್ಥಾನದ ಆರಂಭಿಕ ಆಟಗಾರ ಕಟಾರಿಯಾ ಮತ್ತು ನಾಯಕ ತೋಶಿತ್ ಅವರನ್ನು ಹೊರದಬ್ಬಿದ ಸುಮನ್, ಆ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ 82 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಲ್ಲದೆ, 36ನೇ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಉರುಳಿಸುವ ಮೂಲಕ ಗಮನ ಸೆಳೆದರು. 44ನೇ ಓವರ್ನಲ್ಲಿ ರಾಜಸ್ಥಾನ ಸತತ 2 ವಿಕೆಟ್ ಕಬಳಿಸಿದ ಸುಮನ್, 66ನೇ, 74ನೇ, 76ನೇ ಓವರ್ನಲ್ಲಿ 8, 9, 10ನೇ ವಿಕೆಟ್ ಪಡೆದರು. ಇದರೊಂದಿಗೆ ರಾಜಸ್ಥಾನ 182 ರನ್ಗಳಿಗೆ ಸರ್ವಪತನ ಕಂಡಿತು.
ಭಾರತದ ಎರಡನೇ ಆಟಗಾರ ಸುಮನ್
ಪ್ರಸ್ತುತ ಭಾರತೀಯ ದೇಶೀಯ ಕ್ರಿಕೆಟ್ನಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ 10 ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಸುಮನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಹರಿಯಾಣದ ವೇಗದ ಬೌಲರ್ ಅಂಶುಲ್ ಕಾಂಬೋಜ್ ಈ ಸಾಧನೆ ಮಾಡಿದ್ದರು. ಕೇರಳ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕಾಂಬೋಜ್ 10 ವಿಕೆಟ್ ಕಬಳಿಸಿದ್ದರು. ಇದು ಪ್ರಥಮ ದರ್ಜೆ ಪಂದ್ಯವಾಗಿತ್ತು. ಇದಾಗಿಯೂ ಅಂಡರ್ 14, ಅಂಡರ್ 16, ಅಂಡರ್ 19 ಮತ್ತು ಅಂಡರ್ 23 ಪಂದ್ಯಗಳು, ಪ್ರಥಮ ದರ್ಜೆ ಅಥವಾ ಲಿಸ್ಟ್ ಎ ಕ್ರಿಕೆಟ್‌ಗೆ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು. ಸುಮನ್ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಬಿಸಿಎ (ಬಿಹಾರ ಕ್ರಿಕೆಟ್ ಸಂಸ್ಥೆ) ಅಧ್ಯಕ್ಷ ರಾಕೇಶ್ ತಿವಾರಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಕೇಶ್ ಈ ಬಗ್ಗೆ ಮಾತನಾಡಿ, 'ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿದ ಸುಮನ್ ಅವರ ಐತಿಹಾಸಿಕ ಸಾಧನೆ ಬಿಹಾರ ಕ್ರಿಕೆಟ್‌ಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅವರ ಸಮರ್ಪಣೆ ಮತ್ತು ಪ್ರತಿಭೆಯು ಬಿಹಾರದಲ್ಲಿ ಬೆಳೆಯುತ್ತಿರುವ ಕ್ರಿಕೆಟ್ ವಾತಾವರಣಕ್ಕೆ ಸಾಕ್ಷಿಯಾಗಿದೆ. ರಾಜಸ್ಥಾನದ ಮೊದಲ ಇನ್ನಿಂಗ್ಸ್‌ನಲ್ಲಿ ಸುಮನ್ 33.5 ಓವರ್‌ಗಳನ್ನು ಬೌಲ್ ಮಾಡಿದರು. 53 ರನ್ ಬಿಟ್ಟುಕೊಟ್ಟು 10 ವಿಕೆಟ್ ಪಡೆದ ಸುಮನ್, 1.57ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರು. ಆತ ಒಟ್ಟು 10 ಎಕ್ಸ್ಟ್ರಾ ರನ್ಗಳನ್ನು ಬಿಟ್ಟುಕೊಟ್ಟರು. ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚಿದ ಸುಮನ್, 56 ಎಸೆತಗಳಲ್ಲಿ ನಾಲ್ಕು ಬೌಂಡರಿ ಸೇರಿದಂತೆ 22 ರನ್ ಗಳಿಸುವ ಮೂಲಕ ಬಿಹಾರದ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಬ್ಯಾಟ್‌ನಿಂದ ಕೊಡುಗೆ ನೀಡಿದರು.
ಹ್ಯಾಟ್ರಿಕ್ ವಿಕೆಟ್ ಸಾಧನೆ
ಇನ್ನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಪಡೆದ ಅವಧಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎಂಬ ಕೀರ್ತಿಗೆ ಸುಮನ್ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಭಾರತದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು 10 ವಿಕೆಟ್ ಕಬಳಿಸಿದ ಮೊದಲ ಬೌಲರ್ ಆಗಿದ್ದಾರೆ. ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ನ ಅಜಾಜ್ ಪಟೇಲ್ ಅವರಿದ್ದಾರೆ. ಆದರೆ ಇವರ್ಯಾರು ಸಹ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದಿದ್ದದರೂ ಹ್ಯಾಟ್ರಿಕ್ ವಿಕೆಟ್ ಪಡೆದಿರಲಿಲ್ಲ. ಹಾಗಾಗಿ ಸುಮನ್ ಈ ದಾಖಲೆ ಬರೆದ ವಿಶ್ವದ ಮೊದಲ ಕ್ರಿಕೆಟಿಗ.
![Whats_app_banner Whats_app_banner](https://kannada.hindustantimes.com/static-content/1y/wBanner.png)