ಅಲ್ಲಯ್ಯಾ, ಶ್ರೇಯಸ್ ಅಯ್ಯರ್ ಕ್ರೆಡಿಟ್ ಕಿತ್ಕೊಂಡ್ಯಲ್ಲ ಇದು ನ್ಯಾಯನಾ; ಗಂಭೀರ್ ವಿರುದ್ಧ ಗವಾಸ್ಕರ್ ಕೆಂಡಾಮಂಡಲ
ಶ್ರೇಯಸ್ ಅಯ್ಯರ್ ನಾಯಕನಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದರೂ ಅದರ ಕ್ರೆಡಿಟ್ ಪಡೆದಿದ್ದು ಬೇರೆಯವರು ಎಂದು ಗೌತಮ್ ಗಂಭೀರ್ ವಿರುದ್ಧ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

2025ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. 2011ರ ನಂತರ ಇದೇ ಮೊದಲ ಬಾರಿಗೆ ಪಿಬಿಕೆಎಸ್ ಪ್ಲೇಆಫ್ಗೆ ಎಂಟ್ರಿಕೊಟ್ಟಿದೆ. ಕೊನೆಯದಾಗಿ ಜಾರ್ಜ್ ಬೈಲಿ ನಾಯಕತ್ವದಲ್ಲಿ ಪಂಜಾಬ್ ಈ ಸಾಧನೆ ಮಾಡಿತ್ತು. ಅಂದು ರನ್ನರ್ಅಪ್ ಕೂಡ ಆಗಿತ್ತು. ಇದೀಗ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೊದಲ ಬಾರಿಗೆ ಪ್ಲೇಆಫ್ಗೆ ಲಗ್ಗೆ ಇಟ್ಟಿದೆ. ಅಲ್ಲದೆ, ಯುವರಾಜ್ ಸಿಂಗ್, ಜಾರ್ಜ್ ಬೈಲಿ ನಂತರ ಅಯ್ಯರ್ ಅವರು ಪ್ರೀತಿ ಜಿಂಟಾ ಒಡೆತನದ ತಂಡವನ್ನು ಪ್ಲೇಆಫ್ಗೆ ಮುನ್ನಡೆಸಿದ 3ನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಶ್ರೇಯಸ್ ಅಯ್ಯರ್ ಅವರು ಸಾಧನೆ ಕೊಂಡಾಡುತ್ತಾ, ಗೌತಮ್ ಗಂಭೀರ್ ಅವರಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್.
ತನ್ನ ಅದ್ಭುತ ನಾಯಕತ್ವ, ತಂತ್ರ, ಗೇಮ್ ಪ್ಲಾನ್ಗಳ ಕಾರಣ ಶ್ರೇಯಸ್ ಅಯ್ಯರ್ ಪಂಜಾಜ್ ಕಿಂಗ್ಸ್ ತಂಡವನ್ನು ಈ ಹಂತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪಿಬಿಕೆಎಸ್ ಪ್ಲೇಆಫ್ ಪ್ರವೇಶಿಸಿದ ಬೆನ್ನಲ್ಲೇ ಗೌತಮ್ ಗಂಭೀರ್ರನ್ನು ಗುರಿಯಾಗಿಸಿ ಕಿಡಿಕಾರಿದ್ದಾರೆ. ಮೈದಾನದಲ್ಲಿದ್ದು ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ ಶ್ರೇಯಸ್ ನಾಯಕತ್ವದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಚಾಂಪಿಯನ್ ಆಗಿತ್ತು. ಆದರೆ ಕ್ರೆಡಿಟ್ ಪಡೆದಿದ್ದು ಮಾತ್ರ 2024ರಲ್ಲಿ ಕೆಕೆಆರ್ ಮೆಂಟರ್ ಆಗಿದ್ದ ಗೌತಮ್ ಗಂಭೀರ್. ಅಯ್ಯರ್ ಅರ್ಹರಾಗಿದ್ದರೂ ಅದನ್ನು ಗಂಭೀರ್ ಕಿತ್ತುಕೊಂಡ್ರು ಎನ್ನುವ ಅರ್ಥದಲ್ಲಿ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಪಂಜಾಬ್ ಕಿಂಗ್ಸ್ ಐಪಿಎಲ್ ಪ್ಲೇ ಆಫ್ಗೆ ಪ್ರವೇಶಿಸಿದೆ.
ಗಂಭೀರ್ ವಿರುದ್ಧ ಗವಾಸ್ಕರ್ ಕೆಂಡಾಮಂಡಲ
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, 'ಕಳೆದ ಆವೃತ್ತಿಯಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದ ಕೀರ್ತಿ ಶ್ರೇಯಸ್ ಅಯ್ಯರ್ಗೆ ಸಿಗಲಿಲ್ಲ. ಎಲ್ಲಾ ಕ್ರೆಡಿಟ್ ಅನ್ನು ಬೇರೊಬ್ಬರಿಗೆ ನೀಡಲಾಯಿತು. ಪಂದ್ಯದಲ್ಲಿ ನಾಯಕನೇ ಪ್ರಮುಖ ಪಾತ್ರ ವಹಿಸುತ್ತಾನೆ. ಡಗೌಟ್ನಲ್ಲಿ ಕುಳಿತು ಯಾರೂ ಗೆಲ್ಲಿಸಲು ಸಾಧ್ಯವಿಲ್ಲ ಎಂದು ಗಂಭೀರ್ ಹೆಸರೇಳದೆ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಈ ವರ್ಷ ನೋಡಿ, ಎಲ್ಲಾ ಕ್ರೆಡಿಟ್ ಅಯ್ಯರ್ ಅವರಿಗೆ ಸಿಗಲಿದೆ. ರಿಕಿ ಪಾಂಟಿಂಗ್ ಕೋಚ್ ಆಗಿದ್ದರೂ ಪಂಜಾಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಯಾರೂ ಹೇಳುತ್ತಿಲ್ಲ. ಹೇಳುವುದೂ ಇಲ್ಲ ಎಂದು ಹೇಳಿದ್ದಾರೆ. ಅಲ್ಲಯ್ಯಾ, ಶ್ರೇಯಸ್ ಅಯ್ಯರ್ ಕ್ರೆಡಿಟ್ ಕಿತ್ಕೊಂಡ್ಯಲ್ಲ ಇದು ನ್ಯಾಯನಾ ಎಂದು ಗಂಭೀರ್ಗೆ ಪರೋಕ್ಷವಾಗಿ ಗವಾಸ್ಕರ್ ಚಾಟಿ ಬೀಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇದಕ್ಕೆ ಬೆಂಬಲ ವ್ಯಕ್ತವಾಗಿದೆ.
ಶ್ರೇಯಸ್ ಅಯ್ಯರ್ ದಾಖಲೆ
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ 11 ವರ್ಷಗಳ ಬಳಿಕ ಮೊದಲ ಬಾರಿಗೆ ಐಪಿಎಲ್ ಪ್ಲೇ ಆಫ್ ತಲುಪಿದೆ. ಇದರೊಂದಿಗೆ ಟೂರ್ನಿಯ ಇತಿಹಾಸದಲ್ಲಿ ಮೂರು ವಿಭಿನ್ನ ಫ್ರಾಂಚೈಸಿಗಳನ್ನು ಐಪಿಎಲ್ ಪ್ಲೇಫ್ಗೆ ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಅಯ್ಯರ್ ಪಾತ್ರರಾಗಿದ್ದಾರೆ. ಈ ಪೈಕಿ ಎರಡು ಸಲ ಸತತವಾಗಿ ಪ್ಲೇಆಫ್ ಪ್ರವೇಶಿಸಿವೆ. 2023ರ ಐಪಿಎಲ್ನಲ್ಲಿ ಬೆನ್ನುನೋವಿನಿಂದ ಐಪಿಎಲ್ನಿಂದ ಹೊರಗುಳಿದಿದ್ದ ಅಯ್ಯರ್, 2024 ರಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿ ಪ್ರಶಸ್ತಿ ಗೆದ್ದುಕೊಂಡರು. ಅಯ್ಯರ್ ಚಾಂಪಿಯನ್ ಮಾಡುವುದಕ್ಕೂ ಮುನ್ನ ಕೆಕೆಆರ್ ಹಿಂದಿನ ಎರಡು ಆವೃತ್ತಿಗಳಲ್ಲಿ ಏಳನೇ ಸ್ಥಾನದಲ್ಲಿತ್ತು.
ಈ ಅದ್ಭುತ ಪ್ರದರ್ಶನದ ಹೊರತಾಗಿಯೂ ಕೆಕೆಆರ್ ಶ್ರೇಯಸ್ ಅವರನ್ನು ಉಳಿಸಿಕೊಳ್ಳಲಿಲ್ಲ. ಇದರ ನಂತರ, ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಶ್ರೇಯಸ್ ಅವರನ್ನು 26.75 ಕೋಟಿ ರೂ.ಗೆ ಖರೀದಿಸಿತು. ಈಗ ಶ್ರೇಯಸ್ ಅದ್ಭುತ ಪ್ರದರ್ಶನದೊಂದಿಗೆ ಪಂಜಾಬ್ ಕಿಂಗ್ಸ್ನ ಹಣವನ್ನು ಮರಳಿ ಪಡೆಯುತ್ತಿದ್ದಾರೆ. ಐಪಿಎಲ್ಗೂ ಮುನ್ನ ಅಯ್ಯರ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಪ್ರಸ್ತುತ ಐಪಿಎಲ್ನಲ್ಲಿ ಶ್ರೇಯಸ್ 12 ಪಂದ್ಯಗಳಲ್ಲಿ 174.70 ಸ್ಟ್ರೈಕ್ ರೇಟ್ನಲ್ಲಿ 435 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳೂ ಸೇರಿವೆ.
ವಿಭಾಗ