ಪಿಂಕ್ ಬಾಲ್ ಟೆಸ್ಟ್ಗೆ ಭಾರತದ ಪ್ಲೇಯಿಂಗ್ XIನಲ್ಲಿ ಮಹತ್ವದ 3 ಬದಲಾವಣೆ ಸೂಚಿಸಿದ ಸುನಿಲ್ ಗವಾಸ್ಕರ್
Sunil Gavaskar: ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತದ ಪ್ಲೇಯಿಂಗ್ 11ನಲ್ಲಿ ಮಹತ್ವದ ಮೂರು ಬದಲಾವಣೆ ಮಾಡಬಹುದು ಎಂದು ಸುನಿಲ್ ಗವಾಸ್ಕರ್ ಸೂಚಿಸಿದ್ದಾರೆ.
ಡಿಸೆಂಬರ್ 6ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ (India vs Australia) ನಡುವೆ 2ನೇ ಅಥವಾ ಪಿಂಕ್ ಬಾಲ್ ಟೆಸ್ಟ್ (Pink-Ball Test) ಆರಂಭವಾಗಲಿದೆ. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 295 ರನ್ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ (Team India) ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಆದರೆ ತವರಿನಲ್ಲಿ ಮುಖಭಂಗ ಅನುಭವಿಸಿರುವ ಆಸೀಸ್, ತಿರುಗೇಟು ನೀಡುವ ಲೆಕ್ಕಾಚಾರ ಹಾಕಿದೆ. ಈ ನಡುವೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ರೋಹಿತ್ ಪಡೆಯ ಪ್ಲೇಯಿಂಗ್ 11 ಕುರಿತು ಭವಿಷ್ಯ ನುಡಿದಿದ್ದಾರೆ.
ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಪ್ರವಾಸಿ ತಂಡ ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ರೋಹಿತ್ ತನ್ನ ಎರಡನೇ ಮಗುವಿನ ಜನನದ ಕಾರಣದಿಂದ ಮೊದಲ ಟೆಸ್ಟ್ಗೆ ಅಲಭ್ಯರಾಗಿದ್ದರು. WACA ಮೈದಾನದಲ್ಲಿ ಭಾರತ ತಂಡದ ಅಭ್ಯಾಸ ಪಂದ್ಯದ ವೇಳೆ ಗಿಲ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡರು. ಇದೀಗ ಇಬ್ಬರೂ ಪಿಂಕ್ ಬಾಲ್ ಟೆಸ್ಟ್ಗೆ ತಂಡ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ.
ರವೀಂದ್ರ ಜಡೇಜಾಗೂ ಅವಕಾಶ
ಸೆವೆನ್ (7) ಕ್ರಿಕೆಟ್ ವಾಹಿನಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಗವಾಸ್ಕರ್, ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಅವಕಾಶ ಪಡೆದು ನಿರಾಸ ಮೂಡಿಸಿದ ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಬದಲಿಗೆ ರೋಹಿತ್ ಮತ್ತು ಗಿಲ್ ಖಂಡಿತವಾಗಿಯೂ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುತ್ತಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಈಗ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಗವಾಸ್ಕರ್ ಭಾವಿಸಿದ್ದಾರೆ.
ಬ್ಯಾಟಿಂಗ್ ಕ್ರಮಾಂಕ ಬದಲಾಗಲಿದೆ ಎಂಬುದು ನನ್ನ ಭಾವನೆ. ರಾಹುಲ್ ಬದಲಿಗೆ ರೋಹಿತ್ ಶರ್ಮಾ ಬಂದರೆ, ಶುಭ್ಮನ್ ಗಿಲ್ ಮೂರನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. ಪಡಿಕ್ಕಲ್ ಮತ್ತು ಜುರೆಲ್ ಅವರು ತಂಡದಿಂದ ಹೊರಗುಳಿಯುತ್ತಾರೆ. ಆದರೆ ಕೆಎಲ್ ರಾಹುಲ್ 6ನೇ ಸ್ಥಾನದಲ್ಲಿ ಬ್ಯಾಟ್ ಮಾಡಲಿದ್ದಾರೆ. ಮತ್ತೊಂದು ಬದಲಾವಣೆ ಅಂದರೆ ರವೀಂದ್ರ ಜಡೇಜಾ ಅವರಿಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಜಡ್ಡುಗೆ ವಾಷಿಂಗ್ಟನ್ ಸುಂದರ್ ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಈ ಹಿಂದೆ ಆಸೀಸ್ ನೆಲದಲ್ಲಿ ಆಡಿದ್ದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತ ಹೀನಾಯ ಸೋಲು ಅನುಭವಿಸಿತ್ತು.
ಪಿಂಕ್ ಬಾಲ್ ಟೆಸ್ಟ್ಗೆ ಗವಾಸ್ಕರ್ ಸೂಚಿಸಿದ ಭಾರತದ ಪ್ಲೇಯಿಂಗ್ 11
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಸಿರಾಜ್.