ರಾಹುಲ್ ದ್ರಾವಿಡ್ ಹೆಸರು ಉಲ್ಲೇಖಿಸಿ ಗೌತಮ್ ಗಂಭೀರ್​​ಗೆ ಸುನಿಲ್ ಗವಾಸ್ಕರ್​ ‘ಗಂಭೀರ’ ಪ್ರಶ್ನೆ
ಕನ್ನಡ ಸುದ್ದಿ  /  ಕ್ರಿಕೆಟ್  /  ರಾಹುಲ್ ದ್ರಾವಿಡ್ ಹೆಸರು ಉಲ್ಲೇಖಿಸಿ ಗೌತಮ್ ಗಂಭೀರ್​​ಗೆ ಸುನಿಲ್ ಗವಾಸ್ಕರ್​ ‘ಗಂಭೀರ’ ಪ್ರಶ್ನೆ

ರಾಹುಲ್ ದ್ರಾವಿಡ್ ಹೆಸರು ಉಲ್ಲೇಖಿಸಿ ಗೌತಮ್ ಗಂಭೀರ್​​ಗೆ ಸುನಿಲ್ ಗವಾಸ್ಕರ್​ ‘ಗಂಭೀರ’ ಪ್ರಶ್ನೆ

ಟಿ20 ವಿಶ್ವಕಪ್ ಗೆದ್ದಾಗ ತನಗೆ ಘೋಷಿಸಿದ್ದ 2.5 ಕೋಟಿ ರೂಪಾಯಿ ಬಹುಮಾನ ಮೊತ್ತ ನಿರಾಕರಿಸಿ ಸಹಾಯಕ ಸಿಬ್ಬಂದಿಗೆ ನೀಡಿದಂತೆ ನನಗೂ ನೀಡಿ ಎಂದು ರಾಹುಲ್ ದ್ರಾವಿಡ್ ಬಿಸಿಸಿಐಗೆ ಸೂಚಿಸಿದ್ದರು. ಆದರೆ ಗಂಭೀರ್ ಕೂಡ ಅದೇ ರೀತಿ ನಿರಾಕರಿಸುತ್ತಾರಾ? ಹೀಗಂತ ಗವಾಸ್ಕರ್ ಪ್ರಶ್ನಿಸಿದ್ದಾರೆ.

ರಾಹುಲ್ ದ್ರಾವಿಡ್ ಹೆಸರು ಉಲ್ಲೇಖಿಸಿ ಗೌತಮ್ ಗಂಭೀರ್​​ಗೆ ಸುನಿಲ್ ಗವಾಸ್ಕರ್​ ‘ಗಂಭೀರ’ ಪ್ರಶ್ನೆ
ರಾಹುಲ್ ದ್ರಾವಿಡ್ ಹೆಸರು ಉಲ್ಲೇಖಿಸಿ ಗೌತಮ್ ಗಂಭೀರ್​​ಗೆ ಸುನಿಲ್ ಗವಾಸ್ಕರ್​ ‘ಗಂಭೀರ’ ಪ್ರಶ್ನೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತಕ್ಕೆ 58 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿತ್ತು. ಪ್ರಶಸ್ತಿ ಮೊತ್ತ ಸೇರಿ ಒಟ್ಟು ಬಹುಮಾನ 78 ಕೋಟಿ ರೂಪಾಯಿ ತಂಡದ ಪಾಲಾಯಿತು. ಇದೀಗ ಮಾಜಿ ಭಾರತ ನಾಯಕ ಸುನಿಲ್ ಗವಾಸ್ಕರ್​ ಅವರು ಟೀಮ್ ಇಂಡಿಯಾ ಹೆಡ್​ಕೋಚ್ ಗೌತಮ್ ಗಂಭೀರ್ ಅವರಿಗೆ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಹಿಂದಿನ ಕೋಚ್ ರಾಹುಲ್ ದ್ರಾವಿಡ್​ಗೆ ಹೆಚ್ಚಿನ ಮೊತ್ತ ಸಿಕ್ಕಿದ್ದರೂ ಅವರು ಸಹಾಯಕ ಸಿಬ್ಬಂದಿಗೆ ಸಿಕ್ಕ ಮೊತ್ತದಷ್ಟೆ ಪಡೆದಿದ್ದರು. ಹೆಚ್ಚುವರಿ ಮೊತ್ತ ಪಡೆಯಲು ನಿರಾಕರಿಸಿದ್ದರು. ಇದೀಗ ದ್ರಾವಿಡ್​ರಂತೆ ಗಂಭೀರ್ ನಿರಾಕರಿಸುತ್ತಾರೆಯೇ ಎಂದು ಲಿಟ್ಲ್​​ ಮಾಸ್ಟರ್​ ಕೇಳಿದ್ದಾರೆ.

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ 2024ರ ಟಿ20 ವಿಶ್ವಕಪ್ ಗೆದ್ದಿತ್ತು. ಮಹತ್ವದ ಟ್ರೋಫಿ ಗೆದ್ದ ಬಳಿಕ ಭಾರತೀಯ ಕ್ರಿಕೆಟ್ ಮಂಡಳಿ ಘೋಷಿಸಿದ್ದ ಹೆಚ್ಚುವರಿ 2.5 ಕೋಟಿ ರೂಪಾಯಿ ಪಡೆಯಲು ದ್ರಾವಿಡ್ ನಿರಾಕರಿಸಿದ್ದರು. ತಮ್ಮ ಸಹಾಯಕ ಸಿಬ್ಬಂದಿಗೆ ನೀಡಿದ ಬಹುಮಾನದ ಬಹುಮಾನದ ಮೊತ್ತವನ್ನೇ ತನಗೂ ನೀಡುವಂತೆ ಬಿಸಿಸಿಐಗೆ ಕೋರಿದ್ದರು. ಅಂದರೆ ಸಮಾನಾದ ಪಾಲು ನೀಡುವಂತೆ ಸೂಚಿಸಿದ್ದರು. ಭಾರತ ಕಳೆದ ವರ್ಷ ಐಸಿಸಿ ಟ್ರೋಫಿ ಬರ ನೀಗಿಸಿದ ನಂತರ ಬಿಸಿಸಿಐ ಸಂಪೂರ್ಣ ತಂಡಕ್ಕೆ 125 ಕೋಟಿ ರೂಪಾಯಿ ಬಹುಮಾನ ಮೊತ್ತ ಘೋಷಿಸಿತ್ತು.

ಗಂಭೀರ್​ ಇನ್ನೂ ಪ್ರತಿಕ್ರಿಯಿಸಿಲ್ಲವೇಕೆ ಎಂದ ಗವಾಸ್ಕರ್

ಗೌತಮ್ ಗಂಭೀರ್ ಅವರು ದ್ರಾವಿಡ್​ರನ್ನು ಅನುಸರಿಸುತ್ತಾರೆಯೇ ಎಂದು ಸುನಿಲ್ ಗವಾಸ್ಕರ್ ಕೇಳಿದ್ದಾರೆ. ಬಿಸಿಸಿಐ ನೀಡುತ್ತಿರುವ ಬಹುಮಾನದ ಹಣದ ಬಗ್ಗೆ ಗಂಭೀರ್ ಇನ್ನೂ ಪ್ರತಿಕ್ರಿಯಿಸದಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಮಂಡಳಿಯು ಅಧಿಕೃತ ಹೇಳಿಕೆಯಲ್ಲಿ ಒಟ್ಟು ಬಹುಮಾನದ ಹಣ 58 ಕೋಟಿ ರೂಪಾಯಿ ಎಂದು ಘೋಷಿಸಿದೆ. ಆದರೆ ಗಂಭೀರ್ ಮತ್ತು ಉಳಿದ ಸಹಾಯಕ ಸಿಬ್ಬಂದಿಗೆ ಎಷ್ಟು ಹಣ ನೀಡಲಾಗುತ್ತಿದೆ ಎಂಬುದು ಇನ್ನೂ ತಿಳಿದಿಲ್ಲ. ಈ ಬಗ್ಗೆ ಸ್ಪೋರ್ಟ್ಸ್​​ ಸ್ಟಾರ್​​ ಕಾಲಮ್​ನಲ್ಲಿ ಸುನಿಲ್ ಗವಾಸ್ಕರ್​ ಅವರು ಉಲ್ಲೇಖಿಸಿದ್ದು, ಐಸಿಸಿ ಟಿ20 ವಿಶ್ವಕಪ್ ಗೆಲುವು ಮತ್ತು ಬಹುಮಾನ ಹಣದ ಬಗ್ಗೆ ಮಂಡಳಿಯ ಘೋಷಣೆಯ ನಂತರ ರಾಹುಲ್ ದ್ರಾವಿಡ್ ತನ್ನ ತರಬೇತಿ ಸಿಬ್ಬಂದಿಗಿಂತ ಹೆಚ್ಚಿನದನ್ನು ಸ್ವೀಕರಿಸಲು ನಿರಾಕರಿಸಿದ್ದರು ಎಂದಿದ್ದಾರೆ.

ಬಿಸಿಸಿಐ ಶ್ಲಾಘಿಸಿದ ಸುನಿಲ್ ಗವಾಸ್ಕರ್

‘ವಾಸ್ತವವಾಗಿ, ತನಗೆ ಸಿಕ್ಕ ಬಹುಮಾನ ಮೊತ್ತ ನಿರಾಕರಿಸಿ ತನ್ನ ಸಹಾಯಕ ಸಿಬ್ಬಂದಿ ಜೊತೆಗೆ ಸಮನಾಗಿ ಸಮಾನವಾಗಿ ಹಂಚಿಕೊಂಡರು. ಬಿಸಿಸಿಐ ಚಾಂಪಿಯನ್ಸ್ ಟ್ರೋಫಿ ಬಹುಮಾನ ಘೋಷಿಸಿ ಎರಡು ವಾರಗಳಾಗಿದೆ, ಆದರೆ ಪ್ರಸ್ತುತ ಕೋಚ್ ಗಂಭೀರ್ ಅವರು ದ್ರಾವಿಡ್ ಅವರಂತೆ ಮಾಡುತ್ತಾರೆಯೇ ಎಂಬುದರ ಬಗ್ಗೆ ನಾವು ಏನನ್ನೂ ಇದುವರೆಗೂ ಕೇಳಿಲ್ಲ. ಅಥವಾ ದ್ರಾವಿಡ್ ಒಳ್ಳೆಯ ಮಾದರಿಯಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ಆಟಗಾರರಿಗೆ ಬಹುಮಾನ ನೀಡಿದ್ದಕ್ಕಾಗಿ ಗವಾಸ್ಕರ್ ಬಿಸಿಸಿಐಗೆ ಶ್ಲಾಘಿಸಿದ್ದಾರೆ. ಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ 3ನೇ ಟ್ರೋಫಿಗೆ ಮುತ್ತಿಕ್ಕಿತ್ತು. ಭಾರತ ತಂಡ ಅಜೇಯವಾಗಿ ಟ್ರೋಫಿ ಜಯಿಸಿತ್ತು.

‘ಚಾಂಪಿಯನ್ಸ್ ಟ್ರೋಫಿ ಗೆದ್ದ ನಮ್ಮ ಹುಡುಗರಿಗೆ ಬಿಸಿಸಿಐ 58 ಕೋಟಿ ರೂಪಾಯಿ ಘೋಷಿಸಿದೆ. ಕಳೆದ ಜುಲೈನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಜಯಿಸಿದ ನಂತರ, ಬಿಸಿಸಿಐ 125 ಕೋಟಿ ರೂಪಾಯಿ ಘೋಷಿಸಿತ್ತು. ಇದು ನಿಜವಾಗಿಯೂ ಅದ್ಭುತ, ಏಕೆಂದರೆ ಮಂಡಳಿಯಲ್ಲಿ ಹಣದ ಹೊಳೆ ಹರಿಯುತ್ತಿದೆ. ಎಲ್ಲರೂ ಮಾಡಿದ ಪ್ರಯತ್ನಗಳಿಗೆ ಮೆಚ್ಚುಗೆ ತೋರಿಸುತ್ತಿದ್ದು, ಉದಾರವಾಗಿ ಬಹುಮಾನ ನೀಡುತ್ತಿದೆ’ ಎಂದು ಹೇಳಿದ್ದಾರೆ. ಗವಾಸ್ಕರ್ ಪ್ರಸ್ತುತ ಬಹುಮಾನದ ಮೊತ್ತವನ್ನು 1983ರ ವಿಶ್ವಕಪ್‌ನೊಂದಿಗೆ ಹೋಲಿಸಿದ್ದಾರೆ. ಅಂದು ಅವರು ಗೆದ್ದ ತಂಡದ ಪ್ರತಿಯೊಬ್ಬ ಸದಸ್ಯರಿಗೂ 1 ಲಕ್ಷ ಬಹುಮಾನ ಸಿಕ್ಕಿತ್ತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner