ಕನ್ನಡ ಸುದ್ದಿ  /  Cricket  /  Sunil Gavaskar Questions India Decision On Jasprit Bumrah Vs England In 4th Test In Ranchi Ind Vs Eng Resting Bumrah Jra

ಇಡೀ ಪಂದ್ಯದಲ್ಲಿ 23 ಓವರ್‌ ಬೌಲಿಂಗ್‌ ಮಾಡಿದ್ರೆ ಆಯಾಸ ಆಗಲ್ಲ; ಬುಮ್ರಾಗೆ ವಿಶ್ರಾಂತಿ ಕುರಿತು ಗವಾಸ್ಕರ್ ಅಸಮಾಧಾನ

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ ರಾಂಚಿ ಟೆಸ್ಟ್‌ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯು ಭಾರತಕ್ಕೆ ಕಾಡಿತು. ಆದರೆ, ಯುವ ವೇಗಿ ಆಕಾಶ್ ದೀಪ್ ಅದ್ಭುತ ಬೌಲಿಂಗ್ ಮಾಡಿದರು ಎಂದು ಸುನಿಲ್ ಗವಾಸ್ಕರ್ ಪ್ರತಿಪಾದಿಸಿದ್ದಾರೆ. ಈ ನಡುವೆ ಬುಮ್ರಾಗೆ ವಿಶ್ರಾಂತಿ ನೀಡುವ ನಿರ್ಧಾರಕ್ಕೆ ಸನ್ನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಮ್ರಾಗೆ ವಿಶ್ರಾಂತಿ ಕುರಿತು ಸುನಿಲ್ ಗವಾಸ್ಕರ್ ಅಸಮಾಧಾನ
ಬುಮ್ರಾಗೆ ವಿಶ್ರಾಂತಿ ಕುರಿತು ಸುನಿಲ್ ಗವಾಸ್ಕರ್ ಅಸಮಾಧಾನ (PTI-HT)

ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದಿಂದ ಟೀಮ್‌ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಈ ಕುರಿತು ಭಾರತ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಅಪಸ್ವರವೆತ್ತಿದ್ದಾರೆ. ಭಾರತದ ಉಪನಾಯಕನನ್ನು ರಾಂಚಿ ಟೆಸ್ಟ್‌ ಪಂದ್ಯಕ್ಕೂ ಮುನ್ನವೇ ಟೆಸ್ಟ್ ತಂಡದಿಂದ ಬಿಡುಗಡೆ ಮಾಡಲಾಯಿತು. ಇದಕ್ಕೆ ಕಾರಣ ವಿಶ್ರಾಂತಿ. ಸರಣಿಯಿಂದ ಅದಕ್ಕೂ ಹಿಂದೆಯೇ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಾಜಿ ಉಪನಾಯಕ ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಭಾರತ ಆಡಿತ್ತು. ಅನುಭವಿ ಆಟಗಾರರ ಅನುಪಸ್ಥಿತಿ ಇದ್ದರೂ ನಿರ್ಣಾಯಕ ಪಂದ್ಯದಿಂದ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಯ್ತು. ಆದರೂ, ಭಾರತ ತಂಡವು ರಾಂಚಿ ಪಂದ್ಯದಲ್ಲಿ ಗೆದ್ದು, ಸರಣಿ ವಶಪಡಿಸಿಕೊಂಡಿತು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಬುಮ್ರಾ ಅವರನ್ನು ತಂಡದಿಂದ ಹೊರಗಿಟ್ಟ ಭಾರತದ ನಿರ್ಧಾರದ ಬಗ್ಗೆ ಗವಾಸ್ಕರ್ ಮಾತನಾಡಿದ್ದಾರೆ. “ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 15 ಓವರ್‌ ಮತ್ತು ನಂತರ ನಡೆದ ಎರಡನೇ ಇನ್ನಿಂಗ್ಸ್‌ನಲ್ಲಿ ಎಂಟು ಓವರ್‌ಗಳನ್ನು ಬೌಲಿಂಗ್‌ ಮಾಡಿದರೂ, ತರಬೇತುದಾರರ ಶಿಫಾರಸಿನ ಮೇರೆಗೆ ಬುಮ್ರಾಗೆ ರಾಂಚಿ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ” ಎಂದು ಗವಾಸ್ಕರ್ ಹೇಳಿದ್ದಾರೆ.

ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿದ್ದು ಏಕೆ?

“ಎರಡನೇ ಟೆಸ್ಟ್ ಮತ್ತು ಮೂರನೇ ಟೆಸ್ಟ್ ಪಂದ್ಯದ ನಡುವೆ ಒಂಬತ್ತು ದಿನಗಳ ವಿರಾಮವಿತ್ತು. ಅದರ ನಡುವೆ ಇಡೀ ಪಂದ್ಯವೊಂದರಲ್ಲಿ 23 ಓವರ್‌ ಬೌಲಿಂಗ್‌ ಮಾಡಿದರೆ ಆಯಾಸವಂತೂ ಆಗುವುದಿಲ್ಲ. ಹಾಗಿದ್ದರೂ, ಬುಮ್ರಾಗೆ ವಿಶ್ರಾಂತಿ ಏಕೆ ನೀಡಲಾಯಿತು? ನಾಲ್ಕನೇ ಟೆಸ್ಟ್ ಪಂದ್ಯದ ನಂತರ ಅಂತಿಮ ಟೆಸ್ಟ್ ಪಂದ್ಯದ ನಡುವೆ ಇನ್ನೂ ಎಂಟು ದಿನಗಳ ವಿರಾಮವಿತ್ತು. ಈ ನಡುವೆ ಅತ್ಯಂತ ಫಿಟ್ ಆಗಿರುವ ಕ್ರೀಡಾಪಟುಗಳು ಚೇತರಿಸಿಕೊಂಡು ದೇಶದ ಪರ ಆಡಲು ಸಿದ್ಧರಾಗಲು ಸಾಕಷ್ಟು ಸಮಯ ಸಿಗುತ್ತದೆ,” ಎಂದು ಭಾರತದ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ದೇಶಕ್ಕಾಗಿ ಕಷ್ಟಗಳನ್ನು ಸಹಿಸಿ

ಭಾರತದ ಪಾಲಿಗೆ ನಾಲ್ಕನೇ ಟೆಸ್ಟ್ ಪಂದ್ಯ ನಿರ್ಣಾಯಕವಾಗಿತ್ತು. ಒಂದು ವೇಳೆ ಆ ಪಂದ್ಯವನ್ನು ಇಂಗ್ಲೆಂಡ್‌ ಗೆದ್ದಿದ್ದರೆ, ಅಂತಿಮ ಟೆಸ್ಟ್ ಎರಡೂ ತಂಡಗಳಿಗೆ ನಿರ್ಣಾಯಕವಾಗುತ್ತಿತ್ತು. ಹೀಗಾಗಿ ಬುಮ್ರಾ ಅವರನ್ನು ಹೊರಗಿಡುವ ನಿರ್ಧಾರವು ಭಾರತೀಯ ತಂಡದ ಹಿತಾಸಕ್ತಿಗೆ ಅನುಗುಣವಾಗಿರಲಿಲ್ಲ. ಬುಮ್ರಾ ಅನುಪಸ್ಥಿತಿಯಲ್ಲಿ ಯುವ ವೇಗಿ ಆಕಾಶ್ ದೀಪ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಪ್ರಮುಖ ಆಟಗಾರರು ಆಡದಿದ್ದರೂ, ಯುವ ಆಟಗಾರರು ಆಡುವುದು ಸಂತೋಷವಾಗುತ್ತದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದಂತೆ, ಭಾರತಕ್ಕಾಗಿ ಆಡುವ ಹಸಿವಿರಬೇಕು. ದೇಶಕ್ಕಾಗಿ ಆಡುವ ಗೌರವ ಪಡೆಯಲು ಯಾವುದೇ ಕಷ್ಟಗಳನ್ನಾದರೂ ಸಹಿಸಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

5ನೇ ಟೆಸ್ಟ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್‌ ಕೀಪರ್), ಕೆಎಸ್ ಭರತ್ (ವಿಕೆಟ್‌ ಕೀಪರ್), ದೇವದತ್ ಪಡಿಕ್ಕಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)