ಸುನಿಲ್ ಗವಾಸ್ಕರ್ ಅವಮಾನಿಸಿತೇ ಕ್ರಿಕೆಟ್ ಆಸ್ಟ್ರೇಲಿಯಾ? ನನ್ನ ಹೆಸರಿಟ್ಟು ಹೀಗೆ ಮಾಡಬಾರದಿತ್ತೆಂದ ದಿಗ್ಗಜ
Sunil Gavaskar: ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ಹಸ್ತಾಂತರಿಸುವ ವೇಳೆ ಅಲ್ಲೇ ಇದ್ದ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರನ್ನು ಆಹ್ವಾನಿಸದೆ ಅವಮಾನಿಸಲಾಯಿತೇ? ಇಲ್ಲಿದೆ ವಿವರ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿದ ಆಸ್ಟ್ರೇಲಿಯಾ (India vs Australia 5th test), ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ (WTC 2025 Final) ಅರ್ಹತೆ ಪಡೆದುಕೊಂಡಿತು. 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು (BGT 2024-25) 1-3ರಲ್ಲಿ ಕೈವಶ ಪಡಿಸಿಕೊಂಡ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ಗೆ (Pat Cummins) ಮಾಜಿ ನಾಯಕ ಅಲನ್ ಬಾರ್ಡರ್ (Allan Border) ಅವರು ಟ್ರೋಫಿ ಹಸ್ತಾಂತರಿಸಿದರು. ಆದರೆ, ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ತೆಗೆದುಕೊಂಡ ನಿರ್ಧಾರ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ಗೆ (Sunil Gavaskar) ಆಘಾತವನ್ನುಂಟು ಮಾಡಿದ್ದು, ಮಾಜಿ ಕ್ರಿಕೆಟಿಗನನ್ನು ಅವಮಾನ ಮಾಡಿರುವಂತಹ ಘಟನೆ ನಡೆದಿದೆ. ಈ ಬಗ್ಗೆ ಸ್ವತಃ ಗವಾಸ್ಕರ್ ಅವರೇ ಅಸಮಾಧಾನ ಹೊರ ಹಾಕಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಎನ್ನುವುದು ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಮತ್ತು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಹೆಸರಿನಿಂದ ಬಂದಿರುವುದು. ಇಂತಹ ಸಂದರ್ಭದಲ್ಲಿ ಯಾರೇ ಗೆಲ್ಲಲಿ, ಈ ಇಬ್ಬರು ದಿಗ್ಗಜರು ಟ್ರೋಫಿ ಹಸ್ತಾಂತರಿಸುವುದು ವಾಡಿಕೆ. ಅದರಂತೆ ಇಬ್ಬರು ಟ್ರೋಫಿಯನ್ನು ಹಸ್ತಾಂತರಿಸಬೇಕಿತ್ತು. ಆದರೆ ಮೈದಾನದಲ್ಲೇ ಇದ್ದ ಗವಾಸ್ಕರ್ ಅವರನ್ನು ಕರೆಯದೇ ಅವಮಾನಿಸಿದ ಘಟನೆ ನಡೆಯಿತು. ಅಲನ್ ಬಾರ್ಡರ್ ಟ್ರೋಫಿಯನ್ನು ಆಸ್ಟ್ರೇಲಿಯಾಗೆ ಹಸ್ತಾಂತರಿಸುವಾಗ ಗವಾಸ್ಕರ್ ಬೌಂಡರಿ ಲೈನ್ನಲ್ಲಿ ಒಬ್ಬರೇ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಸರಣಿಯಲ್ಲಿ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಿದ್ದ ಮತ್ತು ತನ್ನ ಹೆಸರಿಟ್ಟ ಟ್ರೋಫಿ ಹಸ್ತಾಂತರಕ್ಕೆ ಮೈದಾನದಲ್ಲಿ ಇದ್ದರೂ ಕರೆಯದೇ ಇರುವುದು ಗವಾಸ್ಕರ್ಗೆ ಸಮಾಧಾನ ತರಿಸಿತು. ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಭಾರತ ಮಾಜಿ ನಾಯಕ, ಕಿಡಿಕಾರಿದ್ದಾರೆ.
ಸುನಿಲ್ ಗವಾಸ್ಕರ್ ಅಸಮಾಧಾನ
ಪ್ರಶಸ್ತಿ ಪ್ರಸ್ತುತಿಗಾಗಿ ವೇದಿಕೆ ಮೇಲಿರಲು ನಾನು ಖಂಡಿತವಾಗಿಯೂ ಇಷ್ಟಪಡುತ್ತಿದ್ದೆ. ಇದು ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ. ಇದು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಸರಣಿ. ಆದರೆ ನಾನಿದ್ದರೂ ಸೌಜನ್ಯಕ್ಕಾದರೂ ಕರೆಯದಿರುವುದು ಎಷ್ಟು ಸರಿ ಎಂದು ಗವಾಸ್ಕರ್ ಕೋಡ್ ಸ್ಪೋರ್ಟ್ಸ್ನೊಂದಿಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಟ್ರೋಫಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ನನ್ನ ಪ್ರಕಾರ ಅದು ಮುಖ್ಯವಲ್ಲ. ಏಕೆಂದರೆ ಅವರು ಉತ್ತಮ ಕ್ರಿಕೆಟ್ ಆಡಿದ್ದರಿಂದ ಗೆದ್ದರು. ಅದು ಪರವಾಗಿಲ್ಲ. ನಾನು ಭಾರತೀಯ ಎಂಬ ಕಾರಣಕ್ಕೆ ಟ್ರೋಫಿಯನ್ನು ನೀಡಲು ಅವಕಾಶ ಕೊಟ್ಟಿಲ್ಲ. ನನ್ನ ಉತ್ತಮ ಸ್ನೇಹಿತ ಅಲನ್ ಬಾರ್ಡರ್ ಅವರೊಂದಿಗೆ ಟ್ರೋಫಿ ಪ್ರಸ್ತುತಪಡಿಸಲು ನಾನು ಸಂತೋಷಪಡುತ್ತಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆಸೀಸ್ ಮೊದಲೇ ಯೋಜನೆ ರೂಪಿಸಿತ್ತು
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ 1996-97 ರಿಂದ ಆರಂಭಗೊಂಡಿತು. ಉಭಯ ದೇಶಗಳ ನಡುವಿನ ಸರಣಿಯು ಕ್ರಿಕೆಟ್ನಲ್ಲಿ ಅತಿದೊಡ್ಡ ಸರಣಿಗಳಲ್ಲಿ ಒಂದಾಗಿದೆ. ಪ್ರಶಸ್ತಿ ಸಮಾರಂಭಕ್ಕೆ ಸಂಬಂಧಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಮೊದಲೇ ಯೋಜನೆ ರೂಪಿಸಿತ್ತಂತೆ. ಸಿಡ್ನಿ ಟೆಸ್ಟ್ ಫಲಿತಾಂಶದ ಆಧಾರದ ಮೇಲೆ ಯಾರು ಟ್ರೋಫಿ ಹಸ್ತಾಂತರಿಸಬೇಕು ಎನ್ನುವ ಯೋಜನೆ ರೂಪಿಸಿತ್ತು. ಆಸ್ಟ್ರೇಲಿಯಾ ಯೋಜನೆ ಪ್ರಕಾರ, ತಮ್ಮ ತಂಡ ಗೆದ್ದರೆ ಟ್ರೋಫಿಯನ್ನು ಬಾರ್ಡರ್ ಹಸ್ತಾಂತರಿಸುವುದು, ಭಾರತ ಗೆದ್ದು ಸರಣಿ ಡ್ರಾ ಮಾಡಿಕೊಂಡರೆ ಗವಾಸ್ಕರ್ ಟ್ರೋಫಿ ಹಸ್ತಾಂತರಿಸುವುದಾಗಿತ್ತು. ಆದರೆ, ಗವಾಸ್ಕರ್ ಅವರಿಗೆ ಈ ನಿರ್ಧಾರದ ಬಗ್ಗೆ ತಿಳಿದಿರಲಿಲ್ಲ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ತಮ್ಮ ಹೆಸರಿನ ಟ್ರೋಫಿಯ ಪ್ರಸ್ತುತಿ ಸಮಾರಂಭಕ್ಕೆ ಅವರನ್ನು ಕಡೆಗಣಿಸಿದ್ದರಿಂದ ಅವರು ಆಘಾತಕ್ಕೊಳಗಾಗಿದ್ದಾರೆ.