ಇಂಗ್ಲೆಂಡ್ ನಡೆಗೆ ಸುನಿಲ್ ಗವಾಸ್ಕರ್ ಕಿಡಿ; ಶುಭ್ಮನ್ ಗಿಲ್ ಖಾರವಾಗಿ ಪ್ರಶ್ನಿಸಬೇಕಿತ್ತು ಎಂದ ದಿಗ್ಗಜ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ನಡೆಗೆ ಸುನಿಲ್ ಗವಾಸ್ಕರ್ ಕಿಡಿ; ಶುಭ್ಮನ್ ಗಿಲ್ ಖಾರವಾಗಿ ಪ್ರಶ್ನಿಸಬೇಕಿತ್ತು ಎಂದ ದಿಗ್ಗಜ

ಇಂಗ್ಲೆಂಡ್ ನಡೆಗೆ ಸುನಿಲ್ ಗವಾಸ್ಕರ್ ಕಿಡಿ; ಶುಭ್ಮನ್ ಗಿಲ್ ಖಾರವಾಗಿ ಪ್ರಶ್ನಿಸಬೇಕಿತ್ತು ಎಂದ ದಿಗ್ಗಜ

ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ತಂಡವು ಡ್ರಾ ಸಾಧಿಸಲು ಯಶಸ್ವಿಯಾದ ನಂತರ, ಇಂಗ್ಲೆಂಡ್‌ ತಂಡದ ಬೂಟಾಟಿಕೆಯ ಬಗ್ಗೆ ಮಾತನಾಡಲು ದಿಗ್ಗಜ ಸುನಿಲ್ ಗವಾಸ್ಕರ್ ಹಿಂಜರಿಯಲಿಲ್ಲ.

ಇಂಗ್ಲೆಂಡ್ ನಡೆಗೆ ಗವಾಸ್ಕರ್ ಕಿಡಿ; ಶುಭ್ಮನ್ ಗಿಲ್ ಖಾರವಾಗಿ ಪ್ರಶ್ನಿಸಬೇಕಿತ್ತು ಎಂದ ದಿಗ್ಗಜ
ಇಂಗ್ಲೆಂಡ್ ನಡೆಗೆ ಗವಾಸ್ಕರ್ ಕಿಡಿ; ಶುಭ್ಮನ್ ಗಿಲ್ ಖಾರವಾಗಿ ಪ್ರಶ್ನಿಸಬೇಕಿತ್ತು ಎಂದ ದಿಗ್ಗಜ (AFP Images)

ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯವು ಡ್ರಾದಲ್ಲಿ ಅಂತ್ಯವಾಯ್ತು. ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅಮೋಘ ಶತಕದ ನೆರವಿಂದ ಪಂದ್ಯದಲ್ಲಿ ಭಾರತವು ಸೋಲಿನ ಭೀತಿಯಿಂದ ಹೊರಬಂತು. ಆದರೆ, ಮ್ಯಾಂಚೆಸ್ಟರ್‌ನಲ್ಲಿ ಪಂದ್ಯ ಡ್ರಾ ಮಾಡುವುದಕ್ಕೂ ಮುನ್ನ ಉಭಯ ತಂಡಗಳ ನಡುವೆ ನಡೆದ ನಾಟಕೀಯ ಬೆಳವಣಿಗೆಗಳು ಚರ್ಚೆಯ‌ ವಿಷಯವಾಗಿದೆ. ಇದೀಗ ಸರಣಿಯು 2-1 ಅಂತರದಿಂದ ಇಂಗ್ಲೆಂಡ್‌ ಪರವಾಗಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ, 2-2 ಅಂತರದಿಂದ ಸರಣಿ ಸಮಬಲಗೊಳಿಸುವ ಅವಕಾಶವಿದೆ.

ನಾಲ್ಕನೇ ಟೆಸ್ಟ್‌ ಪಂದ್ಯದ ಪಂದ್ಯದ ಬಹುಪಾಲು ಭಾಗವನ್ನು ಇಂಗ್ಲೆಂಡ್ ನಿಯಂತ್ರಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು 358 ರನ್‌ಗಳಿಗೆ ಆಲೌಟ್ ಆದ ನಂತರ, ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಅವರ ಶತಕಗಳ ನೆರವಿನಿಂದ ಇಂಗ್ಲೆಂಡ್ 669 ರನ್ ಗಳಿತು. ಅಲ್ಲದೆ 311 ರನ್‌ಗಳ ಭಾರಿ ಮುನ್ನಡೆ ಸಾಧಿಸಿತು. ಪಂದ್ಯದ ಫಲಿತಾಂಶವನ್ನು ಪರಿಗಣಿಸಿದರೆ, ಸುದೀರ್ಘ ಕಾಲ ಬ್ಯಾಟಿಂಗ್‌ ಮಾಡುವ ಇಂಗ್ಲೆಂಡ್‌ ತಂಡದ ಹಠಮಾರಿತನವೇ ತಂಡದ ಗೆಲುವನ್ನು ಕಸಿದುಕೊಂಡಿದೆ ಎಂದು ಭಾವಿಸದೆ ಇರಲು ಸಾಧ್ಯವಿಲ್ಲ.

ಭಾರತದ ಕ್ರಿಕೆಟ್‌ ದಿಗ್ಗಜ ಸುನಿಲ್ ಗವಾಸ್ಕರ್ (sunil gavaskar) ಕೂಡ ಹೀಗೆ ಭಾವಿಸಿದ್ದಾರೆ. ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಮಾಜಿ ನಾಯಕ, ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಇಂಗ್ಲೆಂಡ್‌ನ ಬೂಟಾಟಿಕೆಯನ್ನು ಟೀಕಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್‌ ಗೆದ್ದ ನಂತರ ಮಾತಾಡಿದ್ದ ಸ್ಟೋಕ್ಸ್, “ಭಾರತ ನಮಗೆ 600 ರನ್‌ಗಳ ಗುರಿ ನೀಡಿದ್ದರೂ, ನಾವು ಅದನ್ನು ಚೇಸ್‌ ಮಾಡುತ್ತಿದ್ದೆವು” ಎಂದು ಹೇಳಿದ್ದರು. ಎಡ್ಜ್ ಬಾಸ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿಫಲವಾಯಿತು. ಪಿಚ್ ಹೇಗೇ ಇರಲಿ. ಇಂಗ್ಲೆಂಡ್‌ ತಂಡ ಒತ್ತಡದಲ್ಲಿಯೇ ಇತ್ತು ಎಂದಿದ್ದಾರೆ.

ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ ಭಾರತ ತಂಡವು ಇಂಗ್ಲೆಂಡ್‌ಗೆ 600ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಚೇಸ್ ಮಾಡಲು ನೀಡಿದಾಗ, ಪತ್ರಿಕಾಗೋಷ್ಠಿಗೆ ಬಂದ ಕೆಲವು ಇಂಗ್ಲೆಂಡ್ ಆಟಗಾರರು 'ಭಾರತ ಭಯಭೀತವಾಗಿತ್ತು, ಅದಕ್ಕಾಗಿಯೇ ಅವರು ನಮಗೆ 600 ರನ್‌ಗಳ ಗುರಿ ನೀಡಿದರು' ಎಂದು ಹೇಳಿದರು. ಆದರೆ ಈ ಹಿಂದೆ ಇಂಗ್ಲೆಂಡ್ ತಂಡ ಭಾರತದಲ್ಲಿದ್ದಾಗ ನಮಗೆ 600 ರನ್ ಗುರಿ ನೀಡಿದ್ದು ನನಗೆ ನೆನಪಿದೆ. ನಾವು ಎಂಥಾ ಗುರಿಯಾದರೂ ಬೆನ್ನಟ್ಟುತ್ತೇವೆ. 'ಭಾರತ ದೊಡ್ಡ ಗುರಿಯನ್ನೇ ನೀಡಿತು. ಆದರೆ ನೀವು 336 ರನ್‌ಗಳ ಸೋಲು ಅನುಭವಿಸಿದ್ದೀರಿ, ಎಂದು ಗವಾಸ್ಕರ್‌ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ಹೇಳಿದ್ದಾರೆ.

ಶುಭ್ಮನ್‌ ಗಿಲ್‌ ಖಾರವಾಗಿ ಪ್ರಶ್ಮಿಸಬೇಕಿತ್ತು

ಪಂದ್ಯದ ಬಳಿಕ ಶುಭ್ಮನ್ ಗಿಲ್ ಇಂಗ್ಲೆಂಡ್‌ ಕುರಿತು ಹೆಚ್ಚು ಬಲವಾಗಿ ಪ್ರತಿಕ್ರಿಯಿಸಬೇಕಿತ್ತು ಎಂದು ಗವಾಸ್ಕರ್ ಹೇಳಿಕೊಂಡಿದ್ದಾರೆ. ಒಂದು ವೇಳೆ ಗವಾಸ್ಕರ್ ಅವರು ಗಿಲ್‌ ಸ್ಥಾನದಲ್ಲಿದ್ದರೆ, ಅವರು ಖಂಡಿತವಾಗಿಯೂ ಸ್ಟೋಕ್ಸ್‌ಗೆ ಕೆಲವು ಅಹಿತಕರ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಹೇಳಿದ್ದಾರೆ. "ಗಿಲ್ ಪತ್ರಿಕಾಗೋಷ್ಠಿಯಲ್ಲಿದ್ದರೆ, ಅವರು ಈ ಪ್ರಶ್ನೆಗಳನ್ನು ಕೇಳಬೇಕೆಂದು ನಾನು ಬಯಸುತ್ತೇನೆ, 'ನೀವು 311 ರನ್‌ ಲೀಡ್‌ ಏಕೆ ತೆಗೆದುಕೊಂಡಿರಿ? 240 ಅಥವಾ 250 ರನ್ ಮುನ್ನಡೆಯಿಂದ ನೀವು ಏಕೆ ಸಂತೋಷವಾಗಲಿಲ್ಲ? ಬೆನ್ ಸ್ಟೋಕ್ಸ್ ಶತಕ ಗಳಿಸಿದ ನಂತರವೂ ನಿಮ್ಮ ತಂಡದ ಬೌಲರ್‌ಗಳಿಗೆ ಭಾರತದ ವಿಕೆಟ್‌ಗಳನ್ನು ಪಡೆಯಲು ಸ್ವಲ್ಪ ಹೆಚ್ಚುವರಿ ಸಮಯವನ್ನು ಏಕೆ ನೀಡಲಿಲ್ಲ?... ಈ ಪ್ರಶ್ನೆಗಳನ್ನು ಕೇಳಬೇಕಿತ್ತು ಎಂದು ಗವಾಸ್ಕರ್‌ ಹೇಳಿದ್ದಾರೆ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.