ಯಾಮಾರಿದ್ರೆ ಏಟು; ಬಾಂಗ್ಲಾದೇಶ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ ಸುನಿಲ್ ಗವಾಸ್ಕರ್
Sunil Gavaskar: ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಿಂದ ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈಚೆಗೆ ಪಾಕಿಸ್ತಾನ ಎದುರು 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆಗೈದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಬಾಂಗ್ಲಾದೇಶ ಮತ್ತೆ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಹೀಗಾಗಿ, ರೋಹಿತ್ ಪಡೆಯು ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಇದೇ ವೇಳೆ ಭಾರತ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಬಾಂಗ್ಲಾದೇಶ ತನ್ನ ಶಕ್ತಿ ಸಾಮರ್ಥ್ಯ ಏನೆಂದು ತೋರಿಸಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಈ ಹಿಂದೆಯೂ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿದ್ದಾಗಲೂ ಭಾರತ ಗೆಲ್ಲಲು ಹೋರಾಟ ನಡೆಸಿತ್ತು. ಅಲ್ಲದೆ, ಗೆಲ್ಲಲು ತಡಕಾಡಿತ್ತು. ಏಕದಿನ ಸರಣಿಯನ್ನೂ ಕೈಚೆಲ್ಲಿತ್ತು ಎಂಬುದನ್ನು ನೆನಪಿಸಿದ ಗವಾಸ್ಕರ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ಫೈನಲ್ ತಲುಪಬೇಕೆಂದರೆ ಬಾಂಗ್ಲಾದೇಶ ಸರಣಿ ಅತ್ಯಂತ ಮಹತ್ವದ್ದು, ಎಚ್ಚರಿಕೆಯಿಂದ ಆಡುವಂತೆ ಸೂಚಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಗೆದ್ದ ನಂತರ ಬಾಂಗ್ಲಾದೇಶದ ಆಟಗಾರರು ಭಾರತದೊಂದಿಗೆ ಸರಣಿ ಆಡಲು ಉತ್ಸುಕರಾಗಿದ್ದಾರೆ ಎಂದು ಮಿಡ್-ಡೇಗೆ ಬರೆದ ಅಂಕಣದಲ್ಲಿ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಪಾಕ್ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಆ ತಂಡವನ್ನು ಬಾಂಗ್ಲಾ ಸೋಲಿಸಿತ್ತು. ಇದು ಅವರ ಶಕ್ತಿ ಏನೆಂಬುದನ್ನು ತೋರಿಸುತ್ತದೆ. ಎರಡು ವರ್ಷಗಳ ಹಿಂದೆ ಭಾರತ ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ ಬಾಂಗ್ಲಾದೇಶದ ಆಟಗಾರರು ಪ್ರಬಲ ಪೈಪೋಟಿ ನೀಡಿದ್ದರು. ಇದೀಗ ಮತ್ತೊಮ್ಮೆ ಭಾರತ ವಿರುದ್ಧ ಎದುರಿಸಲು ಉತ್ಸುಕವಾಗಿದೆ. ಹಾಗಾಗಿ ಪ್ರತಿಯೊಂದು ಅಂಶದಲ್ಲೂ ಎಚ್ಚರಿಕೆ ವಹಿಸಬೇಕು. ಯಾವ ವಿಚಾರದಲ್ಲೂ ಅಜಾಗರೂಕತೆ ಪ್ರದರ್ಶಿಸಬೇಡಿ ಎಂದು ಸೂಚನೆ ನೀಡಿದ್ದಾರೆ.
ಸರಣಿ ಗೆಲ್ಲಲೇಬೇಕು ಎಂದ ಸುನಿಲ್ ಗವಾಸ್ಕರ್
ಬಾಂಗ್ಲಾದೇಶ ತಂಡದಲ್ಲಿರುವ ಕೆಲವು ಹೊಸ ಆಟಗಾರರು ಪ್ರಸ್ತುತ ಉತ್ತಮವಾಗಿ ಆಡುತ್ತಿದ್ದು, ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ. ಭಾರತ-ಬಾಂಗ್ಲಾದೇಶ ಸರಣಿಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಮುಂದಿನ 5 ತಿಂಗಳಲ್ಲಿ ಭಾರತ 10 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಾಂಗ್ಲಾದೇಶ ಮುಂದಿನ ಮೂರು ಟೆಸ್ಟ್‌ಗಳಲ್ಲಿ ನ್ಯೂಜಿಲೆಂಡ್ ಅನ್ನು ತವರಿನಲ್ಲಿ ಎದುರಿಸಲಿದೆ. ಅದರ ನಂತರ ಆಸ್ಟ್ರೇಲಿಯಾ 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ. 2025ರಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಲು, ಭಾರತ ಈ ಸಿರೀಸ್ನಲ್ಲಿ ಮಿಂಚಬೇಕು. ಆದಾಗ್ಯೂ, ಡಬ್ಲ್ಯುಟಿಸಿ ಫೈನಲ್‌ಗೆ ತಲುಪಲು ಭಾರತ 5 ಟೆಸ್ಟ್‌ಗಳನ್ನು ಗೆಲ್ಲಬೇಕಾಗಿದೆ ಎಂದು ಹೇಳಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಸೆಪ್ಟೆಂಬರ್ 19 ರಂದು ಚೆನ್ನೈನಲ್ಲಿ ಆರಂಭವಾಗಲಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಈಗಾಗಲೇ ಭಾರತೀಯ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಎರಡನೇ ಟೆಸ್ಟ್ ಸೆಪ್ಟೆಂಬರ್ 27 ರಂದು ಕಾನ್ಪುರದಲ್ಲಿ ಆರಂಭವಾಗಲಿದೆ. ಆ ಬಳಿಕ ಉಭಯ ತಂಡಗಳ ನಡುವೆ ಮೂರು ಟಿ20 ಸರಣಿ ನಡೆಯಲಿದೆ. ಮೊದಲ ಟಿ20 ಅಕ್ಟೋಬರ್ 6 ರಂದು, ಎರಡನೇ ಪಂದ್ಯ ಅಕ್ಟೋಬರ್ 9 ರಂದು ಮತ್ತು 3ನೇ ಟಿ20 ಅಕ್ಟೋಬರ್ 12 ರಂದು ನಡೆಯಲಿದೆ.