ಕ್ಲಾಸೆನ್ ಶತಕ, ದಾಖಲೆಯ ಮೊತ್ತ; ಕೆಕೆಆರ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಐಪಿಎಲ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಗುಡ್‌ಬೈ
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ಲಾಸೆನ್ ಶತಕ, ದಾಖಲೆಯ ಮೊತ್ತ; ಕೆಕೆಆರ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಐಪಿಎಲ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಗುಡ್‌ಬೈ

ಕ್ಲಾಸೆನ್ ಶತಕ, ದಾಖಲೆಯ ಮೊತ್ತ; ಕೆಕೆಆರ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಐಪಿಎಲ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಗುಡ್‌ಬೈ

ಕಳೆದ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಆಡಿದ್ದ ಎರಡು ತಂಡಗಳಾದ ಎಸ್‌ಆರ್‌ಎಚ್‌ ಹಾಗೂ ಕೆಕೆಆರ್‌ ತಂಡಗಳು, ಈ ಬಾರಿ ತಮ್ಮ ಪಾಲಿನ ಕೊನೆಯ ಪಂದ್ಯದಲ್ಲಿ ಆಡಿದವು. ಅಂದು ಗೆದ್ದು ಚಾಂಪಿಯನ್‌ ಆಗಿದ್ದ ಕೆಕೆಆರ್‌ ತಂಡದ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಬೃಹತ್‌ ಅಂತರದಿಂದ ಗೆದ್ದು ಸೇಡು ತೀರಿಸಿಕೊಂಡಿದೆ.

ಕೆಕೆಆರ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಐಪಿಎಲ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಗುಡ್‌ಬೈ
ಕೆಕೆಆರ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಐಪಿಎಲ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಗುಡ್‌ಬೈ (PTI)

ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಮತ್ತಷ್ಟು ದಾಖಲೆಗಳೊಂದಿಗೆ ಐಪಿಎಲ್‌ 2025ರ ಆವೃತ್ತಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ. ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ (Sunrisers Hyderabad vs Kolkata Knight Riders) ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್‌ ನಡೆಸಿದ ತಂಡವು, ಐಪಿಎಲ್‌ ಇತಿಹಾಸದ ಮೂರನೇ ಗರಿಷ್ಠ ರನ್‌ ಕಲೆ ಹಾಕಿತು. ಇದರೊಂದಿಗೆ 110 ರನ್‌ಗಳಿಂದ ಗೆದ್ದು ಬೀಗಿತು. ಅತ್ತ ಕೆಕೆಆರ್‌ ತಂಡವು ಸೋಲಿನೊಂದಿಗೆ ಅಭಿಯಾನ ಮುಗಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಹೆನ್ರಿಚ್‌ ಕ್ಲಾಸೆನ್‌ ಸ್ಫೋಟಕ ಶತಕ ಹಾಗೂ ಟ್ರಾವಿಸ್‌ ಹೆಡ್‌ ಅರ್ಧಶತಕದ ನೆರವಿಂದ 278 ರನ್‌ ಕಲೆ ಹಾಕಿತು. ಬೃಹತ್‌ ಗುರಿ ಬೆನ್ನಟ್ಟಿದ ಕೆಕೆಆರ್‌, ಬೆಟ್ಟದಷ್ಟು ಮೊತ್ತ ಕಲೆ ಹಾಕಲಾಗದೆ ಶರಣಾಯ್ತು. ಬ್ಯಾಟಿಂಗ್‌ನಲ್ಲಿ ಯಾರಿಂದಲೂ ಸ್ಥಿರ ಪ್ರದರ್ಶನ ಬರದ ಕಾರಣದಿಂದ 18.4 ಓವರ್‌ಗಳಲ್ಲಿ 168 ರನ್‌ಗಳಿಸಿ ಆಲೌಟ್‌ ಆಯ್ತು.

ಈ ಗೆಲುವಿನೊಂದಿಗೆ ಎಸ್‌ಆರ್‌ಎಚ್‌ ತಂಡವು ಟೂರ್ನಿಯಲ್ಲಿ 6ನೇ ಗೆಲುವು ಸಾಧಿಸಿದಂತಾಗಿದೆ. ಅತ್ತ ಹಾಲಿ ಚಾಂಪಿಯನ್‌ ಕೆಕೆಆರ್ ತಂಡವು 7ನೇ ಸೋಲು ಕಂಡಿತು. ಕಳೆದ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಈ ಎರಡು ತಂಡಗಳು ಆಡಿದ್ದವು. ಅಂದು ಭರ್ಜರಿಯಾಗಿ ಗೆದ್ದಿದ್ದ ಕೆಕೆಆರ್‌ ತಂಡದ ವಿರುದ್ಧ ಎಸ್‌ಆರ್‌ಎಚ್‌ ಸೇಡು ತೀರಿಸಿಕೊಂಡಿದೆ.

ನಾಲ್ಕನೇ ಅತ್ಯಂತ ವೇಗದ ಶತಕ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ ಪರ, ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್ ಮೊದಲ ವಿಕೆಟ್‌ಗೆ 92 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಅಭಿಷೇಕ್‌ 32 ರನ್‌ ಗಳಿಸಿದರೆ, ಹೆಡ್‌ 40 ಎಸೆತಗಳಲ್ಲಿ 76 ರನ್‌ ಸಿಡಿಸಿದರು. ಇಶಾನ್‌ ಕಿಶನ್‌ 29 ರನ್‌ ಗಳಿಸಿದರು. ಅಬ್ಬರದ ಆಟವಾಡಿದ ಹೆನ್ರಿಚ್‌ ಕ್ಲಾಸೆನ್‌ ಐಪಿಎಲ್‌ನಲ್ಲಿ 2ನೇ ಶತಕ ಸಿಡಿಸಿದರು. ಕೇವಲ 39 ಎಸೆತಗಳಲ್ಲಿ 9 ಸ್ಫೋಟಕ ಸಿಕ್ಸರ್‌ ಸಹಿತ ಅಜೇಯ 105 ರನ್‌ ಗಳಿಸಿದರು. 37 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಕ್ಲಾಸೆನ್‌, ಐಪಿಎಲ್‌ ಇತಿಹಾಸದ ನಾಲ್ಕನೇ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆ ಮಾಡಿದರು.

ಬೃಹತ್‌ ಮೊತ್ತ ಚೇಸಿಂಗ್‌ಗೆ ಇಳಿದ ಕೆಕೆಆರ್‌ ಪರ ಆರಂಭಿಕ ಆಟಗಾರ ಸುನಿಲ್‌ ನರೈನ್‌ 31 ರನ್‌ ಗಳಿಸಿದರು. ಮನೀಶ್‌ ಪಾಂಡೆ 37 ರನ್‌ ಬಾರಿಸಿದರು. ಕೊನೆಯಲ್ಲಿ ಹರ್ಷಿತ್‌ ರಾಣಾ 34 ರನ್‌ ಕಲೆ ಹಾಕಿದರು. ಇದನ್ನು ಹೊರತುಪಡಿಸಿ ಬೇರಾವ ಆಟಗಾರರಿಂದಲೂ 15ಕ್ಕಿಂತ ಹೆಚ್ಚು ರನ್‌ ಬರಲಿಲ್ಲ. ಸೀಸ್‌ನ್‌ ಉದ್ದಕ್ಕೂ ಕಳಪೆ ಫಾರ್ಮ್‌ನಲ್ಲಿರುವ ಆಂಡ್ರೆ ರಸೆಲ್‌ ಗೋಲ್ಡನ್‌ ಡಕ್‌ ಆಗಿ ನಿರಾಶೆ ಮೂಡಿಸಿದರು. ಸನ್‌ರೈಸರ್ಸ್‌ ಪರ ಉನದ್ಕತ್‌, ಈಶನ್‌ ಮಲಿಂಗಾ ಹಾಗೂ ಹರ್ಷ್‌ ದುಬೆ ತಲಾ 3 ವಿಕೆಟ್‌ ಪಡೆದರು.

ಐಪಿಎಲ್‌ನಲ್ಲಿ ಅತಿ ವೇಗದ ಶತಕ

  • 30 ಎಸೆತ- ಕ್ರಿಸ್ ಗೇಲ್ (RCB) ಪುಣೆ ವಾರಿಯರ್ಸ್‌ ವಿರುದ್ದ, 2013
  • 35 ಎಸೆತ- ವೈಭವ್ ಸೂರ್ಯವಂಶಿ (RR) ಜಿಟಿ ವಿರುದ್ದ, 2025
  • 37 ಎಸೆತ- ಯೂಸುಫ್ ಪಠಾಣ್ (RR) ಎಂಐ ವಿರುದ್ದ, 2010
  • 37 ಎಸೆತ- ಹೆನ್ರಿಚ್ ಕ್ಲಾಸೆನ್ (SRH) ಕೆಕೆಆರ್‌ ವಿರುದ್ದ, 2025 (ಇಂದು)
  • 38 ಎಸೆತ- ಡೇವಿಡ್ ಮಿಲ್ಲರ್ (ಕೆಎಕ್ಸ್‌ಐಪಿ) vs ಆರ್‌ಸಿಬಿ, 2013

ಇದನ್ನೂ ಓದಿ | ಸೋಲಿನೊಂದಿಗೆ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಅಭಿಯಾನ ಮುಗಿಸಿದ ಕಿಡಂಬಿ ಶ್ರೀಕಾಂತ್

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.