ಪಂಜಾಬ್ ಕಿಂಗ್ಸ್ ವಿರುದ್ಧ ರನ್‌ಗಳ ಅಭಿಷೇಕ; ಐಪಿಎಲ್ ಇತಿಹಾಸದ 2ನೇ ಅತ್ಯಧಿಕ ಚೇಸಿಂಗ್ ಮಾಡಿ ಗೆದ್ದ ಎಸ್‌ಆರ್‌ಎಚ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್, ಸ್ಫೋಟಕ ಬ್ಯಾಟಿಂಗ್ ನಡೆಸಿ 245 ರನ್ ಪೇರಿಸಿತು. ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿದ ಎಸ್‌ಆರ್‌ಎಚ್, ಇನ್ನೂ 9 ಎಸೆತಗಳನ್ನು ಬಾಕಿ ಉಳಿಸಿ ಗೆದ್ದು ಬೀಗಿದೆ.

ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ತಂಡದ ಹಳೆಯ ಜೋಶ್, ಆರ್ಭಟ, ಆಕ್ರಮಣಕಾರಿ ಆಟ ಮೈದಾನದಲ್ಲಿ ಹಲವು ದಿನಗಳ ನಂತರ ಮೊದಲ ಬಾರಿಗೆ ಕಂಡುಬಂದಿದೆ. ತನ್ನದೇ ತವರು ಮೈದಾನ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಬ್ಬರಿಸಿದ ಆರೇಂಜ್ ಆರ್ಮಿ, 8 ವಿಕೆಟ್‌ಗಳಿಂದ ಭರ್ಜರಿ ಜಯಭೇರಿ ಬಾರಿಸಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ದಾಖಲೆಯ ಶತಕ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದ್ದಾರೆ. ಈ ವಿಜಯದೊಂದಿಗೆ ಎಸ್‌ಆರ್‌ಎಚ್ ತಂಡವು ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಸ್ಫೋಟಕ ಬ್ಯಾಟಿಂಗ್ ನಡೆಸಿ 6 ವಿಕೆಟ್ ಕಳೆದುಕೊಂಡು 245 ರನ್ ಪೇರಿಸಿತು. ಈ ಮೊತ್ತವನ್ನು ಹೈದರಾಬಾದ್ ತಂಡ ಚೇಸ್ ಮಾಡಲ್ಲ ಎಂದು ನಂಬಲಾಗಿತ್ತು. ಆದರೆ, ಸ್ಫೋಟಕ ಬ್ಯಾಟರ್‌ಗಳ ದೊಡ್ಡ ಪಡೆಯೇ ಹೊಂದಿರುವ ಆರೇಂಜ್ ಆರ್ಮಿ, ಇನ್ನೂ 9 ಎಸೆತಗಳನ್ನು ಬಾಕಿ ಉಳಿಸಿ ಗೆದ್ದು ಬೀಗಿದೆ. ಐಪಿಎಲ್ ಇತಿಹಾಸದಲ್ಲೇ ಎರಡನೇ ಯಶಸ್ವಿ ಚೇಸಿಂಗ್ ನಡೆಸಿದ ದಾಖಲೆ ಬರೆದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಪರ ಪ್ರಿಯಾಂಶ್ ಆರ್ಯ 13 ಎಸೆತಗಳಲ್ಲಿ 36 ರನ್ ಸಿಡಿಸಿದರು. ಪ್ರಭ್‌ಸಿಮ್ರಾನ್ 42 ರನ್ ಗಳಿಸಿದರೆ, ನೆಹಾಲ್ ವಧೇರಾ 27 ರನ್ ಬಾರಿಸಿದರು. ನಾಯಕನ ಆಟವಾಡಿದ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 82 ರನ್ ಸಿಡಿಸಿದರು. ಕೊನೆಯ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಹಿತ ಸಿಡಿದ ಸ್ಟೋಯ್ನಿಸ್, 11 ಎಸೆತಗಳಲ್ಲಿ 34 ರನ್ ಪೇರಿಸಿ ತಂಡದ ಮೊತ್ತ ಹಿಗ್ಗಿಸಿದರು.
ಸಾಮರ್ಥ್ಯ ತೋರಿಸಿದ ಎಸ್‌ಆರ್‌ಎಚ್
ಚೇಸಿಂಗ್‌ಗೆ ಇಳಿದ ಸನ್‌ರೈಸರ್ಸ್, ಆರಂಭದಿಂದಲೇ ಅಬ್ಬರಿಸತೊಡಗಿತು. ಮೊದಲ ವಿಕೆಟ್‌ಗೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ 171 ರನ್‌ಗಳ ಜೊತೆಯಾಟವಾಡಿದರು. ಮೈದಾನದಲ್ಲಿ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ವೇಗದ ಆಟಕ್ಕೆ ಮಣೆ ಹಾಕಿದ ಅಭಿಷೇಕ್ ಕೇವಲ 40 ಎಸೆತಗಳಲ್ಲಿ ಸೆಂಚುರಿ ಬಾರಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ 6ನೇ ವೇಗದ ಶತಕವಾಗಿದೆ.
ದಾಖಲೆಯ 141 ರನ್ ಸಿಡಿಸಿದ ಅಭಿಷೇಕ್
ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 66 ರನ್ ಬಾರಿಸಿ ಔಟಾದರೂ, ಅಭಿಷೇಕ್ ಅಬ್ಬರ ಮುಂದುವರೆಯಿತು. ಪಂದ್ಯದಲ್ಲಿ ಅಂತಿಮವಾಗಿ ಅಭಿಷೇಕ್ 55 ಎಸೆತಗಳಲ್ಲಿ 14 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ ಸಹಿತ 141 ರನ್ ಸಿಡಿಸಿ ಔಟಾದರು. ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರನೊಬ್ಬನ ಗರಿಷ್ಠ ವೈಯಕ್ತಿಕ ರನ್ ಇದಾಗಿದೆ. ಒಟ್ಟಾರೆಯಾಗಿ ಐಪಿಎಲ್‌ನಲ್ಲಿ ಮೂರನೇ ಗರಿಷ್ಠ ಸ್ಕೋರ್ ಆಗಿದೆ.
ಅಭಿಷೇಕ್ ಔಟ್ ಆದ ಬಳಿಕ ಕ್ಲಾಸೆನ್ 21 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸನ್‌ರೈಸರ್ಸ್ ತಂಡವು ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಬಳಿಕ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿತ್ತು. ಹೀಗಾಗಿ ಈ ಪಂದ್ಯದಲ್ಲಿ ತಂಡಕ್ಕೆ ಗೆಲುವು ಅನಿವಾರ್ಯವಾಗಿತ್ತು. ಅದರಂತೆಯೇ ತಂಡವು ಮತ್ತೊಮ್ಮೆ ಅಬ್ಬರಿಸಿ ಭರ್ಜರಿ ಜಯ ಸಾಧಿಸಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಎಸ್‌ಆರ್‌ಎಚ್, ಈ ಗೆಲುವಿನ ಬಳಿಕ ಎಂಟನೇ ಸ್ಥಾನಕ್ಕೇರಿದೆ.
