523 ರನ್, ಎಸ್ಆರ್ಹೆಚ್ 277/3, ಮುಂಬೈ 246/5; ಹೈಸ್ಕೋರಿಂಗ್ ಪಂದ್ಯದಲ್ಲಿ ಹೈದರಾಬಾದ್ಗೆ ಸೂಪರ್ ಡೂಪರ್ ಗೆಲುವು
Mumbai Indians vs Sunrisers Hyderabad : ಮುಂಬೈ ಇಂಡಿಯನ್ಸ್ ವಿರುದ್ಧ ಹೈಸ್ಕೋರಿಂಗ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 31 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.

ಸಿಕ್ಸರ್.. ಸಿಕ್ಸರ್.. ಸಿಕ್ಸರ್.. ಐಪಿಎಲ್ನಲ್ಲಿ ಅಕ್ಷರಶಃ ಸಿಕ್ಸರ್ಗಳ ಮಳೆ ಸುರಿಯಿತು. ವಿಧ್ವಂಸಕ ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೇರಿ ಬರೋಬ್ಬರಿ 523 ರನ್ ಕಲೆ ಹಾಕಿ ಅಭಿಮಾನಿಗಳಿಗೆ ಮನರಂಜನೆ ರಸದೌತಣ ಉಣಬಡಿಸಿದವು. ಸ್ಫೋಟಕ ಬ್ಯಾಟಿಂಗ್ ಮೂಲಕ 38 ಸಿಕ್ಸರ್ಗಳ ಸುರಿದ ಈ ರಣರೋಚಕ ಪಂದ್ಯಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನವು ಸಾಕ್ಷಿಯಾಯಿತು.
ಮದಗಜಗಳ ಕಾದಾಟದಲ್ಲಿ ಅಂತಿಮವಾಗಿ ಸನ್ರೈಸರ್ಸ್ ಹೈದರಾಬಾದ್ ತನ್ನ ತವರಿನ ಮೈದಾನದಲ್ಲಿ 31 ರನ್ ಅಂತರದ ಗೆಲುವು ದಾಖಲಿಸಿ ಗೆಲುವಿನ 'ಸನ್ರೈಸ್' ಆಗಿದೆ. ಕಳೆದ ಪಂದ್ಯದಲ್ಲಿ ಸೋತಿದ್ದ ಪ್ಯಾಟ್ ಕಮಿನ್ಸ್ ನೇತೃತ್ವದ ಹೈದರಾಬಾದ್ ಗೆಲುವಿನ ಖಾತೆ ತೆರೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಸತತ 2ನೇ ಸೋಲು ಕಂಡಿದೆ. 2024ರ ಐಪಿಎಲ್ನಲ್ಲಿ ಈವರೆಗೂ ತವರಿನ ಮೈದಾನದಲ್ಲಿ ಆಡಿದ ತಂಡಗಳೇ ಗೆದ್ದಿರುವುದು ವಿಶೇಷ.
ಎಸ್ಆರ್ಹೆಚ್ 277/3, ಮುಂಬೈ 246/5
ಐಪಿಎಲ್ ಇತಿಹಾಸದ ಹೈಸ್ಕೋರಿಂಗ್ ಗೇಮ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಸೂಪರ್ ಡೂಪರ್ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಎಸ್ಆರ್ಹೆಚ್, 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಕೂಡ ಫೈಟ್ ನಡೆಸಿತು. ಅಂತಿಮವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಲಷ್ಟೇ ಶಕ್ತವಾಗಿ 31 ರನ್ಗಳಿಂದ ಶರಣಾಯಿತು. ಉಭಯ ತಂಡಗಳಿಂದ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ 500+ ರನ್ ದಾಖಲಾಗಿದೆ.
277 ರನ್ಗಳ ಬೃಹತ್ ಗುರಿ ಹಿಂಬಾಲಿಸಿದ ಮುಂಬೈ ಕೂಡ ಸ್ಫೋಟಕ ಆರಂಭವನ್ನೇ ಪಡೆಯಿತು. ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ 3.1 ಓವರ್ಗಳಲ್ಲೇ 50 ರನ್ ಕಲೆ ಹಾಕಿದರು. ಆದರೆ ಸಿಡಿಯುತ್ತಿದ್ದ ಇಶಾನ್ 34, ರೋಹಿತ್ 26 ರನ್ ಗಳಿಸಿ ಔಟಾದರೆ, ನಮನ್ ಧೀರ್ 30 ರನ್ ಗಳಿಸಿ ಆಟ ಮುಗಿಸಿದರು. ಬಳಿಕ ತಿಲಕ್ ವರ್ಮಾ ಕೆಲಹೊತ್ತು ಹೋರಾಟ ನಡೆಸಿದರು. ಭರ್ಜರಿ ಸಿಕ್ಸರ್ಗಳ ಸುರಿಮಳೆಗೈದರು. 34 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ಗಳ ಸಹಿತ 64 ರನ್ ಬಾರಿಸಿದರು.
ಕೊನೆಯಲ್ಲಿ ಹಾರ್ದಿಕ್ 24, ಟಿಮ್ ಡೇವಿಡ್ ಅಜೇಯ 42, ರೊಮಾರಿಯೋ ಶೆಫರ್ಡ್ ಅಜೇಯ 15 ರನ್ ಕಲೆ ಹಾಕಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಿಲ್ಲ. ಹೈದರಾಬಾದ್ ಪರ ಜಯದೇವ್ ಉನಾದ್ಕತ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರೆ, ಶಹಬಾಜ್ ನದೀಪ್ 1 ವಿಕೆಟ್ ಪಡೆದು ಮಿಂಚಿದರು.
ಸನ್ರೈಸರ್ಸ್ ಹೈದರಾಬಾದ್ ವಿಧ್ವಂಸಕ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಆರಂಭದಿಂದಲೇ ದಂಡಯಾತ್ರೆ ಆರಂಭಿಸಿತು. ಮಯಾಂಕ್ ಅಗರ್ವಾಲ್ 11 ರನ್ ಗಳಿಸಿ ಬೇಗನೇ ಔಟಾದರೂ ಟ್ರಾವಿಸ್ ಹೆಡ್ ಆಕ್ರಮಣಕಾರಿ ಸ್ಫೋಟಕ ಆಟದ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಪವರ್ ಪ್ಲೇನಲ್ಲೇ ಅರ್ಧಶತಕ ಪೂರೈಸಿ, ದಾಖಲೆ ಬರೆದ ಹೆಡ್, ಕೇವಲ 24 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಿತ 62 ರನ್ ಚಚ್ಚಿದರು.
ಟ್ರಾವಿಸ್ ಹೆಡ್ ಜೊತೆಗೆ ಮುಂಬೈ ಬೌಲರ್ಗಳಿಗೆ ಬೆಂಡೆತ್ತಿದ ಎಡಗೈ ಆಟಗಾರ ಅಭಿಷೇಕ್ ಶರ್ಮಾ ಕೇವ 16 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದರು. ಸಿಕ್ಸರ್ಗಳ ಸುರಿಮಳೆಗೈದ ಶರ್ಮಾ ಮುಂಬೈ ಮೇಲೆ ಸವಾರಿ ಮಾಡಿ 23 ಬಾಲ್ಗಳಲ್ಲಿ 3 ಬೌಂಡರಿ, 7 ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು. ಪವರ್ಪ್ಲೇನಲ್ಲಿ 81 ರನ್ ಸಿಡಿಸಿದ ಎಸ್ಆರ್ಹೆಚ್, 10 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.
ಇಬ್ಬರ ಬಳಿಕ ಏಡನ್ ಮಾರ್ಕ್ರಮ್ ಮತ್ತು ಹೆನ್ರಿಚ್ ಕ್ಲಾಸೆನ್ ಜೊತೆಯಾಗಿ ರೌದ್ರಾವತಾರ ತೋರಿದರು. ಆರಂಭದಲ್ಲಿ ಹಾಕಿಕೊಟ್ಟಿದ್ದ ಭದ್ರಬುನಾದಿಗೆ ಕೈ ಜೋಡಿಸಿದ ಈ ಜೋಡಿ, ನೋಡ ನೋಡುತ್ತಲೇ 200, 250 ರನ್ಗಳ ಗಡಿ ದಾಟಿಸಿದರು. ಕ್ಲಾಸೆನ್ 34 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್, 235.29ರ ಸ್ಟ್ರೈಕ್ರೇಟ್ ಸಹಾಯದಿಂದ ಅಜೇಯ 80 ರನ್ ಚಚ್ಚಿದರು.
ಮತ್ತೊಂದೆಡೆ ಮಾರ್ಕ್ರಮ್ 28 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 42 ರನ್ ಗಳಿಸಿದರು. ಆ ಮೂಲಕ ಅತ್ಯುತ್ತಮ ಸಾಥ್ ನೀಡಿದರು. ಅಭಿಷೇಕ್ ಶರ್ಮಾ ಜೊತೆ ಅರ್ಧಶತಕ, ಕ್ಲಾಸೆನ್ ಜೊತೆ ಶತಕದ ಜೊತೆಯಾಟಕ್ಕೆ ಮಾರ್ಕ್ರಮ್ ನೆರವಾದರು. ಬ್ಯಾಟರ್ಗಳು ಅಬ್ಬರಿಸುತ್ತಿದ್ದರೆ, ಮುಂಬೈ ಬೌಲರ್ಗಳು ವಿಕೆಟ್ ಪಡೆಯಲು ಪರದಾಡಿದರು. ಇದರ ನಡುವೆಯೂ ಹಾರ್ದಿಕ್, ಜೆರಾಲ್ಡ್ ಕೊಯೆಟ್ಜಿ, ಪಿಯೂಷ್ ಚಾವ್ಲಾ ತಲಾ ಒಂದೊಂದು ವಿಕೆಟ್ ಪಡೆದರು.