ವೈಫಲ್ಯ ಅನುಭವಿಸಿದರೆ ಕಿತ್ತೆಸೆಯುವ ಚಾಳಿ; ಆವೃತ್ತಿಗೊಬ್ಬರಂತೆ ನಾಯಕರ ನೇಮಕ, ಹೀಗಿದೆ ಎಸ್ಆರ್ಎಚ್ ಇತಿಹಾಸ
Sunrisers Hyderabad : ಪ್ಯಾಟ್ ಕಮಿನ್ಸ್ ಅವರನ್ನು ನಾಯಕನಾಗಿ ನೇಮಿಸಿದ ಬೆನ್ನಲ್ಲೇ ಸನ್ರೈಸರ್ಸ್ ಹೈದರಾಬಾದ್ ಮೇಲೆ ಆಕ್ರೋಶ ವ್ಯಕ್ತವಾಗಿದೆ. ಆಟಗಾರರ ಮೇಲೆ ನಂಬಿಕೆ ಇಡದೆ ಸೀಸನ್ಗೊಬ್ಬರಂತೆ ನಾಯಕರನ್ನು ನೇಮಿಸುವುದಕ್ಕೆ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಮಾರ್ಚ್ 22ರಿಂದ ಶ್ರೀಮಂತ ಲೀಗ್ಗೆ ಚಾಲನೆ ಸಿಗಲಿದೆ. ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗ ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ನಾಯಕತ್ವದ ಬದಲಾವಣೆಯಾಗಿದೆ. ಸೌತ್ ಆಫ್ರಿಕಾದ ಏಡನ್ ಮಾರ್ಕ್ರಮ್ ಅವರನ್ನು ಕೆಳಗಿಳಿಸಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರಿಗೆ ನಾಯಕತ್ವ ವಹಿಸಲಾಗಿದೆ.
ಆದರೆ, ಕ್ಯಾಪ್ಟನ್ಸಿ ಬದಲಾವಣೆ ಬೆನ್ನಲ್ಲೇ ಸನ್ರೈಸರ್ಸ್ ಹೈದರಾಬಾದ್ ನಡೆಗೆ ಟೀಕೆ ವ್ಯಕ್ತವಾಗಿದೆ. ಆವೃತ್ತಿಗೊಬ್ಬರಂತೆ ನಾಯಕರನ್ನು ಬದಲಿಸಿ ಆಟಗಾರರ ಆತ್ಮ ವಿಶ್ವಾಸವನ್ನು ಕುಸಿಯುವಂತೆ ಮಾಡುತ್ತಿದೆ. ಇದೇ ಕಾರಣಕ್ಕೆ ಫ್ರಾಂಚೈಸಿ ಫೈನಲ್ಗೇರಲು ಪದೇ ಪದೇ ವಿಫಲವಾಗುತ್ತಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಒಂದೇ ಒಂದು ವರ್ಷ ಫೇಲ್ ಆಗಿದ್ದಕ್ಕೆ ನಾಯಕತ್ವದಿಂದ ತೆಗೆದುಹಾಕುವುದು ಯಾವ ರೀತಿಯ ನಂಬಿಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.
ಮಾರ್ಕ್ರಮ್ ಕಿತ್ತಾಕಿ ಕಮಿನ್ಸ್ಗೆ ಮಣೆ
2023ರಲ್ಲಿ ಹೈದರಾಬಾದ್ ತಂಡವನ್ನು ಸೇರಿಕೊಂಡ ಏಡನ್ ಮಾರ್ಕ್ರಮ್ ಅವರನ್ನು ನೂತನ ನಾಯಕರನನ್ನಾಗಿ ನೇಮಿಸಿತು. ಆದರೆ ಕಳೆದ ಆವೃತ್ತಿಯಲ್ಲಿ ಕಳಪೆ ನಾಯಕತ್ವ ನೀಡಿದ ಕಾರಣ ಅವರನ್ನು ಕೆಳಗಿಳಿಸಿದೆ. 2023ರ ಆರಂಭದಲ್ಲಿ ನಡೆದ ಎಸ್ಎಟಿ20 ಲೀಗ್ನಲ್ಲಿ ಎಸ್ಆರ್ಎಚ್ ಮಾಲೀಕತ್ವದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಚಾಂಪಿಯನ್ ಮಾಡಿದ್ದ ಕಾರಣಕ್ಕೆ ಮಾರ್ಕ್ರಮ್ರನ್ನು ಖರೀದಿಸಿ ನಾಯಕತ್ವ ನೀಡಿತ್ತು.
ಅಂದು ಯಶಸ್ವಿ ಕ್ಯಾಪ್ಟನ್ ಆಗಿದ್ದ ಕಾರಣಕ್ಕೆ ಐಪಿಎಲ್ನಲ್ಲೂ ತಂಡದ ಸಾರಥ್ಯ ವಹಿಸಿದ್ದ ಎಸ್ಆರ್ಎಚ್, ಇಂದು ವೈಫಲ್ಯ ಅನುಭವಿಸಿದ್ದಾರೆಂದು ಜವಾಬ್ದಾರಿಯಿಂದ ತೊಲಗಿಸಿದೆ. ಆಟಗಾರರ ಯಶಸ್ಸನ್ನು ಕಂಡು ಅವರಿಗೆ ಮಣೆ ಹಾಕುವ ಎಸ್ಆರ್ಎಚ್, ವೈಫಲ್ಯ ಅನುಭವಿಸಿದ ಅದೇ ಆಟಗಾರರಿಗೆ ಕೊಕ್ ನೀಡುವುದು ಯಾವ ನ್ಯಾಯ. ಒಂದೇ ಆವೃತ್ತಿಯಲ್ಲಿ ನಾಯಕತ್ವ ಕೆಟ್ಟದಾಗಿತ್ತು ಎಂದರೆ, ಅವರು ಕೆಟ್ಟ ನಾಯಕರೆಂದು ಅಲ್ಲ. ಕಮಿನ್ಸ್ಗೆ ನಾಯಕತ್ವ ನೀಡಲು ಆತನ ಯಶಸ್ಸೇ ಕಾರಣವಾಗಿದೆ.
2023ರಲ್ಲಿ ವಿಶ್ವಕಪ್, ಡಬ್ಲ್ಯುಟಿಸಿ ಗೆದ್ದಿದ್ದ ಕಮಿನ್ಸ್
ಪ್ಯಾಟ್ ಕಮಿನ್ಸ್ಗೆ ನಾಯಕತ್ವ ನೀಡಲು ಬೇರೆ ಕಾರಣವಲ್ಲ. ಅವರು ನಾಯಕನಾಗಿ ಕಳೆದ ವರ್ಷ ಅದ್ಭುತ ಪ್ರದರ್ಶನ ನೀಡಿದ್ದರು. ಎರಡು ಐಸಿಸಿ ಟ್ರೋಫಿ ಗೆದ್ದಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಚಾಂಪಿಯನ್ ಮಾಡಿದ್ದರು. ಅಲ್ಲದೆ, ದ್ವಿಪಕ್ಷೀಯ ಸರಣಿಗಳಲ್ಲೂ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಮೇಲೆ 20.50 ಕೋಟಿ ಸುರಿದ ಎಸ್ಆರ್ಎಚ್ ಈಗ ನಾಯಕತ್ವವನ್ನೂ ನೀಡಿದೆ.
ಕಳೆದ ಬಾರಿ ಎಸ್ಆರ್ಎಚ್ ಪ್ರದರ್ಶನ
ಕಳೆದ ಬಾರಿ ಸನ್ರೈಸರ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ತಂಡದಲ್ಲಿ ಘಟಾನುಘಟಿ ಆಟಗಾರರನ್ನೇ ಹೊಂದಿದ್ದರೂ ಅವರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಈ ಕಾರಣಕ್ಕೆ ಕಳೆದ ವರ್ಷ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಆಡಿದ 14 ಪಂದ್ಯಗಳಲ್ಲಿ 4 ಗೆಲುವು, 10 ಸೋಲಿನೊಂದಿಗೆ 8 ಅಂಕ ಮಾತ್ರ ಪಡೆದಿತ್ತು. ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದೆ.
ಆಟಗಾರರ ಮೇಲೆ ನಂಬಿಕೆ ಇಡಲ್ಲ ಎಸ್ಆರ್ಎಚ್
ಆಟಗಾರರ ಪ್ರದರ್ಶನ ಹೊರಬೇಕೆಂದರೆ ನಂಬಿಕೆ ಬಹಳ ಮುಖ್ಯ. ಆದರೆ ಸನ್ರೈಸರ್ಸ್ ಆ ಕೆಲಸಕ್ಕೆ ಮುಂದಾಗಲ್ಲ. ಈ ವರ್ಷ ಸರಿಯಾದ ಪ್ರದರ್ಶನ ನೀಡಲಿಲ್ಲವೆಂದರೆ ಅಂತಹ ಆಟಗಾರರನ್ನು ಲೀಗ್ ಮುಗಿದ ಬೆನ್ನಲ್ಲೇ ಮಿನಿ ಹರಾಜಿಗೆ ಬಿಟ್ಟು ಬಿಡುತ್ತದೆ. ಇದು ಆಟಗಾರರ ಆತ್ಮ ವಿಶ್ವಾಸ ಕುಸಿಯುವಂತೆ ಮಾಡುತ್ತದೆ. ಆಟಗಾರರ ಮೇಲೆ ನಂಬಿಕೆ ಇಡದ ಕಾರಣ ಫ್ರಾಂಚೈಸಿ ಸತತ ವೈಫಲ್ಯ ಅನುಭವಿಸುತ್ತಿದೆ.
ವಾರ್ನರ್-ವಿಲಿಯಮ್ಸನ್ ಹೆಚ್ಚು ಅವಧಿ
2013ರ ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ಗೆ ಎಂಟ್ರಿಕೊಟ್ಟಿತು. ಅಂದಿನಿಂದ ಈವರೆಗೂ ಅಂದರೆ 11 ಆವೃತ್ತಿಗಳಲ್ಲಿ 10 ಮಂದಿ ನಾಯಕರಾಗಿ ನೇಮಕಗೊಂಡಿದ್ದಾರೆ. ಆದರೆ ಈ ಅವಧಿಯಲ್ಲಿ ದೀರ್ಘಕಾಲ ನಾಯಕರಾಗಿ ಸೇವೆ ಸಲ್ಲಿಸಿದ್ದು ಮಾತ್ರ ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್. ವಾರ್ನರ್ 2015ರಿಂದ 2021ರ ತನಕ ನಾಯಕನಾಗಿದ್ದರು. 67 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಇನ್ನು ಕೇನ್ ವಿಲಿಯಮ್ಸನ್ (2018-2022 ವಾರ್ನರ್ ಅಲಭ್ಯತೆ ಸೇರಿ) 46 ಪಂದ್ಯಗಳಲ್ಲಿ ನಾಯಕನಾಗಿದ್ದರು. ಆದರೆ ಒಬ್ಬರು ಪ್ರಶಸ್ತಿ ಗೆದ್ದುಕೊಟ್ಟರೆ, ಮತ್ತೊಬ್ಬರು ತಂಡವನ್ನು ರನ್ನರ್ಅಪ್ ಮಾಡಿದ್ದರು. ಆದರೆ ಅವರೊಂದಿಗೆ ಅಗೌರವವಾಗಿ ವರ್ತಿಸಿ ತಂಡದಿಂದ ಕೈಬಿಟ್ಟಿತು.
2013ರಲ್ಲಿ ಎಸ್ಆರ್ಎಚ್ಗೆ ಮೂವರು ನಾಯಕರು
ಐಪಿಎಲ್ಗೆ ಪ್ರವೇಶಿಸಿದ 2013ರ ವರ್ಷವೇ ಆ ಫ್ರಾಂಚೈಸಿಯನ್ನು ಮೂವರು ಮುನ್ನಡೆಸಿದ್ದರು. ಮೊದಲು ಕುಮಾರ್ ಸಂಗಕ್ಕಾರ, ಕ್ಯಾಮರೂನ್ ವೈಟ್, ಧವನ್ ನಾಯಕನಾಗಿದ್ದರು. ಇನ್ನು ಶಿಖರ್ ಧವನ್ 1 ವರ್ಷ, ಡರೇನ್ ಸ್ಯಾಮಿ 1 ವರ್ಷ, ಭುವನೇಶ್ವರ್ ಕುಮಾರ್ 8 ಪಂದ್ಯ, ಮನೀಶ್ ಪಾಂಡೆ 1 ಪಂದ್ಯ, ಮಾರ್ಕ್ರಮ್ 1 ವರ್ಷ ಎಸ್ಆರ್ಎಚ್ ಪರ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.