ಕನ್ನಡ ಸುದ್ದಿ  /  ಕ್ರಿಕೆಟ್  /  ಡಬ್ಲ್ಯುಟಿಸಿ-ವಿಶ್ವಕಪ್‌ ಬಳಿಕ ಐಪಿಎಲ್‌ ಫೈನಲ್;‌ ನಾಯಕನಾಗಿ ಹ್ಯಾಟ್ರಿಕ್ ಗೆಲುವಿನತ್ತ ಪ್ಯಾಟ್‌ ಕಮಿನ್ಸ್‌

ಡಬ್ಲ್ಯುಟಿಸಿ-ವಿಶ್ವಕಪ್‌ ಬಳಿಕ ಐಪಿಎಲ್‌ ಫೈನಲ್;‌ ನಾಯಕನಾಗಿ ಹ್ಯಾಟ್ರಿಕ್ ಗೆಲುವಿನತ್ತ ಪ್ಯಾಟ್‌ ಕಮಿನ್ಸ್‌

ಸದ್ಯ ಜಾಗತಿಕ ಕ್ರಿಕೆಟ್‌ನಲ್ಲಿ ಪ್ಯಾಟ್‌ ಕಮಿನ್ಸ್‌ ಯಶಸ್ವಿ ನಾಯಕ ಎಂದರೆ ಅತಿಶಯೋಕ್ತಿ ಆಗದು. ಇವರ ನಾಯಕತ್ವದಲ್ಲಿ ಸಾಲು ಸಾಲು ಕಪ್‌ ಗೆಲುವೇ ಇದಕ್ಕೆ ಸಾಕ್ಷಿ. ಇದೀಗ ಕಮಿನ್ಸ್‌ ಕಣ್ಣು ಐಪಿಎಲ್‌ 2024ರ ಟ್ರೋಫಿ ಮೇಲಿದೆ.

ಡಬ್ಲ್ಯುಟಿಸಿ-ವಿಶ್ವಕಪ್‌ ಬಳಿಕ ಐಪಿಎಲ್‌ ಫೈನಲ್;‌ ಹ್ಯಾಟ್ರಿಕ್ ಗೆಲುವಿನತ್ತ ಪ್ಯಾಟ್‌ ಕಮಿನ್ಸ್
ಡಬ್ಲ್ಯುಟಿಸಿ-ವಿಶ್ವಕಪ್‌ ಬಳಿಕ ಐಪಿಎಲ್‌ ಫೈನಲ್;‌ ಹ್ಯಾಟ್ರಿಕ್ ಗೆಲುವಿನತ್ತ ಪ್ಯಾಟ್‌ ಕಮಿನ್ಸ್

ಚೆನ್ನೈನಲ್ಲಿ ನಡೆದ ಐಪಿಎಲ್‌ 2024ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸಿದ ಸನ್‌ರೈಸರ್ಸ್ ಹೈದರಾಬಾದ್‌ (SRH vs RR) ಫೈನಲ್‌ಗೆ ಲಗ್ಗೆ ಇಟ್ಟಿದೆ. 2016ರ ಚಾಂಪಿಯನ್ ತಂಡವು, ಇದೀಗ 5 ವರ್ಷಗಳ ನಂತರ ಮತ್ತೊಮ್ಮೆ ಫೈನಲ್‌ ಪ್ರವೇಶ ಮಾಡಿದೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವಿ ನಾಯಕ ಪ್ಯಾಟ್ ಕಮಿನ್ಸ್ (Pat Cummins, ಅದ್ಭುತ ಪ್ರದರ್ಶನ ನೀಡಿದರು. ಇಷ್ಟೇ ಅಲ್ಲ ಸ್ಲೋ ಪಿಚ್‌ನಲ್ಲಿ ಟಾಸ್‌ ಗೆದ್ದರೂ ತಂಡದ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಂಡರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೇಲಿಂದ ಮೇಲೆ ಯಶಸ್ಸು ಸಾಧಿಸಿರುವ ಕಮಿನ್ಸ್‌, ಇದೀಗ ಐಪಿಎಲ್‌ನಲ್ಲಿ ನಾಯಕನಾಗಿ ಮೊದಲ ಆವೃತ್ತಿಯಲ್ಲೇ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆಸ್ಟ್ರೇಲಿಯಾ ತಂಡದ ನಾಯಕನಾಗಿ ಕಮಿನ್ಸ್‌ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಇದೀಗ ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿಯೂ ಇದೇ ಅದೃಷ್ಟ ಮುಂದುವರೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅಂದರೆ ಪ್ಯಾಟ್‌ ಮುಂದೆ ಹ್ಯಾಟ್ರಿಕ್‌ ಗೆಲುವಿನ ಗುರಿಯಿದೆ.

ಮೇ 24ರ ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 175 ರನ್ ಗುರಿ ಪಡೆದ ರಾಜಸ್ಥಾನವು, 139 ರನ್‌ಗಳಿಗೆ ಇನ್ನಿಂಗ್ಸ್‌ ಮುಕ್ತಾಯಗೊಳಿಸಿತು. ಇದರೊಂದಿಗೆ 36 ರನ್‌ಗಳ ಜಯ ಸಾಧಿಸಿದ ಎಚ್‌ಆರ್‌ಎಚ್‌ ಫೈನಲ್‌ಗೆ ಲಗ್ಗೆ ಹಾಕಿತು. ಇದು ದೊಡ್ಡ ಮಟ್ಟದ ಟೂರ್ನಿಯಲ್ಲಿ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ತಂಡವು ಮೂರನೇ ಬಾರಿ ಫೈನಲ್‌ ತಲುಪಿದೆ.

ಭಾರತ ಮಣಿಸಿ ಏಕದಿನ ವಿಶ್ವಕಪ್‌ ಗೆಲುವು

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಮಿನ್ಸ್‌ ಫೈನಲ್‌ನತ್ತ ಕೊಂಡೊಯ್ದಿದ್ದು ಗೊತ್ತೇ ಇದೆ. ಬಲಿಷ್ಠ ಆತಿಥೇಯ ಭಾರತ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸಿದ ಆಸೀಸ್‌, ಚಾಂಪಿಯನ್‌ ಆಗಿ ಹೊಹೊಮ್ಮಿತ್ತು. ಭಾರತದ ಅಭಿಮಾನಿಗಳೇ ತುಂಬಿದ್ದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗೆಲ್ಲುವ ಫೇವರೆಟ್‌ ತಂಡವನ್ನೇ ಮಣಿಸಿ ಆಸೀಸ್‌ ವಿಶ್ವಚಾಂಪಿಯನ್‌ ಆಗಿ ಮೆರೆಯಿತು. ನಾಯಕನಾಗಿ ಕಮಿನ್ಸ್‌ ಚಾಣಾಕ್ಷತನ ಪ್ರದರ್ಶಿಸಿದ್ದರರು.

ಡಬ್ಲ್ಯೂಟಿಸಿ ಫೈನಲ್‌ ಗೆಲುವು

ಅದಕ್ಕೂ ಹಿಂದೆ, 2023ರ ಜೂನ್‌ ತಿಂಗಳಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಶಾಕ್‌ ಕೊಟ್ಟಿತ್ತು. ಗೆಲ್ಲುವ ಫೇವರೆಟ್‌ ತಂಡವನ್ನು 209 ರನ್‌ಗಳಿಂದ ಮಣಿಸಿತ್ತು. ಆಗಲೂ ಕಾಂಗರೂ ಪಡೆಯನ್ನು ಮುನ್ನಡೆಸಿದವರು ಪ್ಯಾಟ್‌ ಕಮಿನ್ಸ್. ಹೀಗೆ ನಾಯಕನಾಗಿ ಮಹತ್ವದ ಟೂರ್ನಿಗಳನ್ನು ಗೆಲ್ಲುವುದು ಕಮಿನ್ಸ್‌ಗೆ ಅಭ್ಯಾಸವಾಗಿದೆ. ಇದೀಗ ಐಪಿಎಲ್‌ನಲ್ಲಿ ತಂಡವೊಂದರ ನಾಯಕತ್ವವನ್ನು ಇದೇ ಮೊದಲ ಬಾರಿಗೆ ವಹಿಸಿರುವ ಪ್ಯಾಟ್‌, ಮತ್ತೊಂದು ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ. ಸತತ ಎರಡು ಪ್ರಮುಖ ಫೈನಲ್‌ ಗೆದ್ದಿರುವ ಅವರು, ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ | ಐಪಿಎಲ್ 2024: ವಿರಾಟ್‌ ಕೊಹ್ಲಿ ಆರೆಂಜ್ ಕ್ಯಾಪ್ ಗೆಲ್ಲೋದು ಖಚಿತ; ಮತ್ತೊಂದು ಮುಕುಟ ನಿರೀಕ್ಷೆಯಲ್ಲಿ ಪರ್ಪಲ್ ಪಟೇಲ್

ಪಂದ್ಯದ ಬಳಿಕ ಮಾತನಾಡಿದ ಪ್ಯಾಟ್ ಕಮ್ಮಿನ್ಸ್, “ತಂಡದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನೀವು ನೋಡುತ್ತಿರುವಂತೆ ತಂಡದಲ್ಲಿ ಉತ್ತಮ ಜೋಶ್‌ ಇದೆ. ಋತುವಿನ ಆರಂಭದಲ್ಲಿ ಫೈನಲ್ ಪ್ರವೇಶಿಸುವುದು ನಮ್ಮ ಗುರಿಯಾಗಿತ್ತು. ನಾವೀಗ ಅದನ್ನು ಸಾಧಿಸಿದ್ದೇವೆ. ಬ್ಯಾಟಿಂಗ್ ನಮ್ಮ ಶಕ್ತಿ ಎಂದು ಮೊದಲೇ ನಮಗೆ ತಿಳಿದಿತ್ತು. ತಂಡದಲ್ಲಿರುವ ಅನುಭವವನ್ನು ನಾವೆಂದೂ ಲಘುವಾಗಿ ಪರಿಗಣಿಸಿಲ್ಲ. ಭುವನೇಶ್ವರ್, ನಟರಾಜನ್ ಮತ್ತು ಉನದ್ಕತ್ ನನ್ನ ಜವಾಬ್ದಾರಿಯನ್ನು ಸುಲಭಗೊಳಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | ಐಪಿಎಲ್​ ಅಂಕಪಟ್ಟಿ ಅಗ್ರಸ್ಥಾನಿಗಳ ನಡುವೆಯೇ ಅಂತಿಮ ಹಣಾಹಣಿ; ಕೆಕೆಆರ್​ vs ಎಸ್​ಆರ್​ಹೆಚ್​ ಫೈನಲ್​ ಎಲ್ಲಿ, ಯಾವಾಗ?

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024