ಎಸ್‌ಆರ್‌ಎಚ್‌ vs ಡೆಲ್ಲಿ ಕ್ಯಾಪಿಟಲ್ಸ್: ಹೈದರಾಬಾದ್‌ ಹವಾಮಾನ, ಪಿಚ್‌ ವರದಿ ಹಾಗೂ ಸಂಭಾವ್ಯ ಆಡುವ ಬಳಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಎಸ್‌ಆರ್‌ಎಚ್‌ Vs ಡೆಲ್ಲಿ ಕ್ಯಾಪಿಟಲ್ಸ್: ಹೈದರಾಬಾದ್‌ ಹವಾಮಾನ, ಪಿಚ್‌ ವರದಿ ಹಾಗೂ ಸಂಭಾವ್ಯ ಆಡುವ ಬಳಗ

ಎಸ್‌ಆರ್‌ಎಚ್‌ vs ಡೆಲ್ಲಿ ಕ್ಯಾಪಿಟಲ್ಸ್: ಹೈದರಾಬಾದ್‌ ಹವಾಮಾನ, ಪಿಚ್‌ ವರದಿ ಹಾಗೂ ಸಂಭಾವ್ಯ ಆಡುವ ಬಳಗ

ಐಪಿಎಲ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಕೊನೆಯ 2 ಪಂದ್ಯಗಳಲ್ಲಿ ಸತತ ಸೋಲು ಕಂಡಿದೆ. ಹೀಗಾಗಿ ಮುಂದೆ ಗೆಲ್ಲಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ. ಅತ್ತ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು, ಡೆಲ್ಲಿ ವಿರುದ್ಧ ಸೋತರೆ ಐಪಿಎಲ್‌ ಪ್ಲೇಆಫ್‌ ರೇಸ್‌ನಿಂದ ಹೊರಬೀಳಲಿದೆ.

ಎಸ್‌ಆರ್‌ಎಚ್‌ vs ಡೆಲ್ಲಿ ಕ್ಯಾಪಿಟಲ್ಸ್: ಹೈದರಾಬಾದ್‌ ಹವಾಮಾನ, ಪಿಚ್‌ ವರದಿ
ಎಸ್‌ಆರ್‌ಎಚ್‌ vs ಡೆಲ್ಲಿ ಕ್ಯಾಪಿಟಲ್ಸ್: ಹೈದರಾಬಾದ್‌ ಹವಾಮಾನ, ಪಿಚ್‌ ವರದಿ (PTI)

ಇಂಡಿಯನ್ ಪ್ರೀಮಿಯರ್ ಲೀಗ್‌ 18ನೇ ಆವೃತ್ತಿಯ 55ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Sunrisers Hyderabad vs Delhi Capitals) ತಂಡಗಳು ಎದುರಾಗಲಿವೆ. ಮೇ 5ರ ಸೋಮವಾರ, ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ತವರು ನೆಲದಲ್ಲಿ ಗೆದ್ದು ಪ್ಲೇ ಆಫ್‌ ಕನಸನ್ನು ಜೀವಂತವಾಗಿಡುವ ತವಕದಲ್ಲಿ ಎಸ್‌ಆರ್‌ಎಚ್‌ ಕಣಕ್ಕಿಳಿಯಲಿದೆ. ಅತ್ತ ತವರು ಮೈದಾನದಲ್ಲಿನ ಸೋಲಿನ ನೋವನ್ನು ಮರೆತು ಆಡಲು ಅಕ್ಷರ್‌ ಪಟೇಲ್‌ ನೇತೃತ್ವದ ಕ್ಯಾಪಿಟಲ್ಸ್‌ ಸಜ್ಜಾಗಿದೆ.

ಡೆಲ್ಲಿ ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಸತತ ಸೋಲು ಕಂಡಿದ್ದು, ಮುಂದೆ ಗೆಲ್ಲಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ. ಅತ್ತ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು, ಡೆಲ್ಲಿ ವಿರುದ್ಧ ಸೋತರೆ ಈ ಬಾರಿಯ ಐಪಿಎಲ್‌ನ ಪ್ಲೇಆಫ್‌ ರೇಸ್‌ನಿಂದ ಹೊರಬೀಳಲಿದೆ. ತಂಡದಲ್ಲಿ ಪ್ರಬಲ ಆಟಗಾರರ ದಂಡೇ ಇದ್ದರೂ, ಗೆಲ್ಲಲು ಪರದಾಡುತ್ತಿದೆ. ತನ್ನ ನೈಜ ಸಾಮರ್ಥ್ಯಕ್ಕನುಗುಣವಾಗಿ ಆಡಲು ವಿಫಲವಾಗುತ್ತಿದೆ.

ಹೈದರಾಬಾದ್ ಹವಾಮಾನ ವರದಿ

ಪಂದ್ಯದ ದಿನವಾದ ಸೋಮವಾರ ಸಂಜೆ ಹೈದರಾಬಾದ್‌ ನಗರದಲ್ಲಿ ತಾಪಮಾನವು 26 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆ ಇದೆ. ಮಳೆಯಾಗುವ ಸಾಧ್ಯತೆ ಕೇವಲ 1 ಶೇಕಡದಷ್ಟು ಮಾತ್ರ ಇರುವುದರಿಂದ, ಪಂದ್ಯವು ಪೂರ್ಣ ಪ್ರಮಾಣದಲ್ಲಿ ನಡೆಯುವ ನಿರೀಕ್ಷೆ ಇದೆ.

ರಾಜೀವ್ ಗಾಂಧಿ ಕ್ರೀಡಾಂಗಣದ ಪಿಚ್ ವರದಿ

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಸಮತಟ್ಟಾಗಿದ್ದು, ಬ್ಯಾಟರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಇದೇ ಮೈದಾನದಲ್ಲಿ ಆತಿಥೇಯ ಎಸ್‌ಆರ್‌ಎಚ್‌ ತಂಡವು ಹಲವು ಬೃಹತ್‌ ರನ್‌ಗಳ ದಾಖಲೆ ನಿರ್ಮಿಸಿದೆ. ಆದರೆ ಇಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಹೊರಬಂತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್, ಮುಂಬೈ ವಿರುದ್ಧ ಕೇವಲ 143 ರನ್‌ ಮಾತ್ರ ಗಳಿಸಿತು. ಇದನ್ನು ಎಂಐ ತಂಡ ಸುಲಭವಾಗಿ ಚೇಸ್‌ ಮಾಡಿತು. ಪಿಚ್‌ನಲ್ಲಿ ವೇಗಿಗಳು ಮೇಲುಗೈ ಸಾಧಿಸುವ ನಿರೀಕ್ಷೆ ಇದೆ.

ಎಸ್‌ಆರ್‌ಎಚ್ ತಂಡದಲ್ಲಿ ಸದ್ಯ ಯಾವುದೇ ಗಾಯದ ವರದಿಯಾಗಿಲ್ಲ. ಅತ್ತ ಕೆಕೆಆರ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಕ್ಷರ್ ಪಟೇಲ್‌ ಎಡಗೈಗೆ ಗಾಯ ಮಾಡಿಕೊಂಡಿದ್ದರು. ಆದರೆ ಚೇಸಿಂಗ್‌ ವೇಳೆ ಬ್ಯಾಟಿಂಗ್‌ ಮಾಡಿದ್ದರು. ಅವರ ಗಾಯ ಅಥವಾ ಲಭ್ಯತೆಯ ಕುರಿತು ತಂಡದಿಂದ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಅವರು ಎಸ್‌ಆರ್‌ಎಚ್‌ ವಿರುದ್ಧ ಆಡುವ ಸಾಧ್ಯತೆ ಇದೆ.

ಸನ್‌ರೈಸರ್ಸ್‌ ಹೈದಾಬಾದ್‌ ಸಂಭಾವ್ಯ ತಂಡ

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮ್ಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ.

ಡೆಲ್ಲಿ ಕ್ಯಾಪಿಟಲ್ಸ್‌ ಸಂಭಾವ್ಯ ತಂಡ

ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ದುಷ್ಮಂತ ಚಮೀರಾ, ಮುಖೇಶ್ ಕುಮಾರ್, ಅಶುತೋಷ್ ಶರ್ಮಾ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.