ಸನ್‌ರೈಸರ್ಸ್‌ ಹೈದರಾಬಾದ್‌ vs ಡೆಲ್ಲಿ ಕ್ಯಾಪಿಟಲ್ಸ್‌; ಮಾಡು ಇಲ್ಲವೇ ಮಡಿ ಪಂದ್ಯದ 10 ಮುಖ್ಯಾಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಸನ್‌ರೈಸರ್ಸ್‌ ಹೈದರಾಬಾದ್‌ Vs ಡೆಲ್ಲಿ ಕ್ಯಾಪಿಟಲ್ಸ್‌; ಮಾಡು ಇಲ್ಲವೇ ಮಡಿ ಪಂದ್ಯದ 10 ಮುಖ್ಯಾಂಶಗಳು

ಸನ್‌ರೈಸರ್ಸ್‌ ಹೈದರಾಬಾದ್‌ vs ಡೆಲ್ಲಿ ಕ್ಯಾಪಿಟಲ್ಸ್‌; ಮಾಡು ಇಲ್ಲವೇ ಮಡಿ ಪಂದ್ಯದ 10 ಮುಖ್ಯಾಂಶಗಳು

ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇಆಫ್‌ ಪ್ರವೇಶಿಸಲು ಎದುರು ನೋಡುತ್ತಿವೆ. ಉಭಯ ತಂಡಗಳ ನಡುವಿನ ಐಪಿಎಲ್ ಪಂದ್ಯ ನಿರ್ಣಾಯಕವಾಗಿದ್ದು, ಸೋತರೆ ಎಸ್‌ಆರ್‌ಎಚ್‌ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ vs ಡೆಲ್ಲಿ ಕ್ಯಾಪಿಟಲ್ಸ್‌; ಐಪಿಎಲ್‌ ಪಂದ್ಯದ 10 ಮುಖ್ಯಾಂಶಗಳು
ಸನ್‌ರೈಸರ್ಸ್‌ ಹೈದರಾಬಾದ್‌ vs ಡೆಲ್ಲಿ ಕ್ಯಾಪಿಟಲ್ಸ್‌; ಐಪಿಎಲ್‌ ಪಂದ್ಯದ 10 ಮುಖ್ಯಾಂಶಗಳು (PTI)

ಐಪಿಎಲ್ 2025ರ ಆವೃತ್ತಿಯು ಅಂತಿಮ ಹಂತಕ್ಕೆ ಬಂದರೂ, ಇದುವರೆಗೂ ಯಾವುದೇ ತಂಡ ಪ್ಲೇಆಫ್‌ ಹಂತ ಪ್ರವೇಶಿಸಿಲ್ಲ. ಈಗಾಗಲೇ ಎರಡು ತಂಡಗಳು (ಸಿಎಸ್‌ಕೆ ಮತ್ತು ರಾಜಸ್ಥಾನ್‌ ರಾಯಲ್ಸ್)‌ ಟೂರ್ನಿಯಿಂದ ಎಲಿಮನೇಟ್‌ ಆಗಿವೆ. ಈ ನಡುವೆ ಅಗ್ರ ನಾಲ್ಕು ಸ್ಥಾನಗಳಿಗೆ ಇನ್ನೂ ಪೈಪೋಟಿ ಮುಂದುವರೆದಿವೆ. ಟೂರ್ನಿಯಲ್ಲಿ ನಾಳೆ (ಮೇ 5) ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿದ್ದು, ಎಸ್‌ಆರ್‌ಎಚ್‌ ತವರು ಮೈದಾನ ರಾಜೀವ್‌ ಗಾಂಧಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಪ್ಲೇ ಆಫ್‌ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದೆ. ಪ್ರಮುಖ ಪಂದ್ಯದ 10 ಪ್ರಮುಖ ಅಂಶಗಳನ್ನು ನೋಡೋಣ.

  • ಡೆಲ್ಲಿ ತಂಡವು ಟೂರ್ನಿಯನ್ನು ಸತತ ಗೆಲುವುಗಳೊಂದಿಗೆ ಅಜೇಯವಾಗಿ ಆರಂಭಿಸಿತು. ಮೊದಲ ಆರು ಪಂದ್ಯಗಳಲ್ಲಿ ಐದರಲ್ಲಿ ಜಯಭೇರಿ ಬಾರಿಸಿತು. ಆದರೆ ಕೊನೆಯ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಿಂದ ಹೊರಬಿದ್ದಿದೆ.
  • ಅತ್ತ ಸನ್‌ರೈಸರ್ಸ್‌ ತಂಡವು ಐಸಿಯುನಲ್ಲಿ ಇರುವಂಥ ಸನ್ನಿವೇಶದಲ್ಲಿದೆ. ಈವರೆಗೆ ಆಡಿದ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು, ಟೂರ್ನಿಯಿಂದ ಎಲಿಮನೇಟ್ ಆಗುವ ಭೀತಿಯಲ್ಲಿದೆ. ಇದೀಗ ಡೆಲ್ಲಿ ವಿರುದ್ಧ ಸೋತರೆ ಅಧಿಕೃತವಾಗಿ ಹೊರಬೀಳಲಿದೆ.
  • ಉಭಯ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ಸನ್‌ರೈಸರ್ಸ್‌ ತಂಡ 13ರಲ್ಲಿ ಗೆದ್ದರೆ, ಡೆಲ್ಲಿ ತಂಡ 12 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
  • ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ ಹೆಚ್ಚಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ತವರನ ಹೊರಗೆ ಆಡಿದ 5 ಪಂದ್ಯಗಳಲ್ಲಿ 90ರ ಸರಾಸರಿಯಲ್ಲಿ 270 ರನ್ ಗಳಿಸಿದ್ದಾರೆ. 164ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ 3 ಅರ್ಧಶತಕ ಬಾರಿಸಿದ್ದಾರೆ.
  • ತಮ್ಮದೇ ತವರು ಮೈದಾನ ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಕನ್ನಡಿಗನ ಬ್ಯಾಟ್‌ ಅಷ್ಟೊಂದು ಸದ್ದು ಮಾಡಿಲ್ಲ. 4 ಇನ್ನಿಂಗ್ಸ್‌ಗಳಲ್ಲಿ 25.3ರ ಸರಾಸರಿಯಲ್ಲಿ ಕೇವಲ 101 ರನ್‌ಗಳನ್ನು ಗಳಿಸಿದ್ದಾರೆ. ಇಲ್ಲಿ ಅರ್ಧಶತಕವಿಲ್ಲ. ಕೆಕೆಆರ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಏಳು ರನ್ ಗಳಿಸಿ ಔಟಾಗುವ ಮೂಲಕ, ಪ್ರಸಕ್ತ ಋತುವಿನಲ್ಲಿ ಇದೇ ಮೊದಲ ಬಾರಿಗೆ ಸಿಂಗಲ್ ಡಿಜಿಟ್ ಸ್ಕೋರ್ ಗಳಿಸಿದರು.
  • ಸನ್‌ರೈಸರ್ಸ್‌ ವಿರುದ್ಧ ರಾಹುಲ್ 43 ರನ್ ಗಳಿಸಿದರೆ, ಟಿ20ಯಲ್ಲಿ ವೇಗವಾಗಿ (ಇನ್ನಿಂಗ್ಸ್ ವಿಷಯದಲ್ಲಿ) 8000 ರನ್ ಗಳಿಸಿದ ಬ್ಯಾಟರ್‌ ಆಗಲಿದ್ದಾರೆ.
  • ಪಂದ್ಯದಲ್ಲಿ ಆಸೀಸ್‌ ಪ್ರಭಾವಿ ಆಟಗಾರರ ಆಟ ಕುತೂಹಲಕಾರಿಯಾಗಿ ಇರಲಿದೆ. ಡೆಲ್ಲಿ ತಂಡದ ಮಿಚೆಲ್ ಸ್ಟಾರ್ಕ್ ಈ ಹಿಂದೆ ಟ್ರಾವಿಸ್ ಹೆಡ್ ಮೇಲೆ ಒತ್ತಡ ಹೇರಿದ್ದಾರೆ. ಕಳೆದ ಋತುವಿನಲ್ಲಿ ಕೆಕೆಆರ್ ಪರ ಆಡಿದ್ದ ಸ್ಟಾರ್ಕ್, ಪ್ಲೇಆಫ್‌ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಹೆಡ್ ಅವರನ್ನು ಔಟ್ ಮಾಡಿದ್ದರು. ಈ ಋತುವಿನಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾದಾಗಲೂ, ಹೆಡ್‌ರನ್ನು ಸ್ಟಾರ್ಕ್ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.
  • ಹೆಡ್ ಮತ್ತು ಸ್ಟಾರ್ಕ್‌ ಈವರೆಗೆ ಎಲ್ಲಾ ಮಾದರಿಗಳಲ್ಲಿ 11 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು, ಅದರಲ್ಲಿ ಆರು ಬಾರಿ ಔಟ್ ಮಾಡಿದ್ದಾರೆ. ವಿಶೇಷವೆಂದರೆ 4 ಬಾರಿ ಹೆಡ್ ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದ್ದಾರೆ. 3 ಬಾರಿ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ಬಲಿಯಾಗಿದ್ದಾರೆ. ಐಪಿಎಲ್‌ನಲ್ಲಿ ಎರಡು ಬಾರಿ ಬ್ಯಾಟಿಂಗ್ ಮಾಡಿದ್ದು, ಎರಡು ಸಲವೂ ಔಟಾಗಿದ್ದಾರೆ.
  • ಮೊಹಮ್ಮದ್ ಶಮಿ ಮತ್ತು ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ಫಾಫ್ ಡು ಪ್ಲೆಸಿಸ್ ಅತ್ಯುತ್ತಮ ಟಿ20 ದಾಖಲೆ ಹೊಂದಿದ್ದಾರೆ. ಕಮಿನ್ಸ್ ವಿರುದ್ಧ ಆಡಿದ 12 ಇನ್ನಿಂಗ್ಸ್‌ಗಳಲ್ಲಿ 148 ರನ್ ಗಳಿಸಿದ್ದಾರೆ. 3 ಬಾರಿ ಮಾತ್ರ ಔಟಾಗಿದ್ದಾರೆ. 49.3ರ ಸರಾಸರಿ ಹಾಗೂ 192ರ ಸ್ಟ್ರೈಕ್ ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ. ಮೊಹಮ್ಮದ್ ಶಮಿ ವಿರುದ್ಧ ಆಡಿದ 11 ಇನ್ನಿಂಗ್ಸ್‌ಗಳಲ್ಲಿ 118 ರನ್ ಗಳಿಸಿ ಕೇವಲ ಎರಡು ಬಾರಿ ಮಾತ್ರ ಔಟಾಗಿದ್ದಾರೆ.
  • ಪಂದ್ಯದ ದಿನ ಸಂಜೆ ಹೈದರಾಬಾದ್‌ನಲ್ಲಿ ತಾಪಮಾನವು 26 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆ ಇದೆ. ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಹೀಗಾಗಿ ಸಂಪೂರ್ಣ ಪಂದ್ಯ ನಡೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ | ಮತ್ತೆ ಹಳಿ ತಪ್ಪಿದ ಡೆಲ್ಲಿ ಕ್ಯಾಪಿಟಲ್ಸ್; ಗೆಲುವಿನ ಲಯಕ್ಕೆ ಮರಳಿದ ಕೆಕೆಆರ್​​ಗೆ ಪ್ಲೇಆಫ್ ಆಸೆ ಜೀವಂತ!

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.