ಎಸ್‌ಆರ್‌ಎಚ್‌ vs ಎಂಐ ಐಪಿಎಲ್‌ ಪಂದ್ಯ: ಹೈದರಾಬಾದ್‌ ಪಿಚ್‌ ಹವಾಮಾನ ವರದಿ, ಸಂಭಾವ್ಯ ಆಡುವ ಬಳಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಎಸ್‌ಆರ್‌ಎಚ್‌ Vs ಎಂಐ ಐಪಿಎಲ್‌ ಪಂದ್ಯ: ಹೈದರಾಬಾದ್‌ ಪಿಚ್‌ ಹವಾಮಾನ ವರದಿ, ಸಂಭಾವ್ಯ ಆಡುವ ಬಳಗ

ಎಸ್‌ಆರ್‌ಎಚ್‌ vs ಎಂಐ ಐಪಿಎಲ್‌ ಪಂದ್ಯ: ಹೈದರಾಬಾದ್‌ ಪಿಚ್‌ ಹವಾಮಾನ ವರದಿ, ಸಂಭಾವ್ಯ ಆಡುವ ಬಳಗ

ಎಸ್‌ಆರ್‌ಎಚ್‌ ತಂಡವು ಐಪಿಎಲ್‌ 18ನೇ ಆವೃತ್ತಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಸೋತು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡವು ಟೂರ್ನಿಯಲ್ಲಿ ಉಳಿದ ಎಲ್ಲಾ 6 ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಎಸ್‌ಆರ್‌ಎಚ್‌ vs ಎಂಐ ಐಪಿಎಲ್‌ ಪಂದ್ಯ: ಹೈದರಾಬಾದ್‌ ಪಿಚ್‌ ಹವಾಮಾನ ವರದಿ, ಸಂಭಾವ್ಯ ತಂಡ
ಎಸ್‌ಆರ್‌ಎಚ್‌ vs ಎಂಐ ಐಪಿಎಲ್‌ ಪಂದ್ಯ: ಹೈದರಾಬಾದ್‌ ಪಿಚ್‌ ಹವಾಮಾನ ವರದಿ, ಸಂಭಾವ್ಯ ತಂಡ (PTI)

ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಮುಂಬರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ನಡುವೆ 2025ರ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಮುಖಾಮುಖಿ ಪಂದ್ಯ ನಡೆಯುತ್ತಿದೆ. ಹೀಗಾಗಿ ಇದು ಸೇಡಿನ ಪಂದ್ಯ. ಏಪ್ರಿಲ್ 23ರ ಬುಧವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಸನ್‌ರೈಸರ್ಸ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಇದೇ ಎಂಐ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಸೋಲು ಕಂಡಿತ್ತು. ಮತ್ತೇ ಇದೇ ತಂಡವನ್ನು ತವರಿನಲ್ಲಿ ಎದುರಿಸಲು ಸಜ್ಜಾಗಿದೆ.

ಕಳೆದ ಆವೃತ್ತಿಯ ಫೈನಲಿಸ್ಟ್‌ ಆಗಿರುವ ಎಸ್‌ಆರ್‌ಎಚ್‌, ಈ ಬಾರಿ ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋತು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಸದ್ಯ ಹೈದರಾಬಾದ್ ತಂಡವು ಟೂರ್ನಿಯಲ್ಲಿ ಉಳಿದಿರುವ ಎಲ್ಲಾ ಆರು ಪಂದ್ಯಗಳನ್ನು ಗೆದ್ದರೆ, ಪ್ಲೇಆಫ್‌ ಹಂತಕ್ಕೆ ಪ್ರವೇಶಿಸುವ ಭರವಸೆ ಉಳಿಸಿಕೊಳ್ಳಬಹುದು. ಒಂದು ಸೋಲು ಎದುರಾದರೂ, ತಂಡದ ಅವಕಾಶವನ್ನು ಬುಡಮೇಲು ಮಾಡುತ್ತದೆ.

ಅತ್ತ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಎಂಐ, ಮತ್ತೆ ಕಮ್‌ಬ್ಯಾಕ್‌ ಮಾಡಿದೆ. ಪ್ರಸ್ತುತ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅಲ್ಲದೆ ಮೇಲಿನ ಸ್ಥಾನಕ್ಕೆ ವೇಗವಾಗಿ ಮುನ್ನಗ್ಗುತ್ತಿದೆ. ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ತಂಡಕ್ಕೆ ಉತ್ತಮ ಅವಕಾಶಗಳಿವೆ. ಇದಕ್ಕೆ ಆದಷ್ಟು ಪಂದ್ಯಗಳಲ್ಲಿ ಗೆಲ್ಲಲು ಎದುರು ನೋಡುತ್ತಿದೆ. ಸದ್ಯ ಹ್ಯಾಟ್ರಿಕ್‌ ಗೆಲುವಿನ ಖುಷಿಯಲ್ಲಿರುವ ತಂಡ ಮತ್ತಷ್ಟು ಅಬ್ಬರಿಸುವ ನಿರೀಕ್ಷೆ ಇದೆ.

ರಾಜೀವ್ ಗಾಂಧಿ ಕ್ರೀಡಾಂಗಣದ ಪಿಚ್ ವರದಿ

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್, ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿಯೂ ಬ್ಯಾಟರ್‌ಗಳ ಸ್ವರ್ಗವಾಗಿದೆ. ಇಲ್ಲಿ ತಂಡಗಳು 200ಕ್ಕಿಂತ ಹೆಚ್ಚು ರನ್‌ ಗಳಿಸುವುದು ಸಾಮಾನ್ಯವಾಗಿಬಿಟ್ಟಿದೆ. ಸಮತಟ್ಟಾದ ಮೇಲ್ಮೈಗೆ ಹೆಸರುವಾಸಿಯಾದ ಪಿಚ್‌ನಲ್ಲಿ ಹೊಸ ಚೆಂಡಿನಲ್ಲಿ ಆರಂಭಿಕರು ಆಕ್ರಮಣಕಾರಿ ಬ್ಯಾಟಿಂಗ್‌ ಮಾಡಲು ಅನುಕೂಲಕರವಾಗಿದೆ. ಎರಡನೇ ಇನ್ನಿಂಗ್ಸ್‌ ಸಮಯದಲ್ಲಿ ಇಬ್ಬನಿಯು ಚೇಸಿಂಗ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಟಾಸ್‌ ಗೆಲ್ಲುವ ತಂಡವು ಚೇಸಿಂಗ್‌ ಎದುರು ನೋಡಬಹುದು. ಆದರೆ, ಪ್ರಸಕ್ತ ಐಪಿಎಲ್ ಋತುವಿನಲ್ಲಿ ಇಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡಗಳು ಮೂರು ಸಂದರ್ಭಗಳಲ್ಲಿ ಜಯಗಳಿಸಿವೆ.

ಹೈದರಾಬಾದ್‌ ಹವಾಮಾನ ವರದಿ

ಹೈದರಾಬಾದ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ನಿರೀಕ್ಷೆಯಿಲ್ಲ. ಹವಾಮಾನ ವರದಿ ಪ್ರಕಾರ ಮುತ್ತಿನ ನಗರಿಯಲ್ಲಿ ತಾಪಮಾನವು ಗರಿಷ್ಠ 39 ಡಿಗ್ರಿ ಮತ್ತು ಕನಿಷ್ಠ 27 ಡಿಗ್ರಿ ಇರುವ ಸಾಧ್ಯತೆ ಇದೆ.

ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ

ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅನಿಕೇತ್ ವರ್ಮಾ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜೀಶನ್ ಅನ್ಸಾರಿ, ಮೊಹಮ್ಮದ್ ಶಮಿ, ಇಶಾನ್ ಮಾಲಿಂಗ. (ಇಂಪ್ಯಾಕ್ಟ್ ಆಟಗಾರ: ರಾಹುಲ್ ಚಹರ್)

ಮುಂಬೈ ಇಂಡಿಯನ್ಸ್ ಸಂಭಾವ್ಯ ತಂಡ

ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಅಶ್ವನಿ ಕುಮಾರ್. (ಇಂಪ್ಯಾಕ್ಟ್ ಆಟಗಾರ: ರೋಹಿತ್ ಶರ್ಮಾ)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.