ಎಸ್‌ಆರ್‌ಎಚ್ ವಿರುದ್ಧ ಅಬ್ಬರಿಸಿ ದಿಢೀರ್ ಕುಸಿತ; ಸೋತು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಆರ್‌ಸಿಬಿ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ಹೈದರಾಬಾದ್ 6 ವಿಕೆಟ್ ಕಳೆದುಕೊಂಡು 231 ರನ್ ಗಳಿಸಿತು. ಚೇಸಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆಂಭದಲ್ಲಿ ಅಬ್ಬರಿಸಿದರೂ 189 ರನ್ ಗಳಿಸಲಷ್ಟೇ ಶಕ್ತವಾಯ್ತು.

ಐಪಿಎಲ್ 2025ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕುವ ಆರ್‌ಸಿಬಿ ಕನಸಿಗೆ ಸನ್‌ರೈಸರ್ಸ್ ಹೈದರಾಬಾದ್ ಅಡ್ಡಿಯಾಗಿದೆ. ಲಕ್ನೋದಲ್ಲಿ ನಡೆದ ಹೈಸ್ಕೋರಿಂಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಸ್‌ಆರ್‌ಎಚ್ ತಂಡವು 42 ರನ್‌ಗಳಿಂದ ಮಣಿಸಿದೆ. ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಪ್ಯಾಟ್ ಕಮಿನ್ಸ್ ಪಡೆ ಗೆಲುವಿನಿಂದ ತುಸು ನಿರಾಳವಾದರೆ, ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವುದು ತುಸು ಕಷ್ಟವಾಗಲಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ಆರ್‌ಎಚ್ 6 ವಿಕೆಟ್ ಕಳೆದುಕೊಂಡು 231 ರನ್ ಗಳಿಸಿತು. ಚೇಸಿಂಗ್ ನಡೆಸಿದ ಆರ್‌ಸಿಬಿ 189 ರನ್ ಗಳಿಸಲಷ್ಟೇ ಶಕ್ತವಾಯ್ತು.
ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್, ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಅಗ್ರ ಶ್ರೇಯಾಂಕದ ಟಿ20 ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ 4 ಓವರ್‌ಗಳಲ್ಲಿ 54 ರನ್ ಕಲೆ ಹಾಕಿದರು. 200ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಅಭಿಷೇಕ್ 34 ರನ್ ಗಳಿಸಿ ಔಟಾದರೆ, ಅವರ ಬೆನ್ನಲ್ಲೇ ಹೆಡ್ ಕೂಡಾ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕ್ಲಾಸೆನ್ ಕೂಡಾ ಅಬ್ಬರಿಸಲು ಮುಂದಾದರು. 24 ರನ್ ಗಳಿಸಿದ್ದಾಗ ಸುಯಶ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು.
ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್
ಅನಿಕೇತ್ ವರ್ಮಾ 9 ಎಸೆತಗಳಲ್ಲೇ 26 ರನ್ ಗಳಿಸಿದರು. ನಿತೀಶ್ ರೆಡ್ಡಿ 4 ರನ್ ಗಳಿಸಿ ಔಟಾಗುವ ಮೂಲಕ ಮತ್ತೊಮ್ಮೆ ವಿಫಲರಾದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಇಶಾನ್ ಕಿಶನ್, ಕೇವಲ 48 ಎಸೆತಗಳಲ್ಲಿ 94 ರನ್ ಗಳಿಸಿದರು. ಟೂರ್ನಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಇದು ಅವರ ಮೊದಲನೇ ಅರ್ಧಶತಕವಾಗಿದೆ. ಇವರ ಆಟದ ನೆರವಿಂದ ತಂಡದ ಮೊತ್ತವು 230ರ ಗಡಿ ದಾಟಿತು.
ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೂಡಾ ಭರ್ಜರಿ ಆರಂಭ ಪಡೆಯಿತು. ಅಗತ್ಯ ರನ್ ರೇಟ್ ಕಾಯ್ದುಕೊಂಡು ಶಿಸ್ತಿನ ಆಟವಾಡಿತು. ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮೊದಲ ವಿಕೆಟ್‌ಗೆ 80 ರನ್ ಗಳಿಸಿದರು. ಕೊಹ್ಲಿ 25 ಎಸೆತಗಳಲ್ಲಿ 43 ರನ್ ಸಿಡಿಸಿದರೆ, ಹಲವು ವರ್ಷಗಳ ಬಳಿಕ ಆರ್‌ಸಿಬಿ ತಂಡದ ಪರ ಆಡಿದ ಮಯಾಂಕ್ ಅಗರ್ವಾಲ್ 11 ರನ್ ಗಳಿಸಿ ಔಟಾದರು. ಆಕರ್ಷಕ ಅರ್ಧಶತಕ ಬಾರಿಸಿದ ಸಾಲ್ಟ್ 32 ಎಸೆತಗಳಲ್ಲಿ 5 ಸ್ಫೋಟಕ ಸಿಕ್ಸರ್ ಸಹಿತ 62 ರನ್ ಸಿಡಿಸಿದರು.
ದಿಢೀರ್ ಕುಸಿದ ಆರ್‌ಸಿಬಿ
ಈ ವೇಳೆ ಜೊತೆಗೂಡಿದ ತಂಡದ ನಿಯಮಿತ ನಾಯಕ ರಜತ್ ಪಾಟೀದಾರ್ ಹಾಗೂ ಈ ಪಂದ್ಯದ ನಾತಕ ಜಿತೇಶ್ ಶರ್ಮಾ ಕೆಲಕಾಲ ಇನ್ನಿಂಗ್ಸ್ ಮುನ್ನಡೆಸಿದರು. 15 ಓವರ್‌ಗಳವೆರಗೂ ಪಂದ್ಯ ಸಂಪೂರ್ಣ ಆರ್‌ಸಿಬಿ ಹಿಡಿತದಲ್ಲಿತ್ತು. 15.4 ಓವರ್ ವೇಳೆಗೆ ರಜತ್ 18 ರನ್ ಗಳಿಸಿ ಔಟಾಗುತ್ತಿದ್ದಂತೆಯೇ ತಂಡದ ಲಕ್ ಬದಲಾಯ್ತು. ಸ್ಫೋಟಕ ಬ್ಯಾಟರ್ ರೊಮಾರಿಯೋ ಶೆಫರ್ಡ್ ಎದುರಿಸಿದ ಮೊದಲ ಎಸೆತದಲ್ಲೇ ಬೌಲರ್ ಮಲಿಂಗಾಗೆ ಕ್ಯಾಚ್ ನೀಡಿ ಔಟಾದರು. ಅವರ ಬೆನ್ನಲ್ಲೇ ಕ್ರೀಸ್‌ಕಚ್ಚಿ ಆಡುತ್ತಿದ್ದ ಜಿತೇಶ್ ಶರ್ಮಾ ಕೂಡಾ 24 ರನ್ ಗಳಿಸಿದ್ದಾಗ ಔಟಾದರು. ಕೆಲವವೇ ಎಸೆತಗಳ ಅಂತರದಲ್ಲಿ ತಂಡ 3 ವಿಕೆಟ್ ಕಳೆದುಕೊಂಡಿತು. ಪಂದ್ಯ ಎಸ್‌ಆರ್‌ಎಚ್ ಹಿಡಿತಕ್ಕೆ ಬಂತು.
ಕಾಲು ನೋವಿನೊಂದಿಗೆ ಬ್ಯಾಟಿಂಗ್ ನಡೆಸಿದ ಟಿಮ್ ಡೇವಿಟ್ 5 ಎಸೆತ ಎದುರಿಸಿ ಕ್ಲಾಸೆನ್‌ಗೆ ಕ್ಯಾಚ್ ನೀಡಿ ಔಟಾದರು. ತಂಡದ ಗೆಲುವಿನ ಎಲ್ಲಾ ಭರವಸೆಗಳು ಕಮರಿದವು. ಕೃನಾಲ್ ಕೂಡಾ ಬೇಗನೆ ಔಟಾದರು. 19 ಎಸೆತಗಳ ಅಂತರದಲ್ಲಿ 6 ವಿಕೆಟ್ ಪತನವಾಯ್ತು. 16 ರನ್‌ಗಳ ಒಳಗೆ ಕೊನೆಯ 7 ವಿಕೆಟ್‌ಗಳು ಬಿದ್ದವು. ಇದು ತಂಡದ ಗೆಲುವನ್ನು ಗಗನ ಕುಸುಮವಾಗಿಸಿತು.