ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ಆರಂಭ; ಬೃಹತ್ ಮೊತ್ತ ಚೇಸಿಂಗ್ ವೇಳೆ 44 ರನ್‌ಗಳಿಂದ ಸೋತ ರಾಜಸ್ಥಾನ್
ಕನ್ನಡ ಸುದ್ದಿ  /  ಕ್ರಿಕೆಟ್  /  ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ಆರಂಭ; ಬೃಹತ್ ಮೊತ್ತ ಚೇಸಿಂಗ್ ವೇಳೆ 44 ರನ್‌ಗಳಿಂದ ಸೋತ ರಾಜಸ್ಥಾನ್

ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ಆರಂಭ; ಬೃಹತ್ ಮೊತ್ತ ಚೇಸಿಂಗ್ ವೇಳೆ 44 ರನ್‌ಗಳಿಂದ ಸೋತ ರಾಜಸ್ಥಾನ್

ಐಪಿಎಲ್‌ 18ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಶುಭಾರಂಭ ಮಾಡಿದೆ. ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ದಾಖಲೆಯಾಟವಾಡಿದ ಆತಿಥೇಯ ತಂಡ 44 ರನ್‌ಗಳಿಂದ ಗೆದ್ದು ಬೀಗಿದೆ.

ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ಆರಂಭ; 44 ರನ್‌ಗಳಿಂದ ಸೋತ ರಾಜಸ್ಥಾನ್
ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ಆರಂಭ; 44 ರನ್‌ಗಳಿಂದ ಸೋತ ರಾಜಸ್ಥಾನ್ (REUTERS)

ಐಪಿಎಲ್‌ 2025ರ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಗೆಲುವಿನ ಆರಂಭ ಪಡೆದಿದೆ. ತವರು ಮೈದಾನದ ರಾಜೀವ್‌ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ (Sunrisers Hyderabad vs Rajasthan Royals) ವಿರುದ್ಧ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಎಂದಿನಂತೆ ಈ ಬಾರಿಯೂ ತಮ್ಮ ಸ್ಫೋಟಕ ಬ್ಯಾಟಿಂಗ್‌ ಅಭ್ಯಾಸ ಮುಂದುವರೆಸಿದ ಎಸ್‌ಆರ್‌ಎಚ್‌, ದಾಖಲೆ ಮೇಲೆ ದಾಖಲೆ ನಿರ್ಮಾಣದೊಂದಿಗೆ ಸಿಡಿದಿದೆ. ಐಪಿಎಲ್‌ ಇತಿಹಾಸದಲ್ಲೇ ಎರಡನೇ ಗರಿಷ್ಠ ಮೊತ್ತ ದಾಖಲಿಸುವ ಮೂಲಕ ಪಂದ್ಯದ ಆರಂಭದಲ್ಲೇ ದಾಖಲೆ ನಿರ್ಮಿಸಿದ ತಂಡ, ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌, ಇಶಾನ್‌ ಕಿಶನ್‌ ಚೊಚ್ಚಲ ಐಪಿಎಲ್‌ ಶತಕದ ನೆರವಿನಿಂದ 6 ವಿಕೆಟ್‌ ಕಳೆದುಕೊಂಡು ದಾಖಲೆಯ 286 ರನ್‌ ಗಳಿಸಿತು. ಇದು ಐಪಿಎಲ್‌ನ ಎರಡನೇ ಗರಿಷ್ಠ ಮೊತ್ತ. ಕಳೆದ ಆವೃತ್ತಿಯಲ್ಲಿ ಇದೇ ಎಸ್‌ಆರ್‌ಎಚ್‌ ತಂಡವು 287 ರನ್‌ ಗಳಿಸಿರುವುದು ಐಪಿಎಲ್‌ ಇತಿಹಾಸದಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿದೆ. ಇದೀಗ ಎರಡನೇ ಸ್ಥಾನದಲ್ಲೂ ಹೈದರಾಬಾದ್‌ ತಂಡವಿದೆ. ಬೃಹತ್‌ ಮೊತ್ತ ಚೇಸಿಂಗ್‌ ಮಾಡಿದ ರಾಜಸ್ಥಾನ್‌, ದೊಡ್ಡ ಮೊತ್ತ ಚೇಸ್‌ ಮಾಡಲು ಶತಾಯ ಗತಾಯ ಪ್ರಯತ್ನ ಮಾಡಿತು. ಅಂತಿಮವಾಗಿ 242 ರನ್‌ ಗಳಿಸಿ ತಲೆಬಾಗಿತು.

ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಪರ, ಟ್ರಾವಿಸ್ ಹೆಡ್ (31 ಎಸೆತಗಳಲ್ಲಿ 67 ರನ್, 9 ಬೌಂಡರಿ ಮತ್ತು 3 ಸಿಕ್ಸರ್) ಸ್ಫೋಟಕ ಅರ್ಧಶತಕ ಸಿಡಿಸಿದರು. ಇಶಾನ್ ಕಿಶನ್ ಅಬ್ಬರದ ಶತಕ ಸಿಡಿಸುವ ಮೂಲಕ ಹೈದರಾಬಾದ್‌ ತಂಡಕ್ಕೆ ಬೊಂಬಾಟ್ ಪದಾರ್ಪಣೆ ಮಾಡಿದರು. 47 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್ ಸಹಿತ ಅಜೇಯ 106 ರನ್ ಬಾರಿಸಿದರು. ಹೆನ್ರಿಚ್ ಕ್ಲಾಸೆನ್ (34) ಮತ್ತು ನಿತೀಶ್ ಕುಮಾರ್ ರೆಡ್ಡಿ (30) ಕೂಡ ಅಮೂಲ್ಯ ಕೊಡುಗೆ ನೀಡಿದರು.

ರಾಜಸ್ಥಾನ್ ಪರ ತುಷಾರ್ ದೇಶಪಾಂಡೆ 3 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ 4 ಓವರ್‌ಗಳಲ್ಲಿ 76 ರನ್ ಬಿಟ್ಟುಕೊಟ್ಟು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು.

ರಾಜಸ್ಥಾನ್‌ ರಾಯಲ್ಸ್ ಚೇಸಿಂಗ್

ಬೃಹತ್‌ ಮೊತ್ತ ಚೇಸಿಂಗ್‌ಗೆ ಇಳಿದ ರಾಜಸ್ಥಾನ್‌ ಆರಂಭದಲ್ಲೇ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕಳೆದುಕೊಂಡಿತು. ಕಳೆದ ಹಲವು ವರ್ಷಗಳಿಂದ ಪ್ರತಿ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲೂ ಅಬ್ಬರಿಸುತ್ತಿರುವ ಸಂಜು ಸ್ಯಾಮ್ಸನ್‌ 66 ರನ್‌ ಸಿಡಿಸಿದರು. ನಾಯಕ ರಿಯಾನ್‌ ಪರಾಗ್‌ ಒಂದು ಬೌಂಡರಿ ಸಿಡಿಸಿ ಔಟಾದರು. ಅಬ್ಬರದ ಆಟವಾಡಿದ ಧ್ರುವ್‌ ಜುರೆಲ್‌, 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸ್ಫೋಟಕ ಸಿಕ್ಸರ್‌ ಸಹಿತ 70 ರನ್‌ ಬಾರಿಸಿದರು. ಸಂಜು ಜೊತೆಗೂಡಿ ಶತಕದ ಜೊತೆಯಾಟವಾಡಿದರು.

ಡೆತ್‌ ಓವರ್‌ಗಳಲ್ಲಿ‌ ಶಿಮ್ರಾನ್ ಹೆಟ್ಮಾಯರ್‌ (42) ಹಾಗೂ ಶುಭಮ್‌ ದುಬೆ (11 ಎಸೆತಗಳಲ್ಲಿ 34) ಅಬ್ಬರಿಸಿದರು. ಆದರೆ, ಗುರಿ ದೂರವಿದ್ದ ಕಾರಣ ತಂಡದ ಗೆಲುವು ಸಾಧ್ಯವಾಗಲಿಲ್ಲ. ಹೀಗಾಗಿ 44 ರನ್‌ಗಳ ಸೋಲು ಕಂಡಿತು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner