ವೇಗದ ಅರ್ಧಶತಕ ಬಾರಿಸಿದ ಆಟಗಾರ ಮುಂದಿನ ಸಿಎಸ್​ಕೆ ಬ್ಯಾಟಿಂಗ್ ಕೋಚ್ ಅಂತೆ; ಅವರನ್ನು ಮಿಸ್ಟರ್ ಐಪಿಎಲ್ ಅಂತಾರೆ!
ಕನ್ನಡ ಸುದ್ದಿ  /  ಕ್ರಿಕೆಟ್  /  ವೇಗದ ಅರ್ಧಶತಕ ಬಾರಿಸಿದ ಆಟಗಾರ ಮುಂದಿನ ಸಿಎಸ್​ಕೆ ಬ್ಯಾಟಿಂಗ್ ಕೋಚ್ ಅಂತೆ; ಅವರನ್ನು ಮಿಸ್ಟರ್ ಐಪಿಎಲ್ ಅಂತಾರೆ!

ವೇಗದ ಅರ್ಧಶತಕ ಬಾರಿಸಿದ ಆಟಗಾರ ಮುಂದಿನ ಸಿಎಸ್​ಕೆ ಬ್ಯಾಟಿಂಗ್ ಕೋಚ್ ಅಂತೆ; ಅವರನ್ನು ಮಿಸ್ಟರ್ ಐಪಿಎಲ್ ಅಂತಾರೆ!

ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಅಚ್ಚರಿ ಸುದ್ದಿಯೊಂದು ಕೇಳಿ ಬಂದಿದೆ. ಹೌದು, ಸಿಎಸ್​ಕೆ ತಂಡದ ಬ್ಯಾಟಿಂಗ್ ಕೋಚ್ ಬದಲಾವಣೆ ಕುರಿತು ಸುದ್ದಿಯೊಂದು ಹರಿದಾಡುತ್ತಿದೆ.

ಐಪಿಎಲ್​ನಲ್ಲಿ ವೇಗದ ಅರ್ಧಶತಕ ಬಾರಿಸಿದ ಆಟಗಾರ ಮುಂದಿನ ಸಿಎಸ್​ಕೆ ಬ್ಯಾಟಿಂಗ್ ಕೋಚ್ ಅಂತೆ; ಯಾರಿರಬಹುದು?
ಐಪಿಎಲ್​ನಲ್ಲಿ ವೇಗದ ಅರ್ಧಶತಕ ಬಾರಿಸಿದ ಆಟಗಾರ ಮುಂದಿನ ಸಿಎಸ್​ಕೆ ಬ್ಯಾಟಿಂಗ್ ಕೋಚ್ ಅಂತೆ; ಯಾರಿರಬಹುದು? (REUTERS)

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ನಾಲ್ಕು ತಂಡಗಳು ಪ್ಲೇಆಫ್​​ಗೆ ಪ್ರವೇಶ ಪಡೆದಿವೆಯಾದರೂ ಅಗ್ರ - 2 ತಂಡಗಳು ಯಾವೆಂದು ಇನ್ನೂ ಅಂತಿಮಗೊಂಡಿಲ್ಲ. ಇದೆಲ್ಲದರ ನಡುವೆ ಅತ್ಯಂತ ಕಳಪೆ ಪ್ರದರ್ಶನ ನೀಡುವುದರ ಜೊತೆಗೆ ಲೀಗ್ ಹಂತದಲ್ಲೇ ಅಭಿಯಾನ ಮುಗಿಸಿರುವ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಅಚ್ಚರಿ ಸುದ್ದಿಯೊಂದು ಕೇಳಿ ಬಂದಿದೆ. ಹೌದು, ಸಿಎಸ್​ಕೆ ತಂಡದ ಬ್ಯಾಟಿಂಗ್ ಕೋಚ್ ಬದಲಾವಣೆ ಕುರಿತು ಸುದ್ದಿಯೊಂದು ಹರಿದಾಡುತ್ತಿದೆ.

ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು ಭಾನುವಾರ (ಮೇ 25ರ) ಅಹ್ಮದಾಬಾದ್​​ನಲ್ಲಿ ನಡೆದ ಸಿಎಸ್​ಕೆ ತಂಡದ ಅಂತಿಮ ಲೀಗ್ ಪಂದ್ಯದ ವೇಳೆ ತಮ್ಮ ಮಾಜಿ ಫ್ರಾಂಚೈಸಿಯೊಂದಿಗೆ ಮತ್ತೆ ಒಂದಾಗುವ ಬಗ್ಗೆ ಸುಳಿವು ನೀಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಸಿಎಸ್​ಕೆ ಅಭಿಯಾನ ಮುಗಿಸಿತಾದರೂ ಪ್ಲೇಆಫ್​​ಗೆ ಪ್ರವೇಶಿಸಲಿಲ್ಲ ಎನ್ನುವ ನಿರಾಸೆಯನ್ನೂ ಹೊತ್ತೊಯ್ದಿದೆ. ಇದೀಗ ಮುಂದಿನ ಆವೃತ್ತಿಗೆ ಚೆನ್ನೈ ತಂಡದ ಬ್ಯಾಟಿಂಗ್ ಕೋಚ್​ ಆಗಿ ರೈನಾ ಮರಳುವ ಸಾಧ್ಯತೆ ಇದೆ.

ಪಂದ್ಯದ ನಂತರ ರೈನಾ ಮುಂದಿನ ಋತುವಿನಲ್ಲಿ ಬ್ಯಾಟಿಂಗ್ ಕೋಚ್ ಆಗಿ ಫ್ರಾಂಚೈಸಿಗೆ ಮರಳುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದ್ದಾರೆ. ಬ್ಯಾಟಿಂಗ್ ಕೋಚ್ ಆಗಿ ಪ್ರಸ್ತುತ ಮೈಕೆಲ್ ಹಸ್ಸಿ ನಿರ್ವಹಿಸುತ್ತಿದ್ದಾರೆ. ಸಿಎಸ್‌ಕೆ ತಂಡವು ಹೊಸ ಬ್ಯಾಟಿಂಗ್ ಕೋಚ್‌ ಅನ್ನು ಆಯ್ಕೆ ಮಾಡಲು ಮಾತುಕತೆ ನಡೆಸುತ್ತಿದೆ ಎಂದು ರೈನಾ ಬಹಿರಂಗಪಡಿಸಿದ್ದಾರೆ. ಮುಂದಿನ ಕೋಚ್‌ನ ಮೊದಲಕ್ಷರ 'ಎಸ್​'ನಿಂದ ಆರಂಭವಾಗುತ್ತಾ ಎಂದು ಚೋಪ್ರಾ ಕೇಳಿದಾಗ, ರೈನಾ ನಗುತ್ತಾ ಉತ್ತರಿಸಿದ್ದಾರೆ. 'ಅವರು ಅತ್ಯಂತ ವೇಗದ ಅರ್ಧಶತಕವನ್ನು ಗಳಿಸಿದ್ದಾರೆ ಎಂದಿದ್ದಾರೆ. ಸುರೇಶ್ ರೈನಾ ಅವರನ್ನು ಮಿಸ್ಟರ್​ ಐಪಿಎಲ್ ಎಂದೂ ಕರೆಯುತ್ತಾರೆ.

ರೈನಾ ಕೊಟ್ಟ ಸುಳಿವೇನು?

ರೈನಾ ನೀಡಿರುವ ಸುಳಿವು ಏನೆಂದರೆ ಅವರು ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ ಎನ್ನುವುದು. ಈ ಸಾಧನೆಯನ್ನು ಸುರೇಶ್ ರೈನಾ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ಪರ ಅತಿ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್​ನಲ್ಲಿ 205 ಪಂದ್ಯಗಳನ್ನಾಡಿರುವ ಸಿಎಸ್​ಕೆ ಮಾಜಿ ಆಟಗಾರ 2014ರಲ್ಲಿ 16 ಎಸೆತಗಳಲ್ಲಿ ಫ್ರಾಂಚೈಸಿ ಪರ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ್ದರು. ಹಾಗಾಗಿ ಅವರೇ ಮುಂದಿನ ಬ್ಯಾಟಿಂಗ್ ಕೋಚ್ ಆಗಬಹುದು ಎನ್ನುವ ಸುಳಿವು ರೈನಾ ಬಿಟ್ಟಿಕೊಟ್ಟಿದ್ದಾರೆ ಎನ್ನಬಹುದು.

ಗುಟ್ಟು ಬಿಟ್ಟುಕೊಡದ ಶ್ರೀರಾಮ್

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ರೈನಾ ಅವರ ಈ ಹೇಳಿಕೆಗೆ ಸಂಬಂಧಿಸಿ ಸಿಎಸ್​ಕೆ ಸಹಾಯಕ ಬೌಲಿಂಗ್ ಕೋಚ್ ಎಸ್ ಶ್ರೀರಾಮ್ ಅವರಿಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮೌನಮುರಿದ ಶ್ರೀರಾಮ್, 'ನನಗೆ ಗೊತ್ತಿಲ್ಲ. ಅವರು (ರೈನಾ) ಹಾಗೆ ಹೇಳಿದ್ದಾರೋ ಇಲ್ಲವೋ ಎಂದು ನಾನು ಅವರನ್ನೇ ಕೇಳಬೇಕು ಎಂದು ಶ್ರೀರಾಮ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಸಿಎಸ್​ಕೆ ಕಳಪೆ ಪ್ರದರ್ಶನ

ಸಿಎಸ್​ಕೆ ಈ ವರ್ಷ ಅತ್ಯಂತ ಕೆಟ್ಟ ಪ್ರದರ್ಶನ ನೀಡಿತು. ಇತಿಹಾಸದಲ್ಲೇ 2ನೇ ಬಾರಿಗೆ ಲೀಗ್​ ಸ್ಟೇಜ್​ನಲ್ಲಿ 10 ಪಂದ್ಯಗಳನ್ನು ಸೋತಿದೆ. 18ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡಿರುವ 14 ಪಂದ್ಯಗಳಲ್ಲಿ 4ರಲ್ಲಿ ಗೆಲುವು, 10 ಸೋಲು ಕಂಡಿರುವ ಸಿಎಸ್​ಕೆ 10ನೇ ಸ್ಥಾನ ಪಡೆದಿದೆ. ಟೂರ್ನಿಯ ಆರಂಭಿಕ 5 ಪಂದ್ಯಗಳಿಗೆ ನಾಯಕನಾಗಿದ್ದ ಋತುರಾಜ್ ಗಾಯಕ್ವಾಡ್ ಗಾಯಗೊಂಡು ಲೀಗ್​ನಿಂದ ಹೊರಬಿದ್ದಿದ್ದರು. ಈ ಬಳಿಕ ಎಂಎಸ್ ಧೋನಿ ಅವರು ತಂಡದ ಜವಾಬ್ದಾರಿ ಹೊತ್ತರು. ಹೀಗಿದ್ದರೂ ತಂಡದ ಅದೃಷ್ಟ ಮಾತ್ರ ಬದಲಾಗಲಿಲ್ಲ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.