ಹೊಸ ಅಧ್ಯಾಯ ಆರಂಭ, ಮೊದಲ ಟಿ20ಐ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ತವರಿನಲ್ಲಿ ಮುಗ್ಗರಿಸಿದ ಶ್ರೀಲಂಕಾ
Sri Lanka vs India 1st T20I: ಪಲ್ಲೆಕೆಲ್ಲೆ ಕ್ರಿಕೆಟ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 43 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ನೂತನ ಹೆಡ್ಕೋಚ್ ಗೌತಮ್ ಗಂಭೀರ್ ಮತ್ತು ನೂತನ ನಾಯಕ ಸೂರ್ಯಕುಮಾರ್ ನೇತೃತ್ವದಲ್ಲಿ ಭಾರತ ತಂಡ, ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟಿ20ಐನಲ್ಲಿ ಶುಭಾರಂಭ ಕಂಡಿದೆ. ಪಲ್ಲೆಕೆಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ ಟೀಮ್ ಇಂಡಿಯಾ, 43 ರನ್ಗಳ ಗೆಲುವು ಸಾಧಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ನೂತನ ನಾಯಕತ್ವದಲ್ಲಿ ಜಯದ ನಿರೀಕ್ಷೆಯಲ್ಲಿದ್ದ ಲಂಕಾ ತವರಿನಲ್ಲೇ ಮುಗ್ಗರಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮೆನ್ ಇನ್ ಬ್ಲ್ಯೂ, ತನ್ನ ಪಾಲಿನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಸೂರ್ಯಕುಮಾರ್ ಮತ್ತು ರಿಷಭ್ ಪಂತ್ ಲಂಕಾ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದರು. ಆರಂಭದಲ್ಲಿ ವಿಕೆಟ್ ಪಡೆಯಲು ವಿಫಲವಾದರೂ ಕೊನೆಯಲ್ಲಿ ಮತೀಶಾ ಪತಿರಾಣ 4 ವಿಕೆಟ್ ಕಬಳಿಸಿ ಮಿಂಚಿದರು. ಈ ದೊಡ್ಡ ಗುರಿ ಬೆನ್ನಟ್ಟಿದ ಶ್ರೀಲಂಕಾ 19.2 ಓವರ್ಗಳಲ್ಲಿ 170 ರನ್ ಗಳಿಸಿ ಆಲೌಟ್ ಆಯಿತು.
ಆರಂಭದಲ್ಲಿ ಅಬ್ಬರಿಸಿ ಕೊನೆಯಲ್ಲಿ ಮುಗ್ಗರಿಸಿದ ಶ್ರೀಲಂಕಾ
214 ರನ್ಗಳ ಬೃಹತ್ ಬೆನ್ನಟ್ಟಿದ ಲಂಕಾ, ಸಿಡಿಲಬ್ಬರದ ಆರಂಭ ಪಡೆಯಿತು. ಫಾತುಮ್ ನಿಸ್ಸಾಂಕ ಭಾರತೀಯ ಬೌಲರ್ಗಳ ಮೇಲೆ ಅಕ್ಷರಶಃ ದಂಡಯಾತ್ರೆ ನಡೆಸಿದರು. ಕುಸಾಲ್ ಮೆಂಡೀಸ್, ನಿಸ್ಸಾಂಕಗೆ ಸಾಥ್ ನೀಡಿದರು. ಪರಿಣಾಮ ಮೊದಲ ವಿಕೆಟ್ಗೆ 84 ರನ್ ಹರಿದು ಬಂತು. ಅದು ಕೂಡ 8.4 ಓವರ್ಗಳಲ್ಲಿ. ಆದರೆ ಕುಸಾಲ್ 27 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 45 ಔಟಾದರು. ಇದರ ನಡುವೆಯೂ ನಿಸ್ಸಾಂಕ ಆರ್ಭಟ ಮುಂದುವರೆಸಿ ಅರ್ಧಶತಕವನ್ನೂ ಪೂರೈಸಿದರು.
ಅಲ್ಲದೆ, ಕುಸಾಲ್ ಪೆರೇರಾ ಜೊತೆಗೂಡಿ 2ನೇ ವಿಕೆಟ್ಗೂ 56 ರನ್ಗಳ ಪಾಲುದಾರಿಕೆ ಒದಗಿಸಿದರು. ಇದು ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಆತಂಕವನ್ನೂ ಹೆಚ್ಚಿಸಿತು. ಲಂಕಾ ಬ್ಯಾಟರ್ಗಳು ರನ್ ಮಳೆ ಸುರಿಸುತ್ತಿದ್ದರೆ, ಭಾರತೀಯ ಬೌಲರ್ಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದರು. 48 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಿತ 79 ರನ್ ಗಳಿಸಿ ಫಾತುಮ್ ಔಟಾದರು. ಆ ಬಳಿಕ ಲಂಕಾ ದಿಢೀರ್ ಕುಸಿತ ಕಂಡಿತು. ನಿಸ್ಸಾಂಕ ಔಟಾದಾಗ ತಂಡದ ಮೊತ್ತ 140 ಇತ್ತು.
ಆದರೆ 170 ರನ್ ಆಗುವಷ್ಟರಲ್ಲಿ ಲಂಕಾ ಆಲೌಟ್ ಆಯಿತು. ಅಂದರೆ 30 ರನ್ ಅಂತರದಲ್ಲಿ 8 ವಿಕೆಟ್ ಕಳೆದುಕೊಂಡಿತು. ಆ ಮೂಲಕ ಭಾರತೀಯ ಬೌಲರ್ಗಳು ಅದ್ಭುತ ಪುನರಾಗಮನ ಮಾಡಿದರು. ಪರಾಗ್ 3, ಅರ್ಷದೀಪ್ ಮತ್ತು ಅಕ್ಷರ್ ತಲಾ 2 ವಿಕೆಟ್ ಪಡೆದರು. ಸಿರಾಜ್ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಭಾರತ ಭರ್ಜರಿ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ, ಭರ್ಜರಿ ಬ್ಯಾಟಿಂಗ್ ನಡೆಸಿತು. ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಉತ್ತಮ ಭದ್ರಭುನಾದಿ ಹಾಕಿಕೊಟ್ಟರು. ಆರಂಭಿಕ ವಿಕೆಟ್ಗೆ ಮತ್ತು ಪವರ್ಪ್ಲೇ ಮುಕ್ತಾಯಕ್ಕೆ ಈ ಜೋಡಿ 74 ರನ್ ಕಲೆ ಹಾಕಿತು. 16 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 34 ರನ್ ಚಚ್ಚಿದ ಗಿಲ್ ದಿಲ್ಶನ್ ಮಧುಶಂಕ ಬೌಲಿಂಗ್ನಲ್ಲಿ ಔಟಾದರು. ಪವರ್ಪ್ಲೇ ಮುಕ್ತಾಯಗೊಂಡ ಮರು ಓವರ್ನ ಮೊದಲ ಎಸೆತದಲ್ಲೇ 40 ರನ್ ಗಳಿಸಿದ್ದ ಜೈಸ್ವಾಲ್ ಔಟಾದರು. ಹಸರಂಗಗೆ ವಿಕೆಟ್ ನೀಡಿದರು.
ನಂತರ ಕಣಕ್ಕಿಳಿದ ಸೂರ್ಯಕುಮಾರ್ ಮತ್ತು ರಿಷಭ್ ಪಂತ್, 3ನೇ ವಿಕೆಟ್ಗೆ 76 ರನ್ಗಳ ಪಾಲುದಾರಿಕೆ ಒದಗಿಸಿದರು. ಇದೇ ವೇಳೆ ಸೂರ್ಯ ಸ್ಫೋಟಕ ಅರ್ಧಶತಕವನ್ನೂ (58) ಪೂರೈಸಿದರು. ಆದರೆ 50 ದಾಟಿದ ಬಳಿಕ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ರಿಷಭ್ ಪಂತ್ ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ನಡೆಸಿದರೂ ಕೊನೆಯಲ್ಲಿ ಸಿಡಿದೆದ್ದರು. ಆದರೆ 1 ರನ್ನಿಂದ ಅರ್ಧಶತಕ (49) ವಂಚಿತರಾದರೂ ತಂಡ 200+ ರನ್ ಗಳಿಸಲು ನೆರವಾದರು. ಇಬ್ಬರನ್ನೂ ಪತಿರಾಣ ಔಟ್ ಮಾಡಿದರು.
ಕೊನೆಯಲ್ಲಿ ಮಾರಕ ದಾಳಿ ನಡೆಸಿದ ಪತಿರಾಣ, ಹಾರ್ದಿಕ್ ಪಾಂಡ್ಯ (9) ಮತ್ತು ರಿಯಾನ್ ಪರಾಗ್ (7) ಅವರನ್ನೂ ಹೊರದಬ್ಬಿದರು. ರಿಂಕು ಸಿಂಗ್ 1 ರನ್ ಗಳಿಸಿದರೆ, ಅಕ್ಷರ್ ಪಟೇಲ್ 10 ರನ್ ಗಳಿಸಿ ಔಟಾಗದೆ ಉಳಿದರು. ಅರ್ಷದೀಪ್ ಕೊನೆಯಲ್ಲಿ 1ರನ್ ಗಳಿಸಿದರು. ಮಧುಶಂಕ, ಹಸರಂಗ, ಅಸಿತಾ ಫರ್ನಾಂಡೋ ತಲಾ 1 ವಿಕೆಟ್ ಪಡೆದರು.